ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡಿದರೆ ಅದು ವಿಷಯುಕ್ತಗೊಳ್ಳಬಹುದು
ಆಹಾರವು ನಮ್ಮ ಆರೋಗ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ನಾವು ಏನನ್ನು ತಿನ್ನುತ್ತೇವೆ ಎನ್ನುವುದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಖಾದ್ಯಗಳನ್ನು ಅಲ್ಯುಮಿನಿಯಂ ಹಾಳೆ ಅಥವಾ ಪ್ಲಾಸ್ಟಿಕ್‌ನಲ್ಲಿ ಸುತ್ತಿಡುವುದರ ಅಡ್ಡ ಪರಿಣಾಮಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಅದೇ ರೀತಿ ಆಹಾರವನ್ನು ಪುನಃ ಬಿಸಿ ಮಾಡುವುದು ಅದನ್ನು ಬಳಕೆಗೆ ಅತ್ಯಂತ ಅನಾರೋಗ್ಯಕಾರಿಯಾಗಿಸುವ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗಬಹುದು ಎನ್ನುವುದನ್ನು ಅಧ್ಯಯನವೊಂದು ಬಹಿರಂಗಗೊಳಿಸಿದೆ. ಮೈಕ್ರೋವೇವ್ ಮೂಲಕ ಆಹಾರವನ್ನು ಬಿಸಿ ಮಾಡಿದ ಬಳಿಕ ಈ ಬ್ಯಾಕ್ಟೀರಿಯಾಗಳು ವೃದ್ಧಿಗೊಂಡು ನಮ್ಮ ಶರೀರದಲ್ಲಿ ವಿಸ್ತರಣೆಗೊಳ್ಳುತ್ತವೆ. ಆಹಾರವನ್ನು ಬಿಸಿ ಮಾಡಿದಾಗ ಅದರಲ್ಲಿಯ ಬ್ಯಾಕ್ಟೀರಿಯಾಗಳು ನಾಶಗೊಳ್ಳುತ್ತವೆ ಎನ್ನಲಾಗಿದ್ದರೂ ಕೆಲವು ಬ್ಯಾಕ್ಟೀರಿಯಾಗಳು ಇದಕ್ಕೆ ಅಪವಾದವಾಗಿವೆ.
ವ್ಯಕ್ತಿ ಪದೇ ಪದೇ ಕಾಯಿಲೆಗೆ ತುತ್ತಾಗುತ್ತಿದ್ದರೆ ಪುನಃ ಬಿಸಿ ಮಾಡಿದ ಆಹಾರ ಸೇವನೆ ಅದಕ್ಕೆ ಕಾರಣವಾಗಬಹುದು.
ಮೈಕ್ರೋವೇವ್‌ನಲ್ಲಿ ಆಹಾರವನ್ನು ಬಿಸಿ ಮಾಡಿದಾಗ ಅದು ವಿಷಯುಕ್ತಗೊಳ್ಳಬಹುದು. ಪುನಃ ಬಿಸಿ ಮಾಡುವುದು ಬೆಸಿಲಿಸ್ ಸಿರಿಸ್ ಬ್ಯಾಕ್ಟೀರಿಯಾಗಳು ಆಹಾರದಲ್ಲಿ ಉಳಿದುಕೊಳ್ಳಲು ನೆರವಾಗುತ್ತದೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಮೈಕ್ರೋಬಯಾಲಜಿ ಹೇಳುವಂತೆ ಆಹಾರವನ್ನು ಬಿಸಿ ಮಾಡುವುದರಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆಯಾದರೂ ಬಿಸಿ ಮಾಡಿದಾಗ ವಿವಿಧ ಬೀಜಕಗಳು ಉತ್ಪತ್ತಿಯಾಗುತ್ತವೆ. ಇವು ಬ್ಯಾಕ್ಟೀರಿಯಾಗಳಿಗೆ ಬದಲಿಯಾಗಿ ಕೆಲಸ ಮಾಡುತ್ತವೆ ಮತ್ತು ಬಿಸಿ ಮಾಡಿದ ಆಹಾರದೊಳಗೆ ವೃದ್ಧಿಗೊಳ್ಳುತ್ತವೆ.
