ತತ್ತಿಯೊಳಗಣ ನಿತ್ಯತತ್ವ

Update: 2020-03-16 18:23 GMT

ಕಾಲ ಕಳೆದಂತೆ ರುಚಿಯ ಮಾನದಂಡಗಳು ಕೂಡ ಬದಲಾಗುತ್ತವೆ, ಹಾಗಾಗಿ ಬೇಯಿಸಿದ ಮೊಟ್ಟೆ ಬಯಸುವವರು ಕಡಿಮೆ, ಅದನ್ನು ಹುರಿದು ಅಥವಾ ಸುಟ್ಟು ಮಾಡಿದ ತಿನಿಸುಗಳಿಗೆ ಬೇಡಿಕೆ ಹೆಚ್ಚು. ಇದು ಮನೆಯಿಂದ ಹಿಡಿದು ಹೊಟೇಲ್‌ಗಳವರೆಗೆ ಸಾಮಾನ್ಯ ಸಂಗತಿ ಮತ್ತು ಲಘು ತಿಂಡಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದು ಮೊಟ್ಟೆಗೆ. ಆಮ್ಲೆಟ್, ಬ್ರೆಡ್ ಆಮ್ಲೆಟ್, ಮೊಟ್ಟೆ ಪಪ್ಸ್‌ಗಳು ಇವತ್ತು ಹೆಚ್ಚು ಬೇಡಿಕೆ ಇರುವ ಮೊಟ್ಟೆಯ ತಿನಿಸುಗಳು. ಉಳಿದಂತೆ ಮೊಟ್ಟೆ ಹಾಕದ ಪದಾರ್ಥಗಳೇ ಈಗ ಉಳಿದಿಲ್ಲ. ಅಷ್ಟೆಲ್ಲಾ ವೈವಿಧ್ಯ ಪೂರ್ಣ ಅಡುಗೆಗಳು ಚಾಲ್ತಿಗೆ ಬಂದಿವೆ. ಆದರೂ ಆಮ್ಲೆಟ್ ಅನ್ನು ಮಿೀರಿಸಿ ಬೆಳೆಯುವುದಕ್ಕೆ ಸಾಧ್ಯವಾಗಿಲ್ಲ.

