CAA ಕವಿತೆಗಳು!

Update: 2019-12-30 16:30 IST
CAA ಕವಿತೆಗಳು!
ಬಿ.ಎಂ. ಬಶೀರ್
  • whatsapp icon

ನಮ್ಮ ಹಿರಿಯರು, ಮೇಧಾವಿಗಳು, ಕವಿಗಳು

ಅನ್ನಿಸಿದ್ದನ್ನು ಬರೆಯುವ,

ಭಾಷಣಗೈಯುವ ವಾತಾವರಣ ಸಿಗಲಿ ಎಂದು

ಹುಡುಗರು ಬೀದಿಯಲ್ಲಿ ಕೋವಿಗೆ

ಎದೆಗೊಡುವರು

ಕೇಳುವ ಮೊದಲೇ ಆ ಹುಡುಗರು

ತಮ್ಮ ಆಯಸ್ಸನ್ನು ಹಿರಿಯರಿಗೆ ಕೊಟ್ಟು

ಅಗೋ ವಿದಾಯ ಹೇಳಿದ್ದಾರೆ

ಹಿರಿಯರೇ ಇನ್ನು ಹೊರಗೆ ಬನ್ನಿ

ಬೀದಿಯಲ್ಲೀಗ ನೆಮ್ಮದಿಯಿದೆ

ನಿಮ್ಮ ಕಾವ್ಯ, ಕಥೆ, ಭಾಷಣಗಳ

ಕೇಳಲು ಕಿವಿಗಳು ಕಾತರದಿಂದಿವೆ

ನಿಷ್ಚಿಂತೆಯಿಂದಿರಿ

ಸಾಲವಾಗಿ ಕೊಟ್ಟ ನಮ್ಮ ಆಯಸ್ಸನ್ನು

ಇದೋ ಮನ್ನಾ ಮಾಡಿದ್ದೇವೆ.

ನಾನೇ ಆರಿಸಿದ ಪ್ರಧಾನಿ

ಈಗ ನನ್ನಲ್ಲಿ ಕೇಳುತ್ತಿದ್ದಾನೆ

ನೀನು ಈ ದೇಶದ

ಪ್ರಜೆಯೆನ್ನುವುದನ್ನು

ಸಾಬೀತು ಪಡಿಸು!

ಹಾಗಾದರೆ ನಿನ್ನನ್ನು ಪ್ರಧಾನಿಯಾಗಿ

ಆರಿಸಿದ್ದು ಯಾರು?

ಅದ ಮೊದಲು ತಿಳಿಸು

ನೀನು ಈ ದೇಶದವನಲ್ಲ

ಎಂದರೆ ಸಂತೋಷ...

ನಾನೀಗಷ್ಟೇ ಹುಟ್ಟಿದ

ಈ ವಿಶ್ವದ ಕೂಸು

ಎಂದುಕೊಂಡು ಬದುಕುವೆ!

ನನ್ನ ಪೌರತ್ವದ ಗುರುತು

ಚೀಟಿಗಳು ನನ್ನೆದೆಯೊಳಗಿವೆ

ನಿಮಗದು ಬೇಕೇ ಬೇಕೆಂದಾದರೆ

ನನ್ನೆದೆಗೆ ನೀವು

ಗುಂಡಿಕ್ಕುವುದು ಅನಿವಾರ್ಯ!

ಹತ್ಯೆಯನ್ನು ಸಂಭ್ರಮಿಸುವವರು

ಮುಂದೊಂದು ದಿನ

ಸಂಭ್ರಮಿಸುವುದಕ್ಕಾಗಿಯೇ

ಹತ್ಯೆಗೈಯುವರು!

ಈ ದೇಶ ನನ್ನದಲ್ಲ

ಎಂದರೆ ನನಗೆ ಚಿಂತೆಯಿಲ್ಲ

ಈ ವಿಶ್ವದಲ್ಲಿ

ದೇಶವಿಲ್ಲದವರದೇ

ಒಂದು ದೊಡ್ಡ ದೇಶವಿದೆ

ಅಲ್ಲಂತೂ ನನಗೆ ಜಾಗವಿದೆ

* ಬಿ.ಎಂ. ಬಶೀರ್

Writer - ಬಿ.ಎಂ. ಬಶೀರ್

contributor

Editor - ಬಿ.ಎಂ. ಬಶೀರ್

contributor

Similar News