‘ಲೇಝಿ ಐ’ ಎಂದರೇನು?
ಲೇಝಿ ಐ ಅಥವಾ ಆ್ಯಂಬ್ಲಿಯೋಪಿಯಾ ಅಥವಾ ಮಂಜುಗಣ್ಣು ಮಕ್ಕಳನ್ನು ಕಾಡುವ ನೇತ್ರರೋಗವಾಗಿದ್ದು, ಈ ಸ್ಥಿತಿಯಲ್ಲಿ ಒಂದು ಕಣ್ಣಿನ ದೃಷ್ಟಿಯು ಇನ್ನೊಂದು ಕಣ್ಣಿನ ದೃಷ್ಟಿಯಷ್ಟು ಬೆಳೆದಿರುವುದಿಲ್ಲ. ಬಾಲ್ಯಕಾಲದ ಈ ನೇತ್ರರೋಗವು ಗಂಭೀರ ಸಮಸ್ಯೆಯಾಗಿದ್ದು, ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸದಿದ್ದರೆ ಅದು ಮಗುವಿನ ಮಿದುಳಿನ ಚಟುವಟಿಕೆಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಮಗುವು ನಿಶ್ಶಕ್ತ ಕಣ್ಣಿನ ಮೂಲಕ ನೋಡುವ ನೋಟವನ್ನು ಮಿದುಳು ಗ್ರಹಿಸುವುದಿಲ್ಲ ಮತ್ತು ಇದು ಮಗುವಿನ ದೃಷ್ಟಿಗೆ ಶಾಶ್ವತ ಹಾನಿಯನ್ನುಂಟು ಮಾಡಬಹುದು. ಹೀಗಾಗಿ ಲೇಝಿ ಐ ಅಥವಾ ಮಂಜುಗಣ್ಣು ಕಳವಳಕಾರಿ ಸಮಸ್ಯೆಯಾಗಿದೆ.
ಕಾರಣಗಳು:
ಕಣ್ಣುಗಳ ಫೋಕಸ್ ಅಥವಾ ಕೇಂದ್ರಬಿಂದುಗಳ ನಡುವೆ ವ್ಯತ್ಯಾಸವು ಮಂಜುಗಣ್ಣಿಗೆ ಪ್ರಮುಖ ಕಾರಣವಾಗಿದೆ. ಇಲ್ಲಿ ಒಂದು ಕಣ್ಣು ಪ್ರಬಲ ಕೇಂದ್ರಬಿಂದುವನ್ನು ಹೊಂದಿದ್ದರೆ ಇನ್ನೊಂದು ಕಣ್ಣು ದುರ್ಬಲ ಕೇಂದ್ರಬಿಂದುವನ್ನು ಹೊಂದಿರುತ್ತದೆ. ಕೆಲವೊಮ್ಮೆ ಒಂದು ಕಣ್ಣಿನ ದೂರಗೋಚರತೆಯು ಇನ್ನೊಂದು ಕಣ್ಣಿಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ. ಒಂದು ಕಣ್ಣು ಮಗುವಿನ ಮಿದುಳಿಗೆ ಸ್ಪಷ್ಟ ಚಿತ್ರಗಳನ್ನು ರವಾನಿಸಿದರೆ ಮಂಜುಗಣ್ಣು ಮಸುಕಾದ ಚಿತ್ರಗಳನ್ನು ಕಳುಹಿಸುತ್ತದೆ. ಮಿದುಳು ಸ್ಪಷ್ಟವಾದ ಚಿತ್ರಗಳನ್ನು ಮಾತ್ರ ಪರಿಗಣಿಸುತ್ತದೆ ಮತ್ತು ಮಸುಕು ಚಿತ್ರಗಳನ್ನು ಕಡೆಗಣಿಸುತ್ತದೆ. ಈ ಸ್ಥಿತಿ ಮುಂದುವರಿದರೆ ಮಗುವಿನ ದೃಷ್ಟಿಯು ಹದಗೆಡುತ್ತದೆ ಮತ್ತು ಶಾಶ್ವತ ದೃಷ್ಟಿನಾಶಕ್ಕೆ ಕಾರಣವಾಗುತ್ತದೆ.
