ಮಾತು, ಮನಸ್ಸುಗಳ ಮಾಲಿನ್ಯ

Update: 2020-03-01 05:20 GMT

ದ್ವೇಷ ಪ್ರಚೋದನೆಯ ಮಾತುಗಳಿಂದ ದಿಲ್ಲಿಯ ಕೆಲವು ಭಾಗ ಹೊತ್ತಿ ಉರಿದು ನಲವತ್ತಕ್ಕೂ ಹೆಚ್ಚು ಅಮಾಯಕ ಜೀವಗಳು ಬಲಿಯಾಗಿವೆ. ಇನ್ನಾದರೂ ನಾಯಕರುಗಳಲ್ಲಿ ವಿವೇಕ ಮೂಡಬೇಕು. ಸಿಎಎ ಈಗ ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿದೆ. ದ್ವೇಷ, ಅಸಹನೆ, ದುಡುಕಿನ ಮಾತುಗಳಿಗೆ ಕಡಿವಾಣ ಹಾಕಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗಾಗಿ ಶಾಂತಿಯಿಂದ ಕಾಯುವ ತಾಳ್ಮೆ ಇಂದಿನ ಅಗತ್ಯವಾಗಿದೆ.

ನಮ್ಮಲ್ಲಿ ವಾಕ್ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ ಇಲ್ಲವೆಂದು ಯಾರು ಹೇಳಿದವರು?ಈ ಕೆಳಗಿನ ಅಣಿಮುತ್ತುಗಳನ್ನು ಗಮನಿಸಿ:

 ‘‘ಬುದ್ಧಿಜೀವಿಗಳನ್ನು ಗುಂಡಿಟ್ಟು ಕೊಲ್ಲಬೇಕು.

 ......ಗಳನ್ನು ಗುಂಡಿಟ್ಟು ಕೊಲ್ಲಬೇಕು.

 .....ಅವಳ ತಲೆ ಕಡಿದವರಿಗೆ ಒಂದು ಲಕ್ಷ ಬಹುಮಾನ.

 ....ಅವಳ ನಾಲಗೆ ಕತ್ತರಿಸಿದವರಿಗೆ ಒಂದು ಲಕ್ಷ ಬಹುಮಾನ.

 ......ಸ್ವಾವಿು ನಕಲಿ ಸ್ವಾತಂತ್ರ ಹೋರಾಟಗಾರ.

ಅವನು ಪಾಕಿಸ್ತಾನಿ ಏಜೆಂಟ್.

 ಶತಾಯುಷಿಯಾಗಿರುವ ದೊರೆಸ್ವಾಮಿ ತಮ್ಮ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.

 ಮೋದಿ ವಿರುದ್ಧ ಮಾತನಾಡಿದರೆ ಗೌರಿ ಗತಿ

 ಗೋಲಿ ಮಾರೋ...’’

- ಈ ಮಾತುಗಳನ್ನು ಆಡಿರುವವರು ಹಾದಿಬೀದಿಯ ಕಾಕಪೋಕರಲ್ಲ.ಸಚಿವರು, ಸಂಸತ್ ಸದಸ್ಯರು, ಶಾಸಕರು, ಮಠದ ಸ್ವಾಮಿಗಳು ಮೊದಲಾದ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ನಾಯಕಮಣಿಗಳು. ಸ್ವೇಚ್ಛಾಚಾರದ ಇಂತಹ ಸ್ವಾತಂತ್ರಕ್ಕೆ ವಿಫುಲ ಅವಕಾಶಗಳಿವೆ, ಕಡಿವಾಣವಿಲ್ಲ. ತಾತ್ವಿಕ, ತಾರ್ಕಿಕ ಭಿನ್ನದನಿಗಳಿಗೆ ಮಾತ್ರ ‘ದೇಶದ್ರೋಹದ’ ಬೆದರಿಕೆಯ ಕಡಿವಾಣ.