ಸಸ್ಯಾಹಾರ ಮಾಂಸಾಹಾರಗಳ ಬೈನರಿ ನಡುವೆ ಒಂದು ಸೇತು ಇದೆ. ಅದುವೇ ಮೊಟ್ಟೆ. ಜಾತಿ-ಮತದ ಆಹಾರಕ್ರಮಗಳನ್ನು ದಾಟಿ ಜಾಗತಿಕವಾದ ಆಹಾರಕ್ರಮಗಳಿಗೆ ಹೊಂದಾಣಿಕೆಯಾಗುವುದು ಈ ಕಾಲದಲ್ಲಿ ಅನಿವಾರ್ಯ. ಆಹಾರಕ್ರಮದ ಉದಾರೀಕರಣದ ಮೊದಲ ಹೆಜ್ಜೆಯಾಗಿ ಮೊಟ್ಟೆಯನ್ನು ಬಹುತೇಕ ಜಾತಿ ಮತ್ತು ವರ್ಗಗಳು ಆಹಾರದ ಒಂದು ಭಾಗವಾಗಿ ಬಳಸಲು ಶುರು ಮಾಡಿವೆ. ಇದೆಲ್ಲ ಕಾಲದ ಅನಿವಾರ್ಯತೆ ಕೂಡ ಮತ್ತು ಈ ಗಳಿಗೆಯಲ್ಲೂ ಮೊಟ್ಟೆಯ ಸಲುವಾಗಿಯೇ ಬೇಕರಿ ತಿನಿಸುಗಳನ್ನು ತಿನ್ನದ, ಮೊಟ್ಟೆ ರಹಿತ ಬ್ರೆಡ್ಡು- ಕೇಕು ಹುಡುಕುವ ಕರ್ಮಠತನಗಳೂ ಕೂಡ ನಮ್ಮ ಜೊತೆಗಿವೆ. ಅದು ಅವರವರ ನಂಬುಗೆಯ ಆಹಾರ ಕ್ರಮ, ಇಲ್ಲಿನ ಚರ್ಚೆಗೆ ಅನಗತ್ಯ. ಪೌಷ್ಟಿಕಾಂಶದ ದೃಷ್ಟಿಯಿಂದ ಮೊಟ್ಟೆ ಒಂದು ಕ್ರಾಂತಿಯನ್ನೇ ಉಂಟು ಮಾಡಿದೆ. ಕೆಲ ದಶಕಗಳ ಹಿಂದೆ ಮೊಟ್ಟೆಯನ್ನು ಕೊಂಡು ತಿನ್ನುವ ಸ್ಥಿತಿ ಕೂಡ ಹಲವು ಸಮುದಾಯಗಳಲ್ಲಿ ಸಾಧ್ಯವಿರಲಿಲ್ಲ. ಗ್ರಾಮೀಣ ಭಾಗಗಳಲ್ಲಿ ಗಣನೀಯವಾಗಿ ಕುಸಿಯುತ್ತಿದ್ದ ಮಕ್ಕಳ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಸರಕಾರವೇ ಅಂಗನವಾಡಿ ಮತ್ತು ಶಾಲೆಗಳಲ್ಲಿ ಮೊಟ್ಟೆಯನ್ನು ನೀಡುವ ಕ್ರಮವನ್ನು ತೆಗೆದುಕೊಂಡಿತು. ಒಮ್ಮೆಯಲ್ಲ ಹಲವು ಇಂತಹ ಕ್ರಮಗಳನ್ನು ಹಲವು ಸರಕಾರಗಳು ತೆಗೆದುಕೊಂಡವು, ಆದರೆ ಒಂದು ಕರ್ಮಠ ಸಮುದಾಯಕ್ಕೋಸ್ಕರ ಪದೇ ಪದೇ ರಾಜಕೀಯದ ಒತ್ತಡಗಳು ಬಿದ್ದು ಅದನ್ನು ಹಿಂದೆಗೆದುಕೊಳ್ಳಲಾಯಿತು. ಇಂದಿಗೂ ನಾವು ಮಕ್ಕಳ ಪೌಷ್ಟಿಕಾಂಶದ ಕೊರತೆಯನ್ನು ಎದುರಿಸುತ್ತಿದ್ದೇವೆ. ಆದರೆ ಸರಕಾರವು ಮಕ್ಕಳಿಗೆ ಮೊಟ್ಟೆ ವಿತರಿಸುವುದನ್ನು ಅಪರಾಧದಂತೆ ಈಗಲೂ ಕಾಣುವ ಜನರು ಇದ್ದಾರೆ. ಅನುಮಾನವೇ ಇಲ್ಲ, ಇವರೆಲ್ಲ ಹೆಚ್ಚು ಹೊಟ್ಟೆ ತುಂಬಿದ ಜನರು.

 ಮೊಟ್ಟೆಯ ಬಳಕೆ ಬಹಳ ಪ್ರಾಚೀನ ಕಾಲದಿಂದಲೂ ಇದೆ. ಪಶ್ಚಿಮ ದೇಶಗಳ ಆಹಾರಕ್ರಮಗಳಲ್ಲಿ ಇರುವಷ್ಟು ವೈವಿಧ್ಯ ಮೊಟ್ಟೆಯ ವಿಷಯದಲ್ಲಿ ನಮ್ಮಲ್ಲಿ ಇಲ್ಲ. ನಮ್ಮ ಮೊಟ್ಟೆ ಬರೀ ಬೇಯಿಸಿ ತಿನ್ನುವುದಕ್ಕಷ್ಟೇ ಸೀಮಿತವಾಗಿದೆ. ಕೋಳಿ ಸಾಕಣೆಯ ಮುಖ್ಯ ಉದ್ದೇಶ ಮಾಂಸ ಮತ್ತು ಮೊಟ್ಟೆಯದೇ ಆಗಿತ್ತು. ಬ್ರಾಹ್ಮಣ ಮತ್ತು ಜೈನರಲ್ಲದ ಮನೆಗಳಲ್ಲಿ ಕೋಳಿ ಸಾಕಣೆ ಕೃಷಿ ಮತ್ತು ಕೂಲಿ ಕೆಲಸಗಳ ಜೊತೆಗೆ ಉಪಕಸುಬು ಆಗಿತ್ತು. ಯಾವಾಗ ಮೊಟ್ಟೆ ಮತ್ತು ಮಾಂಸಕ್ಕಾಗಿ ಬೇರೆ ಬೇರೆ ಹೈಬ್ರಿಡ್ ತಳಿಯ ಕೋಳಿಗಳನ್ನು ಸೃಷ್ಟಿಸಲಾಯಿತೋ ಊರಿನ ಕೋಳಿಗಳು ನಿಧಾನಕ್ಕೆ ಕಣ್ಮರೆಯಾದವು. ಇದೀಗ ಮಾಂಸ ಮತ್ತು ಮೊಟ್ಟೆ ದಂಡಿಯಾಗಿ ಮಾರುಕಟ್ಟೆಯನ್ನು ಪ್ರವೇಶಿಸಿತು. ಹಾಗೆ ನಿಧಾನಕ್ಕೆ ಹೊಟೇಲ್‌ಗಳಿಗೆ ಬಂತು. ದಶಕಗಳ ಹಿಂದೆ ದೊಡ್ಡ ನಗರಗಳಲ್ಲಿ ಬೆರಳೆಣಿಕೆಯ ಮಾಂಸಾಹಾರಿ ಹೊಟೇಲ್‌ಗಳಿದ್ದುವು. ದಿನ ಕಳೆದಂತೆ ಮಾಂಸ ಮತ್ತು ಮೊಟ್ಟೆಯ ಉಪಯೋಗ ಹೆಚ್ಚುತ್ತಾ ಬೇಕರಿಗಳು, ಹೊಟೇಲ್‌ಗಳು ಮತ್ತು ಕುಟುಂಬಗಳು ಹೆಚ್ಚು ಹೆಚ್ಚು ಮೊಟ್ಟೆಯನ್ನು ಬಳಸಲು ಶುರುಮಾಡಿದುವು. ಅಸಲಿಗೆ ಈ ರೀತಿಯ ಬೇಡಿಕೆ ಮತ್ತು ಬಳಕೆ ಪರಿಸರ ಮಾಲಿನ್ಯಕ್ಕೂ ಕಾರಣವಾಗಿದ್ದನ್ನು ಉಲ್ಲೇಖಿಸದೇ ಇರಲಾಗದು.

ಮೊಟ್ಟೆಯ ವಿಧಗಳು:

