ಯುವಜನರಲ್ಲಿ ಹೃದ್ರೋಗಕ್ಕೆ ಸಂಭಾವ್ಯ ಕಾರಣಗಳು ಇಲ್ಲಿವೆ

Update: 2019-12-28 05:15 GMT

ಸಾಮಾನ್ಯವಾಗಿ ವಯಸ್ಸಾದವರು ಹೃದಯಾಘಾತಕ್ಕೆ ಹೆಚ್ಚಾಗಿ ಗುರಿಯಾಗುತ್ತಾರೆ. ಆದರೆ ಕಳೆದೆರಡು ದಶಕಗಳಿಂದ, ವಿಶೇಷವಾಗಿ ಭಾರತದಲ್ಲಿ ಯುವಜನರೂ ಹೃದಯಾಘಾತಕ್ಕೆ ಗುರಿಯಾಗುವುದು ಹೆಚ್ಚುತ್ತಿದೆ. ಟೈಪ್-2 ಮಧುಮೇಹಿಗಳು ಹೃದಯಾಘಾತಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಗಳು ತೋರಿಸಿವೆ. ರಕ್ತದಲ್ಲಿಯ ಅಧಿಕ ಸಕ್ಕರೆ ಮಟ್ಟವು ಕ್ರಮೇಣ ಹೃದಯ ರಕ್ತಪರಿಚಲನೆ ವ್ಯವಸ್ಥೆಯಲ್ಲಿನ ರಕ್ತನಾಳಗಳು ಮತ್ತು ನರಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಯುವಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ....

► ಅನಿಯಂತ್ರಿತ ಅಧಿಕ ರಕ್ತದೊತ್ತಡ

ವ್ಯಾಯಾಮದ ಕೊರತೆ,ಕೊಬ್ಬು ಮತ್ತು ಉಪ್ಪನ್ನು ಹೆಚ್ಚಾಗಿ ಒಳಗೊಂಡಿರುವ ಆಹಾರ ಕ್ರಮ,ಬೊಜ್ಜು,ಅತಿಯಾದ ಮಾನಸಿಕ ಒತ್ತಡಗಳು,ಧೂಮಪಾನ ಮತ್ತು ಮದ್ಯಪಾನದಂತಹ ದುಶ್ಚಟಗಳು ಯುವಜನರಲ್ಲಿ ಅಧಿಕ ರಕ್ತದೊತ್ತಡಕ್ಕೆ ಕೆಲವು ಮುಖ್ಯ ಕಾರಣಗಳಾಗಿವೆ. ಸೂಕ್ತ ಚಿಕಿತ್ಸೆಯ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು ಪಾರ್ಶ್ವವಾಯು,ಹೃದಯಾಘಾತ,ಹೃದಯ ವೈಫಲ್ಯ,ಮೂತ್ರಪಿಂಡ ವೈಫಲ್ಯ ಮತ್ತು ಕಣ್ಣಿನ ತೊಂದರೆಯಂತಹ ಗಂಭೀರ ಸಮಸ್ಯೆಗಳನ್ನುಂಟು ಮಾಡುತ್ತದೆ.

► ಅಧಿಕ ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್ ಜೈವಿಕ ಕಣವಾಗಿದ್ದು ನಮ್ಮ ಶರೀರಕ್ಕೆ ಅಗತ್ಯವಾಗಿದೆ. ಅತಿಯಾದ ಕೊಲೆಸ್ಟ್ರಾಲ್ ಹೃದಯನಾಳಗಳ ಕಾಯಿಲೆಯನ್ನುಂಟು ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟ ಅತಿಯಾದಾಗ ಅದು ಹೃದಯದ ಅಪಧಮನಿಗಳು ಸೇರಿದಂತೆ ನಮ್ಮ ಶರೀರದಲ್ಲಿಯ ಕೆಲವು ರಕ್ತನಾಳಗಳಲ್ಲಿ ಸಂಗ್ರಹಗೊಳ್ಳುತ್ತದೆ. ಇದು ರಕ್ತವು ಸುಗಮವಾಗಿ ಹರಿಯಲು ಅಡ್ಡಿಯನ್ನುಂಟು ಮಾಡುತ್ತದೆ. ಇದರಿಂದ ಪೀಡಿತ ಭಾಗಗಳಿಗೆ ರಕ್ತದ ಪೂರೈಕೆಗೆ ಕೊರತೆಯಾಗುತ್ತದೆ ಮತ್ತು ಆ್ಯಂಜಿನಾ ಅಥವಾ ಮಯೊಕಾರ್ಡಿಯಲ್ ಇನ್‌ಫಾರ್ಕ್ಷನ್‌ಗೆ ಕಾರಣವಾಗುತ್ತದೆ.

