ಮೆಟ್ರೋ ರಾಜಕೀಯದಲ್ಲಿ ಖೆಡ್ಡಾಕ್ಕೆ ಬೀಳುತ್ತಿರುವುದು ಯಾರು?!

ಬಿಜೆಪಿ ಕಾರ್ಯಕರ್ತರು ಮೆಟ್ರೋ ನಿಲ್ದಾಣಗಳ ಮುಂದೆ ಕಾಂಗ್ರೆಸ್ ಅನ್ನು ದೂಷಿಸುತ್ತಾ ಪ್ರತಿಭಟಿಸುತ್ತಾ ಇರುವುದಾಗಲಿ, ಮೆಟ್ರೋ ಅಧಿಕಾರಿಗಳನ್ನು ಭೇಟಿಯಾಗಿ ದರ ಕಡಿಮೆ ಮಾಡುವಂತೆ ಮನವಿ ಸಲ್ಲಿಸುತ್ತಾ ಇರುವುದಾಗಲಿ, ಬಿಜೆಪಿ ಸಂಸದರು ಮೇಲಿಂದ ಮೇಲೆ ಟ್ವೀಟ್ ಮಾಡುತ್ತಾ ಇರುವುದಾಗಲಿ, ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ಈ ಕುರಿತು ಮಾತಾಡಿ ಒತ್ತಾಯಿಸಿರುವುದಾಗಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ, ಶೀಘ್ರದಲ್ಲೇ ದರ ಏರಿಕೆಗೆ ಕಡಿವಾಣ ಬಿದ್ದು, ಅದರ ಕ್ರೆಡಿಟ್ ಬಿಜೆಪಿಗರಿಗೆ ಲಭಿಸುವ ಸಾಧ್ಯತೆಯೇ ಹೆಚ್ಚು. ಇಲ್ಲಿ ಬಿಜೆಪಿ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಉರುಳಿಸುವ ಲೆಕ್ಕಾಚಾರ ಹಾಕಿಕೊಂಡಂತಿದೆ.;

Update: 2025-02-13 11:55 IST
ಮೆಟ್ರೋ ರಾಜಕೀಯದಲ್ಲಿ ಖೆಡ್ಡಾಕ್ಕೆ ಬೀಳುತ್ತಿರುವುದು ಯಾರು?!
  • whatsapp icon

ಬೆಂಗಳೂರು ಮೆಟ್ರೋ ದರವನ್ನು ಅಂಧಾದುಂಧಿಯಾಗಿ ಏರಿಸಿರುವುದರ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ; ಜೊತೆಗೆ, ರಾಜಕೀಯ ಕೆಸರೆರಚಾಟವೂ ನಡೆಯುತ್ತಿದೆ. ಬಿಜೆಪಿ ನಾಯಕರು ದರ ಏರಿಕೆಗೆ ರಾಜ್ಯ ಕಾಂಗ್ರೆಸ್ ಸರಕಾರವನ್ನು ಹೊಣೆ ಮಾಡಿ ಟೀಕಿಸುತ್ತಿದ್ದರೆ, ಅತ್ತ ಕಾಂಗ್ರೆಸ್ ನಾಯಕರು ದರ ಏರಿಕೆಯಲ್ಲಿ ನಮ್ಮ ಪಾತ್ರವಿಲ್ಲ; ಅದು ಕೇಂದ್ರ ಸರಕಾರದ ನಿರ್ಣಯ, ಬಿಜೆಪಿಯೇ ಹೊಣೆ ಎಂದು ಕೈತೊಳೆದುಕೊಳ್ಳುವ ಯತ್ನದಲ್ಲಿದ್ದಾರೆ.