ಮಾತು ಮನುಷ್ಯನಿಗೆ ದೊರೆತ ಒಂದು ಅದ್ಭುತ ವರ ಎನ್ನುತ್ತಾರೆ ಪ್ರಾಜ್ಞರು. ಸಮಾಜ ನಿರ್ಮಿಸಿದ್ದು, ನಾಗರಿಕತೆಗಳನ್ನು ಕಟ್ಟಿದ್ದು, ಜ್ಞಾನವನ್ನು ಸೃಷ್ಟಿಸಿದ್ದು ಎಲ್ಲವೂ ಮಾತಿನಿಂದಲೇ. ಮಾತು ಒಂದು ಸಂಸ್ಕೃತಿಯ ಮಾನದಂಡ ಎಂದರೂ ತಪ್ಪಾಗಲಾರದು. ತಾನು ಕೊಟ್ಟ ಮಾತಿನ ಮೌಲ್ಯವನ್ನು ಕಾಪಾಡಿಕೊಳ್ಳಲು ಪುಣ್ಯಕೋಟಿ ಎಂಬ ಹಸು ಜೀವವನ್ನೇ ಕೊಡಲು ಸಿದ್ಧವಾಯಿತು. ಆದರೆ ಇವತ್ತಿನ ಮಾತುಬಲ್ಲ ಮಾನವ ಮಾತನ್ನು ಅಪಮೌಲ್ಯಗೊಳಿಸುತ್ತಿದ್ದಾನೆ. ಮಾತಿನ ಶಕ್ತಿ, ಮೌಲ್ಯಗಳನ್ನು ಅರಿಯದೆ ಮಾತಿನ ಮೌಲ್ಯವನ್ನು ಕುಗ್ಗಿಸುವುದರ ಜೊತೆಗೆ ಅನಾಹುತಗಳನ್ನು ಸೃಷ್ಟಿಸುತ್ತಿದ್ದಾನೆ ಎನ್ನುವುದಕ್ಕೆ ಮೇಲೆ ಉಲ್ಲೇಖಿಸಿರುವಂತಹ ಮಾತುಗಳು ಇಂದು ಬೆಳಗಾದರೆ ದಿನಪತ್ರಿಕೆಗಳಲ್ಲಿ ನಮ್ಮ ಮುಖಕ್ಕೆ ರಾಚುತ್ತವೆ.

ಪ್ರಜ್ಞಾವಂತ ಸಮಾಜದಲ್ಲಿ, ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ಸರಕಾರದ ಯಾವುದೇ ಶಾಸನ ಅಥವಾ ಆಜ್ಞೆ-ಆದೇಶಗಳಿಗೆ ತೀವ್ರ ಸಂವೇದನೆಯ ಪ್ರತಿಕ್ರಿಯೆಗಳು ವ್ಯಕ್ತವಾಗುವುದು ಒಂದು ಸಹಜ ಬೆಳವಣಿಗೆ. ಅದರಲ್ಲೂ ಸರಕಾರದ ಕ್ರಮಗಳು ತಮ್ಮ ನಂಬಿಕೆ, ಅಸ್ತಿತ್ವಗಳಿಗೆ ಧಕ್ಕೆ ತರಲಿವೆ ಎಂಬ ಆತಂಕ ಉಂಟಾದಾಗ ಇದರ ತೀವ್ರತೆ ಮತ್ತಷ್ಟು ಪ್ರಖರವಾಗಿರಲೂಬಹುದು. ಕೇಂದ್ರದ ಬಿಜೆಪಿ ಸರಕಾರ ಮಾಡಿರುವ ಪೌರತ್ವ ತಿದ್ದುಪಡಿ ಶಾಸನ (ಸಿಎಎ)ಅಲ್ಪಸಂಖ್ಯಾತರಲ್ಲದೆ ಉಳಿದ ಧರ್ಮೀಯರಲ್ಲೂ, ದಲಿತರು, ಬುಡಕಟ್ಟು ಜನಾಂಗಗಳಲ್ಲೂ ಇಂತಹ ಆತಂಕ ಉಂಟುಮಾಡಿದ್ದು, ಅದಕ್ಕೆ ಪ್ರತಿರೋಧ-ಪ್ರತಿಭಟನೆಗಳು ದೇಶದೆಲ್ಲಡೆ ವಿವಿಧ ರೂಪಗಳಲ್ಲಿ ವ್ಯಕ್ತವಾಗುತ್ತಿವೆ. ಪೌರತ್ವ ಸಾಬೀತು ಪಡಿಸಲು ತಾನು ಹಾಗೂ ತನ್ನ ಪೂರ್ವಜರು ಭರತ ಭೂಮಿಯಲ್ಲೇ ಜನಿಸಿದವರೆಂದು ಸಾಬೀತು ಪಡಿಸುವ ಜನನ ದಾಖಲೆಗಳನ್ನು ಕೊಡಬೇಕಾಗುತ್ತದೆ. ದಾಖಲೆಗಳನ್ನು ಎಲ್ಲಿಂದ ತರುವುದು?