ಪುನಃ ಬಿಸಿ ಮಾಡಿದಾಗ ಆಹಾರವೇನಾಗುತ್ತದೆ?
ಹಸಿರು ಸೊಪ್ಪುಗಳು: ಹಸಿರು ಸೊಪ್ಪುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಹೆಚ್ಚಿನವು ನೈಟ್ರೇಟ್‌ಗಳಾಗಿವೆ. ಮೊದಲ ಬಾರಿ ಬಿಸಿ ಮಾಡಿದಾಗ ಅಥವಾ ಅಡಿಗೆ ಮಾಡಿದಾಗ ಸೊಪ್ಪುಗಳಲ್ಲಿಯ ನೈಟ್ರೇಟ್‌ಗಳು ನೈಟ್ರೈಟ್‌ಗಳಾಗಿ ರೂಪಾಂತರಗೊಳ್ಳುತ್ತವೆ. ನೈಟ್ರೈಟ್‌ಗಳು ಅತ್ಯಂತ ಆರೋಗ್ಯಕರವಾಗಿದ್ದು,ನಮ್ಮ ಶರೀರಕ್ಕೆ ಅಗತ್ಯವಾಗಿವೆ. ಸಮಸ್ಯೆಯೇನೆಂದರೆ ನೈಟ್ರೈಟ್‌ಗಳು ಸುಲಭವಾಗಿ ವಿಭಜನೆಗೊಳ್ಳಬಲ್ಲ ಪೋಷಕಾಂಶಗಳಾಗಿದ್ದು,ಮತ್ತೆ ಬಿಸಿ ಮಾಡಿದಾಗ ಅವು ವಿಷಪೂರಿತವಾಗುತ್ತವೆ ಮತ್ತು ಆಹಾರವನ್ನು ವಿಷಯುಕ್ತವಾಗಿಸುತ್ತವೆ.
ಕೋಳಿಮಾಂಸ: ಮಾಂಸಾಹಾರಗಳು ಬ್ಯಾಕ್ಟೀರಿಯಾಗಳ ಉತ್ಪಾದನೆಗೆ ಅತ್ಯಂತ ಪ್ರಶಸ್ತವಾಗಿವೆ. ಮಾಂಸಾಹಾರವನ್ನು ಸೇವಿಸುವವರು ಅದರ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಬೇಕು,ಇಲ್ಲದಿದ್ದರೆ ಅದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತದೆ. ಮಾಂಸಾಹಾರಗಳಲ್ಲಿ ಪ್ರೋಟಿನ್‌ಗಳು ಇರುತ್ತವೆ ಮತ್ತು ಬಿಸಿ ಮಾಡಿದಾಗ ಈ ಪ್ರೋಟಿನ್‌ಗಳು ಸರಳ ರೂಪಗಳಾಗಿ ಪರಿವರ್ತನೆಗೊಳ್ಳುತ್ತವೆ. ಅಂದರೆ ಸಂಕೀರ್ಣ ಸಂಯುಕ್ತಗಳು ವಿಭಜನೆಗೊಳ್ಳುತ್ತವೆ. ಇವುಗಳನ್ನು ಮತ್ತೆ ಬಿಸಿ ಮಾಡಿದಾಗ ಈ ವಿಭಜಿತ ಸಂಯುಕ್ತಗಳು ಆಹಾರವನ್ನು ಸ್ವಲ್ಪ ವಿಷಯುಕ್ತಗೊಳಿಸಬಹುದು. ಹೆಚ್ಚಾಗಿ ಉಳಿದ,ಮತ್ತೆ ಬಿಸಿ ಮಾಡಿದ ಚಿಕನ್ ಅನ್ನು ಸುರಕ್ಷಿತವಾಗಿಸಲು ಅದನ್ನು ಫ್ರಿಝ್ ನಲ್ಲಿರಿಸುವುದು ಏಕೈಕ ಮಾರ್ಗವಾಗಿದೆ.
