ನಿಮ್ಮ ಚರ್ಮ ಮಾತ್ರವಲ್ಲ, ಕಣ್ಣುಗಳು ಕೂಡ ಬಿಸಿಲಿನಿಂದ ಹಾನಿಗೀಡಾಗಬಹುದು

Update: 2020-04-25 09:48 GMT

ಸೂರ್ಯನ ಬಿಸಿಲು ಕಣ್ಣುಗಳಿಗೆ ಯಾವ ಹಾನಿಯನ್ನುಂಟು ಮಾಡುಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಕಣ್ಣುಗಳಲ್ಲಿಯೂ ‘ಸನ್‌ಬರ್ನ್ ’ಹೇಗೆ ಉಂಟಾಗುತ್ತದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾದ ಅಗತ್ಯವಿದೆ.

ಬೇಸಿಗೆಯಲ್ಲಿ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಕಣ್ಣಿನ ಮೇಲ್ಮೈಗೆ ಹಾನಿಯನ್ನುಂಟು ಮಾಡಬಹುದು ಮತ್ತು ಇದು ತಾತ್ಕಾಲಿಕ ಅಥವಾ ಶಾಶ್ವತವಾಗಿ ಫೊಟೊಕೆರಟೈಟಿಸ್ ಸಮಸ್ಯೆಗೆ ಕಾರಣವಾಗುತ್ತದೆ. ಸೂರ್ಯನ ಬಿಸಿಲು ಅಪಾಯಕಾರಿಯಾದ ಅಲ್ಟ್ರಾ ವಯೊಲೆಟ್ (ಯುವಿ) ಅಥವಾ ನೇರಳಾತೀತ ಕಿರಣಗಳನ್ನು ಸೂಸುತ್ತದೆ. ಈ ಕಿರಣಗಳು ಚರ್ಮದ ಕ್ಯಾನ್ಸರ್‌ನ್ನುಂಟು ಮಾಡಬಲ್ಲವು ಎನ್ನುವುದನ್ನು ನಾವೆಲ್ಲ ಓದಿದ್ದೇವೆ. ಆದರೆ ಈ ಯುವಿ ಕಿರಣಗಳು ಕಣ್ಣುಗುಡ್ಡೆ, ಅಕ್ಷಿಪಟಲದಂತಹ ನಮ್ಮ ಕಣ್ಣಿನ ಪ್ರಮುಖ ಭಾಗಗಳ ಮೇಲೆ ತೀವ್ರ ದುಷ್ಪರಿಣಾಮ ಗಳನ್ನುಂಟು ಮಾಡುತ್ತವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

ಬಿಸಿಲಿಗೆ ಅತಿಯಾಗಿ ಒಡ್ಡಿಕೊಳ್ಳುವುದು ಕ್ಯಾಟರಾಕ್ಟ್ ಅಥವಾ ಮೋತಿಬಿಂದು, ಕಣ್ಣುಗುಡ್ಡೆಗಳು ಮತ್ತು ಕಣ್ಣುಗಳ ಸುತ್ತಲಿನ ಚರ್ಮದ ಕ್ಯಾನ್ಸರ್‌ನಂತಹ ಗಂಭೀರ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಚರ್ಮಕ್ಕಿಂತ ಕಣ್ಣುಗಳು ಬಿಸಿಲಿನಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತವೆ. ಯುವಿ ಕಿರಣಗಳಿಗೆ ಒಡ್ಡುವಿಕೆಯ ವಿರುದ್ಧ ರಕ್ಷಣೆ ನೀಡುವ ಮೆಲಾನಿನ್ ಅಥವಾ ಕಪ್ಪು ವರ್ಣದ್ರವ್ಯವನ್ನು ಉತ್ಪಾದಿಸುವ ಮೂಲಕ ಯುವಿ ವಿಕಿರಣವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಚರ್ಮವು ಹೊಂದಿದೆ. ಆದರೆ ಕಣ್ಣುಗಳಿಗೆ ಯುವಿ ಕಿರಣಗಳನ್ನು ಸಹಿಸಿಕೊಳ್ಳಲು ಇಂತಹ ಯಾವುದೇ ಸಾಮರ್ಥ್ಯವಿಲ್ಲ. ಪದೇ ಪದೇ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಅದು ಹೆಚ್ಚು ಸಂವೇದನಾಶೀಲವಾಗುತ್ತದೆ ಮತ್ತು ಕಣ್ಣಿನ ಮೇಲೆ ಸಂಚಿತ ದುಷ್ಪರಿಣಾಮಗಳು ಉಂಟಾಗುತ್ತವೆ.

