ಸುದ್ದಿ, ಸಿನೆಮಾ ಮಾಧ್ಯಮಗಳಲ್ಲಿ ಹೆಣ್ಣು ಮತ್ತು ನೋಟ

Update: 2019-12-31 13:58 GMT

ಬೆಂಗಳೂರಿನ ಸಂಜ್ಯೋತಿ ವಿ.ಕೆ., ಎಂಬಿಎ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರೆ. ಸದ್ಯ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ 'ನಕ್ಷತ್ರದ ಧೂಳು' ಏಕವ್ಯಕ್ತಿ ನಾಟಕ ರಾಜ್ಯದ ಹಲವೆಡೆ ಪ್ರದರ್ಶನ ಕಂಡಿದೆ. ಕೆಲಕಾಲ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೋಧಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಸಿನೆಮಾ ಮಾಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ನಿರ್ದೇಶನದ 'ಅನಲ' ಕಿರುಚಿತ್ರವು ರಾಜ್ಯ ಸರಕಾರ ನೀಡುವ 2016ನೇ ಸಾಲಿನ 'ಅತ್ಯುತ್ತಮ ಕಿರುಚಿತ್ರ ರಾಜ್ಯಪ್ರಶಸ್ತಿ' ಪಡೆದಿದೆ.

          ಸಂಜ್ಯೋತಿ ವಿ.ಕೆ.

ಸಮಾಜದಲ್ಲಿ ಲಿಂಗ ಸೂಕ್ಷ್ಮತೆಯನ್ನು ಬೆಳೆಸಲು ಶಿಕ್ಷಣ, ಕಾನೂನು, ರಾಜಕೀಯ ಪ್ರಾತಿನಿಧ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆಗಳನ್ನು ತರುವ ಅಗತ್ಯವಿದೆಯೆಂಬುದು ನಿಜವೇ. ಆದರೆ ಇಂತಹ ಬದಲಾವಣೆಗೆ ಸಮಾಜವನ್ನು ತಯಾರು ಮಾಡುವ ದೊಡ್ಡ ಸಾಧ್ಯತೆ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಹಾಗಾಗಿ ಇದು ಮಾಧ್ಯಮದ ಗುರುತರವಾದ ಜವಾಬ್ದಾರಿ ಸಹ ಆಗಿದೆ. ಇದನ್ನರಿತು ಮಾಧ್ಯಮಗಳು ತುರ್ತಾಗಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ.

ಇಡೀ ಸಮಾಜದ ಜನಮಾನಸದ ದಿಕ್ಕನ್ನು ಮಾಧ್ಯಮಗಳು ಪ್ರಭಾವಿಸುತ್ತವೆ. ನಮ್ಮ ಜೀವನದೃಷ್ಟಿಯನ್ನು, ಯಾವುದು ಒಪ್ಪಿತ, ಯಾವುದು ಒಪ್ಪಿತವಲ್ಲ ಎಂಬ ಮೌಲ್ಯೀಕರಣವನ್ನು ಸಾಮೂಹಿಕ ಹಾಗೂ ವೈಯಕ್ತಿಕ ನೆಲೆಗಳೆರಡರಲ್ಲೂ ಮಾಧ್ಯಮವು ಪ್ರಭಾವವಿಸುತ್ತದೆ. ಅದರಲ್ಲೂ ಮಕ್ಕಳು ಹಾಗೂ ಹದಿಹರೆಯದವರ ಚಿಂತನಾಕ್ರಮವನ್ನು ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಬಹು ದೊಡ್ಡದು. ನಮ್ಮ ಸಹಜೀವಿಗಳೊಡನೆ ಹೇಗೆ ನಡೆದುಕೊಳ್ಳುತ್ತೇವೆಂಬ ಅತ್ಯಂತ ಖಾಸಗಿ ನಡೆಗಳಿಂದ ಹಿಡಿದು, ನಾವು ಏನನ್ನು ಕೊಳ್ಳುತ್ತೇವೆ, ಯಾರನ್ನು ಒಪ್ಪುತ್ತೇವೆ, ಯಾರನ್ನು ನಿರಾಕರಿಸುತ್ತೇವೆ ಎಂಬಂತ ನಿತ್ಯಜೀವನ ವ್ಯಾಪಾರಗಳಿಂದ ಹಿಡಿದು, ನಮ್ಮ ಬದುಕನ್ನು ಪ್ರಭಾವಿಸುವ ಕಾನೂನು, ರಾಜಕೀಯ, ಸಾಮಾಜಿಕ ಆಗುಹೋಗುಗಳೆಲ್ಲದರಲ್ಲೂ ಮಾಧ್ಯಮದ ಪ್ರಭಾವ ಇದ್ದೇ ಇರುತ್ತದೆ. ಹೀಗಿರುವ ಮಾಧ್ಯಮದಲ್ಲಿ ಜಗತ್ತಿನ ಅರ್ಧದಷ್ಟು ಜನರು ಅಂದರೆ ಮಹಿಳೆಯರ ಪಾತ್ರವನ್ನು ಅರಿಯುವುದು ಅತ್ಯಗತ್ಯವಾಗಿದೆ. ಮಾಧ್ಯಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ, ಹೆಣ್ಣನ್ನು ಮಾಧ್ಯಮಗಳಲ್ಲಿ ಪ್ರಸ್ತುತಪಡಿಸುತ್ತಿರುವ ರೀತಿ, ಇವುಗಳಿಂದ ಆಕೆಯ ಸಮಾಜೋರಾಜಕೀಯ, ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಮತ್ತು ಆಕೆಯ ನಿತ್ಯ ಬದುಕಿನ ಮೇಲಿನ ಪರಿಣಾಮ ಹಾಗೂ ಅಷ್ಟೇ ಮುಖ್ಯವಾಗಿ ಇಡೀ ಸಮಾಜದ ಮೇಲೆ ಇವುಗಳೆಲ್ಲದರ ಒಟ್ಟೂ ಪರಿಣಾಮಗಳು ಈ ಎಲ್ಲ ಆಯಾಮಗಳನ್ನು ಅಗತ್ಯವಾಗಿ ಚರ್ಚಿಸಬೇಕಿದೆ.