ಹಾಲು: ಶರೀರದ ಪೋಷಣೆಗೆ ಅತ್ಯಗತ್ಯವಾದ ಆಹಾರಗಳಲ್ಲಿ ಹಾಲು ಒಂದಾಗಿದೆ. ಮಕ್ಕಳಿಗೆ ಪ್ರಾಥಮಿಕ ಆಹಾರವಾಗಿರುವ ಹಾಲು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಬಳಕೆಯಾಗುತ್ತದೆ. ಆದರೆ ಹಾಲನ್ನು ಪದೇ ಪದೇ ಕಾಯಿಸುತ್ತಿದ್ದರೆ ಅದು ತನ್ನ ಒಳ್ಳೆಯ ಅಂಶಗಳನ್ನು ಕಳೆದುಕೊಳ್ಳುತ್ತದೆ. ಹಾಲನ್ನು ಪುನಃ ಬಿಸಿ ಮಾಡಿದಾಗ ಅದರಲ್ಲಿ ಕೆಲವು ಆಮ್ಲಗಳು ಇರುತ್ತವೆ ಎನ್ನುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಫ್ಯಾಟಿ ಆ್ಯಸಿಡ್ ಅಥವಾ ಮೇದಾಮ್ಲ ಆರೋಗ್ಯಕ್ಕೆ ಏನೇನೂ ಪೂರಕವಲ್ಲ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಗಂಭೀರ ಹಾನಿಯನ್ನೂ ಉಂಟು ಮಾಡಬಲ್ಲದು.
ಅಣಬೆ: ಅತ್ಯುತ್ತಮ ಆಹಾರವಾಗಿರುವ ಅಣಬೆಗಳು ಮಧುಮೇಹಿಗಳಿಗೆ ಹೇಳಿ ಮಾಡಿಸಿದ್ದು ಎನ್ನಬಹುದು.ಮೂಲತಃ ಅಣಬೆ ಶಿಲೀಂಧ್ರವಾಗಿದೆ ಮತ್ತು ಇದೇ ಕಾರಣದಿಂದ ಅಣಬೆ ಖಾದ್ಯವನ್ನು ಮತ್ತೆ ಬಿಸಿ ಮಾಡಿದಾಗ ಬ್ಯಾಕ್ಟೀರಿಯಾಗಳು ಬೆಳೆಯುವ ಹೆಚ್ಚಿನ ಸಾಧ್ಯತೆಯಿರುತ್ತದೆ. ಅಣಬೆ ಖಾದ್ಯವನ್ನು ಮಾಡಿದಾಗ ಅದನ್ನು ಒಂದೇ ಬಾರಿಗೆ ಖಾಲಿ ಮಾಡುವುದು ಒಳ್ಳೆಯದು, ಸಾಧ್ಯವಾಗದಿದ್ದರೆ ಉಳಿದ ಖಾದ್ಯವನ್ನು ಫ್ರಿಝ್‌ನಲ್ಲಿರಿಸಬೇಕು ಮತ್ತು ಸರ್ವಥಾ ಮತ್ತೆ ಬಿಸಿ ಮಾಡಕೂಡದು. ಮತ್ತೆ ಬಿಸಿ ಮಾಡುವುದರಿಂದ ವಿಭಜಿತ ಪ್ರೋಟಿನ್‌ಗಳು ವಿಷಯುಕ್ತಗೊಳ್ಳುತ್ತವೆ ಮತ್ತು ಹೊಟ್ಟೆ ಸೋಂಕನ್ನುಂಟು ಮಾಡಬಹುದು.