ಹಸುಗೂಸನ್ನು ಹಿಡಿದು ಅಲುಗಾಡಿಸಬೇಡಿ: ಅದು ಈ ಗಂಭೀರ ಸಮಸ್ಯೆಗೆ ಕಾರಣವಾಗಬಹುದು

Update: 2020-01-16 18:10 GMT

ಪುಟ್ಟ ಮಕ್ಕಳನ್ನು ಕಂಡರೆ ಯಾರಿಗಿಷ್ಟವಿಲ್ಲ ಹೇಳಿ? ಹಸುಗೂಸು ನಮ್ಮ ಕೈಗೆ ಸಿಕ್ಕಿದರೆ ಅದು ನಗುವಂತೆ ಮಾಡಲು ಅದನ್ನು ಜೋರಾಗಿ ಅಲುಗಾಡಿಸುವುದು,ಎಚ್ಚರಿಕೆಯಿಂದ ಮೇಲಕ್ಕೆ ತೂರಿ ಹಿಡಿಯುವುದು ಇವೆಲ್ಲ ಸಾಮಾನ್ಯ. ನಿಮಗೆ ಗೊತ್ತಿರಲಿ,ನಮ್ಮ ಇಂತಹ ಮೋಜಿನ ಚಟುವಟಿಕೆಗಳು ಮಗುವಿಗೆ ನಾವು ಕನಸುಮನಸಿನಲ್ಲಿಯೂ ಎಣಿಸಿರದ ಹಾನಿಯನ್ನು ಮಾಡಬಹುದು.

 ಹೆತ್ತವರು ಅಥವಾ ಮಗುವನ್ನು ನೋಡಿಕೊಳ್ಳುವವರು ಹತಾಶೆ,ಸಿಟ್ಟು ಅಥವಾ ಕೆಲವೊಮ್ಮೆ ಮೋಜಿಗಾಗಿಯೂ ಅದನ್ನು ಹಿಡಿದು ಜೋರಾಗಿ ಅಲುಗಿಸಿದರೆ ಶೇಕನ್ ಬೇಬಿ ಸಿಂಡ್ರೋಮ್ ಅಥವಾ ದೇಹ ಕಂಪನದ ದುಷ್ಪರಿಣಾಮ ಉಂಟಾಗುವ ಅಪಾಯವಿದೆ. ಇದು ಮಕ್ಕಳ ಶೋಷಣೆಯ ಒಂದು ರೂಪವಾಗಿದೆ. ಇದನ್ನು ‘ಇನ್‌ಫ್ಲಿಕ್ಟೆಡ್ ಹೆಡ್ ಇಂಜೂರಿ ಅಥವಾ ವಿಪ್‌ಲ್ಯಾಷ್ ಶೇಕ್ ಸಿಂಡ್ರೋಮ್’ ಎಂದೂ ಕರೆಯಲಾಗುತ್ತದೆ. ಅದು ಸೌಮ್ಯ ಅಥವಾ ತೀವ್ರ ಸ್ವರೂಪದ್ದಾಗಿರಬಹುದು ಮತ್ತು ಮಾರಣಾಂತಿಕವೂ ಆಗಬಹುದು.

ಪುಟ್ಟ ಮಕ್ಕಳ ಶರೀರ ಹೂವಿನಂತೆ ನಾಜೂಕು ಮತ್ತು ಮೃದು ಎನ್ನುವುದು ನಮಗೆ ಗೊತ್ತಿರಬೇಕು ಮತ್ತು ಮಗುವಿನ ಮೇಲೆ ನಾವು ಉಪಯೋಗಿಸುವ ಬಲದ ಬಗ್ಗೆಯೂ ಗೊತ್ತಿರಬೇಕು. ಯಾವುದೇ ಮನಃಸ್ಥಿತಿಯಲ್ಲಿ ಮಗುವನ್ನು ಹಿಡಿದು ಜೋರಾಗಿ ಅಲುಗಾಡಿಸುವುದು ಅದರ ಪಾಲಿಗೆ ಮಾರಣಾಂತಿಕವಾಗಬಹುದು.ಹೀಗಾಗಿ ಮಕ್ಕಳನ್ನು ನಿಭಾಯಿಸುವಾಗ ಹೆಚ್ಚಿನ ಕಾಳಜಿ ಅಗತ್ಯ.

► ಶೇಕನ್ ಬೇಬಿ ಸಿಂಡ್ರೋಮ್‌ನ ಲಕ್ಷಣಗಳು

ಮೋಜಿಗಾಗಿಯೋ ಅಥವಾ ಕೌಟುಂಬಿಕ ಅಶಾಂತಿಯಿಂದಾಗಿ ಸಿಟ್ಟಿನಿಂದಲೋ ಅಥವಾ ರಚ್ಚೆ ಹಿಡಿದಿದೆ ಎಂಬ ಬೇಸರದಿಂದ ಹಸುಗೂಸನ್ನು ಹಿಡಿದು ಜೋರಾಗಿ ಅಲುಗಾಡಿಸುವ ತಪ್ಪು ಮಾಡುವ ಹೆತ್ತವರು ತಮ್ಮ ಕೃತ್ಯದಿಂದ ಮಗುವಿನಲ್ಲಿ ಶೇಕನ್ ಬೇಬಿ ಸಿಂಡ್ರೋಮ್ ಉಂಟಾಗಿದೆಯೇ ಎನ್ನುವುದನ್ನು ಕಂಡುಕೊಳ್ಳಲು ಕೆಲವು ಲಕ್ಷಣಗಳ ಬಗ್ಗೆ ಗಮನವಿರಿಸಬೇಕು.

ವಾಂತಿ,ಜಾಗ್ರತವಾಗಿರಲು ಸಾಧ್ಯವಾಗದಿರುವುದು,ಕಿರಿಕಿರಿ,ಸೆಳವು,ಉಸಿರಾಟದಲ್ಲಿ ಕಷ್ಟ,ಚರ್ಮದ ಬಣ್ಣ ಪೇಲವ ಅಥವಾ ನೀಲಿಗೆ ತಿರುಗುವುದು ಮತ್ತು ಕೋಮಾ ಇವು ಇಂತಹ ಲಕ್ಷಣಗಳಾಗಿವೆ.

ಕೆಲವೊಮ್ಮೆ ಮಗುವಿಗೆ ನಮ್ಮ ದೃಷ್ಟಿಗೆ ಗೋಚರವಾಗದ ಗಾಯವಾಗಿರದಿರಬಹುದು,ಆದರೆ ಮಿದುಳು/ಕಣ್ಣಿನಲ್ಲಿ ರಕ್ತಸ್ರಾವವಾಗುತ್ತಿರಬಹುದು. ಇದು ಅತ್ಯಂತ ಅಪಾಯಕಾರಿಯೂ ಆಗಬಹುದು ಮತ್ತು ಜೀವನಪರ್ಯಂತ ವೈಕಲ್ಯಗಳಿಗೆ ಕಾರಣವಾಗಬಹುದು. ಹಲವಾರು ಸಂದರ್ಭಗಳಲ್ಲಿ ಮಗುವು ದಿಢೀರನೆ ಕೋಮಾ ಸ್ಥಿತಿಗೆ ಜಾರಬಹುದು ಮತ್ತು ಚಿಕಿತ್ಸೆಯಲ್ಲಿ ವಿಳಂಬದಿಂದಾಗಿ ಸಾವನ್ನೂ ಅಪ್ಪಬಹುದು.

► ಚಿಕಿತ್ಸೆ

ಮೇಲೆ ಉಲ್ಲೇಖಿಸಿದ ಲಕ್ಷಣಗಳು ಮಕ್ಕಳಲ್ಲಿ ಸಾಮಾನ್ಯ ಎಂದು ಕಡೆಗಣಿಸುವ ತಪ್ಪನ್ನು ಮಾಡಬಾರದು ಮತ್ತು ತಕ್ಷಣವೇ ಮಗುವನ್ನು ಮಕ್ಕಳ ತಜ್ಞರ ಬಳಿಗೆ ಒಯ್ಯಬೇಕು. ಎಲ್ಲ ಶೇಕನ್ ಬೇಬಿ ಸಿಂಡ್ರೋಮ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಬಳಸಬಹುದಾದ ನಿಗದಿತ ಚಿಕಿತ್ಸಾ ಕ್ರಮವಿಲ್ಲ. ಚಿಕಿತ್ಸಾ ವಿಧಾನವು ಪ್ರಕರಣದ ತೀವ್ರತೆಯನ್ನು ಅವಲಂಬಿಸಿರುತ್ತದೆ. ಕೆಲವು ಪ್ರಕರಣಗಳಲ್ಲಿ ಕೇವಲ ತಪಾಸಣೆಯಿಂದ ಸೂಕ್ತ ಚಿಕಿತ್ಸೆ ನೀಡಬಹುದು.

ಗಂಭೀರ ಪ್ರಕರಣಗಳಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಾತಿ ಅಥವಾ ಶಸ್ತ್ರಚಿಕಿತ್ಸೆಯೂ ಅಗತ್ಯವಾಗಬಹುದು. ಪ್ರಕರಣ ಸಾಮಾನ್ಯ ಅಥವಾ ತೀವ್ರ ಸ್ವರೂಪದ್ದಾಗಿರಲಿ,ತುರ್ತು ವೈದ್ಯಕೀಯ ತಪಾಸಣೆ ಸದಾ ಅಗತ್ಯವಾಗುತ್ತದೆ. ಮಗುವಿನ ಶೈಶವಾವಸ್ಥೆಯ ವರ್ಷಗಳಲ್ಲಿನ ಯಾವುದೇ ಶಾರೀರಿಕ ಹಾನಿಯು ಕಾಯಂ ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಹೀಗಾಗಿ ಹಸುಗೂಸುಗಳನ್ನು ನೋಡಿಕೊಳ್ಳುವಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು.

ಹೆತ್ತವರು ತಮ್ಮ ಕರುಳ ಕುಡಿ ಶೇಕನ್ ಬೇಬಿ ಸಿಂಡ್ರೋಮ್‌ನ ಅಪಾಯಕ್ಕೆ ಗುರಿಯಾಗದಿರಲು ಪಾಲಿಸಬೇಕಾದ ಕೆಲವು ಟಿಪ್ಸ್ ಇಲ್ಲಿವೆ.

ಯಾವುದೇ ಕಾರಣಕ್ಕೂ ಕೂಸನ್ನು ಹಿಡಿದು ಬಲವಾಗಿ ಅಲುಗಾಡಿಸುವ ತಪ್ಪನ್ನು ಮಾಡಬೇಡಿ

ಹೊಸದಾಗಿ ಅಪ್ಪ-ಅಮ್ಮನ ಪಟ್ಟಕ್ಕೇರಿದವರು ತಮ್ಮ ಕಂದನನ್ನು ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಅಗತ್ಯ ತಿಳುವಳಿಕೆಯನ್ನು ಹೊಂದಿರಬೇಕು.

ಮಗು ಅಳುತ್ತ ರಚ್ಚೆ ಹಿಡಿದಿದ್ದರೆ ಅದನ್ನು ಶಾಂತಗೊಳಿಸಲು ಯಾವಾಗಲೂ ನಯವಾಗಿಯೇ ವರ್ತಿಸಿ,ತಪ್ಪಿಯೂ ಕೂಡ ಒರಟುತನವನ್ನು ಪ್ರದರ್ಶಿಸಬೇಡಿ

ನಿಮ್ಮ ಭಾವನೆಗಳು,ಕೋಪತಾಪಗಳನ್ನು ನಿಯಂತ್ರಿಸಿಕೊಳ್ಳಿ. ಅಗತ್ಯವಾದರೆ ಇದಕ್ಕಾಗಿ ಕೌನ್ಸೆಲರ್ ನೆರವು ಪಡೆದುಕೊಳ್ಳಿ

ಹೆತ್ತವರು ಹಸುಗೂಸಿನ ಮೇಲೆ ಕೋಪತಾಪಗಳನ್ನು ಪ್ರದರ್ಶಿಸಲು ಕೆಲವು ಸಂದರ್ಭಗಳೂ ಕಾರಣವಾಗುತ್ತವೆ. ಸಿಂಗಲ್ ಪೇರೆಂಟಿಂಗ್, ಮಾದಕ ದ್ರವ್ಯ ಸೇವನೆ ಅಥವಾ ಮದ್ಯಪಾನ, ಖಿನ್ನತೆ, ಅತಿಯಾದ ಆತಂಕ, ಕೌಟುಂಬಿಕ ಹಿಂಸೆ, ಶಿಕ್ಷಣದ ಕೊರತೆ ಇತ್ಯಾದಿ ಸಂದರ್ಭಗಳಲ್ಲಿ ಹೆತ್ತವರು ತಮ್ಮ ಹತಾಶೆಯನ್ನು ಮಕ್ಕಳ ಮೇಲೆ ಪ್ರದರ್ಶಿಸುತ್ತಾರೆ. ಹಸುಗೂಸುಗಳ ವಿಷಯದಲ್ಲಿ ಇಂತಹ ಅತಿರೇಕಗಳಿಗೆ ಎಂದಿಗೂ ಅವಕಾಶ ನೀಡಕೂಡದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News