  ನಮಗೆ ಸಾಮಾನ್ಯವಾಗಿ ಗೊತ್ತಿರುವುದು ಮತ್ತು ಬಳಸುವುದು ನಾಟಿ/ಫಾರಂ ಕೋಳಿ ಮೊಟ್ಟೆಯನ್ನು ಮಾತ್ರ. ಅದನ್ನು ಸಾಕುವುದೇ ಅದೇ ಕಾರಣಕ್ಕಾಗಿ ಅಲ್ಲವೇ! ಹಾಗೆಯೇ ವಿವಿಧ ಕಡೆ ಮಾಂಸ ಮತ್ತು ಮೊಟ್ಟೆಗಾಗಿ ಬಾತುಕೋಳಿ, ಟರ್ಕಿ ಕೋಳಿ, ಎಮು ಪಕ್ಷಿ ಕೊನೆಗೆ ಮೀನಿನ ಮೊಟ್ಟೆ ಕೂಡ ಅಡುಗೆಗೆ ಬಳಸಲಾಗುತ್ತದೆ. ಬೆಂಗಾಲದಲ್ಲಿ ದೊರೆಯುವ ಹಿಲ್ಸಾ ಮೀನಿನ ಮೊಟ್ಟೆ ಖಾದ್ಯಗಳು ಬಹಳ ಪ್ರಸಿದ್ಧಿ. ಈ ಮೊಟ್ಟೆಗಳಲ್ಲಿ ಕೊಬ್ಬಿನಾಂಶ ಮತ್ತು ಖನಿಜಾಂಶ ಸೇರಿದಂತೆ ಹಲವು ಪೌಷ್ಟಿಕಾಂಶಗಳು ಅಧಿಕವಾಗಿ ದೊರೆಯುವುದರಿಂದ ದಿನದಿಂದ ದಿನಕ್ಕೆ ಇವು ನಮ್ಮ ಆಹಾರದ ಅವಿಭಾಜ್ಯ ಅಂಗಗಳಾಗುತ್ತಿವೆ. ನೈಸರ್ಗಿಕವಾಗಿ ಮೊಟ್ಟೆ ಸಂಗ್ರಹಣೆ ಮಾಡುತ್ತಿದ್ದ ಬದಲಾಗಿ ಎಲ್ಲ ರೀತಿಯ ಕೋಳಿಗಳನ್ನು ಈಗ ಫಾರಂಗಳಲ್ಲಿ ಸಾಕಿ ಅವುಗಳಿಂದ ಮೊಟ್ಟೆ ಮತ್ತು ಮಾಂಸ ಪಡೆಯಲಾಗುತ್ತಿದೆ. ಹೀಗೆ ಸಮೂಹವಾಗಿ ಸಾಕಲು ಶುರು ಮಾಡಿದ ಮೇಲೆ ಅವಕ್ಕೆ ತಗಲುವ ವಿವಿಧ ರೋಗಗಳನ್ನು ನಿಯಂತ್ರಿಸಲು ಮತ್ತು ಹೆಚ್ಚು ತೂಕ ಬರುವಂತೆ ಮಾಂಸ ಹೆಚ್ಚಿಸಲು ಆ್ಯಂಟಿ ಬಯೋಟಿಕ್ ಮತ್ತು ಮಾಂಸ ವರ್ಧಿಸುವ ಚುಚ್ಚುಮದ್ದು/ ಔಷಧಗಳನ್ನು ಯಥೇಚ್ಛವಾಗಿ ನೀಡಲಾಗುತ್ತಿದೆ.. ಇದು ಮಾತ್ರ ಅಪಾಯಕಾರಿ ಬೆಳವಣಿಗೆ.