ಜನನ-ಮರಣಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕೆಂಬ ಶಾಸನ ದೇಶದಲ್ಲಿ ಜಾರಿಗೆ ಬಂದದ್ದು 1969ರಲ್ಲಿ. ಅದಕ್ಕೆ ಹಿಂದಿನದು? 1970ರಲ್ಲಿ ಹುಟ್ಟಿದ ಮಗ ಜನನ ದಾಖಲೆ ತೋರಿಸಿ ಭಾರತದ ಪ್ರಜೆ ಎನ್ನಿಸಿಕೊಳ್ಳಬಹುದು,ಆದರೆ ದಾಖಲೆ ಇಲ್ಲದ ತಂದೆತಾಯಿಯರು ಪೌರತ್ವದ ಎಲ್ಲ ಹಕ್ಕುಗಳನ್ನೂ ಕಳೆದುಕೊಂಡು ಕೂಡುದೊಡ್ಡಿಯಲ್ಲಿ ಶೇಷಾಯುಶ್ಯವನ್ನು ದೂಡಬೇಕಾಗುತ್ತದೆ. ಹೀಗಾಗುವುದಿಲ್ಲ ಎಂದು ಸರಕಾರ ಹೇಳುತ್ತದೆ.ಆದರೆ ಈಗಿನ ಅಸ್ಸಾಮಿನ ನಿದರ್ಶನ ನಮ್ಮ ಕಣ್ಣಮುಂದೇ ಇದೆ. ಪರಿಸ್ಥಿತಿ ಹೀಗಿರುವಾಗ ಭೀತಿ, ಆತಂಕಗಳು ಉಂಟಾಗದಿರುತ್ತವೆಯೇ?

ಈ ಭೀತಿ, ಆತಂಕಗಳಿಗೆ ಕಂಡುಬರುತ್ತಿರುವ ಹಲವು ಬಗೆಯ ಪ್ರತಿರೋಧಗಳಲ್ಲಿ ಕವ್ಯಾಭಿವ್ಯಕ್ತಿಯೂ ಒಂದು.ಕವಿಯೊಬ್ಬ ‘ನಿನ್ನ ದಾಖಲೆಯನ್ನು ತೋರಿಸು ಎಂದು ಕವಿತೆಯೊಂದರಲ್ಲಿ ಜನತೆಯ ಆತಂಕ-ಭೀತಿಗಳಿಗೆ ದನಿಯಾಗಿದ್ದಾನೆ.ಇಲ್ಲಿ ನೀನು ಎಂದರೆ ವ್ಯವಸ್ಥೆಯೂ ಆಗಬಹುದು,ದೇವರೂ ಆಗಬಹುದು. ಆದರೆ ಇದು ಪ್ರಧಾನ ಮಂತ್ರಿ ಮೋದಿಯವರನ್ನುದ್ದೇಶಿಸಿಯೇ ಆಡಿರುವದೆಂದು ‘ದೇಶಭಕ್ತ’ನೊಬ್ಬನಿಗೆ ಅನ್ನಿಸಿ ಆತ ದೂರುಕೊಡುತ್ತಾನೆ. ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು ಎನ್ನುವಂತೆ ಪೊಲೀಸರು ಬಡಕವಿಯನ್ನು ಬೇಟೆಯಾಡಿ ಜೈಲಿಗೆ ಕಳುಹಿಸುತ್ತಾರೆ. ವ್ಯವಸ್ಥೆಯನ್ನು, ರಾಜಕಾರಣಿಗಳನ್ನು ವಿರೋಧಿಸುವ, ಟೀಕಿಸುವ ಕವಿತೆಗಳಿಗೆ ನಮ್ಮ ಕಾವ್ಯಚರಿತ್ರೆಯಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಗೋಪಾಲಕೃಷ್ಣ ಅಡಿಗರ ‘ನೆಹರೂ ನಿವೃತ್ತರಾಗುವುದಿಲ್ಲ’ ಕವಿತೆಗಿಂತ ಮಿಗಿಲಾದ ಮತ್ತೊಂದು ಉದಾಹರಣೆ ಬೇಕೆ? ಆಗ ಅದರ ವಿರುದ್ಧ ಸಾರ್ವಜನಿಕ ಆಕ್ರೋಶವೇನೂ ಕೇಳಿ ಬರಲಿಲ್ಲ. ಸರಕಾರವೂ ಅಡಿಗರನ್ನು ಜೈಲಿಗೆ ತಳ್ಳಲಿಲ್ಲ. ಆಗಿನ ಸಹನೆ ಈಗಿಲ್ಲವೇಕೆ? ಇಷ್ಟಾಗಿ ಈ ಕವಿತೆಯ ಪೂರ್ಣಪಾಠ ಲಭ್ಯವಿಲ್ಲ.ಕನ್ನಡದ ಯಾವ ಪತ್ರಿಕೆಯೂ ಇದನ್ನು ಪ್ರಕಟಿಸುವ ಸಾಹಸಮಾಡಲಿಲ್ಲ. ಕವಿಗಳು, ಸಾಹಿತಿಗಳು ಆ ಬಡಕವಿಯ ಪರ ಪ್ರತಿಭಟಿಸಲಿಲ್ಲ. ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗಲು ಕಷ್ಟವಾಗುತ್ತಿದೆ ಎನ್ನುವ ಸಾಹಿತ್ಯ ವಲಯದ ಮಾತುಗಳು ಪ್ರಕ್ಷುಬ್ಧ ಮನಸ್ಥಿತಿಯನ್ನೇ ಬಿಂಬಿಸುತ್ತದೆ.

