ಒಣಕೆಮ್ಮಿನಿಂದ ಸುಸ್ತಾಗಿದ್ದೀರಾ? ಈ ಮನೆಮದ್ದುಗಳನ್ನು ಬಳಸಿ ನೋಡಿ

Update: 2020-03-10 10:43 GMT

ಸಣ್ಣಗೆ ಕೆಮ್ಮು ಆರಂಭವಾದರೂ ನಮ್ಮ ದಿನಚರಿ ವ್ಯತ್ಯಯಗೊಳ್ಳುತ್ತದೆ,ಇದಕ್ಕೆ ವಾಯುಮಾಲಿನ್ಯವೊಂದೇ ಕಾರಣವಲ್ಲ. ಶ್ವಾಸನಾಳ ಸೋಂಕುಗಳು,ನ್ಯುಮೋನಿಯಾ,ಉರಿಯೂತ ಮತ್ತು ಸೈನಸೈಟಿಸ್ ಇವು ಒಣಕೆಮ್ಮಿಗೆ ಇತರ ಪ್ರಮುಖ ಕಾರಣಗಳಾಗಿವೆ. ಧೂಳು,ಅಲರ್ಜಿ ಮತ್ತು ವಾಯುವಿನಲ್ಲಿರುವ ಮಾಲಿನ್ಯಕಾರಕಗಳೂ ಒಣಕೆಮ್ಮನ್ನುಂಟು ಮಾಡುತ್ತವೆ. ಒಣಕೆಮ್ಮು ಶ್ವಾಸಕೋಶಗಳಲ್ಲಿಯ ಲೋಳೆ ಅಥವಾ ಕಫವನ್ನು ಹೊರಗೆ ಹಾಕಲು ಶರೀರವು ಅಸಮರ್ಥವಾಗುವ ಸ್ಥಿತಿಯಾಗಿದೆ. ಒಣಕೆಮ್ಮು ವಾರಗಟ್ಟಲೆ ಕಾಡಬಹುದು ಮತ್ತು ಶೀತ ಅಥವಾ ಫ್ಲೂ ಆಗಿಯೂ ಪರಿವರ್ತನೆಗೊಳ್ಳಬಹುದು. ನಿರಂತರ ಕೆಮ್ಮು ಗಂಟಲಿನ ಕಿರಿಕಿರಿಯನ್ನುಂಟು ಮಾಡುವ ಮೂಲಕ ದೈನಂದಿನ ಚಟುವಟಿಕೆಗಳಿಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಆಯುರ್ವೇದದಲ್ಲಿ ಒಣಕೆಮ್ಮಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಲ್ಲ ಮನೆಮದ್ದುಗಳಿವೆ. ಈ ಬಗ್ಗೆ ಮಾಹಿತಿಗಳಿಲ್ಲಿವೆ.

ಕಾಳುಮೆಣಸು

 ಬ್ಲಾಕ್ ಪೆಪ್ಪರ್ ಅಥವಾ ಕಾಳುಮೆಣಸು ಕೆಮ್ಮು ಮತ್ತು ಶೀತವನ್ನು ಶಮನಿಸಲು ಅದ್ಭುತ ಮನೆಮದ್ದಾಗಿದೆ. ಗಂಟಲಿನ ಕಿರಿಕಿರಿ ಮತ್ತು ಒಣಕೆಮ್ಮಿನಿಂದ ಪಾರಾಗಲು ಒಂದು ಚಮಚ ಜೇನುತುಪ್ಪಕ್ಕೆ ಚಿಟಿಕೆ ಬ್ಲಾಕ್ ಪೆಪ್ಪರ್ ಹುಡಿಯನ್ನು ಸೇರಿಸಿಕೊಂಡು ಸೇವಿಸಿದರೆ ಸಾಕು. ನೀವು ಕಾಳುಮೆಣಸಿನೊಂದಿಗೆ ದಾಲ್ಚಿನ್ನಿ,ಶುಂಠಿ ಮತ್ತು ಏಲಕ್ಕಿಯನ್ನು ಚಹಾಕ್ಕೆ ಸೇರಿಸಿಕೊಂಡೂ ಸೇವಿಸಬಹುದು,ಇದರಿಂದ ತೀವ್ರ ಕೆಮ್ಮು ಮತ್ತು ಶೀತ ಶಮನಗೊಳ್ಳುತ್ತವೆ.

►ಜೇನು

ಹಗಲು ರಾತ್ರಿ ಕೆಮ್ಮಿನಿಂದ ಬಳಲುತ್ತಿರುವವರಿಗೆ ಜೇನು ಅತ್ಯುತ್ತಮ ಆಯ್ಕೆಯಾಗಿದೆ. ಜೇನಿನಲ್ಲಿ ಸಮೃದ್ಧವಾಗಿರುವ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಕೆಮ್ಮನ್ನು ಶಮನಿಸುತ್ತವೆ ಮತ್ತು ಗಂಟಲಿನ ಕಿರಿಕಿರಿಯನ್ನು ನಿವಾರಿಸುತ್ತವೆ. ದಿನಕ್ಕೆ ಕನಿಷ್ಠ 3-4 ಸಲ ಒಂದು ಚಮಚ ಜೇನು ಸೇವಿಸಿ.

