ರಕ್ತದಾನದಿಂದ ರಕ್ತದಾನಿ ಪಡೆಯುವ ಆರೋಗ್ಯ ಲಾಭಗಳು ಏನೇನು ಗೊತ್ತಾ ?

Update: 2019-12-24 04:33 GMT

ರಕ್ತದಾನದ ಮಹತ್ವ ಎಲ್ಲರಿಗೂ ಗೊತ್ತು. ಅದು ಸಾವಿನ ಹೊಸ್ತಿಲಲ್ಲಿರುವವರನ್ನು ಬದುಕಿಸುತ್ತದೆ. ಅಪಘಾತ ಸಂದರ್ಭಗಳಲ್ಲಂತೂ ರಕ್ತದಾನವು ಇನ್ನಿಲ್ಲದ ಮಹತ್ವವನ್ನು ಪಡೆದುಕೊಳ್ಳುತ್ತದೆ. ಅಲ್ಲದೆ ರಕ್ತಹೀನತೆಯ ಒಂದು ಪ್ರಕಾರವಾಗಿರುವ ಸಿಕಲ್ ಸೆಲ್ ಅಥವಾ ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ಸಂದರ್ಭದಲ್ಲಿ ರಕ್ತ ಮರುಪೂರಣವು ಅಗತ್ಯವಾಗುತ್ತದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ,ಹೀಗಾಗಿ ಇಂತಹ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ಆದರೆ ರಕ್ತದಾನ ಮಾಡುವವರಿಗೆ ಇದರಿಂದೇನು ಲಾಭ? ಇನ್ನೊಬ್ಬರ ಜೀವ ಉಳಿಸಿದ ತೃಪ್ತಿಗಿಂತ ಹೆಚ್ಚಾದ ಆರೋಗ್ಯಲಾಭಗಳು ರಕ್ತದಾನಿಗೆ ಸಿಗುತ್ತವೆ ಎನ್ನುವುದು ಗೊತ್ತಾದರೆ ನೀವು ಖಂಡಿತ ಅಚ್ಚರಿ ಪಡುತ್ತೀರಿ. ವಿವರಗಳು ಇಲ್ಲಿವೆ,ಓದಿಕೊಳ್ಳಿ......

► ಅತಿಯಾದ ಕಬ್ಬಿಣದ ಅಂಶವನ್ನು ಕಡಿಮೆ ಮಾಡುತ್ತದೆ

ನಮ್ಮ ಶರೀರಕ್ಕೆ ಕಬ್ಬಿಣ ಅಗತ್ಯ. ಅದು ಕೆಂಪು ಕಣಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಬ್ಬಿಣಾಂಶ ಕಡಿಮೆಯಾದಾಗ ಅನೀಮಿಯಾ ಅಥವಾ ರಕ್ತಹೀನತೆಯುಂಟಾಗುತ್ತದೆ. ಶರೀರವು ರಕ್ತದಲ್ಲಿ ಅತಿಯಾದ ಕಬ್ಬಿಣವನ್ನು ಹೀರಿಕೊಂಡಾಗ ಅದು ಹಿಮೊಕ್ರೊಮಾಟೋಟಿಸ್ ಎಂಬ ಗಂಭೀರ ದೀರ್ಘಕಾಲಿಕ ಸಮಸ್ಯೆಗೆ ಕಾರಣವಾಗುತ್ತದೆ. ಶರೀರಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಕಬ್ಬಿಣದ ಅಗತ್ಯವಿದೆ,ಆದರೆ ಕಾಲಕ್ರಮೇಣ ಅದು ಅನಾರೋಗ್ಯಕರ ಮಟ್ಟಕ್ಕೆ ಹೆಚ್ಚಿ ಹೃದಯ ಅಥವಾ ಯಕೃತ್ತಿನ ಬಳಿ ಶೇಖರಗೊಳ್ಳಬಹುದು ಎನ್ನುತ್ತಾರೆ ತಜ್ಞರು. ನಿಯಮಿತವಾಗಿ ರಕ್ತದಾನ ಮಾಡುವುದು ಹೆಚ್ಚುವರಿ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗವಾಗಿದೆ.

► ರಕ್ತಕಣಗಳ ಮರುಪೂರಣ

ನೀವು ರಕ್ತದಾನ ಮಾಡಿದಾಗ ನೀವು ಕಳೆದುಕೊಂಡ ರಕ್ತದ ಮರುಪೂರಣಕ್ಕಾಗಿ ಶರೀರವು ಹೊಸ ರಕ್ತಕೋಶಗಳನ್ನು ಉತ್ಪಾದಿಸುವ ಕಾರ್ಯವನ್ನು ಚುರುಕಿನಿಂದ ನಡೆಸುತ್ತದೆ. ಕೆಂಪು ರಕ್ತಕಣಗಳ ನಷ್ಟದಿಂದಾಗಿ ಆಮ್ಲಜನಕದ ಮಟ್ಟ ಕಡಿಮೆಯಾಗಿದೆ ಎಂಬ ಸಂದೇಶ ಅಸ್ಥಿಮಜ್ಜೆಗೆ ತಲುಪುತ್ತದೆ ಮತ್ತು ಶರೀರವು ಅಸ್ಥಿಮಜ್ಜೆಯಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