ಇತರ ಎಲ್ಲ ರಂಗಗಳಂತೆಯೇ ಇಲ್ಲೂ ಎದ್ದು ಕಾಣುವುದು ಮಹಿಳೆಯರಿಗೆ ಸಮಾನ ಪ್ರತಿನಿಧೀಕರಣ ಇಲ್ಲದಿರುವುದು. ಜಾತಿಯ ವಿಚಾರದಲ್ಲಿ ವಾಸ್ತವದ ಅರಿವಿಲ್ಲದೆ ಇಂದಿನ ಜಾಗತಿಕ ಯುಗದಲ್ಲಿ ಜಾತಿ ಅನ್ನೋದು ಎಲ್ಲಿದೆ? ಎಂದು ಮಾತಾಡುವಷ್ಟೇ ಸಲೀಸಾಗಿ ಹೆಣ್ಣಿನ ವಿಚಾರದಲ್ಲೂ ಆಗುತ್ತದೆ. ಇಂದು ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂದಿದ್ದಾರೆ ಎನ್ನುವಂತಹ ಕುರುಡು ನಂಬಿಕೆಯಿಂದ ಹಿಡಿದು, ಗಂಡಸರು ನಿರುದ್ಯೋಗಿಗಳಾಗ್ತಿರೋದು ಯಾಕೆ ಅಂತೀರಿ? ಅನ್ನುವಂತಹ ವ್ಯಂಗ್ಯೋಕ್ತಿಗಳನ್ನೂ ಪಕ್ಕಕ್ಕಿಟ್ಟು ಕೆಲವು ಅಂಕಿ ಅಂಶಗಳನ್ನು ಗಮನಿಸಿದರೆ ವಸ್ತುಸ್ಥಿತಿಯ ಅರಿವಾಗುತ್ತದೆ.

ಮಾಧ್ಯಮವನ್ನು ಕಾಲ್ಪನಿಕ ಮತ್ತು ಸುದ್ದಿ ಮಾಧ್ಯಮಗಳು ಎಂದು ಸ್ಥೂಲವಾಗಿ ವಿಂಗಡಿಸಿಕೊಳ್ಳಬಹುದು.

ಮೊದಲಿಗೆ ಸುದ್ದಿ ಮಾಧ್ಯಮಗಳತ್ತ ಗಮನ ಹರಿಸುವುದಾದರೆ, ಗ್ಲೋಬಲ್ ಮೀಡಿಯಾ ಮಾನಿಟರಿಂಗ್ ಪ್ರಾಜೆಕ್ಟ್ಸ್‌ನ ಇತ್ತೀಚಿನ ವರದಿಯ ಪ್ರಕಾರ ಜಗತ್ತಿನ ಒಟ್ಟಾರೆ ವಿದ್ಯುನ್ಮಾನ (ಟೆಲಿವಿಷನ್ ಮತ್ತು ರೇಡಿಯೊ) ಹಾಗೂ ಮುದ್ರಣ ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಕ್ಷೇತ್ರ ಪರಿಣಿತರಲ್ಲಿ ಕೇವಲ ಶೇ.19ರಷ್ಟು ಮಾತ್ರವೇ ಮಹಿಳೆಯರಾಗಿದ್ದಾರೆ. ಜಗತ್ತಿನ ವಿದ್ಯಮಾನಗಳ ಕಥೆಗಳನ್ನು ಹೇಳುತ್ತಿರುವ ವರದಿಗಾರರಲ್ಲಿ ಸ್ತ್ರೀಯರು ಕೇವಲ ಶೇ.37 ಮಾತ್ರವೇ. ಲಿಂಗಾಧಾರಿತ ದೌರ್ಜನ್ಯಗಳ ವರದಿಗಾರಿಕೆಯಲ್ಲಿಯೂ ಮಹಿಳೆಯರಿಗಿಂತ ಅತಿ ಹೆಚ್ಚು ಪ್ರಸಾರ ಸಮಯ(ಏರ್‌ಟೈಮ್) ಮತ್ತು ಮುದ್ರಣ ಸ್ಥಳ (ಪ್ರಿಂಟ್ ಸ್ಪೇಸ್) ಪುರುಷರಿಗೇ ಸಿಗುತ್ತಿದೆ! ರಾಜಕೀಯ ಸುದ್ದಿಗಳಲ್ಲಿ ಶೇ.19 ಮಾತ್ರವೇ ಮಹಿಳಾ ಮೂಲಗಳದ್ದಾಗಿವೆ. ಆರ್ಥಿಕತೆ ಅಥವಾ ರಾಜಕೀಯದಂತಹ ಮುಖ್ಯ ಕ್ಷೇತ್ರಗಳ ವರದಿಗಾರಿಕೆಯಲ್ಲಿ ಸ್ತ್ರೀಯರಿಗೆ ಅವಕಾಶಗಳು ಬಹಳ ಕಡಿಮೆ. ಫ್ಯಾಷನ್, ಜೀವನಶೈಲಿಯ ಸುದ್ದಿಗಳಿಗೆ ಅವರನ್ನು ಮೀಸಲಿಡುವ ಪ್ರವೃತ್ತಿ ಜಗತ್ತಿನೆಲ್ಲೆಡೆ ಕಾಣುತ್ತೇವೆ. ಮಾಧ್ಯದ ರಂಗದ ಶೇ.73ರಷ್ಟು ಉನ್ನತ ಹುದ್ದೆಗಳಲ್ಲಿ ಪುರುಷರೇ ಇದ್ದಾರೆ ಎಂಬುದು ಮೇಲಿನ ಎಲ್ಲ ಅಂಕಿಅಂಶಗಳ ಹಿಂದಿರುವ ವಾಸ್ತವ. ಯಾವುದು ಸುದ್ದಿ, ಯಾವುದು ಸುದ್ದಿಯಲ್ಲ, ಯಾವುದು ಮುಖ್ಯ ಸುದ್ದಿ ಎಂದು ನಿರ್ಧರಿಸುವ ಆಯ್ಕೆ ಪುರಷರ ಕೈಯಲ್ಲಿರುವಾಗ ಸಹಜವಾಗಿಯೇ ಜಗತ್ತಿನ ಒಟ್ಟು ಸುದ್ದಿಗಳಲ್ಲಿ ಶೇ.24 ಸುದ್ದಿಗಳು ಮಾತ್ರವೇ ಮಹಿಳಾ ಕೇಂದ್ರಿತ ಸುದ್ದಿಗಳಾಗಿವೆ.