 ಬೀದರ್‌ನ ಶಾಲೆಯೊಂದರಲ್ಲಿ ಆಡಿದ ನಾಟಕದ ಮಾತುಗಳೂ ಇದೇ ಆತಂಕದ ಸ್ಥಿತಿಯಲ್ಲಿ ಮೂಡಿಬಂದಿರಬಹುದಾದ ದುಡುಕಿನ ಮಾತುಗಳು.ಈ ನಾಟಕದ ಕರ್ತೃ ಯಾರೆಂಬುದು ತಿಳಿಯದು. ಈ ನಾಟಕದ ಪೂರ್ಣ ಪಾಠವೂ ಲಭ್ಯವಿಲ್ಲ. ಇದಾವುದನ್ನು ಪರೀಕ್ಷಿಸುವ ಗೋಜಿಗೆ ಹೋಗದೇ ಯಾರೋ ಕೊಟ್ಟ ದೂರನ್ನೇ ಹಿಡಿದುಕೊಂಡು ಪೊಲೀಸರು ಪಾತ್ರ ಮಾಡಿದ ಎಳೆಯ ಮಗುವನ್ನು ದಂಡಿಸಿದ್ದಾರೆ.ಆ ಮಗುವಿನ ತಾಯಿಯನ್ನು, ಆಕೆ ಸಂಭಾಷಣೆಯನ್ನು ಹೇಳಿಕೊಟ್ಟಿರಬಹುದೆಂಬ ಕಾರಣದಿಂದ ಬಂಧಿಸಲಾಯಿತು. ಮೊಕದ್ದಮೆಯನ್ನೂ ಹೂಡಲಾಗಿದೆ.

‘ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ್ದಕ್ಕಾಗಿ ಮೈಸೂರಿನ ಯುವತಿಯೊಬ್ಬಳ ಮೇಲೆ ದೇಶದ್ರೋಹದ ಆರೋಪ ಹೊರಿಸಿ ವಿಚಾರಣೆಗೆ ಗುರಿಪಡಿಸಲಾಗಿದೆ. ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳ ಮೇಲೂ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಬೆಂಗಳೂರಿನ ಅಮೂಲ್ಯ, ಆರ್ದ್ರಾ ಅವರುಗಳದ್ದೂ ಇದೇ ಕಥೆ. ಇವರೆಲ್ಲರೂ ದೇಶದ್ರೋಹಿಗಳು, ಪಾಕಿಸ್ತಾನಿ ಏಜೆಂಟರು, ನಕ್ಸಲರು ಎಂಬೆಲ್ಲ ಮಾತುಗಳು ಕೇಳಿ ಬಂದಿವೆ. ಈ ಪಡ್ಡೆ ಹುಡುಗರ ಮಾತುಗಳು ಎಷ್ಟು ದುಡುಕಿನದೋ ಅಷ್ಟೇ ದುಡುಕಿನದು ಇಂತಹ ಪ್ರಯತ್ನಗಳು. ಇವು ಇಂತಹ ದುಡುಕಿನ ಮನಸ್ಸುಗಳ ಹಿಂದಿನ ತಹತಹವನ್ನು ಅರ್ಥಮಾಡಿಕೊಳ್ಳದ ಸಂಕುಚಿತ ಬುದ್ಧಿಯ ಕುಟಿಲತನಗಳು. ಇವರೆಲ್ಲ ಉದ್ದೇಶಪೋರ್ವಕವಾಗಿ ಮಾಡಿದ್ದಲ್ಲಿ ಆದ ಶಿಕ್ಷಾರ್ಹ ಅಪರಾಧ ಎಂಬುದರಲ್ಲಿ ಎರಡು ಮಾತಿರಲಾರದು. ಆದರೆ ದುಡುಕಿನ, ಭಾವೋದ್ವೇಗದ ಪ್ರತಿಕ್ರಿಯೆಯಾಗಿದ್ದರೆ? ತಂದೆತಾಯಿಯರನ್ನು ಸಂಪರ್ಕಿಸಲೂ ಆಗದ ಹುಡುಗರ ಇಂತಹ ದುಡುಕುಗಳಲ್ಲಿ ನಮ್ಮೆಲ್ಲರ ಪಾಲೂ ಇಲ್ಲವೇ? ಸೂಕ್ತ ವಿಚಾರಣೆಯಿಂದ ಸತ್ಯ ತಿಳಿಯಬೇಕು. ಬಾಯಿಗೆ ಬಂದ ಹಾಗೆ ಮಾತನಾಡುವ ಬದಲು ಅಲ್ಲಿಯವರೆಗೆ ಸಂಯಮ ತಾಳುವುದು ಉಚಿತವಲ್ಲವೆ?

 ‘ಫ್ರೀ ಕಾಶ್ಮೀರ್’ ಎನ್ನುವುದನ್ನು ಕಾಶ್ಮೀರವನ್ನು ಭಾರತದಿಂದ ಮುಕ್ತಗೊಳಿಸಿ ಎಂದು ಅರ್ಥೈಸುವುದು ಎಷ್ಟು ಅನರ್ಥಕಾರಿಯೋ ಅಷ್ಟೇ ಅನರ್ಥಕಾರಿಯಾದುದು ಕೇವಲ ಘೋಷಣೆ ಮಾತ್ರದಿಂದಲೇ ‘ಪಾಕಿಸ್ತಾನ್ ಜಿಂದಾಬಾದ್’ ಎನ್ನುವುದನ್ನು ದೇಶದ್ರೋಹವೆಂದು ಅರ್ಥೈಸುವುದು, ಇವರುಗಳ ಪರ ವಕಾಲತ್ತು ವಹಿಸುವುದಿಲ್ಲ ಎನ್ನುವ ವಕೀಲರ ನಿರ್ಧಾರಗಳು, ಇವೆಲ್ಲವೂ ದುಡುಕಿನ ಮೂಲದವು, ಅಸಹನೆಯ ಮೂಲದವು. ಇನ್ನು ಈಗ ದಿಲ್ಲಿಯಲ್ಲಿ ನಡೆದಿರುವಂತಹ ಹಿಂಸಾಚಾರವಂತೂ ದ್ವೇಷಮೂಲದ್ದು. ದ್ವೇಷವೆನ್ನುವುದು ಹೀನಾಯ ಮನ:ಸ್ಥಿತಿ. ಈ ಮನ:ಸ್ಥಿತಿ ಒಬ್ಬರಲ್ಲಿ ಇದೆ, ಇನ್ನೊಬ್ಬರಲ್ಲಿ ಇಲ್ಲ ಎನ್ನಲಾಗದು. ಇವರು ದ್ವೇಷ, ಅಸಹನೆಗಳ ಪಾಲನೆ, ಪೋಷಣೆಯಲ್ಲಿ ಸದಾ ನಿರತರು.ಅಪ್ರಬುದ್ಧ ಯುವ ಮನಸ್ಸುಗಳಲ್ಲಿ ಅಸಹನೆ, ದ್ವೇಷಗಳನ್ನು ಬಿತ್ತುವವರು, ಹಿಂಸೆಯನ್ನು ಪ್ರಚೋದಿಸುವವರು ಎರಡೂ ಕಡೆ ಇದ್ದಾರೆ. ಹೀಗೆ ಮೊಳೆಯುವ ದ್ವೇಷ, ಅಸಹನೆಗಳು ಸಂದರ್ಭ ಸಿಕ್ಕಾಗಲೆಲ್ಲ ಮಲಗಿದ್ದ ಹುಲಿ ಮೈಕೊಡವಿಕೊಂಡು ನಿಂತಂತೆ ಗರ್ಜಿಸುತ್ತವೆ, ಮೇಲೆ ಬೀಳುತ್ತವೆ. ಇವರನ್ನು ನಿಯಂತ್ರಿಸಬೇಕಾದ ನಾಯಕರ ಸುಪ್ತ ಪ್ರಜ್ಞೆಯ ಅಪೇಕ್ಷೆಗಳೂ ಇದೇ ರೀತಿಯದಾಗಿರುತ್ತವೆ. ಎಂದೇ ಇದಕ್ಕೂ ತಮಗೂ ಸಂಬಂಧವಿಲ್ಲ, ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಜಾಣತನದಿಂದ ದೂರ ಕಾಪಾಡಿಕೊಳ್ಳುತ್ತಾರೆ. ಪ್ರಚೋದನೆಗಳಿಂದ ದುಡುಕಿ ವರ್ತಿಸುವ ಅಮಾಯಕರು ತೊಂದರೆಗೆ ಸಿಕ್ಕಿಕೊಳ್ಳುತ್ತಾರೆ. ಉದ್ದೇಶಪೂರ್ವಕವಾಗಿಯೇ ಮಾತನಾಡುವ ನುರಿತ ರಾಜಕಾರಣಿಗಳು ತನ್ನ ಮಾತುಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಭಂಡತನ ಮೆರೆಯುತ್ತಾರೆ. ಒತ್ತಡ ಹೆಚ್ಚಾದಾಗ ‘ಸಾರಿ’ ಎಂಬ ಒಂು ಮಾತಿನಿಂದ ತಿಪ್ಪೆಸಾರಿಸಿಬಿಡುತ್ತಾರೆ.

