ಕೊರೋನ ವೈರಸ್ ಮತ್ತು ಶ್ವಾಸಕೋಶಗಳ ಆರೋಗ್ಯ

Update: 2020-04-23 14:56 GMT

‘ಮಧುಮೇಹ, ಹೃದ್ರೋಗ ಮತ್ತು ಶ್ವಾಸಕೋಶ ಕಾಯಿಲೆಗಳಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಆರೋಗ್ಯವಂತರಿಗೆ ಹೋಲಿಸಿದರೆ ಕೋವಿಡ್-19 ರೋಗಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ’

ಈ ಮಾಹಿತಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವಂತೆ ಈಗಾಗಲೇ ಅನಾರೋಗ್ಯಪೀಡಿತರ ಎದೆಯಲ್ಲಿ ಅವಲಕ್ಕಿ ಕುಟ್ಟತೊಡಗಿದೆ. ಅಸ್ತಮಾ, ದೀರ್ಘಕಾಲಿಕ ಬ್ರಾಂಕೈಟಿಸ್ ಮತ್ತು ದೀರ್ಘಕಾಲದ ಶ್ವಾಸಕೋಶದ ಪ್ರತಿರೋಧಕ ರೋಗ (ಸಿಒಪಿಡಿ) ಹೊಂದಿರುವವರಂತೂ ತೀರಾ ಹೆದರಿಕೊಂಡಿದ್ದಾರೆ. ಈ ಬಗ್ಗೆ ವೈದ್ಯರ ಅಭಿಪ್ರಾಯಗಳಿಲ್ಲಿವೆ.....

ಆರೋಗ್ಯವಂತ ಜನರಿಗೆ ಹೋಲಿಸಿದರೆ ಅಸ್ತಮಾ ರೋಗಿಗಳು ಕೊರೋನ ವೈರಸ್ ಸೋಂಕಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿಲ್ಲ,ಏಕೆಂದರೆ ಅಸ್ತಮಾ ರೋಗಿಗಳು ಇನ್‌ಹೇಲರ್ ಮತ್ತು ಔಷಧಿಗಳ ಬಳಕೆ ಸೇರಿದಂತೆ ಸೂಕ್ತ ಚಿಕಿತ್ಸಾ ಕ್ರಮವನ್ನು ಅನುಸರಿಸುತ್ತಿದ್ದರೆ ಶ್ವಾಸನಾಳಗಳಲ್ಲಿ ಉರಿಯೂತ ಉಂಟಾಗುವುದಿಲ್ಲ.

ಸಿಪಿಒಡಿ ರೋಗಿಗಳು ಕೊರೋನ ವೈರಸ್ ಸೋಂಕಿಗೆ ತುತ್ತಾದರೆ ಅವರು ತೀವ್ರ ಸೋಂಕಿನಿಂದ ನರಳುವ ಸಾಧ್ಯತೆಗಳು ಹೆಚ್ಚು. ಈ ರೋಗಿಗಳು ಈಗಾಗಲೇ ದುರ್ಬಲ ಶ್ವಾಸಕೋಶಗಳನ್ನು ಹೊಂದಿರುವುದರಿಂದ ಕೊರೋನ ವೈರಸ್ ಅವುಗಳಿಗೆ ಇನ್ನಷ್ಟು ಹಾನಿಯನ್ನುಂಟು ಮಾಡುತ್ತದೆ.

ಲಂಗ್ ಫೈಬ್ರೋಸಿಸ್‌ನಂತಹ ಇತರ ಶ್ವಾಸಕೋಶದ ಕಾಯಿಲೆಗಳು ಕೊರೋನ ವೈರಸ್ ಸೋಂಕಿನ ಅಪಾಯವನ್ನು ಹೆಚ್ಚಿಸಬಲ್ಲವು. ಇಂತಹ ಸ್ಥಿತಿಯಲ್ಲಿ ಶ್ವಾಸಕೋಶಗಳ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ ಮತ್ತು ಶ್ವಾಸಕೋಶಗಳಲ್ಲಿ ಅನಿಲ ವಿನಿಮಯಕ್ಕೆ ತೊಡಕುಂಟಾಗುತ್ತದೆ. ಹೀಗಾಗಿ ಲಂಗ್ ಫೈಬ್ರೋಸಿಸ್ ರೋಗಿಯು ಕೊರೋನ ವೈರಸ್‌ಗೆ ತುತ್ತಾದರೆ ಅದು ತೀವ್ರ ಸೋಂಕಿಗೆ ಕಾರಣವಾಗುತ್ತದೆ ಮತ್ತು ಸಾವನ್ನೂ ಉಂಟು ಮಾಡಬಲ್ಲದು.

ಶ್ವಾಸಕೋಶ ರೋಗಿಗಳು ಬಳಸುವ ನೇಸಲ್ ಸ್ಪ್ರೇ ವೈರಸ್‌ನ್ನು ಮೂಗಿನ ಇನ್ನಷ್ಟು ಆಳಕ್ಕೆ ತಳ್ಳಬಹುದು ಎಂಬ ಶಂಕೆ ಅದರ ಬಳಕೆದಾರರಲ್ಲಿದೆ. ನೇಸಲ್ ಸ್ಪ್ರೇ ಅನ್ನು ಅಲರ್ಜಿಕ್ ರಿನಿಟಿಸ್ ಮತ್ತು ಸೈನುಸೈಟಿಸ್ ಹೊಂದಿರುವ ಅಸ್ತಮಾ ರೋಗಿಗಳಿಗೆ ಶಿಫಾರಸು ಮಾಡಲಾಗುತ್ತದೆಯೇ ಹೊರತು ಉಸಿರಾಟದ ಸಮಸ್ಯೆಯಿರುವ ಪ್ರತಿಯೊಬ್ಬರಿಗೂ ಅಲ್ಲ. ನೇಸಲ್ ಸ್ಪ್ರೇ ಬಳಕೆಯಿಂದ ವೈರಸ್ ಶ್ವಾಸನಾಳದಲ್ಲಿ ಆಳವಾಗಿ ತಳ್ಳಲ್ಪಡುತ್ತದೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.

 ಕೋವಿಡ್-19ಗೆ ತುತ್ತಾದವರಲ್ಲಿ ಶ್ವಾಸಕೋಶಗಳಿಗೆ ದೀರ್ಘಾವಧಿಯ ಹಾನಿಯುಂಟಾಗುತ್ತದೆಯೇ ಎನ್ನುವುದರ ಬಗ್ಗೆ ಈಗಲೇ ಏನನ್ನೂ ಹೇಳುವಂತಿಲ್ಲ. ಕೊರೋನ ವೈರಸ್ ರೋಗಿಗಳು ಕೇವಲ ಒಂದೆರಡು ವಾರಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಆಸ್ಪತ್ರೆಗಳಿಂದ ಬಿಡುಗಡೆಗೊಳ್ಳುತ್ತಿದ್ದಾರೆ. ಶ್ವಾಸಕೋಶಗಳಿಗೆ ದೀರ್ಘಾವಧಿಯ ಹಾನಿಯಾಗುತ್ತದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಸುಮಾರು 2-3 ತಿಂಗಳುಗಳ ದತ್ತಾಂಶಗಳು ಅಗತ್ಯವಾಗುತ್ತವೆ. ಅಲ್ಲದೆ ಇದು ಸೋಂಕಿನ ಸಂದರ್ಭದಲ್ಲಿ ಅದರ ತೀವ್ರತೆ ಮತ್ತು ರೋಗಿಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಅಸ್ತಮಾ ರೋಗಿಗಳು ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುತ್ತಾರೆ,ಹೀಗಿರುವಾಗಿ ಈ ಲಕ್ಷಣಗಳು ಮತ್ತು ಕೋವಿಡ್-19ರ ನಡುವಿನ ಅಂತರವನ್ನು ತಿಳಿದುಕೊಳ್ಳುವುದು ಹೇಗೆ ಎನ್ನುವುದು ಸಾಮಾನ್ಯವಾಗಿ ಕಾಡುತ್ತಿರುವ ಪ್ರಶ್ನೆಯಾಗಿದೆ. ಯಾವುದೇ ಸೋಂಕಿನಲ್ಲಿ ಜ್ವರವು ಸಾಮಾನ್ಯ ಲಕ್ಷಣವಾಗಿರುತ್ತದೆ. ಅಸ್ತಮಾ ರೋಗಿಗಳು ಮೂಗು ಸೋರಿಕೆ,ಕೆಮ್ಮು ಅಥವಾ ಗಂಟಲು ಕಿರಿಕಿರಿಯಿಂದ ಬಳಲುತ್ತಿರುತ್ತಾರೆ,ಆದರೆ ಜ್ವರ ಇರುವುದಿಲ್ಲ. ಹೀಗಾಗಿ ಈ ರೋಗಿಗಳು ಸೋಂಕು ಹೊಂದಿರುವ ಸಾಧ್ಯತೆ ತೀರ ಕಡಿಮೆಯಾಗಿರುತ್ತದೆ. ಅಲ್ಲದೆ ತಲೆನೋವು ಮತ್ತು ತೀವ್ರ ಮೈನೋವು ಕೋರೋನ ವೈರಸ್ ರೋಗಿಗಳಲ್ಲಿ ಕಂಡುಬರುವ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ಅಲ್ಲದೆ ಈ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿನ ಜನರು ಮನೆಯಲ್ಲಿಯೇ ಕಳೆಯುತ್ತಿದ್ದು ಮನೆ ಸ್ವಚ್ಛಗೊಳಿಸುವುದು, ಧೂಳನ್ನು ತೆಗೆಯುವುದು ಇತ್ಯಾದಿ ಏನಾದರೂ ಕೆಲಸ ಮಾಡುತ್ತಿರುತ್ತಾರೆ. ಇದರೊಂದಿಗೆ ಮನೆಯೊಳಗಿನ ವಾಯುಮಾಲಿನ್ಯದಿಂದಾಗಿ ಉಸಿರಾಟದ ಸಮಸ್ಯೆ ಹೊಂದಿರುವವರು ಮೂಗು ಸೋರಿಕೆ, ಕೆಮ್ಮು ಇತ್ಯಾದಿಗಳನ್ನು ಅನುಭವಿಸುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಆದರೆ ವ್ಯಕ್ತಿಯಲ್ಲಿ ಜ್ವರ/ತಲೆನೋವು/ಮೈನೋವು ಇಲ್ಲದಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ.