ಕಣ್ಣುಗಳಲ್ಲಿ ಸನ್ ‌ಬರ್ನ್‌ನ ಲಕ್ಷಣಗಳು

ನೇರ ಅಥವಾ ಪ್ರತಿಫಲಿತ ಬೆಳಕಿಗೆ ಒಡ್ಡಲ್ಪಟ್ಟಾಗ ಕಣ್ಣುಗಳು ಅದರ ತೀಕ್ಷ್ಣತೆಯನ್ನು ತಡೆಯಲು ಮಿಟುಕಿಸಲ್ಪಡುತ್ತವೆ. ಕಣ್ಣುಗಳ ಸುತ್ತಲಿನ ಚರ್ಮ ಯುವಿ ಕಿರಣಗಳಿಂದ ಹಾನಿಗೀಡಾದಾಗ ಅದು ಶುಷ್ಕಗೊಳ್ಳುತ್ತದೆ,ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಂಡು ಜೋಲು ಬೀಳುತ್ತದೆ ಮತ್ತು ಬಿಸಿಲಿನಿಂದ ಸುಟ್ಟು ಕಂದು ಮಚ್ಚೆಗಳುಂಟಾಗುತ್ತವೆ. ನೋವು,ಉರಿಯುತ್ತಿರುವ ಅನುಭವ,ಬೆಳಕಿಗೆ ಸಂವೇದನಾಶೀಲತೆ,ಜೊತೆಗೆ ತಲೆನೋವು ಮತ್ತು ಕಣ್ಣುಗಳು ಕೆಂಪುಬಣ್ಣಕ್ಕೆ ತಿರುಗುವುದು ಇತರ ಲಕ್ಷಣಗಳಾಗಿವೆ. ಕೆಲವರಲ್ಲಿ ಕಣ್ಣುಗಳ ದೃಷ್ಟಿಯು ಮಸುಕಾಗಲೂಬಹುದು.

ಕಣ್ಣುಗುಡ್ಡೆ ಮತ್ತು ಕಣ್ಣುಗುಡ್ಡೆಯ ಬಿಳಿಯ ಭಾಗದ ನಡುವಿನ ಪಾರದರ್ಶಕ ವಪೆಯ ಲೈನಿಂಗ್‌ನ್ನು ಕಂಜಂಕ್ಟಿವಾ ಎನ್ನಲಾಗುತ್ತದೆ.ಈ ಭಾಗದಲ್ಲಿ ಉಂಟಾಗುವ ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಾಣು ಸೋಂಕು ಕಂಜಂಕ್ಟಿವಾದಲ್ಲಿನ ಸಣ್ಣ ರಕ್ತನಾಳಗಳ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಕಣ್ಣುಗಳು ಕೆಂಪುಬಣ್ಣಕ್ಕೆ ತಿರುಗುತ್ತವೆ. ಈ ಸ್ಥಿತಿಯನ್ನು ಕಂಜಂಕ್ಟಿವೈಟಿಸ್ ಅಥವಾ ಕೆಂಗಣ್ಣು ಬೇನೆ ಎಂದು ಕರೆಯಲಾಗುತ್ತದೆ. ಇದು ಸಾಂಕ್ರಾಮಿಕವಾಗಿರುವುದರಿಂದ ಹರಡುವುದನ್ನು ತಡೆಯಲು ಸೂಕ್ತ ಚಿಕಿತ್ಸೆಯು ಅಗತ್ಯವಾಗಿರುತ್ತದೆ. ಇದು ಕಣ್ಣುಗಳ ದೃಷ್ಟಿಗೆ ಹಾನಿಯನ್ನುಂಟು ಮಾಡುವುದಿಲ್ಲವಾದರೂ ನೋವು ಮತ್ತು ಕೆರಳುವಿಕೆ ತೀವ್ರ ಅಹಿತವನ್ನುಂಟು ಮಾಡುತ್ತವೆ.

ಕಣ್ಣುಗಳು ಕೆಂಪುಬಣ್ಣಕ್ಕೆ ತಿರುಗಲು ಅವುಗಳಲ್ಲಿಯ ರಕ್ತನಾಳಗಳ ಉರಿಯೂತ ಕಾರಣವಾಗಿದ್ದು,ನೋವಿನೊಂದಿಗೆ ತುರಿಕೆ ಮತ್ತು ಕಣ್ಣುಗಳಲ್ಲಿ ಬಾಹ್ಯವಸ್ತು ಸಿಕ್ಕಿ ಹಾಕಿಕೊಂಡಿರುವ ಭಾಸವನ್ನು ಉಂಟು ಮಾಡುತ್ತದೆ. ಕೆಲವರಿಗೆ ಬೆಳಕಿನ ಸಂವೇದನಾಶೀಲತೆಯ ಜೊತೆಗೆ ಅಥವಾ ಅದು ಇಲ್ಲದೆಯೇ ಮಸುಕಾದ ದೃಷ್ಟಿಯ ಅನುಭವವಾಗಬಹುದು. ಬಿಸಿಲಿನಲ್ಲಿ ಹೊರಬೀಳುವ ಮುನ್ನ ಕಣ್ಣುಗಳ ರಕ್ಷಣೆಗೆ ಅನುಸರಿಸಬಹುದಾದ ಟಿಪ್‌ಗಳು ಇಲ್ಲಿವೆ:

ನಿಮ್ಮ ಕಣ್ಣುಗಳು,ಕುತ್ತಿಗೆ ಮತ್ತು ತಲೆಯ ರಕ್ಷಣೆಗಾಗಿ ಕಪ್ಪು ಕನ್ನಡಕ ಮತ್ತು ಅಗಲವಾದ ಅಂಚುಳ್ಳ ಹ್ಯಾಟ್ ಧರಿಸಿ. ಹಲವಾರು ಕೋನಗಳಿಂದ ರಕ್ಷಣೆ ಪಡೆಯಲು ಕಣ್ಣುಗಳಿಗೆ ನಿಕಟವಾಗಿ ಕುಳಿತುಕೊಳ್ಳುವ ಅಗಲವಾದ ಗಾಜುಗಳಿರುವ ಕಪ್ಪು ಕನ್ನಡಕ ಬಳಸಿ. ಯುವಿ ರಕ್ಷಣೆಯು ಕನ್ನಡಕದ ಮಸೂರಗಳು ಎಷ್ಟು ಕಪ್ಪಾಗಿವೆ ಎನ್ನುವುದನ್ನು ಅವಲಂಬಿಸಿರುವುದಿಲ್ಲ. ಟಿಂಟೆಡ್ ಗ್ರೀನ್ ಅಥವಾ ರೆಡ್ ಗ್ಲಾಸ್‌ಗಳೂ ಅಷ್ಟೇ ರಕ್ಷಣೆಯನ್ನು ಒದಗಿಸಬಲ್ಲವು.

ಕೆಲವು ಕಾಂಟ್ಯಾಕ್ಟ್ ಲೆನ್ಸ್‌ಗಳು ಯುವಿ ವಿಕಿರಣಗಳ ವಿರುದ್ಧ ರಕ್ಷಣೆಯನ್ನು ಹೊಂದಿರುತ್ತವೆ,ಆದರೆ ಸನ್‌ಗ್ಲಾಸ್‌ಗಳು ಯುವಿ ವಿಕಿರಣಗಳಿಂದ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತವೆ. ಯುವಿ ವಿಕಿರಣಗಳನ್ನು ತಡೆಯಲು ಮನೆಯ ಕಿಟಕಿಗಳು,ಕಾರಿನ ಗಾಜು ಇತ್ಯಾದಿಗಳಿಗೆ ಯುವಿ ಟಿಂಟೆಡ್ ಫಿಲ್ಮ್‌ಗಳನ್ನು ಅಳವಡಿಸಬಹುದು.

ಯುವಿ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಅಕ್ಷಿಪಟಲಕ್ಕೆ ಹಾನಿಯುಂಟಾಗುತ್ತದೆ ಮತ್ತು ಇದು ಅಂಧತ್ವಕ್ಕೆ ಕಾರಣವಾಗಬಹುದು,ವಯಸ್ಸಾದಂತೆ ಕ್ಯಾಟರಾಕ್ಟ್‌ನ್ನು ಉಂಟು ಮಾಡಬಹುದು. ಚರ್ಮದ ಕ್ಯಾನ್ಸರ್,ದೃಷ್ಟಿನಾಶ ಮತ್ತು ಕಣ್ಣಿನ ಕ್ಯಾನ್ಸರ್ ಇತ್ಯಾದಿಗಳಿಗೂ ಯುವಿ ಕಿರಣಗಳು ಕಾರಣವಾಗುತ್ತವೆ.

ವಯಸ್ಸು ಮತ್ತು ಲಿಂಗ ಯಾವುದೇ ಇದ್ದರೂ ಯಾರೂ ಯುವಿ ವಿಕಿರಣಗಳಿಂದ ಅಪಾಯಗಳಿಗೆ ಹಾಗೂ ಬಿಸಿಲಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳಿಗೆ ಗುರಿಯಾಗುವ ಸಾಧ್ಯತೆಗೆ ಹೊರತಾಗಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News