ಸ್ವಲ್ಪದಿನಗಳ ಹಿಂದೆ ಉತ್ತರ ಕನ್ನಡದಿಂದ ಆಯ್ಕೆಯಾಗಿರುವ ಲೋಕಸಭಾ ಸದಸ್ಯರೊಬ್ಬರು ಗಾಂಧಿಯವರ ಸ್ವಾತಂತ್ರ ಹೋರಾಟ ಬ್ರಿಟಿಷರ ಲಾಭಕ್ಕಾಗಿ ನಡೆಸಿದ ಒಂದು ನಾಟಕ ಎನ್ನುವ ಆಣಿಮುತ್ತುಗಳನ್ನು ಉದುರಿಸಿದ್ದರು. ಸಹಜವಾಗಿಯೇ ಇದು ಹಿರಿಯ ಸ್ವಾತಂತ್ರ ಹೋರಾಟಗಾರರಿಗೆ, ಚರಿತ್ರೆಯನ್ನು ಬಲ್ಲವರಿಗೆ ನೋವುಂಟುಮಾಡಿತ್ತು.ಅವರ ಈ ಹೇಳಿಕೆಗೆ ವ್ಯಾಪಕವಾಗಿ ವಿರೋಧ, ಪ್ರತಿಭಟನೆಗಳುಂಟಾದರೂ ಪಕ್ಷದ ನಾಯಕತ್ವ ಆ ಸಂಸದನನ್ನು ಶಿಕ್ಷಿಸಲಿಲ್ಲ. ಈಗ ಇನ್ನೊಬ್ಬ ಬಿಜೆಪಿ ಶಾಸಕರು ಹಿರಿಯ ಸ್ವಾತಂತ್ರ ಹೋರಾಟಗಾರರಾದ ಶತಾಯುಷಿ ಎಚ್.ಎಸ್. ದೊರೆಸ್ವಾಮಿಯವರನ್ನು ಠಕ್ಕ ಸ್ವಾತಂತ್ರ ಹೋರಾಟಗಾರ-ಪಾಕಿಸ್ತಾನಿ ಏಜೆಂಟ್ ಎಂದು ನಂಜು ಕಾರಿದ್ದಾರೆ. ದೊರೆಸ್ವಾಮಿಯವರು ಹಿರಿಯ ಸ್ವಾತಂತ್ರ ಹೋರಾಟಗಾರರು. ಈ ಇಳಿ ವಯಸ್ಸಿನಲ್ಲೂ ಭ್ರಷ್ಟಾಚಾರದ ವಿರುದ್ಧ, ಅನ್ಯಾಯಗಳ ವಿರುದ್ಧ ಹೋರಾಟ ನಡೆಸುತ್ತಿರುವವರು. ಜನಜಾಗೃತಿ ಉಂಟುಮಾಡುತ್ತ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವವರು. ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿರುವ ಈ ವಯೋವೃದ್ಧರು ಸಿಎಎ ಸೇರಿದಂತೆ ಮೋದಿಯವರ ಸಂವಿಧಾನ ವಿರೋಧಿ ನಿರ್ಧಾರಗಳ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದು ಬಿಜೆಪಿಯವರ ನಿದ್ದೆಗೆಡೆಸಿದ್ದರೆ, ಕೆಲವರ ತಲೆಕೆಡಸಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ದೊರೆಸ್ವಾಮಿಯವರು ಜನವಿರೋಧಿ ನೀತಿ ನಿರ್ಧಾರಗಳಾದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಳ ವಿರುದ್ಧ ಸಿಡಿದು ನಿಂತಿರುವ ನಿದರ್ಶನಗಳಿವೆ. ಅಪ್ಪಟ ಗಾಂಧಿ ಮಾರ್ಗದ ಹೋರಾಟಗಾರರ ಶೀಲಹರಣ ಮಾಡುವಂತಹ ಮಾತುಗಳು ಸ್ವಾತಂತ್ರ ಹೋರಾಟಗಾರರ ಸಮುದಾಯಕ್ಕೇ ಅಪಮಾನಮಾಡಿದಂತೆ.ಈ ಮಾತುಗಳು ಸ್ವಾತಂತ್ರ ಹೋರಾಟಗಾರರನ್ನು ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿ ಶೀಲ, ಸಚ್ಚಾರಿತ್ರಗಳನ್ನು ಬಯಸುವ ಲಕ್ಷಾಂತರ ಜನರಿಗೆ ನೋವುಂಟುಮಾಡಿದೆ. ಈ ಮಾತುಗಳನ್ನು ಖಂಡಿಸುವ ಬದಲು ಬಿಜೆಪಿಯ ಸಚಿವರೊಬ್ಬರು ದೊರೆಸ್ವಾಮಿಯವರಿಗೇ ಈ ವಯಸ್ಸಿನಲ್ಲಿ ನೀವು ಹೀಗೆ ಮಾಡಬಾರದು ಎಂದು ಬುದ್ಧಿ ಹೇಳಿರುವುದು ಆ ಪಕ್ಷದ ನಾಯಕರ ಸುಪ್ತಪ್ರಜ್ಞೆಯಲಿರುವ ದ್ವೇಷ ಮತ್ತು ಅಸಹನೆಗಳ ಸೂಚಿಯಾಗಿದೆ. ಮೋದಿ ಸರಕಾರ ವಿರೋಧಿಸುವವರೆಲ್ಲರೂ ರಾಷ್ಟ್ರದ್ರೋಹಿಗಳು, ಸಿಎಎ ವಿರೋಧಿಸುವ ಪ್ರತಿಭಟನಾಕಾರರನ್ನು ಕಂಡಲ್ಲಿ ಗುಂಡಿಟ್ಟು ಸಾಯಿಸಬೇಕು ಎಂದು ರಾಜ್ಯದ ಸಚಿವರು ಶಾಸಕರುಗಳಾದಿಯಾಗಿ ಕೆಲವರು ಅಪ್ಪಣೆ ಕೊಡಿಸಿದ್ದಾರೆ.

