ನಿಶ್ಶಕ್ತಿ ಕಾಡುತ್ತಿದೆಯೇ?: ಅದು ಅಸ್ತೇನಿಯಾದ ಲಕ್ಷಣವಾಗಿರಬಹುದು
ಅಸ್ತೇನಿಯಾ ಒಂದು ರೋಗವಲ್ಲ,ಆದರೆ ಅದು ವ್ಯಕ್ತಿಗಿರುವ ಹಲವಾರು ಕಾಯಿಲೆಗಳನ್ನು ಸೂಚಿಸಬಲ್ಲದು. ಅಸ್ತೇನಿಯಾಕ್ಕೆ ಕಾರಣಗಳು,ಲಕ್ಷಣಗಳು ಮತ್ತು ನೈಸರ್ಗಿಕ ಚಿಕಿತ್ಸೆಗಳ ಬಗ್ಗೆ ಮಾಹಿತಿಯಿಲ್ಲಿದೆ.
ದೈಹಿಕ ಅಥವಾ ಮಾಂಸಖಂಡಗಳ ಬಲದ ಕೊರತೆಯು ಒಂದು ವಿಧದ ನಿಶ್ಶಕ್ತಿಯನ್ನು ಸೂಚಿಸುತ್ತದೆ. ಇಂತಹ ಸ್ಥಿತಿಯಲ್ಲಿ ವ್ಯಕ್ತಿಗೆ ನಡೆದಾಡಲು,ಎದ್ದು ನಿಲ್ಲಲು ಮತ್ತು ಸಮತೋಲನ ಕಾಯ್ದುಕೊಳ್ಳಲೂ ಕಷ್ಟವಾಗಬಹುದು. ಅಸ್ತೇನಿಯಾ ಎಂದು ಕರೆಯಲಾಗುವ ಈ ನಿಶ್ಶಕ್ತಿಯು ವ್ಯಕ್ತಿಯನ್ನು ಸದಾಕಾಲ ದಣಿದಿರುವಂತೆ ಮಾಡುತ್ತದೆ. ಕೆಲವರಿಗೆ ಕೈಗಳು ಅಥವಾ ಪಾದಗಳಂತಹ ಶರೀರದ ನಿರ್ದಿಷ್ಟ ಭಾಗದಲ್ಲಿ ನಿಶ್ಶಕ್ತಿಯ ಅನುಭವವಾಗಬಹುದು. ಕೆಲವು ವ್ಯಕ್ತಿಗಳು, ವಿಶೇಷವಾಗಿ ಆಗಾಗ್ಗೆ ಇನ್ ಫ್ಲುಯೆಂಝಾ ಅಥವಾ ಹೆಪಟೈಟಿಸ್‌ನಂತಹ ಬ್ಯಾಕ್ಟೀರಿಯಾ ಅಥವಾ ವೈರಾಣು ಸೋಂಕಿಗೊಳಗಾದವರು ಇಡೀ ಶರೀರದಲ್ಲಿ ನಿಶ್ಶಕ್ತಿಯನ್ನು ಅನುಭವಿಸಬಹುದು. ಈ ನಿಶ್ಶಕ್ತಿಯು ತಾತ್ಕಾಲಿಕವಾಗಿರುತ್ತದೆ,ಆದರೆ ಕೆಲವು ಪ್ರಕರಣಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ದೀರ್ಘಕಾಲಿಕವಾಗುತ್ತದೆ. ನಿಶ್ಶಕ್ತಿಯು ಮುಖ್ಯವಾಗಿ ದೈನಂದಿನ ಚಟುವಟಿಕೆಗಳನ್ನು ಕಷ್ಟವಾಗಿಸುವ ಜೊತೆಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಅಸ್ತೇನಿಯಾದ ಕಾರಣಗಳು
ಅಸ್ತೇನಿಯಾ ಒಂದು ರೋಗವಲ್ಲದಿದ್ದರೂ ನಿಶ್ಶಕ್ತಿ ಮತ್ತು ಆಯಾಸದ ಲಕ್ಷಣಗಳನ್ನು ಪ್ರಕಟಿಸುತ್ತದೆ. ಆದರೆ ನಿಶ್ಶಕ್ತಿಯ ಲಕ್ಷಣಗಳಿಗೆ ಹಲವಾರು ಇತರ ಆರೋಗ್ಯ ಸಮಸ್ಯೆಗಳು ಕಾರಣವಾಗುತ್ತವೆ. ಶರೀರದಲ್ಲಿಯ ಎರಡು ನೈಸರ್ಗಿಕ ವಿದ್ಯುದ್ವಿಚ್ಛೇದ್ಯಗಳಾದ ಪೊಟ್ಯಾಷಿಯಂ ಮತ್ತು ಸೋಡಿಯಂ ಇವುಗಳ ಮಟ್ಟಗಳಲ್ಲಿ ಕುಸಿತ,ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಗಳು,ಶ್ವಾಸಕೋಶಗಳ ಅಥವಾ ಮೂತ್ರನಾಳದ ಸೋಂಕು,ಕೈಕಾಲುಗಳಲ್ಲಿ ನಿಶ್ಶಕ್ತಿಯನ್ನುಂಟು ಮಾಡುವ ನರರೋಗ ಮ್ಯಾಸ್ಥೆನಿಯಾ ಗ್ರೇವಿಸ್,ಆಲಸಿತನ,ಶಾರೀರಕ ನೋವು ಇತ್ಯಾದಿಗಳಿಗೆ ಕಾರಣವಾಗುವ ಫ್ಲು,ರಕ್ತಹೀನತೆ,ಖಿನ್ನತೆ ಅಥವಾ ಆತಂಕ,ನಿದ್ರೆಯ ಕೊರತೆ (ಇದು ಸಹ ಹಲವರಲ್ಲಿ ಮಾನಸಿಕ ಅಸಮತೋಲನಕ್ಕೆ ಕಾರಣವಾಗುತ್ತದೆ),ಚಿಕಿತ್ಸೆ ಪಡೆಯದ ಮಧುಮೇಹ,ಹೃದಯ ದೋಷ,ವಿಟಾಮಿನ್ ಬಿ-12 ಕೊರತೆ,ಔಷಧಿಗಳ ಅಡ್ಡ ಪರಿಣಾಮಗಳು,ಕೆಲವು ಸ್ನಾಯು ರೋಗಗಳು,ಕಿಮೊಥೆರಪಿ ಇವು ಅಸ್ತೇನಿಯಾಕ್ಕೆ ಕಾರಣಗಳಾಗಿವೆ.