ಮಗುವಿನ ಕಣ್ಣುಗಳು ತಪ್ಪು ಪಂಕ್ತೀಕರಣ ಹೊಂದಿರುವ ಸ್ಥಿತಿಯಾದ ಸ್ಟ್ರಾಬಿಸ್ಮಸ್ ಎನ್ನುವ ಇನ್ನೊಂದು ನೇತ್ರರೋಗವೂ ಮಂಜುಗಣ್ಣಿಗೆ ಕಾರಣವಾಗುತ್ತದೆ. ಸ್ಟ್ರಾಬಿಸ್ಮಸ್ ಹೊಂದಿರುವ ಮಕ್ಕಳ ಕಣ್ಣುಗಳಿಗೆ ಒಂದು ಬಿಂಬದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಅವರಿಗೆ ಎರಡೆರಡು ಬಿಂಬಗಳು ಕಂಡು ಬರುತ್ತವೆ. ಕ್ಯಾಟರಾಕ್ಟ್ ಕೂಡ ಮಕ್ಕಳಲ್ಲಿ ಮಂಜುಗಣ್ಣಿಗೆ ಇನ್ನೊಂದು ಸಂಭಾವ್ಯ ಕಾರಣವಾಗಿದೆ. ಈ ಸಮಸ್ಯೆಯು ಬೆಳಕಿಗೆ ಅಡ್ಡಿಯನ್ನುಂಟು ಮಾಡಿ ಮಗುವಿನ ದೃಷ್ಟಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ.
ಮಂಜುಗಣ್ಣು ಸಮಸ್ಯೆಯನ್ನು ಸಕಾಲದಲ್ಲಿ ಪತ್ತೆ ಹಚ್ಚುವುದು ಅದು ಇನ್ನಷ್ಟು ಹದಗೆಡದಂತೆ ತಡೆಯಲು ಅತ್ಯುತ್ತಮ ಮಾರ್ಗವಾಗಿದೆ. ಮಕ್ಕಳು ಶಾಲೆಗೆ ಹೋಗುವ ವಯಸ್ಸು ತಲುಪುವ ಮುನ್ನ ಅವರನ್ನು ಮಂಜುಗಣ್ಣು ತಪಾಸಣೆಗೆ ಒಳಪಡಿಸಬೇಕು. ತಪಾಸಣೆಯಲ್ಲಿ ಮಂಜುಗಣ್ಣು ಪತ್ತೆಯಾದರೆ ವೈದ್ಯರು ಸೂಕ್ತ ಚಿಕಿತ್ಸೆಯ ಮೂಲಕ ಅದನ್ನು ಗುಣಪಡಿಸಲು ಸಾಧ್ಯವಾಗುತ್ತದೆ.
ಮಗುವಿಗೆ ಆರು ತಿಂಗಳು ತುಂಬಿದಾಗ ಮತ್ತು ಮೂರು ವರ್ಷವಾದಾಗ ಕಣ್ಣಿನ ತಪಾಸಣೆಗೊಳಪಡಿಸಬೇಕು. ನಂತರ ಅವರು ಶಾಲೆಯಲ್ಲಿ ಓದುತ್ತಿರುವವರೆಗೂ ಪ್ರತಿವರ್ಷ ಕಣ್ಣಿನ ತಪಾಸಣೆಯನ್ನು ಮಾಡಿಸಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ. ಅಲ್ಲದೆ ಕುಟುಂಬದಲ್ಲಿ ಮಂಜುಗಣ್ಣಿನ ಇತಿಹಾಸವಿದ್ದರೆ ಮಗುವಿಗೂ ಅದು ಕಾಡುವ ಸಾಧ್ಯತೆಯಿರುತ್ತದೆ.