ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರ ಆರೋಗ್ಯಲಾಭಗಳಿವು…
ಎಲ್ಲ ಜೀವಿಗಳಿಗೂ ಬದುಕುಳಿಯಲು ನೀರು ಅತ್ಯಗತ್ಯವಾಗಿದೆ. ದಾಹವನ್ನು ತಣಿಸುವ ಜೊತೆಗೆ ನೀರು ನಮ್ಮ ಶರೀರದ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ನಮ್ಮ ಶರೀರಕ್ಕೆ ಹಲವಾರು ಆರೋಗ್ಯ ಲಾಭಗಳು ದೊರೆಯುತ್ತವೆ ಎನ್ನುವುದು ನಿಮಗೆ ಗೊತ್ತೇ?
ಬೆಳಿಗ್ಗೆ ನಾವು ನಿದ್ರೆಯಿಂದ ಎದ್ದಾಗ ದ್ರವಾಂಶದ ಕೊರತೆಯಿರುವುದರಿಂದ ಶರೀರಕ್ಕೆ ನೀರು ಅಗತ್ಯವಾಗಿರುತ್ತದೆ. ನಾವು ರಾತ್ರಿ ನಿದ್ರಿಸಿದಾಗ ಆರರಿಂದ ಎಂಟು ಗಂಟೆಗಳ ಶರೀರಕ್ಕೆ ನೀರು ಲಭಿಸುವುದಿಲ್ಲ, ಹೀಗಾಗಿ ಬೆಳಿಗ್ಗೆ ಎದ್ದ ಬಳಿಕ ಒಂದು ಗ್ಲಾಸ್ ನೀರಿನ ಸೇವನೆಯು ಶರೀರಕ್ಕೆ ಅಗತ್ಯವಾದ ದ್ರವಾಂಶವನ್ನು ಒದಗಿಸಲು ತ್ವರಿತ ಮಾರ್ಗವಾಗಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರ ಆರೋಗ್ಯ ಲಾಭಗಳು ಹೀಗಿವೆ....
►ದೇಹತೂಕವನ್ನು ತಗ್ಗಿಸಲು ನೆರವಾಗುತ್ತದೆ
ನೀರು ಮತ್ತು ದೇಹತೂಕ ಇಳಿಕೆಯ ನಡುವಿನ ನಂಟಿಗೆ ನೀರಿನ ಥರ್ಮೊಜೆನಿಕ್ ಪರಿಣಾಮವು ಕಾರಣವಾಗಿದೆ,ಅಂದರೆ ನಾವು ನೀರನ್ನು ಸೇವಿಸಿದ ಬಳಿಕ ಜೀರ್ಣಾಂಗದಲ್ಲಿ ಅದನ್ನು ಬಿಸಿಯಾಗಿಸಲು ಶರೀರವು ಶಕ್ತಿಯನ್ನು ವ್ಯಯಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಚಯಾಪಚಯ ಪ್ರಕ್ರಿಯೆಯು ವೇಗಗೊಳ್ಳುತ್ತದೆ ಮತ್ತು ಶರೀರದ ತೂಕ ಇಳಿಯಲು ನರವಾಗುತ್ತದೆ.
►ಶರೀರದಲ್ಲಿಯ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ
ಬೆಳಿಗ್ಗೆ ನೀರು ಸೇವಿಸುವುದರಿಂದ ನಮ್ಮ ಶರೀರದಲ್ಲಿಯ ವಿಷಕಾರಿ ಅಂಶಗಳು ಹೊರಹಾಕಲ್ಪಡುತ್ತವೆ. ರಕ್ತದಲ್ಲಿಯ ತ್ಯಾಜ್ಯಗಳನ್ನು ಸೋಸಲು ಮತ್ತು ಮೂತ್ರದ ರೂಪದಲ್ಲಿ ಅವನ್ನು ಹೊರಹಾಕಲು ಮೂತ್ರಪಿಂಡಗಳಿಗೆ ನೀರು ಅಗತ್ಯವಾಗಿದೆ.
►ಕರುಳನ್ನು ಸ್ವಚ್ಛಗೊಳಿಸುತ್ತದೆ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸೇವನೆಯು ಕರುಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಅದು ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಜೊತೆಗೆ ಜೀರ್ಣಾಂಗದ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳು ತಡೆಯಲ್ಪಡುತ್ತವೆ.
►ಕ್ಯಾಲರಿ ಸೇವನೆಯನ್ನು ತಗ್ಗಿಸುತ್ತದೆ
ಬೆಳಿಗ್ಗೆ ಬ್ರೇಕ್‌ಫಾಸ್ಟ್‌ಗೆ ಮುನ್ನ ನೀರನ್ನು ಸೇವಿಸುವುದರಿಂದ ಆಹಾರ ಸೇವನೆ ಸಂದರ್ಭ ಹೊಟ್ಟೆ ತುಂಬಿದಂತಾಗಿರುವುದರಿಂದ ಶರೀರವನ್ನು ಸೇರುವ ಕ್ಯಾಲರಿಗಳ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಬ್ರೇಕ್‌ಫಾಸ್ಟ್‌ಗೆ ಕನಿಷ್ಠ 30 ನಿಮಿಷಗಳ ಮೊದಲು ನೀರು ಕುಡಿಯಬೇಕು.