ಭಾರತದ ಸುದ್ದಿ ಮಾಧ್ಯಮಗಳ ಸ್ಥಿತಿ ಇದಕ್ಕಿಂತಲೂ ಶೋಚನೀಯವಾಗಿದೆ. 2019 ಮಾರ್ಚ್‌ನಲ್ಲಿ ಹೊರ ಬಂದ ಅಂಕಿಅಂಶಗಳನ್ನೇ ಗಮನಿಸುವುದಾದರೆ, 6 ರಾಷ್ಟ್ರೀಯ ಆಂಗ್ಲ ಪತ್ರಿಕೆಗಳು ಮತ್ತು 7 ರಾಷ್ಟ್ರೀಯ ಹಿಂದಿ ಪತ್ರಿಕೆಗಳ ಉನ್ನತ ಹುದ್ದೆಗಳಲ್ಲಿ ಒಬ್ಬ ಮಹಿಳೆಯೂ ಇಲ್ಲ! ಟಿವಿ ಮತ್ತು ಇತರ ಡಿಜಿಟಲ್ ಪೋರ್ಟಲ್‌ಗಳಲ್ಲಿ ಶೇ.13.6 ಮುಖ್ಯ ಸಂಪಾದಕರು, ಶೇ.20.9 ವ್ಯವಸ್ಥಾಪಕ ಸಂಪಾದಕರು ಮತ್ತು ಶೇ.26.3 ಕಾರ್ಯನಿರ್ವಾಹಕ ಸಂಪಾದಕರು ಮಾತ್ರವೇ ಮಹಿಳೆಯರಾಗಿದ್ದಾರೆ. ಆಂಗ್ಲ ದಿನಪತ್ರಿಕೆಗಳ ಸುಮಾರು 3,000 ಬರಹಗಾರರಲ್ಲಿ ಕಾಲು ಭಾಗದಷ್ಟು ಮಾತ್ರವೇ ಮಹಿಳೆಯರು ಮತ್ತು ಒಟ್ಟು ಪ್ರಕಟಿತ ಬರಹಗಳಲ್ಲಿ ಶೇ.20ರಷ್ಟು ಮಾತ್ರವೇ ಮಹಿಳಾ ಬರಹಗಾರ್ತಿಯರ ಬರಹಗಳು. ಕಳೆದ ವರ್ಷದ ಅತೀ ಹೆಚ್ಚು ಮಹಿಳಾ ಬೈಲೈನ್ಸ್ ಇದ್ದದ್ದು ಇಕನಾಮಿಕ್ಸ್ ಟೈಮ್ಸ್ ನಲ್ಲಿ, ಮತ್ತದು ಕೇವಲ ಶೇ.28.2 ಆಗಿತ್ತು! ಮುಖ್ಯ ಕ್ಷೇತ್ರಗಳ ವರದಿಗಾರಿಕೆಯಲ್ಲಿ ಪುರುಷ ಮೀಸಲಾತಿಯ ಅಲಿಖಿತ ನಿಯಮ ಭಾರತದಲ್ಲಿಯೂ ಯಶಸ್ವಿಯಾಗಿ ಜಾರಿಯಲ್ಲಿದೆ. ಆರ್ಥಿಕತೆ ಅಥವಾ ರಾಜಕೀಯ ಕ್ಷೇತ್ರಗಳ ಕುರಿತಂತೆ ಆಂಗ್ಲ ರಾಷ್ಟ್ರೀಯ ಪತ್ರಿಕೆಗಳ ಶೇ.94.1 ಮತ್ತು ಹಿಂದಿ ರಾಷ್ಟ್ರೀಯ ಪತ್ರಿಕೆಗಳ ಶೇ.90.2 ಲೇಖನಗಳು ಪುರುಷರು ಬರೆದದ್ದಾಗಿತ್ತು. ಅಪರಾಧ, ಅಪಘಾತ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಣಿಸಿಕೊಂಡ ಮಹಿಳೆಯರ ಬರಹಗಳು ಕೇವಲ ಶೇ.5. ಆಂಗ್ಲ ಟಿವಿ ಚಾನೆಲ್‌ಗಳ ಚರ್ಚೆಗಳಲ್ಲಿ ಸ್ತ್ರೀಯರಿಗೆ ಸಿಕ್ಕಿರುವ ಪ್ರಾತಿನಿಧ್ಯ ಕೇವಲ ಶೇ.15.7 ಮತ್ತು ಹಿಂದಿ ಚಾನೆಲ್‌ಗಳಲ್ಲಿ ಶೇ.12. ಈ ಎಲ್ಲಾ ಚಾನೆಲ್‌ಗಳ ಶೇ.75ರಷ್ಟು ಚರ್ಚೆಗಳ ಪ್ಯಾನೆಲ್‌ಗಳು ಸಂಪೂರ್ಣ ಪುರುಷರ ಪ್ಯಾನೆಲ್‌ಗಳಾಗಿದ್ದವು. ಡಿಜಿಟಲ್ ನ್ಯೂಸ್ ರೂಮ್‌ಗಳಲ್ಲಿ ನ್ಯೂಸ್ ಮಿನಿಟ್ (ಶೇ.55) ಮತ್ತು ಸ್ಕ್ರೋಲ್.ಇನ್ (ಶೇ.50.6) ಹೊರತುಪಡಿಸಿ ಉಳಿದೆಲ್ಲ ನ್ಯೂಸ್ ರೂಮ್‌ಗಳಲ್ಲೂ ಶೇ.79-89 ಪುರುಷರೇ ಇದ್ದಾರೆ. (ಸ್ಥಳೀಯ ಮಾಧ್ಯಮಗಳ ಕುರಿತಂತೆ ಇಂತಹ ಅಧ್ಯಯನಗಳೂ ನಡೆದಂತಿಲ್ಲ ಮತ್ತು ಈ ಯಾವುದೇ ಅಂಕಿಅಂಶಗಳು ಲಭ್ಯವಿಲ್ಲ!)