ಸಾಮಾನ್ಯವಾಗಿ ಎರಡು ವಿಧಗಳ ನಿಶ್ಶಕ್ತಿಯಿದ್ದು,ಇವು ವಿಭಿನ್ನ ಲಕ್ಷಣಗಳನ್ನು ಹೊಂದಿರಬಹುದು.
ಶರೀರದ ನಿರ್ದಿಷ್ಟ ಭಾಗದಲ್ಲಿ ನಿಶ್ಶಕ್ತಿ: ಈ ಸ್ಥಿತಿಯಲ್ಲಿ ವ್ಯಕ್ತಿಗೆ ಆ ಭಾಗದ ಪರಿಪೂರ್ಣ ಚಲನೆ ಸಾಧ್ಯವಾಗುವುದಿಲ್ಲ. ಇದು ಸ್ನಾಯು ಸೆಳೆತ,ನಡುಕ,ಶರೀರದ ನಿಧಾನ ಗತಿ ಇತ್ಯಾದಿ ಲಕ್ಷಣಗಳನ್ನು ಪ್ರಕಟಿಸುತ್ತದೆ.
ಒಟ್ಟು ದೈಹಿಕ ನಿಶ್ಶಕ್ತಿ: ಈ ಸ್ಥಿತಿಯಲ್ಲಿ ಫ್ಲೂ ಉಂಟಾದಾಗಿನ ನಿಶ್ಶಕ್ತಿಯ ಅನುಭವವಾಗುತ್ತದೆ. ಇದನ್ನು ಬಳಲಿಕೆ ಎನ್ನಲಾಗುತ್ತದೆ. ಆದರೆ ಬಳಲಿಕೆಯಿಲ್ಲದೆಯೂ ಸಂಪೂರ್ಣ ದೈಹಿಕ ನಿಶ್ಶಕ್ತಿಯ ಅನುಭವವಾಗಬಹುದು.
ನಿಶ್ಶಕ್ತಿಗೆ ನೈಸರ್ಗಿಕ ಚಿಕಿತ್ಸೆ
ಭಾರತೀಯ ವೈದ್ಯ ಪದ್ಧತಿಯಂತೆ ನಮ್ಮ ಆಹಾರ ಕ್ರಮವೂ ನಿಶ್ಶಕ್ತಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಕೆಲವು ಆಹಾರಗಳು ಶರೀರದ ವಿವಿಧ ಭಾಗಗಳಲ್ಲಿ ವಿಷವಸ್ತುಗಳು ಸಂಗ್ರಹಗೊಳ್ಳಲು ಕಾರಣವಾಗುತ್ತವೆ ಮತ್ತು ಇದು ನಿಶ್ಶಕ್ತಿಯನ್ನುಂಟು ಮಾಡುವ ಕಾಯಿಲೆಗಳ ಆಗಮನಕ್ಕೆ ರಂಗವನ್ನು ಸಜ್ಜುಗೊಳಿಸುತ್ತದೆ. ಬಿಳಿ ಸಕ್ಕರೆ ಮತ್ತು ಸಂಸ್ಕರಿತ ಹಿಟ್ಟು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತವೆ ಮತ್ತು ದಿಢೀರ್ ನಿಶ್ಶಕ್ತಿಯುಂಟಾಗುತ್ತದೆ. ಆಹಾರ ಕ್ರಮದಲ್ಲಿ ಬದಲಾವಣೆೆಗಳು ಬಹಳಷ್ಟು ವ್ಯತ್ಯಾಸವನ್ನುಂಟು ಮಾಡುತ್ತವೆ. ಹೀಗಾಗಿ ಗರಿಷ್ಠ ಲಾಭಕ್ಕಾಗಿ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹಸಿರು ಸೊಪ್ಪುಗಳು,ಬೀಜಗಳು,ಬೇಳೆ ಕಾಳುಗಳು ಮತ್ತು ಇಡಿಯ ಧಾನ್ಯಗಳು ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡಿದ್ದು,ನಿಶ್ಶಕ್ತಿಯನ್ನು ನಿವಾರಿಸುತ್ತವೆ.
ಬಟಾಟೆಯನ್ನು ಬಿಲ್ಲೆಗಳನ್ನಾಗಿ ಕತ್ತರಿಸಿ ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಹಲ್ಲುಗಳನ್ನು ಉಜ್ಜಿದ ಬಳಿಕ ಈ ನೀರನ್ನು ನೈಸರ್ಗಿಕ ಟಾನಿಕ್ ಆಗಿ ಸೇವಿಸಿ. ಇದು ಸ್ನಾಯುಗಳಲ್ಲಿಯ ವಿಷವಸ್ತುಗಳನ್ನು ತ್ವರಿತವಾಗಿ ನಿವಾರಿಸುತ್ತದೆ.
ಬಸಳೆಯು ಬಳಲಿಕೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ,ಅದನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿ.