ನಿಮಗೆ ಗೊತ್ತಿರಲಿ,ಪೇರಳೆ ಮತ್ತು ಅದರ ಎಲೆಗಳು ಮಧುಮೇಹ ನಿಯಂತ್ರಣಕ್ಕೆ ನೆರವಾಗುತ್ತವೆ
ಮಧುಮೇಹವು ನಮ್ಮ ಶರೀರವನ್ನು ನಿಧಾನವಾಗಿ ಒಳಗಿನಿಂದ ಟೊಳ್ಳಾಗಿಸುವ ಮತ್ತು ನಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕಾಯಿಲೆಯಾಗಿದೆ. ಮಧುಮೇಹಿಗಳಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಕಷ್ಟು ಇನ್ಸುಲಿನ್ ಅನ್ನು ಮೇದೋಜ್ಜೀರಕ ಗ್ರಂಥಿಯು ಉತ್ಪಾದಿಸುವುದಿಲ್ಲ. ಆಹಾರ ಕ್ರಮ ಮತ್ತು ಜೀವನಶೈಲಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ಸಕಾಲದಲ್ಲಿ ನಿಯಂತ್ರಿಸಬಹುದು. ಸಾಮಾನ್ಯವಾಗಿ ಹೆಚ್ಚಿನವರ ಮನೆಯ ಹಿತ್ತಿಲಿನಲ್ಲಿ ಬೆಳೆಯುವ ಪೇರಳೆ ಹಣ್ಣು ಮತ್ತು ಎಲೆಗಳು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
ಪೇರಳೆ ಮತ್ತು ಅದರ ಎಲೆಗಳು ಪೋಷಕಾಂಶಗಳು,ಪೊಟ್ಯಾಷಿಯಂ,ವಿಟಾಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಯಥೇಚ್ಛವಾಗಿ ಒಳಗೊಂಡಿವೆ,ಹೀಗಾಗಿ ಅವು ರಕ್ತದೊತ್ತಡ ಮತ್ತು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತವೆ ಎನ್ನುತ್ತಾರೆ ತಜ್ಞರು. ಅಲ್ಲದೆ ಹೃದಯ ಮತ್ತು ಯಕೃತ್ತಿನ ಆರೋಗ್ಯಕ್ಕೂ ಇವು ಲಾಭದಾಯಕವಾಗಿವೆ. ಪೇರಳೆಯ ಎಲೆಗಳು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಶೇ.10ರಷ್ಟು ತಗ್ಗಿಸಲು ನೆರವಾಗುತ್ತವೆ. ಆದರೆ ಗಂಭೀರ ಮೂತ್ರಪಿಂಡ ಸಮಸ್ಯೆ ಹೊಂದಿರುವವರು ಇವನ್ನು ಸೇವಿಸಬಾರದು,ಏಕೆಂದರೆ ಅಧಿಕ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ಅಂತಹವರಿಗೆ ಹಾನಿಕಾರಕವಾಗಬಲ್ಲದು.
ಪೇರಳೆ ಮತ್ತು ಅದರ ಎಲೆಗಳು ಹೇಗೆ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸುತ್ತವೆ ಎಂಬ ಬಗ್ಗೆ ಮಾಹಿತಿಯಿಲ್ಲಿದೆ.
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಪೇರಳೆ ಮತ್ತು ಅದರ ಎಲೆಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿವೆ,ಅಂದರೆ ಅವು ಸುಲಭವಾಗಿ ಜೀರ್ಣಿಸಲ್ಪಡುತ್ತವೆ ಮತ್ತು ನಿಧಾನವಾಗಿ ಹೀರಿಕೊಳ್ಳಲ್ಪಡುತ್ತವೆ. ತನ್ಮೂಲಕ ಗ್ಲುಕೋಸ್ ಮಟ್ಟದ ಕ್ರಮೇಣ ಏರಿಕೆಯನ್ನು ತಡೆಯುತ್ತವೆ. ಹೀಗಾಗಿ ಮಧುಮೇಹವನ್ನು ನಿರ್ವಹಿಸಲು ಸಹಾಯಕಾರಿಯಾಗಿವೆ. ಸಮೃದ್ಧ ಪೊಟ್ಯಾಷಿಯಂ ಮತ್ತು ನಾರು
ಪೇರಳೆ ಎಲೆಗಳಲ್ಲಿ ಅಧಿಕ ಪೊಟ್ಯಾಷಿಯಂ ಇದ್ದರೆ ಪೇರಳೆ ಹಣ್ಣಿನಲ್ಲಿ ಸರಿಯಾದ ಪ್ರಮಾಣದಲ್ಲಿ ನಾರು ಇರುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ನಾರು ಜೀರ್ಣಗೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ,ಇದರಿಂದಾಗಿ ಅದು ತ್ವರಿತವಾಗಿ ರಕ್ತದಲ್ಲಿ ಬಿಡುಗಡೆಗೊಳ್ಳುವುದಿಲ್ಲ.
ಕಡಿಮೆ ಕ್ಯಾಲರಿ
ಪೇರಳೆಯು ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿರುವುದರಿಂದ ಶರೀರದ ತೂಕವನ್ನು ಇಳಿಸಲು ನೆರವಾಗುತ್ತದೆ. ಅಧಿಕ ರಕ್ತದೊತ್ತಡಕ್ಕೆ ಬೊಜ್ಜು ಕೂಡ ಒಂದು ಪ್ರಮುಖ ಕಾರಣವಾಗಿದೆ. 100 ಗ್ರಾಂ ಪೇರಳೆಯು ಕೇವಲ 8.92 ಗ್ರಾಂ ನೈಸರ್ಗಿಕ ಸಕ್ಕರೆ ಮತ್ತು 68 ಕ್ಯಾಲರಿಗಳನ್ನು ಒಳಗೊಂಡಿರುತ್ತದೆ.
ಕಡಿಮೆ ಸೋಡಿಯಂ ಪೇರಳೆಯಲ್ಲಿ ಪೊಟ್ಯಾಷಿಯಂ ಹೆಚ್ಚಿನ ಪ್ರಮಾಣದಲ್ಲಿದ್ದರೆ ಸೋಡಿಯಂ ಕಡಿಮೆ ಪ್ರಮಾಣದಲ್ಲಿದೆ. ಪೊಟ್ಯಾಷಿಯಂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಿ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.
ವಿಟಾಮಿನ್‌ಗಳು
ಪೇರಳೆ ಮತ್ತು ಅದರ ಎಲೆಗಳು ಸಿ ವಿಟಾಮಿನ್‌ನಂತಹ ಅಗತ್ಯ ವಿಟಾಮಿನ್‌ಗಳ ಅತ್ಯುತ್ತಮ ಮೂಲಗಳಾಗಿವೆ. ಈ ಪೋಷಕಾಂಶವು ಶರೀರದ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ ಮತ್ತು ಇದು ಸಹ ಮಧುಮೇಹದ ವಿರುದ್ಧ ಹೋರಾಡುತ್ತದೆ.