ಮೊಟ್ಟೆಯ ತಿನಿಸುಗಳು

ಬೇಕರಿಗಳು ಕೇಕ್, ಬ್ರೆಡ್ಡು ಮೊದಲಾದ ತಿನಿಸುಗಳಿಗೆ ಬಳಸುವುದು ಬಿಟ್ಟರೆ ಜನರ ದಿನನಿತ್ಯದ ಆಹಾರದಲ್ಲಿ ಹೆಚ್ಚು ಇರುವುದು ಬೇಯಿಸಿದ ಮೊಟ್ಟೆ, ಆಮೇಲೆ ಆಮ್ಲೆಟ್ ತದನಂತರ ಹುರಿದ ಮೊಟ್ಟೆ. ಈ ಮೂರನ್ನು ಹೊರತು ಪಡಿಸಿದರೆ ಮೊಟ್ಟೆಯೇ ಪ್ರಧಾನವಾದ ಆಹಾರದ ಕ್ರಮ ಯಾವುದೂ ಇಲ್ಲ. ಮೊಟ್ಟೆ ಹುರಿದನ್ನ, ಮೊಟ್ಟೆಯ ಸಾರು, ಮೊಟ್ಟೆ ಪಲ್ಯ, ಮೊಟ್ಟೆ ಪುಲಾವ್ ಸೇರಿದಂತೆ ಹಲವು ಬೇಯಿಸಿದ, ಹುರಿದ ತರಕಾರಿಗಳೊಂದಿಗೆ ಸೇರಿಸಿದ ಮೊಟ್ಟೆಯ ತಿನಿಸುಗಳು ಲಭ್ಯ. ಆದರೆ ಮೊಟ್ಟೆಯಿಂದಲೇ ಶುರುವಾದ ತಿನಿಸುಗಳಲ್ಲ ಇವು. ಇವೆಲ್ಲಾ ಈಗಾಗಲೇ ರೂಢಿಗತವಾಗಿರುವ ಅಡುಗೆಗಳೊಂದಿಗೆ ಮಾಡಿದ ಕಸಿ ಅಡುಗೆ ಅಷ್ಟೇ. ಕೆಲವರಂತೂ ನಾಟಿಕೋಳಿಯ ಮೊಟ್ಟೆಯ್ನು ಹಸಿಯಾಗೇ ಸೇವಿಸುವುದುಂಟು!

ಕಾಲ ಕಳೆದಂತೆ ರುಚಿಯ ಮಾನದಂಡಗಳು ಕೂಡ ಬದಲಾಗುತ್ತವೆ, ಹಾಗಾಗಿ ಬೇಯಿಸಿದ ಮೊಟ್ಟೆ ಬಯಸುವವರು ಕಡಿಮೆ, ಅದನ್ನು ಹುರಿದು ಅಥವಾ ಸುಟ್ಟು ಮಾಡಿದ ತಿನಿಸುಗಳಿಗೆ ಬೇಡಿಕೆ ಹೆಚ್ಚು. ಇದು ಮನೆಯಿಂದ ಹಿಡಿದು ಹೊಟೇಲ್‌ಗಳವರೆಗೆ ಸಾಮಾನ್ಯ ಸಂಗತಿ ಮತ್ತು ಲಘು ತಿಂಡಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದು ಮೊಟ್ಟೆಗೆ. ಆಮ್ಲೆಟ್, ಬ್ರೆಡ್ ಆಮ್ಲೆಟ್, ಮೊಟ್ಟೆ ಪಪ್ಸ್‌ಗಳು ಇವತ್ತು ಹೆಚ್ಚು ಬೇಡಿಕೆ ಇರುವ ಮೊಟ್ಟೆಯ ತಿನಿಸುಗಳು. ಉಳಿದಂತೆ ಮೊಟ್ಟೆ ಹಾಕದ ಪದಾರ್ಥಗಳೇ ಈಗ ಉಳಿದಿಲ್ಲ. ಅಷ್ಟೆಲ್ಲಾ ವೈವಿಧ್ಯ ಪೂರ್ಣ ಅಡುಗೆಗಳು ಚಾಲ್ತಿಗೆ ಬಂದಿವೆ. ಆದರೂ ಆಮ್ಲೆಟ್ ಅನ್ನು ಮಿೀರಿಸಿ ಬೆಳೆಯುವುದಕ್ಕೆ ಸಾಧ್ಯವಾಗಿಲ್ಲ.

