ಎದೆಯುರಿ ಮತ್ತು ಆಮ್ಲೀಯತೆ ನಡುವಿನ ವ್ಯತ್ಯಾಸಗಳು
ಕೆಲವೊಮ್ಮೆ ಜನರನ್ನು ಎದೆಯುರಿ ಬಾಧಿಸುತ್ತಿರುತ್ತದೆ. ಆಮ್ಲೀಯತೆಯು ಎದೆಯುರಿಗೆ ಸಂಬಂಧಿಸಿದೆ,ಆದರೆ ಅದರಿಂದ ಭಿನ್ನವಾಗಿದೆ. ಆಮ್ಲೀಯತೆ ಮತ್ತು ಎದೆಯುರಿ ಮಾರಣಾಂತಿಕವಲ್ಲದಿದ್ದರೂ ಇವುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ವ್ಯಕ್ತಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತವೆ.
ಜಠರ ಮತ್ತು ಅನ್ನನಾಳದ ನಡುವೆ ಇರುವ ಸ್ನಾಯುಗಳ ಉಂಗುರದಂತಹ ರಚನೆಯಾಗಿರುವ ಲೋವರ್ ಈಸೊಫೀಜಿಯಲ್ ಸ್ಪಿಂಕ್ಟರ್ (ಎಲ್‌ಇಎಸ್) ಜಠರದಲ್ಲಿಯ ಆಮ್ಲಗಳು ಅನ್ನನಾಳವನ್ನು ಹಿಮ್ಮುಖವಾಗಿ ಪ್ರವೇಶಿಸುವುದನ್ನು ತಡೆಯುತ್ತದೆ. ಎಲ್‌ಇಎಸ್ ದುರ್ಬಲಗೊಂಡಾಗ ಅಥವಾ ಸಡಿಲಗೊಂಡಾಗ ಜಠರಾಮ್ಲವು ಅನ್ನನಾಳವನ್ನು ಪ್ರವೇಶಿಸುತ್ತದೆ ಮತ್ತು ಅಂಗಾಂಶಗಳನ್ನು ಕೆರಳಿಸುತ್ತದೆ. ಇದು ಆ್ಯಸಿಡಿಟಿ ಅಥವಾ ಆಮ್ಲೀಯತೆಗೆ ಕಾರಣವಾಗುತ್ತದೆ.
ಎದೆಯುರಿ ಆ್ಯಸಿಡ್ ರಿಫ್ಲಕ್ಸ್ ಅಥವಾ ಆಮ್ಲದ ಹಿಮ್ಮುಖ ಹರಿವಿನ ಲಕ್ಷಣವಾಗಿದೆ. ಆದರೆ ಎಲ್ಲ ಆ್ಯಸಿಡ್ ರಿಫ್ಲಕ್ಸ್‌ಗಳೂ ಎದೆಯುರಿಗೆ ಕಾರಣವಾಗುವುದಿಲ್ಲ ಎನ್ನುವುದು ನೆನಪಿರಲಿ.
ಎದೆಯುರಿಯ ಸಂದರ್ಭದಲ್ಲಿ ಎದೆಯಲ್ಲಿ ನೋವು,ಉರಿಯುತ್ತಿರುವ ಅನುಭವ ಉಂಟಾಗುತ್ತದೆ. ಆಮ್ಲೀಯತೆಯಿಂದಾಗಿ ಕೆಲವೊಮ್ಮೆ ಗಂಟಲಿನಲ್ಲಿ ಹುಳಿ ಅಥವಾ ಕಹಿರುಚಿಯ ಅನುಭವವುಂಟಾಗುತ್ತದೆ.
ನೀವು ಆ್ಯಸಿಡಿಟಿಯಿಂದ ಬಳಲುತ್ತಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಅಗತ್ಯವಾಗುತ್ತದೆ.
ಎದೆಯುರಿ ಮತ್ತು ಆಮ್ಲೀಯತೆಯ ಲಕ್ಷಣಗಳು
ಎದೆಯುರಿ ಆಮ್ಲೀಯತೆಯ ಲಕ್ಷಣವಾಗಿದೆ. ಹೊಟ್ಟೆನೋವು,ಗಂಟಲಿನಲ್ಲಿ ಹುಳಿರುಚಿ, ಹೊಟ್ಟೆಯುಬ್ಬರ,ಹೊಟ್ಟೆಯಲ್ಲಿ ಅಸ್ವಸ್ಥತೆ,ವಾಕರಿಕೆ,ಆಹಾರ ನುಂಗಲು ಕಷ್ಟ ಮತ್ತು ಗಂಟಲಿನ ಹಿಂಬದಿಯಲ್ಲಿ ಆಮ್ಲೀಯ ರುಚಿ ಇವು ಆಮ್ಲೀಯತೆಯ ಇತರ ಲಕ್ಷಣಗಳಾಗಿವೆ. ಅಲ್ಲದೆ ದೀರ್ಘಕಾಲಿಕ ಆ್ಯಸಿಡ್ ರಿಫ್ಲಕ್ಸ್ ‘ಬ್ಯಾರೆಟೆಸ್ ಈಸೊಫೇಗಸ್’ ಎಂಬ ಕ್ಯಾನ್ಸರ್‌ಪೂರ್ವ ಸ್ಥಿತಿಗೆ ಕಾರಣವಾಗುತ್ತದೆ.