ಕಾಂಗ್ರೆಸ್ ನಾಯಕರು ಹೇಳುತ್ತಿರುವುದರಲ್ಲಿ ಸತ್ಯಾಂಶವಿದೆ. ಮೆಟ್ರೋ ದರ ನಿಗದಿ ಮಾಡಲು ಸಮಿತಿಯನ್ನು ರಚಿಸುವ ಅಧಿಕಾರ ಇರುವುದು ಕೇಂದ್ರ ಸರಕಾರಕ್ಕೆ. 2024ರ ಸೆಪ್ಟಂಬರ್ 7ನೇ ತಾರೀಕು ಕೇಂದ್ರ ಸರಕಾರ ದರ ನಿಗದಿ ಸಮಿತಿ ರಚನೆ ಮಾಡುವಂತೆ ಮೆಟ್ರೋಗೆ ಪತ್ರ ಬರೆದು ಆದೇಶಿಸಿತ್ತು. ಆ ಸಮಿತಿಯ ಶಿಫಾರಸಿನ ಅನ್ವಯವೇ ಈಗ ದರ ಹೆಚ್ಚಳ ಮಾಡಲಾಗಿದೆ. ಆ ಸಮಿತಿಗೆ ಅಧ್ಯಕ್ಷರಾಗಿರುವುದು ಕೂಡಾ ಕೇಂದ್ರ ಸರಕಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ. ರಾಜ್ಯ ಸರಕಾರ ಈ ಸಮಿತಿಗೆ ಒಬ್ಬರು ಪ್ರತಿನಿಧಿಯನ್ನು ಕಳಿಸುವ ಅವಕಾಶವಿದೆಯಾದರೂ, ಅವರ ಅಭಿಪ್ರಾಯಕ್ಕೆ ಹೆಚ್ಚಿನ ಆದ್ಯತೆ ಇರುವುದಿಲ್ಲ. ಹಾಗಾಗಿ ಮೆಟ್ರೋ ದರ ಏರಿಕೆಯ ಅಧಿಕಾರ ಹೆಚ್ಚಾಗಿ ಕೇಂದ್ರ ಸರಕಾರದ ಕೈಯಲ್ಲೇ ಇರುತ್ತದೆ. ಜನವರಿ 27ರಂದು ಮಾಧ್ಯಮಗಳ ಮುಂದೆ ಬಿಜೆಪಿ ಸಂಸದ ಪಿ.ಸಿ. ಮೋಹನ್, ‘‘ಮೆಟ್ರೊ ದರ ಹೆಚ್ಚಿಗೆ ಮಾಡದಂತೆ ನಾನು ಕೇಂದ್ರ ರೈಲ್ವೆ ಸಚಿವಾಲಯದ ಮೇಲೆ ಒತ್ತಡ ತಂದಿದ್ದೇನೆ’’ ಎಂದು ನೀಡಿದ್ದ ಹೇಳಿಕೆಯೇ ಇದಕ್ಕೆ ಸಾಕ್ಷಿ. ಅಲ್ಲದೆ, ಫೆಬ್ರವರಿ 1ರಿಂದಲೇ ಜಾರಿಗೆ ಬರಬೇಕಿದ್ದ ಈ ಹೆಚ್ಚಳವನ್ನು ದಿಲ್ಲಿ ಚುನಾವಣೆಯ ಕಾರಣಕ್ಕೆ ತಾತ್ಕಾಲಿಕವಾಗಿ ಕೇಂದ್ರ ಸರಕಾರ ತಡೆ ಹಿಡಿದಾಗ, ಅದೇ ಪಿ.ಸಿ. ಮೋಹನ್ ‘ಬೆಂಗಳೂರಿನ ಜನರ ಮನವಿಗೆ ಓಗೊಟ್ಟ ಮೋದಿ ಸರಕಾರ ದರ ಏರಿಕೆಗೆ ತಡೆ ನೀಡಿದೆ’ ಎಂದು ಟ್ವೀಟ್ ಮಾಡಿ ಕ್ರೆಡಿಟನ್ನು ಮೋದಿಗೆ ರವಾನಿಸಿದ್ದರು. ಅಂದರೆ ಮೆಟ್ರೋ ದರ ನಿಗದಿಯ ನಿಯಂತ್ರಣ ಯಾರ ಕೈಯಲ್ಲಿದೆ ಅನ್ನುವುದು ಇಲ್ಲಿ ಸಾಬೀತಾಗುತ್ತದೆ.

ಆದರೆ, ವಿಚಾರ ಅದಲ್ಲ.

