ಕ್ಯಾನ್ಸರ್ ತಡೆಯಲು ಸುಲಭ ಟಿಪ್ಸ್ ಇಲ್ಲಿವೆ
ನಮ್ಮ ಜೀವನಶೈಲಿ ಮತ್ತು ದೈನಂದಿನ ಅಭ್ಯಾಸಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ನಮ್ಮ ಆಹಾರ,ಪಾನೀಯ, ದೈಹಿಕ ಚಟುವಟಿಕೆ ಇವೆಲ್ಲ ನಮ್ಮ ಆರೋಗ್ಯದೊಂದಿಗೆ ಸಂಬಂಧವನ್ನು ಹೊಂದಿವೆ. ಆರೋಗ್ಯಕರ ಅಭ್ಯಾಸಗಳು ಹಲವಾರು ಸಣ್ಣ ಮತ್ತು ದೊಡ್ಡ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತವೆ. ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ತಗ್ಗಿಸಬಲ್ಲ ಇಂತಹ ಐದು ದೈನಂದಿನ ಅಭ್ಯಾಸಗಳ ಕುರಿತು ಮಾಹಿತಿಯಿಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಬೊಜ್ಜು,ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸದಿರುವುದು,ದೈಹಿಕ ಚಟುವಟಿಕೆಗಳ ಕೊರತೆ,ತಂಬಾಕು ಮತ್ತು ಮದ್ಯಸೇವನೆ ಇತ್ಯಾದಿಗಳು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಪ್ರಮುಖ ಕಾರಣಗಳಾಗಿವೆ.
► ಭಾರ ಎತ್ತುಗೆಯನ್ನು ಪ್ರಯತ್ನಿಸಿ
ವೇಟ್ ಲಿಫ್ಟಿಂಗ್ ಅಥವಾ ಭಾರ ಎತ್ತುಗೆಯು ಕರುಳಿನ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ ಎನ್ನುವುದನ್ನು ನೂತನ ಸಂಶೋಧನೆಯೊಂದು ತೋರಿಸಿದೆ. ಭಾರ ಎತ್ತುಗೆ ವ್ಯಾಯಾಮವನ್ನು ನಿಯಮಿತವಾಗಿ ಮಾಡುವವರಲ್ಲಿ ಕರುಳು ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯ ಶೇ.25ರಷ್ಟು ಕಡಿಮೆಯಾಗಿರುತ್ತದೆ. ಭಾರ ಎತ್ತುಗೆಯು ಇನ್ಸುಲಿನ್ ಮತ್ತು ಗ್ಲುಕೋಸ್ ನಡುವೆ ಸಮತೋಲನವನ್ನು ಹೆಚ್ಚಿಸಲು ನೆರವಾಗುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ,ತನ್ಮೂಲಕ ಮೂತ್ರಪಿಂಡ ಕ್ಯಾನ್ಸರ್‌ನ ವಿರುದ್ಧವೂ ರಕ್ಷಣೆ ಪಡೆಯಲು ನೆರವಾಗುತ್ತದೆ.
► ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆ
ಕೆಲವರಿಗೆ ತಮ್ಮ ಆಹಾರದಲ್ಲಿ ಕಡ್ಡಾಯವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇರಲೇಬೇಕು. ಆರೋಗ್ಯದ ದೃಷ್ಟಿಯಿಂದ ಇದು ನಿಜಕ್ಕೂ ಒಳ್ಳೆಯ ಅಭ್ಯಾಸವಾಗಿದೆ. ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಈರುಳ್ಳಿ ಮತ್ತು ಬೆಳ್ಳುಳ್ಳಿ ಪೂರಕವಾಗಿವೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯು ಸ್ತನ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ಶೇ.67ರಷ್ಟು ತಗ್ಗಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.
► ಯಥೇಚ್ಛ ನೀರು ಕುಡಿಯಿರಿ
ನೀರನ್ನು ಸೇವಿಸುವುದರಿಂದ ಶರೀರಕ್ಕೆ ಹಲವಾರು ಆರೋಗ್ಯಲಾಭಗಳು ದೊರೆಯುತ್ತವೆ. ನೀರು ಶರೀರದಲ್ಲಿಯ ವಿಷವಸ್ತುಗಳನ್ನು ಹೊರಹಾಕುತ್ತದೆ ಮತ್ತು ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನೂ ಕಡಿಮೆ ಮಾಡುತ್ತದೆ. ಯಥೇಚ್ಛ ನೀರನ್ನು ಸೇವಿಸಿದರೆ ಅದು ಶರೀರದಲ್ಲಿರುವ ತ್ಯಾಜ್ಯ ಮತ್ತು ವಿಷವಸ್ತುಗಳನ್ನು ಮೂತ್ರದ ಮೂಲಕ ಹೊರಕ್ಕೆ ಹಾಕುತ್ತದೆ,ಇದರಿಂದಾಗಿ ಮೂತ್ರಕೋಶ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ತಗ್ಗುತ್ತದೆ.
► ಬೇಗನೆ ಊಟ ಮಾಡಿ
ಸರಿಯಾದ ಸಮಯಕ್ಕೆ ಊಟ ಮತ್ತು ನಿದ್ರೆ ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತವೆ. ರಾತ್ರಿ ನಿದ್ರಿಸುವ ಕನಿಷ್ಠ ಎರಡು ಗಂಟೆ ಮೊದಲು ಊಟವನ್ನು ಮಾಡುವವರು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯ ಶೇ.20ರಷ್ಟು ಕಡಿಮೆಯಾಗಿರುತ್ತದೆ ಎಂದು ಸಂಶೋಧನೆಗಳು ತೋರಿಸಿವೆ.
► ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ
ಸೂರ್ಯನ ಬಿಸಿಲು ಶರೀರದಲ್ಲಿಯ ವಿಟಾಮಿನ್ ಡಿ ಕೊರತೆಯನ್ನು ನೀಗಿಸುತ್ತದೆ,ಆದರೆ ಸೂರ್ಯನ ಹಾನಿಕಾರಕ ಕಿರಣಗಳು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ ಮತ್ತು ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಹೀಗಾಗಿ ಸೂರ್ಯನ ಹಾನಿಕಾರಕ ಕಿರಣಗಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ನಿವಾರಿಸಲು ಸನ್‌ಸ್ಕ್ರೀನ್ ಬಳಸಿ. ಭಾರತೀಯರ ಚರ್ಮಲ್ಲಿರುವ ಮೆಲಾನಿನ್‌ನಿಂದಾಗಿ ದೇಶದಲ್ಲಿ ಚರ್ಮದ ಕ್ಯಾನ್ಸರ್‌ನ ಪ್ರಕರಣಗಳು ಕಡಿಮೆ,ಆದರೂ ಅದಕ್ಕೆ ಗುರಿಯಾಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು.