ಮಧುಮೇಹದ ಲಕ್ಷಣಗಳು ಮೊದಲೇ ಪತ್ತೆಯಾಗುವುದಿಲ್ಲವೇಕೆ?

Update: 2020-01-28 16:27 GMT

ವಿಶ್ವಾದ್ಯಂತ ಮಧುಮೇಹದ ಪಿಡುಗು ಹೆಚ್ಚುತ್ತಿದೆ. ಭಾರತವಂತೂ ಮಧುಮೇಹದ ರಾಜಧಾನಿ ಎಂದೇ ಕುಖ್ಯಾತಿಯನ್ನು ಪಡೆದಿದೆ. ಜಗತ್ತಿನಲ್ಲಿ ಮಹಿಳೆಯರ ಸಾವುಗಳಿಗೆ ಮಧುಮೇಹವು ಒಂಭತ್ತನೇ ಪ್ರಮುಖ ಕಾರಣವಾಗಿದ್ದು,ಪ್ರತಿ ವರ್ಷ 2.1 ಮಿಲಿಯನ್ ಸಾವುಗಳು ಸಂಭವಿಸುತ್ತಿವೆ.

ಇತ್ತೀಚಿನ ದಿನಗಳಲ್ಲಿ ಮಧುಮೇಹವು ಸಾಮಾನ್ಯವಾಗಿದ್ದರೂ ಅದರ ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲಾಗುವುದಿಲ್ಲ. ಲಕ್ಷಣಗಳು ಖಚಿತಗೊಳ್ಳುವ ವೇಳೆಗಾಗಲೇ ಮಧುಮೇಹವು ವ್ಯಕ್ತಿಯನ್ನು ಆಕ್ರಮಿಸಿಕೊಂಡಿರುತ್ತದೆ. ಹೆಚ್ಚಾಗಿ ಮಾಮೂಲು ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ರೋಗಿಗೆ ತನ್ನ ರಕ್ತದಲ್ಲಿ ಗ್ಲುಕೋಸ್ ಮಟ್ಟ ಅಧಿಕವಾಗಿರುವುದು ಗೊತ್ತಾಗುತ್ತದೆ. ಅಲ್ಲದೆ ಅತಿಯಾದ ಬಳಲಿಕೆ,ದೇಹತೂಕ ನಷ್ಟ ಮತ್ತು ಹೆಚ್ಚಿನ ಬಾಯಾರಿಕೆಯಂತಹ ಮಧುಮೇಹದ ಸಾಮಾನ್ಯ ಲಕ್ಷಣಗಳು ಹೆಚ್ಚಿನ ಸಂದರ್ಭಗಳಲ್ಲಿ ಕಡೆಗಣಿಸಲ್ಪಡುತ್ತವೆ.

ಟೈಪ್-2 ಮಧುಮೇಹವು ಲಕ್ಷಣರಹಿತವಾಗಿದೆ,ಅಂದರೆ ದೀರ್ಘ ಸಮಯದವರೆಗೂ ಅದು ಯಾವುದೇ ಲಕ್ಷಣಗಳನ್ನು ಪ್ರಕಟಿಸುವುದಿಲ್ಲ. ಉದಾಹರಣೆಗೆ ವ್ಯಕ್ತಿಗೆ ಅತಿಯಾದ ಬಾಯಾರಿಕೆಯಾಗುತ್ತಿದ್ದರೆ ಆತ/ಆಕೆ ಅದಕ್ಕೆ ವಾತಾವರಣ ಕಾರಣವಾಗಿರಬಹುದು ಎಂದು ಭಾವಿಸಬಹುದೇ ಹೊರತು ಮಧುಮೇಹದ ಲಕ್ಷಣವೆಂದಲ್ಲ. ಪದೇ ಪದೇ ಮೂತ್ರವಿಸರ್ಜನೆ,ಬಳಲಿಕೆಯಂತಹ ಮಧುಮೇಹದ ಇತರ ಲಕ್ಷಣಗಳೂ ಇದೇ ರೀತಿ ಕಡೆಗಣಿಸಲ್ಪಡುತ್ತವೆ. ಇವೆಲ್ಲ ಮಧುಮೇಹಕ್ಕೇ ನಿರ್ದಿಷ್ಟವಾದ ಲಕ್ಷಣಗಳಲ್ಲ,ಹಲವಾರು ಆರೋಗ್ಯ ಕಾರಣಗಳಿಂದಲೂ ಈ ಲಕ್ಷಣಗಳು ಕಂಡು ಬರುತ್ತವೆ. ಹೀಗಾಗಿ ಇವುಗಳನ್ನು ಎಚ್ಚರಿಕೆಯ ಸಂಕೇತಗಳೆಂದು ಪರಿಗಣಿಸಲಾಗುವುದಿಲ್ಲ. ಹೀಗೆ ಈ ಲಕ್ಷಣಗಳು ಕಡೆಗಣಿಸಲ್ಪಡುವುದರಿಂದ ರಕ್ತದಲ್ಲಿಯ ಅತಿಯಾದ ಸಕ್ಕರೆ ಮಟ್ಟವು ಮೂತ್ರಪಿಂಡಗಳು,ಕಣ್ಣುಗಳು ಮತ್ತು ಹೃದಯದಂತಹ ಇತರ ಅಂಗಾಂಗಗಳ ಮೇಲೆ ದಾಳಿ ಮಾಡುವವರೆಗೂ ಮಧುಮೇಹ ಪತ್ತೆಯಾಗುವುದಿಲ್ಲ.

ಅಲ್ಲದೆ, ಟೈಪ್-2 ಮಧುಮೇಹವು ಅತ್ಯಂತ ನಿಧಾನ ಗತಿಯಿಂದ ಬೆಳವಣಿಗೆಯಾಗುತ್ತದೆ,ಹೀಗಾಗಿ ಅದು ಯಾವುದೇ ಪ್ರಮುಖ ಲಕ್ಷಣಗಳನ್ನು ಮೊದಲೇ ತೋರಿಸುವುದಿಲ್ಲ. ವ್ಯಕ್ತಿಯು ಈ ಸ್ಥಿತಿಯಿಂದ ಬಳಲುತ್ತಿರುವಾಗ ಇನ್ಸುಲಿನ್ ಉತ್ಪಾದನೆ ಅಥವಾ ಬಳಕೆ ಕ್ರಮೇಣ ಕಡಿಮೆಯಾಗುತ್ತದೆ ಮತ್ತು ಹೆಚ್ಚಿನ ಸಂದರ್ಭದಲ್ಲಿ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಇದರಿಂದ ಶರೀರದಿಂದ ಗ್ಲುಕೋಸ್ ಹೀರುವಿಕೆಗೆ ವ್ಯತ್ಯಯವುಂಟಾಗುತ್ತದೆ. ಆದರೆ ಇದು ತುಂಬ ನಿಧಾನ ಗತಿಯಲ್ಲಿ ನಡೆಯುವುದರಿಂದ ತನ್ನಲ್ಲಿಯ ಬದಲಾವಣೆಗಳನ್ನು ಗ್ರಹಿಸಲು ಶರೀರವು ವಿಫಲವಾಗುತ್ತದೆ. ಆದರೆ ಕಾಲಕ್ರಮೇಣ ಇನ್ಸುಲಿನ್ ಉತ್ಪಾದನೆಗೆ ತೀವ್ರ ವ್ಯತ್ಯಯವುಂಟಾಗುತ್ತದೆ ಮತ್ತು ಇದು ಶರೀರದಲ್ಲಿ ಗ್ಲುಕೋಸ್ ಸಂಗ್ರಹಗೊಳ್ಳಲು ಕಾರಣವಾಗುತ್ತದೆ ಮತ್ತು ಲಕ್ಷಣಗಳು ಪ್ರಕಟಗೊಳ್ಳಲು ಆರಂಭವಾಗುತ್ತವೆ.

ಹೀಗೆ ಶರೀರದಲ್ಲಿ ಬದಲಾವಣೆಗಳು ನಿಧಾನ ಗತಿಯಲ್ಲಿ ನಡೆಯುವುದರಿಂದ ಶರೀರವು ಅದಕ್ಕೆ ಒಗ್ಗಿಕೊಳ್ಳುತ್ತದೆ ಮತ್ತು ದುಷ್ಪರಿಣಾಮಗಳು ತೀವ್ರಗೊಳ್ಳುವವರೆಗೂ ಲಕ್ಷಣಗಳು ಸ್ಪಷ್ಟವಾಗದಿರಬಹುದು. ಇದೇ ಕಾರಣದಿಂದ ಯಾವುದೇ ಲಕ್ಷಣಗಳು ಕಂಡುಬರದಿರುವುದೇ ಟೈಪ್-2 ಮಧುಮೇಹದ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ ಎಂದು ಹೇಳಲಾಗುತ್ತದೆ.

ವ್ಯಕ್ತಿಯು ನಿಯಮಿತವಾಗಿ ಮಧುಮೇಹ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ಅಥವಾ ಅದರ ಲಕ್ಷಣಗಳ ಮೇಲೆ ನಿಗಾಯಿಟ್ಟಿದ್ದರೆ ಅಥವಾ ರೋಗಕ್ಕೆ ಕಾರಣವಾಗುವ ಅಪಾಯದ ಅಂಶಗಳು ಆತನಿಗೆ/ಆಕೆಗೆ ಗೊತ್ತಿದ್ದರೆ ರೋಗವನ್ನು ಆರಂಭದ ಹಂತಗಳಲ್ಲಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಹೀಗಾಗಿ ವ್ಯಕ್ತಿಯು ಟೈಪ್-2 ಮಧುಮೇಹದ ಅಪಾಯದ ಗುಂಪಿನಲ್ಲಿದ್ದಾನೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಮೊದಲ ಅಗತ್ಯವಾಗುತ್ತದೆ. ಕುಟುಂಬದಲ್ಲಿ ಮಧುಮೇಹದ ಇತಿಹಾಸ,ಅಧಿಕ ಕೊಲೆಸ್ಟ್ರಾಲ್,ಅಧಿಕ ರಕ್ತದೊತ್ತಡ ಅಥವಾ ಹೃದಯ ರಕ್ತನಾಳಗಳ ರೋಗ ಇವು ಮಧುಮೇಹಕ್ಕೆ ಕಾರಣವಾಗಬಲ್ಲ ಅಪಾಯದ ಅಂಶಗಳಾಗಿವೆ. ಅಲ್ಲದೆ ಒಂದೇ ಬಗೆಯ ಜೀವನಶೈಲಿಯನ್ನು ಅನುಸರಿಸುವವರಾಗಿದ್ದರೆ,ಮಹಿಳೆಯರು ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್(ಪಿಸಿಒಡಿ)ನಿಂದ ಬಳಲುತ್ತಿದ್ದರೆ ಮತ್ತು ಅಧಿಕ ದೇಹತೂಕವನ್ನು ಹೊಂದಿದ್ದರೆ ಮಧುಮೇಹ ತಪಾಸಣೆಯನ್ನು ಅಗತ್ಯವಾಗಿ ಮಾಡಿಸಿಕೊಳ್ಳಬೇಕು.

ನೀವು ಪ್ರಿಡಯಾಬಿಟಿಸ್‌ನಿಂದ ಬಳಲುತ್ತಿದ್ದೀರಿ ಅಥವಾ ನಿಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವು ಮಧುಮೇಹವನ್ನು ಖಚಿತಪಡಿಸುವ ಮಟ್ಟಕ್ಕೆ ಸಮೀಪದಲ್ಲಿದೆ ಎಂದು ನಿಮ್ಮ ವೈದ್ಯರು ನಿಮಗೆ ಹೇಳಿದ್ದರೆ ನೀವು ವರ್ಷಕ್ಕೊಮ್ಮೆ ಮಧುಮೇಹ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಪ್ರಿಡಯಾಬಿಟಿಸ್ ಹೊಂದಿರುವವರು ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸದಿದ್ದರೆ ಅವರು ಮಧುಮೇಹಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವಿದೆ.

