ಮಿದುಳು ಟ್ಯೂಮರ್‌ನ ಈ ಎಚ್ಚರಿಕೆಯ ಸಂಕೇತಗಳನ್ನು ಎಂದಿಗೂ ಕಡೆಗಣಿಸಬೇಡಿ
ಮಿದುಳು ಅತ್ಯಂತ ಪ್ರಮುಖ ಅಂಗವಾಗಿದ್ದು,ಮಾನವ ಶರೀರದ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಮಿದುಳಿನ ಆರೋಗ್ಯ ಬಿಗಡಾಯಿಸಿದರೆ ಬದುಕು ನಡೆಸುವುದೇ ಕಷ್ಟವಾಗುತ್ತದೆ. ಮಿದುಳು ಶರೀರದ ಎಲ್ಲ ಭಾಗಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ ಅದರಲ್ಲಿ ಸಣ್ಣ ಸಮಸ್ಯೆಯು ಕೂಡ ಇಡೀ ವ್ಯವಸ್ಥೆಗೆ ವ್ಯತ್ಯಯವನ್ನುಂಟು ಮಾಡಿ ವ್ಯಕ್ತಿಯನ್ನು ನಿಷ್ಕ್ರಿಯಗೊಳಿಸುತ್ತದೆ.
ಮಿದುಳು ಅನಾರೋಗ್ಯದ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. ಇದಕ್ಕೆ ಕಳಪೆ ಆಹಾರಕ್ರಮ ಮತ್ತು ಅನಾರೋಗ್ಯಕರ ಜೀವನಶೈಲಿಯನ್ನು ಮಾತ್ರ ದೂರುವಂತಿಲ್ಲ,ಸಣ್ಣಪುಟ್ಟ ಎಚ್ಚರಿಕೆಯ ಸಂಕೇತಗಳನ್ನು ಕಡೆಗಣಿಸುವ ನಮ್ಮ ಅಜ್ಞಾನವನ್ನೂ ದೂರಬೇಕಾಗುತ್ತದೆ. ಅದು ತಲೆನೋವಾಗಿರಲಿ ಅಥವಾ ಬಳಲಿಕೆಯಾಗಿರಲಿ,ಸಣ್ಣದೆಂಬಂತೆ ಕಂಡು ಬರುವ ಈ ಸಮಸ್ಯೆಗಳು ಮಿದುಳು ಟ್ಯೂಮರ್ ಅಥವಾ ಮಿದುಳು ಗಡ್ಡೆಯಂತಹ ರೋಗಗಳಿಗೆ ಗುರಿಯಾಗುವ ಸೂಚನೆಯನ್ನು ನೀಡಬಲ್ಲವು. ಇಂತಹ ಎಚ್ಚರಿಕೆಯ ಸಂಕೇತಗಳನ್ನು ಕಡೆಗಣಿಸಿದ್ದ ಹಲವಾರು ಜನರು ಮಿದುಳು ಟ್ಯೂಮರ್‌ನಿಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಮಿದುಳು ಟ್ಯೂಮರ್ ಮಾರಣಾಂತಿಕ ನಿಜ,ಆದರೆ ಅದನ್ನು ಸಕಾಲದಲ್ಲಿ ಪತ್ತೆ ಹಚ್ಚಿ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಆರೋಗ್ಯಕ್ಕೆ ಗಂಭೀರ ಹಾನಿಯನ್ನು ತಡೆಯಬಹುದು. ಈ ರೋಗದ ಆರಂಭಿಕ ಲಕ್ಷಣಗಳ ಕಡೆಗಣನೆ ಅದರ ಚಿಕಿತ್ಸೆಯನ್ನು ಅಸಾಧ್ಯವಾಗಿಸಬಹುದು. ಇಲ್ಲಿವೆ ಮಿದುಳು ಟ್ಯೂಮರ್‌ನ ಸಾಧ್ಯತೆಯನ್ನು ಸೂಚಿಸುವ ಎಚ್ಚರಿಕೆಯ ಸಂಕೇತಗಳು.
► ಮುಖದ ಒಂದು ಭಾಗದಲ್ಲಿ ನಿಶ್ಶಕ್ತಿ
ಮುಖದಲ್ಲಿ ನೋವು ಕಾಣಿಸಿಕೊಳ್ಳುವುದು ತಲೆನೋವಿನ ನಂತರದ ಮಿದುಳು ಟ್ಯೂಮರ್‌ನ ಪ್ರಮುಖ ಆರಂಭಿಕ ಲಕ್ಷಣಗಳಲ್ಲೊಂದಾಗಿದೆ. ಶರೀರದ ಇತರ ಭಾಗಗಳಲ್ಲಿ ನೋವುಂಟಾಗುವುದು ಸಾಮಾನ್ಯವಾಗಿದ್ದರೂ ಮುಖದಲ್ಲಿ ನೋವು ಕಾಣಿಸಿಕೊಳ್ಳುವುದು ಪರಿಚಿತ ಅನುಭವವಲ್ಲ. ಮಿದುಳು ಟ್ಯೂಮರ್‌ನಿಂದಾಗಿ ಮುಖದಲ್ಲಿ ಅಥವಾ ಶರೀರದ ಯಾವುದೇ ಭಾಗದಲ್ಲಿ ನಿಶ್ಶಕ್ತಿಯ ಅನುಭವವಾಗುತ್ತದೆ.ಇಂತಹ ಸ್ಥಿತಿ ಎದುರಾದಾಗ ಅದನ್ನೆಂದಿಗೂ ಕಡೆಗಣಿಸಬೇಡಿ ಮತ್ತು ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ.
► ಬಳಲಿಕೆ
ನಿಮ್ಮ ನಿದ್ರೆಯ ಪ್ರಮಾಣ ಎಂದಿಗಿಂತ ಕಡಿಮೆಯಾಗಿದ್ದರೆ ಅದು ಒಳ್ಳೆಯ ಸಂಕೇತವಲ್ಲ. ಜೊತೆಗೆ ನೀವು ದಿನವಿಡೀ ಬಳಲಿಕೆಯನ್ನು ಅನುಭವಿಸುತ್ತಿದ್ದರೆ ಅದು ನಿಮ್ಮ ಶರೀರದಲ್ಲಿಯ ಏನೋ ಅನಾರೋಗ್ಯವನ್ನು ಸೂಚಿಸುವುದರಿಂದ ಅದನ್ನು ಕಡೆಗಣಿಸಬೇಡಿ. ಮಿದುಳಿನ ಮೇಲೆ ಅತಿಯಾದ ಒತ್ತಡವು ನಿದ್ರೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ವ್ಯಕ್ತಿಗೆ ರಾತ್ರಿ ನಿದ್ರೆ ಬರದಿರಬಹುದು,ಆದರೆ ಹಗಲಿಡೀ ನಿದ್ರೆಯ ಮಂಪರಿನಲ್ಲಿರಬಹುದು. ಇದು ಮಿದುಳು ಟ್ಯೂಮರ್‌ನ ಸಂಕೇತವಾಗಿರಬಹುದು.
► ದೈಹಿಕ ಚಟುವಟಿಕೆಗಳ ಮೇಲೆ ಪರಿಣಾಮ
ಮಿದುಳು ಟ್ಯೂಮರ್ ಉಂಟಾಗುವ ಮುನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡಂತಾಗುತ್ತದೆ. ಇದು ಮಾತ್ರವಲ್ಲ,ವ್ಯಕ್ತಿಗೆ ನಡೆದಾಡಲು ಕಷ್ಟ,ದೇಹದ ಒಂದು ಭಾಗದಲ್ಲಿ ನಿಶ್ಶಕ್ತಿ,ಘ್ರಾಣಶಕ್ತಿಯ ಕೊರತೆ ಮತ್ತು ಮಾತನಾಡಲು ಕಷ್ಟ ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಈ ಎಲ್ಲ ಲಕ್ಷಣಗಳು ಮಿದುಳು ಟ್ಯೂಮರ್‌ನ ಲಕ್ಷಣಗಳಾಗಬಲ್ಲವು.
► ಸೆಳವು
ಮಿದುಳು ಟ್ಯೂಮರ್‌ನ ಮೊಟ್ಟಮೊದಲ ಸಂಕೇತವು ಕೈಗಳು,ಪಾದಗಳು ಮತ್ತು ಶರೀರದೊಂದಿಗೆ ಗುರುತಿಸಿಕೊಂಡಿರುತ್ತದೆ. ನಿಮ್ಮ ಕೈಗಳು,ಪಾದಗಳು ಮತ್ತು ಶರೀರದಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡಿದ್ದರೆ ಮತ್ತು ಸ್ನಾಯು ಸೆಳೆತಗಳೂ ಬಾಧಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ. ಇವುಗಳೊಂದಿಗೆ ಆಗಾಗ್ಗೆ ಸೆಳವು ಕಾಣಿಸಿಕೊಳ್ಳುವುದು ಮತ್ತು ದಿಢೀರ್ ಪ್ರಜ್ಞೆಯನ್ನು ಕಳೆದುಕೊಳ್ಳುವುದು ಕೂಡ ಮಿದುಳು ಟ್ಯೂಮರ್‌ನಂತಹ ಗಂಭೀರ ರೋಗದ ಸಂಕೇತಗಳಾಗಿವೆ.