ಕಾಂಗ್ರೆಸ್ ನಾಯಕರನ್ನು ಖೆಡ್ಡಾಕ್ಕೆ ಕೆಡವುದಕ್ಕೆಂದೇ ಮೆಟ್ರೋ ದರ ಹೆಚ್ಚಳದ ಎಪಿಸೋಡನ್ನು ಬಿಜೆಪಿ ಹೆಣೆದಂತಿದೆ. ಸ್ವತಃ ಬಿಜೆಪಿಯೇ ಹೆಚ್ಚಳ ಮಾಡಿರುವ ದರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ತೋರುತ್ತಿರುವ ರಣೋತ್ಸಾಹವನ್ನು ನೋಡಿದಾಗ ಇಂತಹ ಅನುಮಾನ ಮೂಡುತ್ತದೆ. ಬಿಜೆಪಿ ಕಾರ್ಯಕರ್ತರು ಮೆಟ್ರೋ ನಿಲ್ದಾಣಗಳ ಮುಂದೆ ಕಾಂಗ್ರೆಸ್ ಅನ್ನು ದೂಷಿಸುತ್ತಾ ಪ್ರತಿಭಟಿಸುತ್ತಾ ಇರುವುದಾಗಲಿ, ಮೆಟ್ರೋ ಅಧಿಕಾರಿಗಳನ್ನು ಭೇಟಿಯಾಗಿ ದರ ಕಡಿಮೆ ಮಾಡುವಂತೆ ಮನವಿ ಸಲ್ಲಿಸುತ್ತಾ ಇರುವುದಾಗಲಿ, ಬಿಜೆಪಿ ಸಂಸದರು ಮೇಲಿಂದ ಮೇಲೆ ಟ್ವೀಟ್ ಮಾಡುತ್ತಾ ಇರುವುದಾಗಲಿ, ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ಈ ಕುರಿತು ಮಾತಾಡಿ ಒತ್ತಾಯಿಸಿರುವುದಾಗಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ, ಶೀಘ್ರದಲ್ಲೇ ದರ ಏರಿಕೆಗೆ ಕಡಿವಾಣ ಬಿದ್ದು, ಅದರ ಕ್ರೆಡಿಟ್ ಬಿಜೆಪಿಗರಿಗೆ ಲಭಿಸುವ ಸಾಧ್ಯತೆಯೇ ಹೆಚ್ಚು. ಇಲ್ಲಿ ಬಿಜೆಪಿ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಉರುಳಿಸುವ ಲೆಕ್ಕಾಚಾರ ಹಾಕಿಕೊಂಡಂತಿದೆ.

ಮೊದಲನೆಯದಾಗಿ, ದರ ಹೆಚ್ಚು ಮಾಡಿರುವುದಕ್ಕೆ ಕಾಂಗ್ರೆಸ್ ಸರಕಾರವನ್ನು ಟೀಕಿಸಿ, ಜನರನ್ನು ರಾಜ್ಯಸರಕಾರದ ವಿರುದ್ಧ ಎತ್ತಿಕಟ್ಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಜನರಿಗೆ ದರ ಏರಿಕೆಯ ಫ್ಯಾಕ್ಟ್ ಅರ್ಥವಾಗುವ ಮುನ್ನವೇ ಅದರ ವಿರುದ್ಧ ಹೋರಾಟ ಮಾಡಿ, ಬಿಜೆಪಿ ಜನರ ವಿಶ್ವಾಸ ಗಳಿಸಿಕೊಳ್ಳುತ್ತಿದೆ. ಜನರಿಗೆ ದರ ಹೆಚ್ಚು ಮಾಡಿದ್ದು ಯಾರು ಅನ್ನುವುದಕ್ಕಿಂತ, ತಮ್ಮ ಕಷ್ಟಕ್ಕೆ ಧ್ವನಿಯಾಗಿ ಸ್ಪಂದಿಸುತ್ತಿರುವುದು ಯಾರು ಅನ್ನುವುದು ಮಾತ್ರ ಸುಲಭವಾಗಿ ಕಾಣಿಸುತ್ತದೆ. ಈಗ ಜನರ ಪರವಾಗಿ ಬಿಜೆಪಿ ಹೋರಾಡುತ್ತಿದೆ, ಅದಷ್ಟೆ ವಿಸಿಬಲ್ ರಿಯಾಲಿಟಿ!

ಎರಡನೆಯದಾಗಿ, ಕಾಂಗ್ರೆಸ್ ಪಕ್ಷವು ದರ ಹೆಚ್ಚಳ ಮಾಡಿದ್ದು ನಾವಲ್ಲ, ಮೋದಿ ಸರಕಾರ ಎಂಬ ವಾಸ್ತವವನ್ನು ಜನರ ಮುಂದಿಡುವ ಫ್ಯಾಕ್ಟ್ ಚೆಕ್ಕಿಂಗ್ ಏಜೆನ್ಸಿಯ ಕೆಲಸ ಮಾಡುತ್ತಿದೆಯೇ ಹೊರತು ಒಂದು ರಾಜಕೀಯ ಪಕ್ಷವಾಗಿ ಮತ್ತು ಅಧಿಕಾರ ಹಿಡಿದಿರುವ ಸರಕಾರವಾಗಿ ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಆಯ್ಕೆಗಳನ್ನು ಅದು ಯೋಚಿಸುತ್ತಿಲ್ಲ. ಉದಾಹರಣೆಗೆ, ದರ ಏರಿಕೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾರಣ ಎಂದು ಕಾಂಗ್ರೆಸ್ ನಾಯಕರು ಅಷ್ಟು ದೃಢವಾಗಿ ಹೇಳುತ್ತಿದ್ದಾರೆ. ಹಾಗಿದ್ದ ಮೇಲೆ, ಬಿಜೆಪಿಯವರಂತೆ ತಮ್ಮ ಪಕ್ಷದ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಅದು ಬೀದಿಗಿಳಿದು ಪ್ರತಿಭಟಿಸುವ ಕೌಂಟರ್ ಯತ್ನ ಮಾಡಬೇಕಿತ್ತು. ಕೇವಲ ಹೇಳಿಕೆಗಳು ಜನರನ್ನು ತಾಕುವುದಿಲ್ಲ. ಕಡೇಪಕ್ಷ, ಒಂದು ಸರಕಾರವಾಗಿ ಕೇಂದ್ರಕ್ಕೆ ಪತ್ರ ಬರೆದು ದರ ಏರಿಕೆಯ ಪ್ರಮಾಣವನ್ನು ತಗ್ಗಿಸುವಂತೆ ಡಿಪ್ಲೊಮ್ಯಾಟಿಕ್ ಯತ್ನವನ್ನಾದರೂ ಅದು ಮಾಡಬೇಕಿತ್ತು. ಆಗ ಜನರಿಗೆ ದರ ಏರಿಕೆಯಲ್ಲಿ ಕಾಂಗ್ರೆಸ್ ಪಾತ್ರವಿಲ್ಲ ಎಂಬ ನಂಬಿಕೆ ಹುಟ್ಟುತ್ತಿತ್ತು. ಆದರೆ ಕಾಂಗ್ರೆಸ್ ನಾಯಕರು ಒಣ ದೂಷಣೆಗಷ್ಟೇ ತಮ್ಮನ್ನು ಸೀಮಿತವಾಗಿಸಿಕೊಂಡಿದ್ದಾರೆ. ಕಾರ್ಯರೂಪ ಯತ್ನಗಳಿಲ್ಲದೆ, ಕೇವಲ ಬಾಯಿಮಾತಿನ ಹೇಳಿಕೆ ಮೂಲಕ ಮೋದಿ ಸರಕಾರವನ್ನು ಹೊಣೆಗಾರನನ್ನಾಗಿಸುವ ಕಾಂಗ್ರೆಸ್ ನಾಯಕರ ಹೇಳಿಕೆಗಳು ಮುಂದೆ ಅವರಿಗೇ ದುಬಾರಿಯಾಗಲಿವೆ.

ಹೇಗೆಂಬುದನ್ನು ಈ ಮೂರನೇ ಸಂಗತಿ ವಿವರಿಸುತ್ತದೆ. ದರ ಹೆಚ್ಚಳ ಎನ್ನುವುದು ಯಾವತ್ತಿದ್ದರೂ ಒಂದು ಪೊಲಿಟಿಕಲ್ ಟೂಲ್. ಅದನ್ನು ಯಾರು ಪರಿಣಾಮಕಾರಿಯಾಗಿ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಅದರ ರಾಜಕೀಯ ಲಾಭಗಳು ನಿರ್ಧಾರವಾಗುತ್ತವೆ. ಸಾಮಾನ್ಯವಾಗಿ ಬೆಲೆ ಹೆಚ್ಚಳವು ಅಧಿಕಾರರೂಢ ಪಕ್ಷಗಳಿಗೆ ದುಬಾರಿಯೆನಿಸುತ್ತವೆ. ಆದರೆ 2014ರಿಂದೀಚೆಗೆ ಬಿಜೆಪಿ ಅಧಿಕಾರಕ್ಕೇರಿದ ನಂತರದಲ್ಲಿ, ಎಲ್ಲಾ ವಿಚಾರದಂತೆ ಬೆಲೆಯೇರಿಕೆಯನ್ನೂ ರಾಷ್ಟ್ರದ ಪ್ರಗತಿಗೆ ಕೊಡುಗೆಯ ತ್ಯಾಗದ ರೂಪದಲ್ಲಿ ಅಪವ್ಯಾಖ್ಯಾನಿಸಲಾಗುತ್ತಿದೆ ಅಥವಾ ಹಿಂದಿನವರಿಗೆ ಥಳಕು ಹಾಕಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು ಮೋದಿಯವರು ಜನರಿಂದ ತ್ಯಾಗ ಮಾಡಿಸಿದ್ದು ಮತ್ತು ತೈಲ ಬೆಲೆಯೇರಿಕೆಗೆ ಯುಪಿಎ ಕಾಲದ ಆಯಿಲ್ ಬಾಂಡ್‌ಗಳನ್ನು ಎಳೆತಂದು ದಿಕ್ಕುತಪ್ಪಿಸಲು ಯತ್ನಿಸಿದ್ದು ಇಂತಹದ್ದಕ್ಕೆ ಉದಾಹರಣೆ. ಸಾರಾಂಶದಲ್ಲಿ ಹೇಳಬೇಕೆಂದರೆ ಈ ಬೆಲೆಯೇರಿಕೆ ಪೊಲಿಟಿಕ್ಸ್ ಅನ್ನು ಬಿಜೆಪಿ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಅದನ್ನೇ ಈಗ ಬೆಂಗಳೂರು ಮೆಟ್ರೋ ದರ ಹೆಚ್ಚಳದಲ್ಲಿ ಅನ್ವಯಿಸಲು ಮುಂದಾಗಿರಬಹುದು.

ಮೆಟ್ರೋ ಟಿಕೆಟ್ ದರಗಳನ್ನು ಶೇ. 45 ಹೆಚ್ಚಳ ಮಾಡಿರುವುದಾಗಿ ಮೆಟ್ರೋ ಮಂಡಳಿ ಹೇಳಿದ್ದರೂ, ಕೆಲವೆಡೆ ದರಗಳು ಹೆಚ್ಚೂಕಮ್ಮಿ ದುಪ್ಪಟ್ಟಾಗಿವೆ. ಅಜಮಾಸು ಶೇ. 70-80 ಹೆಚ್ಚಳವಾಗಿದೆ. ಅರ್ಥಾತ್ ಉದ್ದೇಶಿತ ದರಕ್ಕಿಂತ ಹೆಚ್ಚು ಏರಿಕೆ ಮಾಡಿರುವುದು ಅರ್ಥವಾಗುತ್ತದೆ. ಇಂತಹ ಸಂದರ್ಭದಲ್ಲಿ ಜನ ಸಿಟ್ಟಿಗೇಳುವುದು ಸಹಜ. ಆ ಸಿಟ್ಟನ್ನು ಕಾಂಗ್ರೆಸ್ ಸರಕಾರದ ಕಡೆಗೆ ತಿರುಗಿಸಲು ಬಿಜೆಪಿ ಯತ್ನಿಸುತ್ತದೆ. ಸಹಜವಾಗಿಯೇ ಕಾಂಗ್ರೆಸ್ ಅದರಿಂದ ಬಚಾವಾಗಲು, ಇದರ ಹೊಣೆಯನ್ನು ಮೋದಿ ಸರಕಾರದ ಹೆಗಲಿಗೆ ವರ್ಗಾಯಿಸಲು ಯತ್ನಿಸುತ್ತದೆ. ತಮ್ಮದೇ ಸರಕಾರ ಏರಿಸಿರುವ ದರದ ವಿರುದ್ಧ ಬಿಜೆಪಿ ನಾಯಕರು ಬೀದಿಯಲ್ಲಿ, ಸಂಸತ್ತಿನಲ್ಲಿ ಹೋರಾಟ ಮಾಡಿ ಜನರ ವಿಶ್ವಾಸ ಗಳಿಸುತ್ತಾರೆ. ಈಗ ಆಗುತ್ತಾ ಇರುವುದು ಇದೇ! ಈ ಹಂತದಲ್ಲಿ ಇದ್ದಕ್ಕಿದ್ದಂತೆ ಬೆಲೆ ಹೆಚ್ಚಳವನ್ನು ಅರ್ಧದಷ್ಟು ಕಡಿಮೆ ಮಾಡುವ (ಅಂದರೆ ಉದ್ದೇಶಿತ ಶೇ.45 ಹೆಚ್ಚಳಕ್ಕೆ ಸೀಮಿತಗೊಳಿಸಿ) ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಂಡಿತು ಎಂದಿಟ್ಟುಕೊಳ್ಳಿ, ಕ್ರೆಡಿಟ್ ಯಾರಿಗೆ? ಮತ್ತೆ ಮೋದಿಗೆ, ಬಿಜೆಪಿಗೆ!!