ಆಮ್ಲೆಟ್ ಪೂರ್ವ ರೂಪವು ಪ್ರಾಚೀನ ಪರ್ಷಿಯಾ ದೇಶದಲ್ಲಿ ಮೊದಲಿಗೆ ಶುರುವಾಯಿತು. ನಂತರ ಹದಿನಾರನೇ ಶತಮಾನದ ಅವಧಿಯಲ್ಲಿ ಅದು ಫ್ರಾನ್ಸ್ ನಲ್ಲಿ ಆಮ್ಲೆಟ್ ಹೆಸರು ಪಡೆಯಿತು (Omelet). ಕೈಗಾರಿಕಾ ಕ್ರಾಂತಿಯ ನಂತರ ವಸಾಹತುಶಾಹಿ ಅಧಿಕಾರದೊಂದಿಗೆ ಎಲ್ಲ ವಸಾಹತುಗಳಲ್ಲಿ ನಿಧಾನಕ್ಕೆ ಪ್ರವೇಶ ಪಡೆಯಿತು. ಕಾಲಕ್ರಮೇಣ ಆಯಾ ಪ್ರದೇಶಗಳ ಆಹಾರಕ್ರಮಕ್ಕೆ ಅನುಗುಣವಾಗಿ ಆಮ್ಲೆಟ್ ತನ್ನದೇ ಸ್ವರೂಪ ಬದಲಿಸಿಕೊಂಡು ಗಟ್ಟಿಯಾಗಿ ಬೇರೂರಿತು. ಆಮ್ಲೆಟ್ ಮೊದಲಿಗೆ ತರಕಾರಿಗಳ ಮಿಶ್ರಣವಾಗಿತ್ತು. ಬಹುಪಾಲು ಅದನ್ನು ಬಳಸುವರು ಸಸ್ಯಾಹಾರಿಗಳು ಆಗಿದ್ದರು. ಪರ್ಷಿಯಾದ ಕುಕು (kuku) ಇತಿಹಾಸ ನೋಡಿದ್ರೆ ಗೊತ್ತಾಗುತ್ತದೆ. ನಂತರ ಅದರಲ್ಲಿ ಮಾಂಸದ ತುಂಡುಗಳು, ಒಣ ಮಾಂಸದ ತೆಳು ಪದರಗಳು (Ham), ಸೊಪ್ಪುಗಳ ಮಿಶ್ರಣ, ಮಸಾಲೆ ಮಿಶ್ರಣ ಮುಂತಾದ ಪದಾರ್ಥಗಳ ಮಿಶ್ರಣವಾಗುತ್ತ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರುಚಿ ಮತ್ತು ಸ್ವರೂಪಗಳಲ್ಲಿ ಪ್ರಸಿದ್ಧವಾಯಿತು.

ಫ್ರೆಂಚ್ ಆಮ್ಲೆಟ್: ಜಗತ್ ಪ್ರಸಿದ್ದವಾದ ಆಮ್ಲೆಟ್ ದಿ ಲಾ ಮೆರ್ ಪೌಲಾರ್ಡ್ (Omelette de la mere poulard  ) ಫ್ರಾನ್ಸ್‌ನಲ್ಲೇ ತಯಾರಾಗುವುದು. ತೆಳುವಾದ ದೋಸೆಯಂತಹ ಸಣ್ಣೆ ಸೊಪ್ಪುಗಳ ಉದುರಿಸಿದ ಆಮ್ಲೆಟ್.

ಇರಾನ್‌ನಲ್ಲಿ ಈಗಾಗಲೇ ಹೇಳಿದ ‘ಕುಕು’ ಹೆಚ್ಚು ಸೊಪ್ಪುಗಳನ್ನು ಸೇರಿಸಿ ದಪ್ಪನಾಗಿ ಮಾಡಿದ ಆಮ್ಲೆಟ್. ಇದರ ಜೊತೆಗೆ ನರ್ಗೆಸಿ ಮತ್ತು ಪೋರ ಇನ್ನು ಎರಡು ತರಹದ ಆಮ್ಲೆಟ್‌ಗಳನ್ನು ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಮೆಣಸು, ಉಪ್ಪು, ಕೊತ್ತಂಬರಿ ಸೇರಿಸಿ ಮಾಡುತ್ತಾರೆ.. ಇದೇ ಆಮ್ಲೆಟ್ ಅನ್ನು ನಾವು ಈಗ ಅನುಕರಿಸಿ ಮಾಡುತ್ತಿರುವುದು.

