ಈ ಆರೋಗ್ಯ ಸಮಸ್ಯೆಗಳು ಅತಿಯಾದ ದಣಿವನ್ನುಂಟು ಮಾಡುತ್ತವೆ
ಕಠಿಣ ದೈಹಿಕ ಚಟುವಟಿಕೆ ಅಥವಾ ಶ್ರಮದ ಕೆಲಸದ ಬಳಿಕ ಆಯಾಸವುಂಟಾಗುವುದು ಸಹಜ. ಈ ವಿಧದ ಆಯಾಸ ಕೆಲವು ಗಂಟೆಗಳವರೆಗೆ ಅಥವಾ ಒಂದು ದಿನ ಇರಬಹುದು ಮತ್ತು ಉತ್ತಮ ನಿದ್ರೆ ಅಥವಾ ವಿಶ್ರಾಂತಿಯ ಬಳಿಕ ಮಾಯವಾಗುತ್ತದೆ. ಆದರೆ ನಿಮ್ಮ ದಣಿವು ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುತ್ತಿದ್ದರೆ ಅಥವಾ ಒಳ್ಳೆಯ ವಿಶ್ರಾಂತಿಯ ನಂತರವೂ ಕಡಿಮೆಯಾಗದಿದ್ದರೆ ಅದು ಕಳವಳದ ವಿಷಯವಾಗುತ್ತದೆ. ಏಕೆಂದರೆ ಅತಿಯಾದ ಆಯಾಸ ರಕ್ತಹೀನತೆ ಮತ್ತು ವಿಟಾಮಿನ್ ಕೊರತೆಗಳಿಂದ ಹಿಡಿದು ಮಧುಮೇಹದವರೆಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ.
► ರಕ್ತಹೀನತೆ
ಅನಿಮಿಯಾ ಅಥವಾ ರಕ್ತಹೀನತೆ ಬಳಲಿಕೆಗೆ ಅತ್ಯಂತ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ಕಬ್ಬಿಣಾಂಶ ಅಥವಾ ವಿಟಾಮಿನ್ ಕೊರತೆ,ರಕ್ತ ನಷ್ಟ ಅಥವಾ ಮೂತ್ರಪಿಂಡ ವೈಫಲ್ಯ ರಕ್ತಹೀನತೆಗೆ ಕಾರಣವಾಗಬಹುದು. ದಣಿವು,ನಿದ್ರೆ ಮಾಡುವುದು ಕಷ್ಟವಾಗುವುದು,ಏಕಾಗ್ರತೆಯ ಕೊರತೆ,ತ್ವರಿತ ಹೃದಯಬಡಿತ ಮತ್ತು ತಲೆನೋವು ರಕ್ತಹೀನತೆಯ ಲಕ್ಷಣಗಳಲ್ಲಿ ಸೇರಿವೆ. ರಕ್ತಹೀನತೆಯಿಂದ ಬಳಲುವವರು ಮೆಟ್ಟಿಲುಗಳನ್ನು ಹತ್ತಿದರೆ ಅಥವಾ ಸ್ವಲ್ಪ ದೂರ ನಡೆದರೂ ಆಯಾಸಗೊಳ್ಳುತ್ತಾರೆ.
► ವಿಟಾಮಿನ್ ಡಿ ಕೊರತೆ
ಜನರು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುತ್ತಿರುವುದು ಕಡಿಮೆಯಾಗಿರುವುದರಿಂದ ವಿಟಾಮಿನ್ ಡಿ ಕೊರತೆ ಕಳೆದ ಕೆಲವು ದಶಕಗಳಿಂದ ವಿಶ್ವವ್ಯಾಪಿ ಸಮಸ್ಯೆಯಾಗಿದೆ. ಮೂಳೆ ನೋವು,ಅತಿಯಾದ ಬಳಲಿಕೆ ಮತ್ತು ಮನೋಸ್ಥಿತಿಯಲ್ಲಿ ಬದಲಾವಣೆಗಳು ವಿಟಾಮಿನ್ ಡಿ ಕೊರತೆಯ ಲಕ್ಷಣಗಳಲ್ಲಿ ಸೇರಿವೆ.
► ಹೈಪೊಥೈರಾಯ್ಡಿಸಂ
ಹೈಪೊಥೈರಾಯ್ಡಿಸಂ ಅಥವಾ ಥೈರಾಯ್ಡ್ ಹಾರ್ಮೋನ್‌ಗಳ ಕೊರತೆಯು ಆಯಾಸ ಮತ್ತು ಬಳಲಿಕೆಯನ್ನುಂಟು ಮಾಡುತ್ತದೆ. 50 ವರ್ಷಕ್ಕೆ ಮೇಲ್ಪಟ್ಟ ಮಹಿಳೆಯರಲ್ಲಿ ಹೈಪೊಥೈರಾಯ್ಡಿಸಂ ಸಾಮಾನ್ಯ ಸಮಸ್ಯೆಯಾಗಿದೆ. ಬಳಲಿಕೆ,ಏಕಾಗ್ರತೆಯ ಕೊರತೆ,ಸ್ನಾಯುನೋವು,ತೂಕ ಏರಿಕೆ,ಬೆಚ್ಚಗಿನ ವಾತಾವರಣದಲ್ಲಿಯೂ ಚಳಿಯ ಅನುಭವ ,ಅನಿಯಮಿತ ಋತುಕ್ರಮ ಮತ್ತು ಮಲಬದ್ಧತೆ ಇವು ಹೈಪೊಥೈರಾಯ್ಡ್ಡಿಸಂ ಅನ್ನು ಸೂಚಿಸುವ ಕೆಲವು ಲಕ್ಷಣಗಳಾಗಿವೆ.