ಹೇಗೂ, ಒಣ ಹೇಳಿಕೆಗಳ ಹೊರತು ಕಾಂಗ್ರೆಸ್ ಈ ವಿಚಾರದಲ್ಲಿ ಯಾವೊಂದು ಯತ್ನಕ್ಕೂ ಮುಂದಾಗಿಲ್ಲ. ಸಾಲದ್ದಕ್ಕೆ ದರ ಹೆಚ್ಚಳದ ನಿಯಂತ್ರಣ ಇರುವುದು ಮೋದಿ ಸರಕಾರದ ಬಳಿ ಎಂದು ವಾಸ್ತವವನ್ನು ಗಟ್ಟಿಯಾಗಿ ಜನರ ಮನಸ್ಸಲ್ಲಿ ಮೂಡಿಸಿದೆ. ಬೆಲೆ ಕಡಿಮೆ ಮಾಡಲು ಹೋರಾಡಿದ ರಾಜ್ಯ ಬಿಜೆಪಿ ಸಂಸದರು, ಬೆಲೆಯನ್ನು ಕಡಿಮೆ ಮಾಡಿದ ಮೋದಿ ಇಲ್ಲಿ ಹೀರೋಗಳಾಗಿ ಹೊರಹೊಮ್ಮುತ್ತಾರೆ. ಅದೇ ಸಮಯದಲ್ಲಿ, ಜನರ ಪ್ರೀತಿಯ ಜೊತೆಗೆ ಉದ್ದೇಶಿತ ದರವನ್ನು ಹೆಚ್ಚಿಸಿಕೊಂಡ ತಂತ್ರವೂ ಫಲಿಸುತ್ತದೆ.

ಇಷ್ಟೆಲ್ಲ ಲೆಕ್ಕಾಚಾರವಿಲ್ಲದೆ ಹೋಗಿದ್ದರೆ, ಮೋದಿ ಸರಕಾರದ ವಿರುದ್ಧ ಸಂಸತ್ತಿನಲ್ಲಿ ಮಾತಾಡುವ ಧೈರ್ಯ ತೇಜಸ್ವಿ ಸೂರ್ಯನಂತಹ ಒಬ್ಬ ಸಾಧಾರಣ ಬಿಜೆಪಿ ಸಂಸದನಿಗೆ ಎಲ್ಲಿಂದ ಬರುತ್ತದೆ? ಸಂಸತ್ತಿನಲ್ಲಿ ಅಂತಹ ಅವಕಾಶ ಸೂರ್ಯನಿಗೆ ಒದಗುವ ಸಾಧ್ಯತೆಯಾದರೂ ಎಲ್ಲಿತ್ತು? ಇವತ್ತಲ್ಲ ನಾಳೆ ಸತ್ಯ ಜನರಿಗೆ ಅರ್ಥವಾಗಿ, ತಮಗೇ ಸುತ್ತಿಕೊಳ್ಳುವ ಸಾಧ್ಯತೆಯಿರುವ ದರ ಹೆಚ್ಚಳದ ವಿರುದ್ಧ ಬಿಜೆಪಿ ಇಷ್ಟು ಸಂಘಟಿತವಾಗಿ ಪ್ರತಿಭಟಿಸಲು ಹೇಗೆ ಸಾಧ್ಯವಿತ್ತು?

ಮೆಟ್ರೋ ದರ ಏರಿಕೆ ಎನ್ನುವುದು ಜನ ಮತ್ತು ಕಾಂಗ್ರೆಸಿಗರಿಗೆ ಒಟ್ಟಿಗೆ ಬಿಜೆಪಿ ತೋಡಿದ ಖೆಡ್ಡಾ ಎಂಬ ಅನುಮಾನ ಹುಟ್ಟಿಸುತ್ತಿರುವುದೇ ಇಂತಹ ಪ್ರಶ್ನೆಗಳು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಾಚಯ್ಯ ಎಂ. ಹಿಪ್ಪರಗಿ

contributor

Similar News