ಜಪಾನ್ ಆಮ್ಲೆಟ್ ಅನ್ನು ತಮಗೊಯಕಿ (tamagoyaki) ಎಂದು ಕರೆಯುತ್ತಾರೆ. ಇದನ್ನು ಮಿರಿನ್ (ಒಂದು ರೀತಿಯ ಅಡುಗೆ ವೈನ್), ಒಣ ಮಾಂಸದ ತೆಳು ಪುಡಿ (meat flakes), ಸೋಯಾ ಸಾಸ್ ಬಳಸಿ ಮಾಡಲಾಗುತ್ತದೆ. ಕೋಳಿ ಮಾಂಸದ ಜೊತೆಗೆ ಕೂಡ ಈ ತರಹ ಆಮ್ಲೆಟ್ ಮಾಡಿ, ಅನ್ನದ ಮೇಲ್ಪದರಲ್ಲಿ ಹಾಕಿ ಜೊತೆಗೆ ತಿನ್ನಲು ಸಹಾಯವಾಗುವಂತೆ ಬೋಗುಣಿಯಲ್ಲಿ ಬಡಿಸುತ್ತಾರೆ.

ಸ್ಪ್ಯಾನಿಷ್ ಆಮ್ಲೆಟ್:  ಮೆದುವಾದ ದಪ್ಪ ಗಾತ್ರದ ಆಮ್ಲೆಟ್ ಬಹಳ ಪ್ರಸಿದ್ಧಿ. ಇದರಲ್ಲಿ ಮೊಟ್ಟೆಯ ಜೊತೆಗೆ ಸಣ್ಣಗೆ ಹಚ್ಚಿದ ವಿವಿಧ ರೀತಿಯ ಆಲೂಗಡ್ಡೆಗಳನ್ನು ಬಳಸಿರುತ್ತಾರೆ. ನೊರೆನೊರೆಯಾದ ರೀತಿಯಲ್ಲಿ ಕಲಸಿ ಚೂರು ಹೆಚ್ಚಿಗೆ ಅಡುಗೆ ಎಣ್ಣೆಯಲ್ಲಿ ಅಗಲವಾಗಿ ಹರಡಿ ಬೇಯಿಸಿದರೆ ದಪ್ಪಗಾತ್ರದ ಆಮ್ಲೆಟ್ ಸಿದ್ಧವಾಗುತ್ತದೆ. ಇದು ನಮ್ಮ ಒಂದು ಹೊತ್ತಿನ ಊಟಕ್ಕೆ ಸಾಕಾಗುತ್ತದೆ.

ಹೀಗೆ ಹಲವು ದೇಶಗಳಲ್ಲಿ ಮೊಟ್ಟೆಯಿಂದ ಮಾಡುವ ಆಮ್ಲೆಟ್ ವೈವಿಧ್ಯಮಯವಾಗಿ ಬೆಳೆದುಬಂದಿದೆ ಈಗಲೂ ಬೆಳೆಯುತ್ತಿದೆ. ಭಾರತದಲ್ಲಿ ಮಾತ್ರ ಪೂರ್ಣವಾಗಿ ಪರ್ಶಿಯನ್ ಕ್ರಮವನ್ನು ಅನುಸರಿಸಿದೆ. ಮೊಟ್ಟೆ ಪಲ್ಯಗಳಲ್ಲಿ ತರಕಾರಿ, ಸೊಪ್ಪು(ನುಗ್ಗೆ ಸೊಪ್ಪು) ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಪೌಷ್ಟಿಕಾಂಶದ ದೃಷ್ಟಿಯಿಂದ ಮೊಟ್ಟೆ ಬಳಸುವುದು ಒಳ್ಳೆಯದು. ನಮ್ಮ ನಿತ್ಯದ ಆರೋಗ್ಯದ ತತ್ವಗಳಲ್ಲಿ ತತ್ತಿುೂ ಒಂದು ಗುಟ್ಟು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News