ಸಹಜವಾಗಿಯೇ ರಾಷ್ಟ್ರೀಯ ಪತ್ರಿಕೆಗಳ ಒಟ್ಟು ಪ್ರಕಟಿತ ಲೇಖನಗಳಲ್ಲಿ ಶೇ.3 ಮಾತ್ರವೇ ಲಿಂಗ ಸಂಬಂಧಿ ಲೇಖನಗಳಾಗಿದ್ದವು ಮತ್ತು ಡಿಜಿಟಲ್ ಪೋರ್ಟಲ್‌ಗಳಲ್ಲಿ ಅದು ಶೇ.3.7 ಮಾತ್ರವೇ ಆಗಿತ್ತು. ಲಿಂಗ ಅಸಮಾನತೆ ವ್ಯಾಪಕವಾಗಿರುವ ನಮ್ಮ ದೇಶದಲ್ಲಿ ಈ ವಿಚಾರವು ಮಾಧ್ಯಮದಲ್ಲಿ ಇಷ್ಟು ಕಡಿಮೆ ಸ್ಥಾನ ಪಡೆದುಕೊಳ್ಳುವುದಕ್ಕೂ ಮತ್ತು ಮಾಧ್ಯಮ ಕ್ಷೇತ್ರದ ಉನ್ನತ ಹುದ್ದೆಗಳಲ್ಲಿ ಹಾಗೂ ವರದಿಗಾರಿಕೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯದ ಕೊರತೆ ಇರುವುದಕ್ಕೂ ನೇರ ಸಂಬಂಧವಿರುವುದನ್ನು ಕಂಡುಕೊಳ್ಳಲು ಇಷ್ಟು ಸಾಕ್ಷಿ ಸಾಕೆನಿಸುತ್ತದೆ.

ಮಾಧ್ಯಮ ಕ್ಷೇತ್ರದಲ್ಲಿ ಪಾರಮ್ಯ ಮೆರೆದ ಮಹಿಳೆಯರು

ಜಗತ್ತಿನ ಅರ್ಧಭಾಗದ ಜನರ ಬದುಕು-ಬವಣೆಗಳು ಮಾಧ್ಯಮಗಳಿಗೆ ಗಮನಿಸಬೇಕಾದ ಸಂಗತಿಗಳೂ ಅಲ್ಲದಿರು ವುದು ಒಂದು ಕಡೆಗಾದರೆ ಈ ಕುರಿತಂತೆ ಸುದ್ದಿಗಳಾಗುವ ವಿಷಯಗಳಾದರೂ ಹೇಗೆ ಮತ್ತು ಯಾಕೆ ಸುದ್ದಿಗಳಾಗುತ್ತಿವೆ ಎಂಬುದಕ್ಕೆ ಮತ್ತೊಂದು ಆಯಾಮವೇ ಇದೆ.

ಮೂರು ಉದಾಹರಣೆಗಳು; ಮೊದಲನೆಯದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಜೇಮ್ಸ್ ಮೆಕೆನ್ಲಿ ಎಂಬ ಪತ್ರಕರ್ತ ಅಮೆರಿಕದ ಟೆಕ್ಸಾಸ್ ಪಟ್ಟಣದಲ್ಲಿ 11 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವರದಿ ಮಾಡುತ್ತಾನೆ. ಆ ವರದಿಯಲ್ಲಿ ಆ ಬಾಲಕರು ಇದಕ್ಕೆ ಹೇಗೆ ಸೆಳೆಯಲ್ಪಟ್ಟಿರಬಹುದು? ಎಂದು ಆತಂಕ ವ್ಯಕ್ತಪಡಿಸುವ ಆತ ಸ್ಥಳೀಯರೊಬ್ಬರು ನೀಡುವ ಈ ಹುಡುಗರು ತಮ್ಮ ಮುಂದಿನ ಇಡೀ ಬದುಕು ಈ ಭಾರವನ್ನು ಹೊತ್ತೇ ಕಳೆಯಬೇಕು ಎಂಬ ಹೇಳಿಕೆಯನ್ನು ಸಹಾ ಆಸ್ಥೆಯಿಂದ ದಾಖಲಿಸುತ್ತಾನೆ. ಆದರೆ ಆ ವರದಿಯಲ್ಲಿ ಆ ಬಾಲಕಿ ತೊಟ್ಟಿದ್ದ ಬಟ್ಟೆಗಳು ಸ್ವಲ್ಪ ಹಳೆಯದಾಗಿದ್ದವು ಮತ್ತು ಆಕೆ ಮೇಕಪ್ ಮಾಡಿಕೊಂಡಿದ್ದಳು ಎಂಬುದರ ಹೊರತಾಗಿ ಆಕೆಯ ಬಗ್ಗೆ ಹೆಚ್ಚೇನೂ ಇರುವುದಿಲ್ಲ. ಮೂರು ವಾರಗಳ ನಂತರ ಅದೇ ಪತ್ರಿಕೆಯ ಎರಿಕಾ ಗೂಡೆ ಎಂಬ ಪತ್ರಕರ್ತೆ ಮತ್ತೆ ಈ ಸುದ್ದಿಯ ಬೆನ್ನತ್ತಿ ಹೋದಾಗ ಹೊರಬಂದ ಸತ್ಯಗಳು ಬೆಚ್ಚಿಬೀಳಿಸುವಂತಿದ್ದವು. ಆ ಬಾಲಕಿಯ ಕುಟುಂಬ ತೀವ್ರ ಬಡತನಕ್ಕೆ ಸಿಲುಕಿತ್ತು ಮತ್ತು ಆ ಬಾಲಕಿ ಹಲವಾರು ಬಾರಿ ಅನೇಕ ಪುರುಷರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು!

    ಎರಡನೆಯ ಉದಾಹರಣೆ; ನಮ್ಮ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497ನ್ನು ಕುರಿತ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಪ್ರಕರಣದಲ್ಲಿ, ಸೆಕ್ಷನ್ 497ನ್ನು ರದ್ದುಪಡಿಸಿ ತೀರ್ಪು ನೀಡಿತು. (ಸ್ಥೂಲವಾಗಿ; ಪುರುಷ ನೊಬ್ಬನು ವಿವಾಹಿತ ಸ್ತ್ರೀಯೊಂದಿಗೆ ಆಕೆಯ ಪತಿಯ ಅನುಮತಿ ಇಲ್ಲದೆ ದೈಹಿಕ ಸಂಬಂಧ ಹೊಂದಿದರೆ ಪತಿಯ ದೂರಿನ ಅನ್ವಯ ಅದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಆತನಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದೆಂದು ಈ ಸೆಕ್ಷನ್ ಹೇಳುತ್ತಿತ್ತು. ಆದರೆ ಹಾಗೆಯೇ ಪತಿ ಇತರ ಮಹಿಳೆಯೊಡನೆ ದೈಹಿಕ ಸಂಬಂಧ ಹೊಂದಿದರೆ ಆತನ ಪತ್ನಿ ಅದನ್ನು ಸಾಬೀತುಪಡಿಸಿ ವಿಚ್ಛೇದನ ಪಡೆಯಬಹುದೇ ಹೊರತು, ಅದು ಕ್ರಿಮಿನಲ್ ಅಪರಾಧವೆಂದು ದೂರು ನೀಡಲು ಅವಕಾಶವಿಲ್ಲ. ಭಾರತ ಸರಕಾರವು ವಿವಾಹದ ಪವಿತ್ರ ಬಂಧನವನ್ನು ಕಾಪಾಡಲು ಈ ಸೆಕ್ಷನ್ ಅಗತ್ಯವೆಂದೂ ಇದನ್ನು ಉಳಿಸಿಕೊಳ್ಳಬೇಕೆಂದೂ ವಾದಿಸಿತ್ತು. ನ್ಯಾಯಾಲಯವು ಇಲ್ಲಿ ಮೂರು ಮುಖ್ಯ ಸಂಗತಿಗಳನ್ನು ಗುರುತಿಸಿದೆ. 1)ಈ ಸೆಕ್ಷನ್ ವಿವಾಹಿತ ಮಹಿಳೆಯನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ಪರಿಗಣಿಸದೆ ಪತಿಯ ಸ್ವತ್ತು ಎಂಬಂತೆ ನೋಡುತ್ತದೆ. ಆದರೆ ಪತಿಯು ಪತ್ನಿಯ ಲೈಂಗಿಕತೆಯ ಮಾಲಕನಲ್ಲ. 2)ವಿವಾಹಬಾಹಿರ ಸಂಬಂಧವೇ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿಸಬೇಕೆಂದಿಲ್ಲ, ವೈವಾಹಿಕ ಸಂಬಂಧದಲ್ಲಿನ ಬಿರುಕು ಸಹಾ ವಿವಾಹೇತರ ಸಂಬಂಧಕ್ಕೆ ಕಾರಣವಾಗಬಹುದು. 3) ಇಬ್ಬರು ವ್ಯಕ್ತಿಗಳ ನಡುವಿನ ಒಪ್ಪಿತ ಸಂಬಂಧವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವುದು ಆ ವ್ಯಕ್ತಿಗಳ ಮೂಲಭೂತ ಹಕ್ಕಿನ ಚ್ಯುತಿಯಾಗುತ್ತದೆ. ಪತ್ನಿಯ ವಿವಾಹಬಾಹಿರ ಸಂಬಂಧ ಪತಿಗೆ ವಿಚ್ಛೇದನದ ಹಕ್ಕನ್ನು ನೀಡಬಹುದೇ ಹೊರತು ಅದನ್ನು ಕ್ರಿಮಿನಲ್ ಅಪರಾಧವಾಗಿಸುವುದು ಸಾಧ್ಯವಿಲ್ಲ. ಈ ಸುದ್ದಿಯನ್ನು ವರದಿ ಮಾಡುವಾಗ ಮಾಧ್ಯಮಗಳು ನೀಡಿದ ಕೆಲವು ಶೀರ್ಷಿಕೆಗಳು ಇಂತಿವೆ; ಅ)ಅಕ್ರಮ ಸಂಬಂಧ ಅಪರಾಧವಲ್ಲ: ಸುಪ್ರೀಂ ತೀರ್ಪು! - ಸುವರ್ಣನ್ಯೂಸ್ (ಕ್ರಮ/ಅಕ್ರಮ?)

    ಆ)ಅನೈತಿಕ ಸಂಬಂಧ ಅಪರಾಧವಲ್ಲ: ಸುಪ್ರೀಂ ಕೋರ್ಟ್ - ಕನ್ನಡಪ್ರಭ (ನೈತಿಕ/ಅನೈತಿಕ?)

    ಇ)ವಾಟ್ ಈಸ್ ಅಡಲ್ಟ್ರಿ ಲಾ? ಹೌ ಐಪಿಸಿ ಸೆಕ್ಷನ್ 497 ಈಸ್ ಯಾಂಟಿ ವುಮನ್? - ಇಂಡಿಯಾ ಟುಡೇ

    ಈ)ಹಸ್ಬೆಂಡ್ ನಾಟ್ ದಿ ಮಾಸ್ಟರ್. ಎಸ್.ಸಿ. ಡೀಕ್ರಿಮಿನಲೈಸಸ್ ಅಡಲ್ಟ್ರಿ -ದಿ ಕ್ವಿಂಟ್

ಈ ಶೀರ್ಷಿಕೆಗಳೇ ಸ್ತ್ರೀಪರ/ವಿರೋಧಿ ನಿಲುವುಗಳನ್ನು, ಅದರಂತೆ ಅಭಿಪ್ರಾಯ ರೂಪಿಸುವ ಹುನ್ನಾರಗಳನ್ನೂ, ತಟಸ್ಥತೆ/ಒಳಗಿನ ಪೂರ್ವಗ್ರಹಗಳನ್ನು, ಢಾಳಾಗಿ ತೆರೆದಿಡುತ್ತವೆ.