 ಇಂತಹ ಮಾತುಗಳ ಹಿಂದೆಲ್ಲ ಎರಡೂ ಕಡೆ ಪ್ರಕ್ಷುಬ್ಧ ಮನಸ್ಸುಗಳಿವೆ. ಪೌರತ್ವ ತಿದ್ದುಪಡಿ ಶಾಸನ ಸುಪ್ತವಾಗಿದ್ದ ದ್ವೇಷ, ಅಸಹನೆಗಳನ್ನು ಹೊರಕ್ಕೆಳೆದು ತಂದಿದೆ. ರಾಮಜನ್ಮಭೂಮಿ ವಿವಾದ ಕುರಿತ ಸುಪ್ರೀಂ ಕೋರ್ಟ್ ತೀರ್ಪಿಗೆ ಉಭಯತ್ರ ದೊರೆತ ಸ್ವಾಗತ ದೇಶದಲ್ಲಿ ವಾತಾವರಣ ತಿಳಿಯಾಗಿ ಕೋಮು ಸೌಹಾರ್ದ ಉಂಟಾಗಬಹುದೆಂಬ ಆಶಾಭಾವನೆ ಮೂಡಿಸಿತ್ತು.ಆದರೆ ಸಿಎಎನಿಂದಾಗಿ ಈ ಆಶಾ ಭಾವನೆ ನುಚ್ಚುನೂರಾಗಿದೆ. ಈ ತಿದ್ದುಪಡಿ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಪ್ರಜೆಗಳಾಗಿ ಕಾಣುವ ಹಿಂದೂ ರಾಷ್ಟ್ರದ ಹುನ್ನಾರವನ್ನು ಜಗಜ್ಜಾಹಿರಗೊಳಿಸಿದೆ. ಇದು ತಮ್ಮ ಉದ್ದೇಶವಲ್ಲ ಎನ್ನುವ ಬಿಜೆಪಿ ಮುಖಂಡರ ಮಾತುಗಳು ನಿಜವಾಗಿದ್ದಲ್ಲಿ ಸರಕಾರ ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಅವರ ಆತಂಕವನ್ನು ನಿವಾರಿಸಬಹುದಿತ್ತು. ಆದರೆ ಹಾಗಾಗಿಲ್ಲ. ಬದಲಿಗೆ ದ್ವೇಷಬಿತ್ತುವ, ಹಿಂಸೆ ಪ್ರಚೋದಿಸುವ ಭಾಷಣಗಳು ಬಿಜೆಪಿ ನಾಯಕರಿಂದ ಕೇಳಿಬರುತ್ತಿವೆ. ಸಚಿವರೊಬ್ಬರು ‘ಗೋಲಿಮಾರೋ’ಎಂದು ಹೇಳುತ್ತಾರೆ, ಮರುದಿನವೇ ಯುವಕನೊಬ್ಬ ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡುಹಾರಿಸುತ್ತಾನೆ. ದ್ವೇಷ ಪ್ರಚೋದನೆಯ ಮಾತುಗಳಿಂದ ದಿಲ್ಲಿಯ ಕೆಲವು ಭಾಗ ಹೊತ್ತಿ ಉರಿದು ನಲವತ್ತಕ್ಕೂ ಹೆಚ್ಚು ಅಮಾಯಕ ಜೀವಗಳು ಬಲಿಯಾಗಿವೆ. ಇನ್ನಾದರೂ ನಾಯಕರುಗಳಲ್ಲಿ ವಿವೇಕ ಮೂಡಬೇಕು. ಸಿಎಎ ಈಗ ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿದೆ. ದ್ವೇಷ, ಅಸಹನೆ, ದುಡುಕಿನ ಮಾತುಗಳಿಗೆ ಕಡಿವಾಣ ಹಾಕಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗಾಗಿ ಶಾಂತಿಯಿಂದ ಕಾಯುವ ತಾಳ್ಮೆ ಇಂದಿನ ಅಗತ್ಯವಾಗಿದೆ.