►ಪುದೀನಾ

ಪುದೀನಾ ಬ್ಯಾಕ್ಟೀರಿಯಾ ನಿರೋಧಕ ಮತ್ತು ವೈರಾಣು ನಿರೋಧಕ ಗುಣಗಳನ್ನು ಹೊಂದಿದ್ದು,ಇವು ಗಂಟಲಿನ ಕಿರಿಕಿರಿ ಮತ್ತು ಕೆಮ್ಮುವಿಕೆಯನ್ನು ಕಡಿಮೆ ಮಾಡುತ್ತವೆ. ರಾತ್ರಿ ಮಲಗುವ ಮುನ್ನ ಪುದೀನಾ ಎಲೆಗಳ ಕಷಾಯ ಸೇವನೆ ಸೇರಿದಂತೆ ವಿವಿಧ ರೀತಿಗಳಲ್ಲಿ ಪುದೀನಾವನ್ನು ಬಳಸಬಹುದು.

►ಅರಿಷಿಣ ಹಾಲು

ಅರಿಷಿಣದಲ್ಲಿರುವ ಬ್ಯಾಕ್ಟೀರಿಯಾ,ಉರಿಯೂತ ಮತ್ತು ವೈರಾಣು ನಿರೋಧಕ ಗುಣಗಳು ಸೋಂಕುಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತವೆ. ಅದು ಗಲಗ್ರಂಥಿಗಳಲ್ಲಿಯ ರಕ್ತದಟ್ಟಣೆಯನ್ನು ನಿವಾರಿಸುತ್ತದೆ ಮತ್ತು ಒಣಕೆಮ್ಮಿನಿಂದ ಮುಕ್ತಿ ನೀಡುತ್ತದೆ. ಒಣಕೆಮ್ಮಿನಿಂದ ಪಾರಾಗಲು ಒಂದು ಗ್ಲಾಸ್ ಹಾಲಿಗೆ ಅರ್ಧ ಚಮಚ ಅರಿಷಿಣ ಹುಡಿಯನ್ನು ಸೇರಿಸಿಕೊಂಡು ಕುಡಿದರೆ ಸಾಕು. ಇದಕ್ಕೆ ಬೆಳ್ಳುಳ್ಳಿಯನ್ನೂ ಸೇರಿಸಿಕೊಳ್ಳಬಹುದು.

►ಶುಂಠಿ

ಶುಂಠಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿರೋಧಕ ಗುಣಗಳು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನೋವು ಹಾಗೂ ಅಸ್ವಸ್ಥತೆಯನ್ನು ನಿವಾರಿಸುತ್ತವೆ. ಒಣಕೆಮ್ಮಿನಿಂದ ಪಾರಾಗಲು ಶುಂಠಿ ಕಷಾಯವನ್ನು ಸೇವಿಸಿಬಹುದು ಅಥವಾ ಶುಂಠಿಯನ್ನು ಹಸಿಯಾಗಿ ಅಗಿದು ತಿನ್ನಬಹುದು.

►ಜೀವನಶೈಲಿಯಲ್ಲಿ ಬದಲಾವಣೆಗಳು

ಮೇಲೆ ಹೇಳಲಾದ ಮನೆಮದ್ದುಗಳು ಪರಿಣಾಮಕಾರಿಯಾಗಬೇಕಿದ್ದರೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳೂ ಅಗತ್ಯವಾಗಿವೆ. ಒಣಕೆಮ್ಮಿನಿಂದ ಬಳಲುತ್ತಿದ್ದರೆ ಮಸಾಲೆಭರಿತ ಆಹಾರ ಅಥವಾ ಜಂಕ್‌ಫುಡ್‌ನಿಂದ ದೂರವಿರಿ. ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುವ ವಿಟಾಮಿನ್ ಸಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸಿ. ಸಾಕಷ್ಟು ವಿಶ್ರಾಂತಿ ಅಗತ್ಯ ಎನ್ನುವುದನ್ನು ಮರೆಯಬೇಡಿ. ಬಿಸಿನೀರನ್ನು ಸೇವಿಸುವ ಜೊತೆಗೆ ಸೊಳ್ಳೆ ಬತ್ತಿಗಳು,ಅಗರಬತ್ತಿಗಳಿಂದ ದೂರವಿರಿ. ಮಲಗುವ ಕೋಣೆಯಲ್ಲಿ ಹ್ಯುಮಿಡಿಫೈರ್ ಅಥವಾ ಆರ್ದ್ರಕವನ್ನು ಬಳಸಿ. ಶ್ವಾಸಕೋಶಗಳನ್ನು ಆರೋಗ್ಯಯುತವಾಗಿರಿಸಲು ಕೆಲವು ಯೋಗಾಸನಗಳನ್ನು ಮಾಡುವುದನ್ನು ರೂಢಿಸಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News