ಮೂರನೆಯ ಉದಾಹರಣೆ: 1994ರಲ್ಲಿ ಡಲ್ಲಾಸ್ ಮಾರ್ನಿಂಗ್ ನ್ಯೂಸ್ ಪತ್ರಿಕೆ ಜಗತ್ತಿನ ವಿವಿಧ ಭಾಗದ ಸ್ತ್ರೀಯರನ್ನು ಕುರಿತು ಮಾಡಿದ ಸರಣಿಗೆ ಪುಲಿಟ್ಜರ್ ಪ್ರಶಸ್ತಿ ಪಡೆಯಿತು. ಮಹಿಳಾ ಸಹಾಯಕ ವರದಿಗಾರ್ತಿ ಯರಿಲ್ಲದಿದ್ದರೆ ಇದು ನಮ್ಮಿಂದ ಸಾಧ್ಯವೇ ಆಗುತ್ತಿರಲಿಲ್ಲ. ಸ್ತ್ರೀಯರ ಕೆಲವು ಕಥನಗಳು ಮಹಿಳಾ ವರದಿಗಾರ್ತಿ ಯರಿಲ್ಲದಿದ್ದರೆ ನಮಗೆ ಎಂದಿಗೂ ಸಿಗುತ್ತಿ ರಲಿಲ್ಲ. ವಿಶೇಷವಾಗಿ ಸ್ತ್ರೀ ಜನನಾಂಗ ಛೇದದಂತಹ ಕಥನಗಳು... ಎಂದು ಡಲ್ಲಾಸ್‌ನ ವರದಿಗಾರರು ಹೇಳಿದ್ದಾರೆ.

ನಾಯಕತ್ವದ ಸ್ಥಾನಗಳಲ್ಲಿ ಹಾಗೂ ವರದಿಗಾರಿಕೆಯಲ್ಲಿ ಸ್ತ್ರೀಯರ ಪ್ರತಿನಿಧಿತ್ವದ ಕೊರತೆ, ಸ್ತ್ರೀಯರ ಕುರಿತಾದ ಸಮಾಜದಲ್ಲಿನ ಪೂರ್ವಗ್ರಹಗಳು, ಸಿದ್ಧ ಮಾದರಿಗಳೇ ವರದಿಗಳ ಹಿನ್ನೆಲೆಯಲ್ಲಿ ಕೆಲಸ ಮಾಡುವುದು ಇವುಗಳೆಲ್ಲದರ ಫಲವಾಗಿಯೇ, ಹೆಣ್ಣಿನ ಮೇಲೆ ದೌರ್ಜನ್ಯ ನಡೆದಾಗ ಅದಕ್ಕೆ ಆಕೆಯನ್ನೇ ದೂರುವಂತಹ ಮನಸ್ಥಿತಿಯನ್ನು ಉತ್ತೇಜಿಸುವ ಭಾಷೆಯಲ್ಲಿ ವರದಿ ಮಾಡುವುದು (ನಡು ರಾತ್ರಿಯಲ್ಲಿ ಪಾರ್ಟಿ ಮುಗಿಸಿ ಮನೆಗೆ ಒಬ್ಬಳೇ ಹಿಂದಿರುಗುತ್ತಿದ್ದ ಹೆಣ್ಣಿನ ಮೇಲೆ ಅತ್ಯಾಚಾರ...), ಅಂತಹ ಹೇಳಿಕೆಗಳನ್ನು ಉಲ್ಲೇಖಿಸುವುದು (ಶೀಲ ಶಂಕಿಸಿ ಪತ್ನಿಯ ಕೊಲೆ- ಆಕೆಗೆ ಅನೈತಿಕ ಸಂಬಂಧವಿತ್ತೆಂದು ಸ್ಥಳೀಯರು ತಿಳಿಸಿದರು.), ಮರ್ಯಾದಾ ಹತ್ಯೆ ಇಂತಹ ವರದಿಗಾರಿಕೆಗಳು ನಡೆಯುತ್ತದೆ. ಇವು ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಸಾಮಾನ್ಯೀಕರಿಸುತ್ತವೆ ಮತ್ತು ಅದಕ್ಕೆ ಸಮರ್ಥನೆ ಒದಗಿಸುತ್ತಾ ಒಪ್ಪಿತವಾಗಿಸಲು ಪ್ರಯತ್ನಿಸುವಂತಿರುತ್ತದೆ. ಈ ಕುರಿತ ವರದಿಗಳು ಇಂತಹ ದೌರ್ಜನ್ಯಗಳು ಸರ್ವಥಾ ಅಪರಾಧಗಳು ಮತ್ತು ಯಾವ ಕಾರಣಕ್ಕೂ ಸಮರ್ಥನೀಯವಲ್ಲ ಎಂಬ ಸಂದೇಶವನ್ನು ನೀಡುವಂತಿರಬೇಕೇ ಹೊರತು, ಅವುಗಳನ್ನು ಸಾಮಾನ್ಯೀಕರಿಸಿ, ಒಪ್ಪಿತವಾಗಿಸಿ, ಉತ್ತೇಜಿಸುವಂತಿರಬಾರದು.