ಮಹಾಭಾರತದ ಅನುಶಾಸನ ಪರ್ವದಲ್ಲಿ ಯುಧಿಷ್ಠಿರನು, ಈ ಲೋಕದಲ್ಲಿ ಹಾಗೂ ಪರಲೋಕದಲ್ಲಿ ಸಂತೋಷವನ್ನು ಬಯಸುವ ವ್ಯಕ್ತಿ. ಅದನ್ನು ಪಡೆಯಲು ಹೇಗೆ ನಡೆದುಕೊಳ್ಳಬೇಕು? ಎಂದು ಪಿತಾಮಹ ಭೀಷ್ಮರನ್ನು ಕೇಳುತ್ತಾನೆ. ಅಂತಹ ವ್ಯಕ್ತಿಯು ಹತ್ತು ಬಗೆಯ ಕರ್ಮಗಳನ್ನು ತ್ಯಜಿಸಬೇಕು ಎಂದು ಉತ್ತರಿಸುವ ಭೀಷ್ಮರು, ಅವುಗಳಲ್ಲಿ ನಾಲ್ಕು ಮಾತಿಗೆ ಸಂಬಂಧಿಸಿದ್ದು ಎಂದು ಒತ್ತಿ ಹೇಳುತ್ತಾರೆ.

ಮಾತಿಗೆ ಸಂಬಂಧಿಸಿದ ನಾಲ್ಕು ಕರ್ಮಗಳು: ದುಷ್ಟ ಮಾತುಗಳನ್ನಾಡುವುದು, ಕಠೋರವಾದ ಪದಗಳನ್ನು ಬಳಸುವುದು, ಅನ್ಯರನ್ನು ದೂಷಿಸುವುದು ಮತ್ತು ಸುಳ್ಳು ಹೇಳುವುದು. ಇದನ್ನು ತ್ಯಜಿಸಬೇಕು, ಮಾತಿನ ಶಿಸ್ತು ಮತ್ತು ಮನಸ್ಸಿನ ಶಿಸ್ತು ಅತ್ಯಗತ್ಯವಾದುದು ಎಂದು ಭೀಷ್ಮರು ಉಪದೇಶಿಸುತ್ತಾರೆ. ಭೀಷ್ಮರ ಈ ಉಪದೇಶವನ್ನು ಪಕ್ಷಭೇದ ಮರೆತು ನಾವೆಲ್ಲರೂ ಅನುಸರಿಸುವುದು ಇಂದಿನ ಅಗತ್ಯವಾಗಿದೆ.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News