ಕ್ಯಾರಟ್ ಮತ್ತು ಶುಂಠಿ ರಸದ ಸೇವನೆಯ ಆರೋಗ್ಯಲಾಭಗಳು ಗೊತ್ತೇ?

Update: 2020-01-09 14:06 GMT

ತಯಾರಿಸಲು ಸುಲಭವಾದ ಕ್ಯಾರಟ್ ಅಥವಾ ಗಜ್ಜರಿ ಮತ್ತು ಶುಂಠಿ ರಸದ ಸೇವನೆಯು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ನಾಲ್ಕು ಕ್ಯಾರಟ್‌ಗಳು ಮತ್ತು ಅರ್ಧ ಇಂಚು ಶುಂಠಿಯಿಂದ ತಯಾರಿಸಿದ ರಸವು 200ಕ್ಕಿಂತಲೂ ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿರುತ್ತದೆ. ಈ ಅದ್ಭುತ ಪೇಯವು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ......

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕ್ಯಾರಟ್ ಮತ್ತು ಶುಂಠಿಯ ಸಂಯೋಜನೆಯು ವಿವಿಧ ಪೋಷಕಾಂಶಗಳನ್ನು ನಮ್ಮ ಶರೀರಕ್ಕೆ ಒದಗಿಸುತ್ತದೆ. ಕ್ಯಾರಟ್‌ನಲ್ಲಿರುವ ವಿಟಾಮಿನ್ ಎ ಮತ್ತು ಸಿ ರಕ್ತಕೋಶಗಳ ಆರೋಗ್ಯಕ್ಕೆ ಪೂರಕವಾಗಿದ್ದರೆ ಶುಂಠಿಯ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅವು ಶರೀರದಲ್ಲಿಯ ವಿಷವಸ್ತುಗಳನ್ನು ನಿವಾರಿಸುವ ಮೂಲಕವೂ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತವೆ. ರಸದಲ್ಲಿಯ ಸೂಕ್ಷ್ಮಜೀವಿ ನಿರೋಧಕ ಗುಣಗಳು ಸೋಂಕಿಗೆ ಕಾರಣವಾಗುವ ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳನ್ನು ಕೊಲ್ಲುವ ಮೂಲಕ ಶರೀರವನ್ನು ಆರೋಗ್ಯಯುತವಾಗಿರಿಸುತ್ತವೆ.

► ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ

 ತಾಜಾ ಕ್ಯಾರಟ್ ಮತ್ತು ಶುಂಠಿ ರಸವು ವಿವಿಧ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಅಂಡಾಶಯ,ದೊಡ್ಡಕರುಳು ಮತ್ತು ಗುದನಾಳ,ಶ್ವಾಸಕೋಶ,ಸ್ತನ ಮತ್ತು ಇತರ ಕ್ಯಾನ್ಸರ್‌ಗಳ ವಿರುದ್ಧ ಹೋರಾಟಕ್ಕೆ ಕ್ಯಾರಟ್ ನೆರವಾದರೆ,ಶುಂಠಿಯು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ತಡೆಯುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಹೇರಳವಾಗಿರುವ ಈ ರಸವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ರ್ಯಾಡಿಕಲ್ ಕೋಶಗಳ ಬೆಳವಣಿಗೆಯನ್ನು ತಡೆಯಲು ನೆರವಾಗುತ್ತದೆ. ಶುಂಠಿ ರಸದಲ್ಲಿರುವ ಜಿಂಜರಾಲ್‌ಗಳು ಅಂಡಾಶಯ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಮತ್ತು ಕರುಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ನೆರವಾಗುತ್ತವೆ ಎಂದು ಸಂಶೋಧನೆಯೊಂದು ತೋರಿಸಿದೆ.

 ಮಧುಮೇಹವನ್ನು ನಿಯಂತ್ರಿಸುತ್ತದೆ

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧ ಕ್ಯಾರಟ್ ಮತ್ತು ಶುಂಠಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹವನ್ನು ದೂರವಿರಿಸಬಹುದು. ಶುಂಠಿಯು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ,ಇನ್ಸುಲಿನ್ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಕಡಿಮೆ ಗ್ಲೈಸೆಮಿಕ್ ಮಟ್ಟವನ್ನು ಹೊಂದಿರುವ ಕ್ಯಾರಟ್ ಕೂಡ ಮಧುಮೇಹಿಗಳಿಗೆ ಒಳ್ಳೆಯ ಆಹಾರವಾಗಿದೆ. ಅದರಲ್ಲಿರುವ ಕ್ಯಾರಟಿನಾಯ್ಡಾಗಳು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತವೆ.

► ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಕ್ಯಾರಟ್ ಮತ್ತು ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಸ್ವಚ್ಛಗೊಳಿಸುವ ಗುಣಗಳು ಹೃದಯ ರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುತ್ತವೆ. ಕ್ಯಾರಟ್‌ನಲ್ಲಿರುವ ಬೀಟಾ ಕ್ಯಾರಟಿನ್,ಆಲ್ಫಾ ಕ್ಯಾರಟಿನ್ ಮತ್ತು ಲುಟಿನ್ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತವೆ ಮತ್ತು ಸೋಡಿಯಂ ರಕ್ತದೊತ್ತಡವನ್ನು ತಗ್ಗಿಸುತ್ತದೆ. ಜಿಂಜಿರಾಲ್ ಕೂಡ ರಕ್ತದೊತ್ತಡವನ್ನು ತಗ್ಗಿಸುವ ಮೂಲಕ ಹೃದಯನಾಳೀಯ ಕಾಯಿಲೆಗಳಿಗೆ ಗುರಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