► ಧೂಮಪಾನ

ವ್ಯಕ್ತಿಯ ಧೂಮಪಾನ ಚಟ ಹೆಚ್ಚಿದಂತೆ ಹೃದ್ರೋಗದ ಅಪಾಯವೂ ಹೆಚ್ಚುತ್ತದೆ. ಅಲ್ಲದೆ ಧೂಮಪಾನವು ಇತರರನ್ನೂ, ವಿಶೇಷವಾಗಿ ಮಕ್ಕಳನ್ನು ಅಪಾಯಕ್ಕೆ ತಳ್ಳುತ್ತದೆ. ಆರೋಗ್ಯವನ್ನು ಕಾಯ್ದುಕೊಳ್ಳಲು ಮತ್ತು ಹೃದಯಾಘಾತಕ್ಕೆ ಗುರಿಯಾಗುವ ಅಪಾಯಗಳನ್ನು ಕಡಿಮೆಗೊಳಿಸಲು ಧೂಮಪಾನದಿಂದ ದೂರವಿರಬೇಕು.

► ಕುಟುಂಬದ ಇತಿಹಾಸ

ಕುಟುಂಬದಲ್ಲಿ ಬೇರೆ ಯಾರಿಗಾದರೂ ಹೃದ್ರೋಗವಿದ್ದ ಇತಿಹಾಸ ಹೊಂದಿದವರು ಅಂತಹ ಸಮಸ್ಯೆಗೆ ತುತ್ತಾಗುವ ಅಪಾಯವು ಹೆಚ್ಚಾಗಿರುತ್ತದೆ. ಉದಾಹರಣೆಗೆ ವ್ಯಕ್ತಿಯ ರಕ್ತಸಂಬಂಧದ ಕುಟುಂಬದಲ್ಲಿ ಯಾರಾದರೂ 55 ವರ್ಷ ಪ್ರಾಯಕ್ಕೆ ಮೊದಲೇ ಹೃದಯಾಘಾತಕ್ಕೆ ಗುರಿಯಾಗಿದ್ದಿದ್ದರೆ ಹೃದಯ ಸಮಸ್ಯೆಗಳಿಗೆ ಒಳಗಾಗುವ ಅಪಾಯ ಶೇ.50ರಷ್ಟು ಹೆಚ್ಚಿರುತ್ತದೆ.

► ಬೊಜ್ಜು

ಬೊಜ್ಜು ಹೃದಯನಾಳೀಯ ರೋಗಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅತಿಯಾದ ದೇಹತೂಕವನ್ನು ಹೊಂದಿರುವ ವ್ಯಕ್ತಿಯು ಅಧಿಕ ರಕ್ತದೊತ್ತಡ,ಟೈಪ್-2 ಮಧುಮೇಹ ಮತ್ತು ಮಸ್ಕುಲೊಸ್ಕೆಲೆಟಲ್ ಅಂದರೆ ಸ್ನಾಯುಗಳು ಮತ್ತು ಮೂಳೆಗಳಿಗೆ ಸಂಬಂಧಿಸಿದ ರೋಗಕ್ಕೆ ಗುರಿಯಾಗಬಹುದು.

► ವಾಯು ಮಾಲಿನ್ಯ

ವಾತಾವರಣದಲ್ಲಿನ ಅಂಶಗಳು ನಮ್ಮ ರಕ್ತದೊತ್ತಡದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತವೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಹೃದಯಾಘಾತ,ಹೃದಯವೈಫಲ್ಯ,ಪಾರ್ಶ್ವವಾಯು,ಅನಿಯಮಿತ ಹೃದಯಬಡಿತ ಇತ್ಯಾದಿ ಹೃದಯನಾಳೀಯ ಸಮಸ್ಯೆಗಳಿಗೆ ವಾಯುಮಾಲಿನ್ಯವೂ ಕಾರಣವಾಗುತ್ತದೆ. ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವರಲ್ಲಿ ಹೃದಯಾಘಾತದ ಅಪಾಯ ಇತರರಿಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News