► ಹೃದಯಾಘಾತದ ಅಪಾಯವನ್ನು ತಗ್ಗಿಸುತ್ತದೆ

ರಕ್ತದಾನವು ಹೃದಯಕ್ಕೆ ಒಳ್ಳೆಯದು. ರಕ್ತದಾನಿಗಳಲ್ಲದವರಿಗೆ ಹೋಲಿಸಿದರೆ ರಕ್ತದಾನಿಗಳು ಹೃದಯಾಘಾತಕ್ಕೆ ಗುರಿಯಾಗುವ ಸಾಧ್ಯತೆ ಶೇ.88ರಷ್ಟು ಕಡಿಮೆಯಾಗಿರುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ರಕ್ತದಾನವು ರಕ್ತದ ಹರಿವನ್ನು ಹೆಚ್ಚಿಸಲು ನೆರವಾಗುವುದರಿಂದ ರಕ್ತನಾಳಗಳಿಗೆ ಹಾನಿಯು ಕಡಿಮೆಯಾಗುತ್ತದೆ ಮತ್ತು ಇದು ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ.

ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ

ರಕ್ತದಾನಿಗಳಲ್ಲದವರಿಗೆ ಹೋಲಿಸಿದರೆ ನಿಯಮಿತವಾಗಿ ರಕ್ತದಾನ ಮಾಡುವವರು ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆಗಳು ಕಡಿಮೆ. ಹೆಚ್ಚಿನ ಕಬ್ಬಿಣಾಂಶ ಮಟ್ಟದೊಂದಿಗೆ ಗುರುತಿಸಿಕೊಂಡಿರುವ ದೊಡ್ಡಕರುಳು ಅಥವಾ ಯಕೃತ್ತಿನ ಕ್ಯಾನ್ಸರ್ ಪ್ರಕರಣಗಳು ರಕ್ತದಾನಿಗಳಲ್ಲಿ ಕಡಿಮೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

ಕ್ಯಾಲೊರಿಗಳನ್ನು ಕರಗಿಸುತ್ತದೆ

 ನೀವು ಶರೀರದ ತೂಕವನ್ನು ತಗ್ಗಿಸಬೇಕೆಂಬ ಗುರಿಯನ್ನು ಹೊಂದಿದ್ದರೆ ರಕ್ತದಾನವು ಅದಕ್ಕೆ ನೆರವಾಗುತ್ತದೆ. ಪ್ರತಿ ಸಲ ರಕ್ತದಾನ ಮಾಡಿದಾಗಲೂ ನೀವು ಸುಮಾರು 650 ಕ್ಯಾಲೊರಿಗಳನ್ನು ಕರಗಿಸಬಹುದು ಮತ್ತು ಇದು 50 ನಿಮಿಷಗಳ ಕಾಲ ಹಗ್ಗಜಿಗಿತದ ವ್ಯಾಯಾಮಕ್ಕೆ ಸಮನಾಗಿದೆ.

► ಯಕೃತ್ತಿನ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ

 ರಕ್ತದಲ್ಲಿ ಕಬ್ಬಿಣದ ಮಟ್ಟ ಅತಿಯಾದಾಗ ಯಕೃತ್ತು ತೊಂದರೆಯನ್ನು ಅನುಭವಿಸುತ್ತದೆ ಮತ್ತು ರಕ್ತದಾನವು ಅದನ್ನು ಪರಿಹರಿಸುವ ಮಾರ್ಗವಾಗಿದೆ. ಅತಿಯಾದ ಕಬ್ಬಿಣದ ಮಟ್ಟವು ಹೆಪಟೈಟಿಸ್ ಸಿ,ಯಕೃತ್ತಿನ ಕ್ಯಾನ್ಸರ್ ಮತ್ತು ಇತರ ಕೆಲವು ಸೋಂಕುಗಳೊಂದಿದೆ ತಳುಕು ಹಾಕಿಕೊಂಡಿದೆ ಎನ್ನುವುದನ್ನು ಅಧ್ಯಯನವೊಂದು ಬಹಿರಂಗಗೊಳಿಸಿದೆ. ರಕ್ತದಾನವು ಹೆಚ್ಚಾಗಿರುವ ಕಬ್ಬಿಣದ ಮಟ್ಟವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಮತ್ತು ಯಕೃತ್ತಿನಲ್ಲಿ ಅತಿಯಾದ ಪ್ರಮಾಣದಲ್ಲಿ ಕಬ್ಬಿಣವು ಶೇಖರಗೊಳ್ಳುವುದನ್ನು ನಿವಾರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News