► ಮಧುಮೇಹ
ರಕ್ತದಲ್ಲಿಯ ಸಕ್ಕರೆ ಮಟ್ಟದಲ್ಲಿ ಏರಿಳಿತ ಬಳಲಿಕೆಗೆ ಇನ್ನೊಂದು ಮುಖ್ಯ ಕಾರಣವಾಗಿದೆ. ಶರೀರದ ಚಟುವಟಿಕೆಗಳು ಸುಗಮವಾಗಿ ನಿರ್ವಹಣೆಯಾಗಲು ಸಾಕಷ್ಟು ಶಕ್ತಿಯ ಕೊರತೆಯಿಂದಾಗಿ ಮಧುಮೇಹಿಗಳಲ್ಲಿ ಆಗಾಗ್ಗೆ ದಣಿವು ಕಂಡು ಬರುತ್ತದೆ ಮತ್ತು ಇದು ಮಧುಮೇಹದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಅತಿಯಾದ ಆಯಾಸ,ತೀವ್ರ ಬಾಯಾರಿಕೆ,ಪದೇ ಪದೇ ಮೂತ್ರವಿಸರ್ಜನೆ,ಹಸಿವು,ತೂಕ ನಷ್ಟ ಇತ್ಯಾದಿಗಳು ಮಧುಮೇಹದ ಲಕ್ಷಣಗಳಲ್ಲಿ ಸೇರಿವೆ.
► ಕ್ರೋನಿಕ್ ಫ್ಯಾಟಿಗ್ ಸಿಂಡ್ರೋಮ್
ಕ್ರೋನಿಕ್ ಫ್ಯಾಟಿಗ್ ಸಿಂಡ್ರೋಮ್ (ಸಿಎಫ್‌ಎಸ್) ಅಥವಾ ದೀರ್ಘಕಾಲಿಕ ಬಳಲಿಕೆ ಸಮಸ್ಯೆಯು ವ್ಯಕ್ತಿಯು ವಿಶ್ರಾಂತಿಯಿಂದಲೂ ಕಡಿಮೆಯಾಗದ ತೀವ್ರ ದಣಿವನ್ನು ಅನುಭವಿಸುತ್ತಿರುವ ಸ್ಥಿತಿಯಾಗಿದೆ. ಇದರ ಲಕ್ಷಣಗಳು ಆರು ತಿಂಗಳವರೆಗೂ ಇರಬಲ್ಲವು. ಅತಿಯಾದ ಬಳಲಿಕೆ,ಮರುಕಳಿಸುವ ನೋವು,ತಲೆನೋವು,ಗಂಟಲು ಕೆರೆತ,ಸ್ನಾಯು ಮತ್ತು ಸಂದು ನೋವು,ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಸಮಸ್ಯೆ,ನಿದ್ರೆಗೆ ವ್ಯತ್ಯಯ,ನಿಶ್ಶಕ್ತಿ ಅಥವಾ ತಲೆಸುತ್ತುವಿಕೆ ಇವು ಸಿಎಫ್‌ಎಸ್‌ನ ಲಕ್ಷಣಗಳಲ್ಲಿ ಸೇರಿವೆ.
► ಸ್ಲೀಪ್ ಆಪ್ನಿಯಾ
ಸ್ಲೀಪ್ ಆಪ್ನಿಯಾ ಒಂದು ನಿದ್ರಾ ಸಂಬಂಧಿತ ಆರೋಗ್ಯ ಸಮಸ್ಯೆಯಾಗಿದ್ದು,ವ್ಯಕ್ತಿ ಗಾಢನಿದ್ರೆಯಲ್ಲಿರುವಾಗ ಉಸಿರಾಟ ಆಗಾಗ್ಗೆ ಕೆಲವು ಸೆಕೆಂಡ್‌ಗಳ ಕಾಲ ಸ್ತಬ್ಧಗೊಳ್ಳುತ್ತದೆ. ಅತಿಯಾದ ಗೊರಕೆ ಮತ್ತು ಮರುದಿನ ಬಳಲಿಕೆ ಸ್ಲೀಪ್ ಆಪ್ನಿಯಾದ ಲಕ್ಷಣಗಳಾಗಿವೆ.