ಮಹಿಳೆಯರು ಗರ್ಭಾವಸ್ಥೆಯಲ್ಲಿದ್ದಾಗ ಮಧುಮೇಹಕ್ಕೆ ಗುರಿಯಾಗಿದ್ದರೆ ಮತ್ತು ನಂತರ ರಕ್ತದಲ್ಲಿಯ ಗ್ಲುಕೋಸ್ ಮಟ್ಟವು ನಿಯಂತ್ರಣದಲ್ಲಿದ್ದರೂ ಮಧುಮೇಹ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಏಕೆಂದರೆ ಗರ್ಭಿಣಿಯಾಗಿದ್ದಾಗ ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿದ್ದರೆ ಅಂತಹವರು ಮಧುಮೇಹಕ್ಕೆ ಗುರಿಯಾಗುವ ಅಪಾಯ ಸದಾ ಇರುತ್ತದೆ. ಇಂತಹವರು ತಮ್ಮ ಜೀವನದುದ್ದಕ್ಕೂ ಪ್ರತಿ ಮೂರು ವರ್ಷಗಳಿಗೊಮ್ಮೆ ಮಧುಮೇಹ ತಪಾಸಣೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

45 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಸುರಕ್ಷತೆಯ ದೃಷ್ಟಿಯಿಂದ ನಿಯಮಿತವಾಗಿ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದರಿಂದ ವಯಸ್ಸಾಗುತ್ತಿದ್ದಂತೆ ರಕ್ತದಲ್ಲಿ ಗ್ಲುಕೋಸ್ ಮಟ್ಟದಲ್ಲಿ ಬದಲಾವಣೆಗಳನ್ನು ಪತ್ತೆ ಹಚ್ಚಲು ನೆರವಾಗುವ ಜೊತೆಗೆ ಆರಂಭದ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.

ಮಧುಮೇಹದ ಲಕ್ಷಣಗಳು ವಿಳಂಬವಾಗಿ ಕಾಣಿಸಿಕೊಳ್ಳುವುದರಿಂದ ರೋಗವನ್ನು ಮೊದಲೇ ಪತ್ತೆ ಹಚ್ಚುವುದು ಕಷ್ಟವಾಗಿದ್ದರೂ ಬಾಯಿಹುಣ್ಣುಗಳು ಅಥವಾ ಗಾಯಗಳು ನಿಧಾನವಾಗಿ ಮಾಗುವಂತಹ,ನಿಮ್ಮ ಸ್ಥಿತಿಯ ಬಗ್ಗೆ ಸ್ವಲ್ಪ ಸುಳಿವು ನೀಡುವು ಕೆಲವು ಲಕ್ಷಣಗಳಿವೆ. ಇಂತಹ ಲಕ್ಷಣಗಳ ಮೇಲೆ ಗಮನವಿರಿಸಿದರೆ ರಕ್ತ ಪರೀಕ್ಷೆಯಿಂದ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಇಂದಿನ ಜೀವನಶೈಲಿಯ ಹಿನ್ನೆಲೆಯಲ್ಲಿ ಬೊಜ್ಜುದೇಹಿಗಳು ಮತ್ತು ಅಪಾಯದ ಗುಂಪಿನಲ್ಲಿರುವವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕಾಗಿದೆ. ದೇಹಸ್ಥಿತಿಯ ಬಗ್ಗೆ ಅರಿವು,ಶರೀರದಲ್ಲಿ ಆಗುವ ಬದಲಾವಣೆಗಳ ಮೇಲೆ ನಿಗಾ ಮತ್ತು ನಿಯಮಿತವಾಗಿ ರಕ್ತಪರೀಕ್ಷೆ ಇವುಗಳಿಂದಾಗಿ ಮಧುಮೇಹದ ಲಕ್ಷಣಗಳು ಸುಪ್ತವಾಗಿದ್ದರೂ ಸಕಾಲದಲ್ಲಿ ಅದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News