ಶೋಷಿತ ಹೆಣ್ಣಿನ ಬಗ್ಗೆ ವರದಿ ಮಾಡುವಾಗ ನಿರ್ಲಕ್ಷವನ್ನು ತೋರದೆ ಸಾಕಷ್ಟು ಗಮನ ನೀಡಬೇ ಕಾದುದು ಅಗತ್ಯವಾಗಿರುವಂತೆಯೇ, ಅಂತಹ ವರದಿಗಳನ್ನು ಅತಿರೇಕಕ್ಕೊಯ್ದು ಆ ಹೆಣ್ಣಿನ ಖಾಸಗಿತನವನ್ನು ಹರಾಜಿಗಿಡದಂತೆ ಎಚ್ಚರವಹಿಸುವ ಸೂಕ್ಷ್ಮತೆಯನ್ನೂ ತೋರುವುದು ಸಹ ಅಗತ್ಯವಾಗಿದೆ. ಅದು ಸಾಧ್ಯವಾಗುವುದು ಹೆಣ್ಣನ್ನು ವ್ಯಕ್ತಿಯಾಗಿ ಗೌರವಿಸು ವಂತಹ ಮನಸ್ಥಿತಿಯಿಂದ ಮಾತ್ರ. ಆದರೆ ಸಮಾಜದಲ್ಲಿಯೇ ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಾಗಿ, ಪುರುಷನಿಗೆ ಅಡಿಯಾಳಾಗಿ, ಕೇವಲ ದೇಹವಾಗಿ ಪರಿಭಾವಿಸುವ ಪ್ರವೃತ್ತಿ ಇದ್ದಾಗ, ಮಾಧ್ಯಮಗಳು ಅದನ್ನು ಒಡೆದು ಸಮಾಜದ ದೃಷ್ಟಿಕೋನವನ್ನು ಬದಲಿಸುವಂತಹ ಕೆಲಸ ಮಾಡಬೇಕೇ ಹೊರತು, ಸಮಾಜದ ದೋಷಪೂರಿತ ದೃಷ್ಟಿಕೋನವನ್ನೇ ಪುಷ್ಟೀಕರಿಸುವಂತೆ ನಡೆದುಕೊಳ್ಳಬಾರದು. ಹೆಣ್ಣಿನ ಮೇಲೆ ನಡೆಯುವ ದೈಹಿಕ ಹಲ್ಲೆ, ಲೈಂಗಿಕ ಶೋಷಣೆ, ಅತ್ಯಾಚಾರ ದೌರ್ಜನ್ಯಗಳನ್ನು ಸಮಸ್ಯೆ ಆಧಾರಿತ ವಿಧಾನದಿಂದ ನೋಡಬೇಕೇ ಹೊರತು, ಘಟನೆ ಆಧಾರಿತ ವಿಧಾನದಿಂದ ಅಲ್ಲ ಎಂಬ ಅರಿವು ಅಗತ್ಯವಾಗಿ ಮೂಡಬೇಕಿದೆ. ಇಂತಹದನ್ನು ಒಟ್ಟಾರೆ ಸಾಮಾಜಿಕ ಸ್ವಾಸ್ತ್ಯಕ್ಕೆ ಒದಗಿದ ಅಪಾಯವಾಗಿ ಗ್ರಹಿಸಬೇಕಿದೆ. ಮಹಿಳಾ ವರದಿಗಾರ್ತಿಯರ ಸುದ್ದಿಗಳು ಪುರುಷರಿಗಿಂತ ಸ್ಪಷ್ಟವಾಗಿ ಸಿದ್ಧ ಮಾದರಿಗಳನ್ನು ಒಡೆಯುವ ಸಾಧ್ಯತೆಗಳು ಹೆಚ್ಚು ಎಂದು ಗ್ಲೋಬಲ್ ಮೀಡಿಯಾ ಮಾನಿಟರಿಂಗ್ ಪ್ರಾಜೆಕ್ಟ್ಸ್‌ನ ಸಂಶೋಧನಾ ವರದಿಯು ಗುರುತಿಸುತ್ತದೆ. ಸುದ್ದಿ ಮಾಧ್ಯಮಗಳಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸುವುದರ ಜೊತೆಗೇ ಈ ಹೆಣ್ಣು ನೋಟವನ್ನು ಸಹಾ ಪುರುಷ ವರದಿಗಾರರು ಬೆಳೆಸಿಕೊಳ್ಳಬೇಕಿದೆ. ಎಲ್ಲವೂ ಸರಿಯಾಗಿದೆ ಎಂದು ಭಾವಿಸುವವರು, ವಾದಿಸುವವರು ಇಂತಹ ಅಂಕಿಅಂಶಗಳು ಎದುರಾದಾಗ ಸಮಸ್ಯೆಯನ್ನು ಸರಿಪಡಿಸದಿರಲು ಒಡ್ಡುವ ಸಾಮಾನ್ಯ ಸಬೂಬುಗಳೆಂದರೆ ಮಹಿಳಾ ಸಮಾನ ಪ್ರಾತಿನಿಧ್ಯ ಅಗತ್ಯ ವಿಷಯವಾದರೂ ಪ್ರಾಯೋಗಿಕವಾಗಿ ಅದನ್ನು ಸಾಧಿಸಲು ಸಾಧ್ಯವಿಲ್ಲ. ವಿಷಯ ತಜ್ಞರ ಸಂಖ್ಯೆ ಸಾಕಷ್ಟು ಇಲ್ಲ. ಇಂತಹ ಪ್ರಯೋಗಗಳಿಂದ ಗುಣಮಟ್ಟ ಕುಸಿಯುವ ಅಪಾಯವಿದೆ. ಇದನ್ನು ಕಾರ್ಯ ರೂಪಕ್ಕೆ ತರಲು ಸಾಕಷ್ಟು ಸಮಯ, ಶ್ರಮ ತಗಲುತ್ತದೆ, ಆದರೆ ನಿತ್ಯ ಕೆಲಸದ ಗುರಿ ಮುಟ್ಟಬೇಕಾದ ಒತ್ತಡದಲ್ಲಿ ಇವೆಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ... ಇತ್ಯಾದಿ. (ಇಂತಹದ್ದೇ ಸಬೂಬುಗಳು ಜಾತಿ ಮೀಸಲಾತಿ ಸಮಯ ದಲ್ಲೂ ಕೇಳಿಬರುತ್ತದಲ್ಲವೇ? ಆಗ ಇದನ್ನು ಉಗ್ರವಾಗಿ ವಿರೋಧಿ ಸುವ ಕೆಲವು ಪ್ರಗತಿಪರ ಗೆಳೆಯರು ಅದೇ ಹೆಣ್ಣಿನ ವಿಚಾರಕ್ಕೆ ಬಂದಾಗ, ಯಾವುದೇ ಅಳುಕಿಲ್ಲದೇ ಇಂತಹದ್ದೇ ವಾದ ಹೂಡುವುದು ಅಚ್ಚರಿ ಮೂಡಿಸುತ್ತದೆ.)