ಆ್ಯಸಿಡಿಟಿ ಮತ್ತು ಎದೆಯುರಿಯನ್ನು ದೂರವಿಡಲು ಜೀವನಶೈಲಿಯಲ್ಲಿ ಬದಲಾವಣೆ ಮುಖ್ಯವಾಗಿದೆ. ಆರೋಗ್ಯಕರ ಅಭ್ಯಾಸಗಳು ಆ್ಯಸಿಡಿಟಿಯನ್ನು ಮಾರು ದೂರವಿಡುತ್ತವೆ. ಊಟವಾದ ತಕ್ಷಣ ಮಲಗುವ ಅಭ್ಯಾಸವಿದ್ದರೆ ಮೊದಲು ಅದನ್ನು ಬಿಡಬೇಕು, ಅತಿಯಾದ ಊಟ ಬೇಡವೇ ಬೇಡ. ಮಿಂಟ್‌ನ ಸಹವಾಸ ಬೇಡ. ಒಂದೇ ಬಾರಿಗೆ ಹೆಚ್ಚಿನ ಊಟ ಮಾಡುವ ಬದಲು ಆಗಾಗ್ಗೆ ಸಣ್ಣ ಸಣ್ಣ ಊಟ ಮಾಡುವುದು ಒಳ್ಳೆಯದು. ಆ್ಯಸಿಡಿಟಿಯನ್ನು ಹೆಚ್ಚಿಸುವ ಮಸಾಲೆಭರಿತ ಆಹಾರ,ಆ್ಯಸಿಡಿಕ್ ಮತ್ತು ಸಿಟ್ರಿಕ್ ವರ್ಗಕ್ಕೆ ಸೇರಿದ ಹಣ್ಣುಗಳ ಸೇವನೆ ಬೇಡ. ಮದ್ಯಪಾನ ಮತ್ತು ಧೂಮ್ರಪಾನಕ್ಕೆ ಗುಡ್‌ಬೈ ಹೇಳುವುದು ಅತ್ಯುತ್ತಮ ಕೆಲಸವಾಗುತ್ತದೆ. ಯಾವಾಗಲೂ ಶರೀರದ ಸರಿಯಾದ ಭಂಗಿ ಮತ್ತು ತೂಕವನ್ನು ಕಾಯ್ದುಕೊಳ್ಳಿ. ಟೊಮೆಟೊ ಅಥವಾ ಈರುಳ್ಳಿ ರಸಗಳ ಸೇವನೆ ಬೇಡ. ಈರುಳ್ಳಿಯನ್ನು ಹಸಿಯಾಗಿ ತಿನ್ನಬೇಡಿ. ಆ್ಯಸಿಡಿಟಿ ಇರುವವರು ತಾವು ಅನುಸರಿಸಬೇಕಾದ ಆಹಾರಕ್ರಮವನ್ನು ವೈದ್ಯರಿಂದ ತಿಳಿದುಕೊಳ್ಳಬಹುದು.
ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳು ಆಮ್ಲೀಯತೆ ಅಥವಾ ಎದೆಯುರಿಗೆ ಕಾರಣವಾಗುತ್ತಿದ್ದರೆ ಇತರ ಪರ್ಯಾಯಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ಹೆಚ್ಚಿನವರಿಗೆ ರಾತ್ರಿ ನಿದ್ರಿಸಿದಾಗ ಆ್ಯಸಿಡಿಟಿಯ ಅನುಭವವಾಗುತ್ತದೆ. ಅಂತಹವರು ರಾತ್ರಿ ಮಲಗುವಾಗ ತಲೆಯನ್ನು ಎತ್ತರದಲ್ಲಿರಿಸಿಕೊಳ್ಳುವುದರಿಂದ ಆ್ಯಸಿಡಿಟಿಯ ಸಮಸ್ಯೆ ಕಡಿಮೆಯಾಗುತ್ತದೆ.
ಆ್ಯಸಿಡಿಟಿಗೆ ಸ್ವತಃ ವೈದ್ಯರಾಗುವುದು ಅಪಾಯಕಾರಿಯಾಗಬಹುದು,ಹೀಗಾಗಿ ವೈದ್ಯರ ಶಿಫಾರಸಿಗೆ ಅನುಗುಣವಾಗಿ ಔಷಧಿಗಳನ್ನು ಸೇವಿಸುವುದು ಒಳ್ಳೆಯದು.