 ಮನೆಯಲ್ಲಿ ನೆಬ್ಯುಲೈಸರ್ ಬಳಸಿದರೆ ಕೊರೋನ ವೈರಸ್ ಸೋಂಕಿಗೆ ತುತ್ತಾಗುವ ಅಪಾಯವಿದೆಯೇ? ವೈದ್ಯರು ಹೇಳುವಂತೆ ಸಿಒಪಿಡಿ ರೋಗಿ ಮನೆಯಲ್ಲಿ ಮಾಮೂಲಿನಂತೆ ನೆಬ್ಯುಲೈಸರ್ ಬಳಸಬಹುದು,ಆದರೆ ನೆಬ್ಯುಲೈಸೇಷನ್ ಕಿಟ್ ಅನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುತ್ತಿರಬೇಕು ಮತ್ತು ತಿಂಗಳಿಗೊಮ್ಮೆ ನಿಯಮಿತವಾಗಿ ಬದಲಿಸುತ್ತಿರಬೇಕು. ಆದರೆ ಸಿಒಪಿಡಿ ರೋಗಿಯಲ್ಲಿ ಕೋರೋನ ವೈರಸ್ ಸೋಂಕು ದೃಢಪಟ್ಟಿದ್ದರೆ ನೆಬ್ಯುಲೈಸರ್ ಬಳಕೆಗೆ ಮುಂಜಾಗ್ರತೆಗಳು ಬದಲಾಗಬಹುದು. ಏಕೆಂದರೆ ಇಂತಹವರಲ್ಲಿ ನೆಬ್ಯುಲೈಸರ್ ಬಳಕೆಯು ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಹೆಚ್ಚು ತುಂತುರು ಹನಿಗಳನ್ನು ಹೊಮ್ಮಿಸಬಹುದು ಮತ್ತು ಇತರರಿಗೆ ಸೋಂಕು ಹರಡಬಹುದು. ಇಂತಹ ಸಂದರ್ಭಗಳಲ್ಲಿ ಸ್ಪೇಸರ್‌ನೊಂದಿಗಿರುವ ಮೀಟರ್ಡ್‌ ಇನ್‌ಹೇಲರ್ ಬಳಸುವುದರಿಂದ ಹನಿಗಳು ಕಡಿಮೆ ಸೃಷ್ಟಿಯಾಗುತ್ತವೆ ಮತ್ತು ಇತರರಿಗೆ ಸೋಂಕು ಹರಡುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಅಸ್ತಮಾ ರೋಗಿಯು ಕೊರೋನ ವೈರಸ್‌ಸೋಂಕು ಹೊಂದಿದ್ದರೆ ಮತ್ತು ಇನ್‌ಹೇಲರ್ ಬಳಸುತ್ತಿದ್ದರೆ ಅದರ ಬಳಕೆ ಆತನಿಗೆ/ಆಕೆಗೆ ಮಾತ್ರ ಸೀಮಿತವಾಗಿರಬೇಕು. ಇತರರೊಂದಿಗೆ ಅದನ್ನು ಹಂಚಿಕೊಳ್ಳಬಾರದು. ಇನ್‌ಹೇಲರ್ ಖಾಲಿಯಾದರೆ ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News