► ಸ್ನಾಯುನೋವಿಗೆ ಚಿಕಿತ್ಸೆ ನೀಡುತ್ತದೆ

 ಕ್ಯಾರಟ್ ಮತ್ತು ಶುಂಠಿ ರಸದ ಉರಿಯೂತ ನಿರೋಧಕ ಗುಣಗಳು ಉರಿಯೂತವನ್ನು ಶಮನಗೊಳಿಸುವ ಮೂಲಕ ಸ್ನಾಯುಗಳ ನೋವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಸ್ನಾಯು ನೋವಿಗೆ ಶುಂಠಿಯ ಸಾರವು ಸಿದ್ಧೌಷಧವಾಗಿದ್ದು, ಕ್ಯಾರಟ್‌ನಲ್ಲಿರುವ ವಿಟಾಮಿನ್ ಎ ಮತ್ತು ಬೀಟಾಕ್ಯಾರಟಿನ್‌ನೊಂದಿಗೆ ಸೇರಿದಾಗ ಅದ್ಭುತ ಪರಿಣಾಮವನ್ನು ನೀಡುತ್ತದೆ.

► ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ

ಕ್ಯಾರಟ್‌ನಲ್ಲಿರುವ ಬೀಟಾ ಕ್ಯಾರಟಿನ್ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಶುಂಠಿಯಲ್ಲಿಯೂ ಉತ್ಕರ್ಷಣ ನಿರೋಧಕಗಳು,ವಿಟಾಮಿನ್‌ಗಳು ಮತ್ತ್ತು ಖನಿಜಗಳಿದ್ದು, ಇವು ಚರ್ಮಕ್ಕೆ ಹೊಳಪು ನೀಡುತ್ತವೆ. ಉತ್ಕರ್ಷಣ ನಿರೋಧಕಗಳು ಚರ್ಮದ ಹಾನಿಯನ್ನೂ ಸರಿಪಡಿಸುತ್ತವೆ.

► ಗರ್ಭಿಣಿಯರಿಗೆ ಲಾಭದಾಯಕ

ಕ್ಯಾರಟ್ ಮತ್ತು ಶುಂಠಿ ರಸವು ಗರ್ಭಿಣಿಯರಿಗೂ ಲಾಭದಾಯಕವಾಗಿದೆ. ಕ್ಯಾರಟ್‌ನಲ್ಲಿರುವ ವಿಟಾಮಿನ್ ಎ ಜೀವಕೋಶಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಗರ್ಭದಲ್ಲಿನ ಭ್ರೂಣದ ಆರೋಗ್ಯಕರ ಬೆಳವಣಿಗೆಗೆ ನೆರವಾಗುತ್ತದೆ. ರಸದ ಸೇವನೆಯು ಭ್ರೂಣಕ್ಕೆ ಆಂತರಿಕ ಸೋಂಕು ಉಂಟಾಗುವ ಅಪಾಯವನ್ನೂ ತಡೆಯುತ್ತದೆ. ಅಲ್ಲದೆ ಗರ್ಭಿಣಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಕ್ಯಾಲ್ಸಿಯಂ ಅನ್ನೂ ಈ ರಸವು ಒದಗಿಸುತ್ತದೆ. ಈ ಆರೋಗ್ಯಲಾಭಗಳ ಜೊತೆಗೆ ಕ್ಯಾರಟ್ ಮತ್ತು ಶುಂಠಿ ರಸವು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ,ವಾಕರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ವಸಡುಗಳ ಆರೋಗ್ಯವನ್ನೂ ಹೆಚ್ಚಿಸುತ್ತದೆಯೆನ್ನಲಾಗಿದೆ.

ರಸವನ್ನು ತಯಾರಿಸುವ ವಿಧಾನ: ಅರ್ಧ ಇಂಚು ಶುಂಠಿಯ ಸಿಪ್ಪೆಯನ್ನು ತೆಗೆದು ಚೆನ್ನಾಗಿ ತೊಳೆದ ಬಳಿಕ ಅದನ್ನು ಮತ್ತು 4-5 ಕ್ಯಾರಟ್‌ಗಳನ್ನು ಸಣ್ಣತುಂಡುಗಳನ್ನಾಗಿಸಿ ಮಿಕ್ಸರ್‌ನಲ್ಲಿ ಹಾಕಿ ನುಣ್ಣಗಾಗುವರೆೆಗೆ ಅರೆಯಿರಿ. ಇದನ್ನು ಗ್ಲಾಸ್‌ಗೆ ಸುರಿದು ಅರ್ಧಲಿಂಬೆಯ ರಸವನ್ನು ಸೇರಿಸಿ. ಇದಕ್ಕೆ ರುಚಿಗಾಗಿ ಸ್ವಲ್ಪ ಸೈಂಧವ ಲವಣ ಅಥವಾ ದಾಲ್ಚಿನ್ನಿ ಹುಡಿಯನ್ನು ಸೇರಿಸಿಕೊಳ್ಳಬಹುದು. ಅತ್ಯುತ್ತಮ ಪರಿಣಾಮಗಳಿಗಾಗಿ ಈ ರಸವನ್ನು ಪ್ರತಿ ದಿನ ಬೆಳಿಗ್ಗೆ ಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News