ಆದರೆ ಇವಕ್ಕೂ ಉತ್ತರವನ್ನು ಅಂಕಿ ಅಂಶಗಳ ಮೂಲಕವೇ ಕೊಡಬಹುದೆನಿಸುತ್ತದೆ. ಬಿಬಿಸಿ ಚಾನೆಲ್‌ನಲ್ಲಿ ಔಟ್‌ಸೋರ್ಸ್ ಎಂಬ ಪ್ರೈಮ್ ಟೈಮ್ ಕಾರ್ಯಕ್ರಮದ ರೂವಾರಿ ರೋಸ್ ಅಟ್ಕಿನ್ಸ್ 2017ರಲ್ಲಿ ಪ್ರತಿ ತಿಂಗಳೂ ಕ್ಯಾಮರಾ ಮುಂದೆ 50:50 ಪ್ರಾತಿನಿಧ್ಯದ ಗುರಿ ಎಂಬ ಒಂದು ಪ್ರಯೋಗ ಶುರು ಮಾಡಿದ. ಕೇವಲ ನಾಲ್ಕು ತಿಂಗಳಲ್ಲಿ ಆತನ ಕಾರ್ಯಕ್ರಮದಲ್ಲಿ ಶೇ.39ರಷ್ಟಿದ್ದ ಮಹಿಳೆಯರ ಪ್ರಾತಿನಿಧ್ಯ ಶೇ.50 ಆಯಿತು. ಇಂದು ಬಿಬಿಸಿಯ 20ಕ್ಕೂ ಹೆಚ್ಚು ಅಂತರ್‌ರಾಷ್ಟ್ರೀಯ ಮಾಧ್ಯಮ ಪಾಲುದಾರರ 500 ಶೋಗಳು ಈ 50:50 ಸವಾಲನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿವೆ. ಔಟ್‌ಸೋರ್ಸ್ ಬಳಸಿದ ಸರಳವಾದ ವಿಧಾನದಲ್ಲೇ ಎಕ್ಸೆಲ್ ಸ್ಪ್ರೆಡ್‌ಶೀಟ್‌ನಲ್ಲಿ ಪ್ರತಿದಿನದ ಪ್ರತಿನಿಧಿತ್ವದ ದತ್ತಾಂಶವನ್ನು ನಮೂದಿಸುತ್ತಾ, ಗಮನಿಸಿಕೊಳ್ಳುತ್ತಾ ಕೊರತೆ ಸರಿಪಡಿಸಿಕೊಳ್ಳುತ್ತಿವೆ. ಅತ್ಯುತ್ತಮರಾದವರನ್ನೇ ಆಯ್ಕೆ ಮಾಡುವುದು ಎಂಬ ಸುವರ್ಣ ನಿಯಮದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆಯೇ ಅವರು 50:50 ಗುರಿ ತಲುಪಲು ಸಾಧ್ಯವಾಗುತ್ತಿದೆ! (ಆಡಳಿತ ವರ್ಗದಿಂದ ಯಾವುದೇ ದೊಡ್ಡಮಟ್ಟದ ಹಣಕಾಸಿನ ನೆರವು ಇಲ್ಲದೆಯೇ!) ಇನ್ನು ಅತ್ಯಂತ ಪ್ರಭಾವಶಾಲಿ ಮಾಧ್ಯಮವಾದ ಕಾಲ್ಪನಿಕ, ಸೃಜನಾತ್ಮಕ ಮಾಧ್ಯಮವನ್ನು (ಸಿನೆಮಾ, ಟಿವಿ ಕಾರ್ಯಕ್ರಮ ಇತ್ಯಾದಿ) ಗಮನಿಸುವುದಾದರೆ, ಇಲ್ಲಿಯೂ ಪರಿಸ್ಥಿತಿ ನಿರಾಶಾದಾಯಕವಾಗಿಯೇ ಇದೆ. ಜಾಗತಿಕವಾಗಿ ನಡೆಸಿದ ಅಧ್ಯಯನಗಳ ಪ್ರಕಾರ ಇಡೀ ಜಗತ್ತಿನ ಮುಖ್ಯ ವಾಹಿನಿಯ ಸಿನೆಮಾಗಳ ಮಾತನಾಡುವ ಪಾತ್ರಗಳ ಪೈಕಿ 1/3ರಷ್ಟು ಮಾತ್ರವೇ ಸ್ತ್ರೀಪಾತ್ರಗಳಾಗಿವೆ. ಸಾಮಾನ್ಯವಾಗಿ ಹೆಚ್ಚು ಆಸಕ್ತಿದಾಯಕವಲ್ಲದ, ಕಡಿಮೆ ಪ್ರಾಮುಖ್ಯತೆಯ ಕೆಲಸಗಳನ್ನೇ ನಿರ್ವಹಿಸುವಂತೆ ಈ ಪಾತ್ರಗಳನ್ನು ಹೆಣೆಯ ಲಾಗುತ್ತದೆ (ಜಡ್ಜ್ ಅಥವಾ ಡಾಕ್ಟರ್‌ಗೆ ಬದಲು ಗುಮಾಸ್

Writer - ಸಂಜ್ಯೋತಿ ವಿ.ಕೆ.

contributor

Editor - ಸಂಜ್ಯೋತಿ ವಿ.ಕೆ.

contributor

Similar News