►ಮಾನಸಿಕವಾಗಿ ಚುರುಕುಗೊಳಿಸುತ್ತದೆ
ಬೆಳಿಗ್ಗೆ ಎದ್ದ ಬಳಿಕ ನೀರು ಕುಡಿಯುವುದರಿಂದ ಮಾನಸಿಕ ಸ್ಥಿತಿ ಉತ್ತಮಗೊಳ್ಳುತ್ತದೆ.
►ಜೀರ್ಣಕಾರ್ಯಕ್ಕೆ ನೆರವಾಗುತ್ತದೆ
ಬೆಳಿಗ್ಗೆ ಬೆಚ್ಚಗಿನ ನೀರಿನ ಸೇವನೆಯು ಆಹಾರವನ್ನು ವಿಭಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ,ತನ್ಮೂಲಕ ಜೀರ್ಣ ಕಾರ್ಯದಲ್ಲಿ ನೆರವಾಗುತ್ತದೆ.
►ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ
ಖಾಲಿಹೊಟ್ಟೆಯಲ್ಲಿ ನೀರಿನ ಸೇವನೆಯು ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುವ ಮೂಲಕ ಶರೀರದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕುಗಳು ಅಥವಾ ಅನಾರೋಗ್ಯವನ್ನುಂಟು ಮಾಡುವ ತ್ಯಾಜ್ಯ ಉತ್ಪನ್ನಗಳು ಮತ್ತು ಇತರ ಬ್ಯಾಕ್ಟೀರಿಯಾಗಳನ್ನು ನೀರು ನೈಸರ್ಗಿಕವಾಗಿ ನಿರ್ಮೂಲನಗೊಳಿಸುತ್ತದೆ.
►ತಲೆನೋವನ್ನು ತಡೆಯುತ್ತದೆ
ನಿರ್ಜಲೀಕರಣವು ತಲೆನೋವು ಅಥವಾ ಮೈಗ್ರೇನ್‌ಗೆ ಕಾರಣವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಶರೀರಕ್ಕೆ ಅಗತ್ಯವಾದ ದ್ರವಾಂಶ ದೊರೆಯುತ್ತದೆ ಮತ್ತು ತಲೆನೋವಿನಿಂದ ಶಮನ ನೀಡುತ್ತದೆ.
►ಆಂತರಿಕ ಅಂಗಗಳನ್ನು ಆರೋಗ್ಯಯುತವಾಗಿರಿಸುತ್ತದೆ
ಖಾಲಿ ಹೊಟ್ಟೆಯಲ್ಲಿ ನೀರಿನ ಸೇವನೆಯು ಶರೀರದ ಆಂತರಿಕ ಅಂಗಗಳ ಸಮರ್ಪಕ ಕಾರ್ಯ ನಿರ್ವಹಣೆಯಲ್ಲಿ ನೆರವಾಗುತ್ತದೆ. ಇದರಿಂದಾಗಿ ಶರೀರದಲ್ಲಿ ದ್ರವಗಳ ಸಮತೋಲನ ಕಾಯ್ದುಕೊಳ್ಳಲ್ಪಡುತ್ತದೆ ಮತ್ತು ದುಗ್ಧರಸ ವ್ಯವಸೆಯು ಸುಸ್ಥಿತಿಯಲ್ಲಿರುತ್ತದೆ.
►ಚರ್ಮವನ್ನು ಸುಂದರಗೊಳಿಸುತ್ತದೆ
ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಮೊಡವೆಗಳ ಸಮಸ್ಯೆ ಕಡಿಮೆ ಯಾಗುತ್ತದೆ ಮತ್ತು ಚರ್ಮದ ಕಲೆಗಳು ನಿವಾರಣೆಯಾಗುತ್ತವೆ. ಚರ್ಮದ ಶುಷ್ಕತೆ ಕಡಿಮೆಯಾಗಿ ಆರ್ದ್ರತೆ ಹೆಚ್ಚುತ್ತದೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುವ ಮೂಲಕ ಅದನ್ನು ಸುಂದರವಾಗಿಸುತ್ತದೆ.
►ಶಕ್ತಿಯನ್ನು ಹೆಚ್ಚಿಸುತ್ತದೆ
ಬೆಳಿಗ್ಗೆ ಶರೀರದಲ್ಲಿ ದ್ರವಾಂಶ ಕಡಿಮೆಯಾಗಿರುವುದರಿಂದ ಬಳಲಿಕೆಯುಂಟಾಗುತ್ತದೆ. ನೀರು ಸೇವಿಸುವದರಿಂದ ಶಕ್ತಿಯ ಮಟ್ಟವು ತಕ್ಷಣಕ್ಕೆ ಹೆಚ್ಚುತ್ತದೆ ಮತ್ತು ಉತ್ಸಾಹಿತರ ನ್ನಾಗಿಸುತ್ತದೆ.