ಸಣ್ಣ ವಯಸ್ಸಿನಲ್ಲಿಯೇ ಜ್ಞಾಪಕಶಕ್ತಿ ನಷ್ಟ ಮತ್ತು ಮರೆಗುಳಿತನಕ್ಕೆ ಕಾರಣವೇನು?

Update: 2020-04-28 16:41 GMT

ಇಂದಿನ ದಿನಗಳಲ್ಲಿ ಒಳ್ಳೆಯ ಆಹಾರ ಮತ್ತು ಪಾನೀಯಗಳ ಕೊರತೆಯಿಂದ ಜ್ಞಾಪಕ ಶಕ್ತಿ ಕಡಿಮೆಯಾಗುವುದು ಅಥವಾ ನಷ್ಟಗೊಳ್ಳುವುದು ಸಾಮಾನ್ಯ ಸಮಸ್ಯೆಯಾಗಿದೆ. ತಮ್ಮ ಮರೆಗುಳಿತನದಿಂದಾಗಿ ಹಲವಾರು ಜನರು ತೊಂದರೆಗೀಡಾಗುತ್ತಿದ್ದಾರೆ. ನಮ್ಮ ಮಿದುಳು ಒಂದು ರೀತಿಯಲ್ಲಿ ನಮ್ಮ ಶರೀರದ ಉಗ್ರಾಣದಂತಿದ್ದು ಅದರ ವಿವಿಧ ಭಾಗಗಳಲ್ಲಿ ಮಾಹಿತಿಗಳು ಸಂಗ್ರಹವಾಗಿರುತ್ತವೆ.

ನೆನಪು ಅಲ್ಪಾವಧಿಯ ನೆನಪು,ಇತ್ತೀಚಿನ ನೆನಪು ಮತ್ತು ದೂರ ನೆನಪು ಹೀಗೆ ಮೂರು ವಿಧಗಳಲ್ಲಿ ವರ್ಗೀಕರಿಸಲ್ಪಟ್ಟಿದೆ. ಅಲ್ಪಾವಧಿಯ ನೆನಪು ಇತ್ತೀಚಿನ ಘಟನೆಗಳು ಅಥವಾ ನೀವು ಇತ್ತೀಚಿಗೆ ಭೇಟಿಯಾಗಿದ್ದ ವ್ಯಕ್ತಿಗಳ ಹೆಸರುಗಳನ್ನು ಒಳಗೊಂಡಿರುತ್ತದೆ. ಇತ್ತೀಚಿನ ನೆನಪು ನೀವು ಬೆಳಿಗ್ಗೆ ಏನು ತಿಂದಿದ್ದೀರಿ ಎಂಬಂತಹ ಮಾಹಿತಿಗಳನ್ನು ಒಳಗೊಂಡಿರುತ್ತದೆ. ದೂರ ನೆನಪಿನಲ್ಲಿ ಬಾಲ್ಯದ ದಿನಗಳಂತಹ ವರ್ಷಗಳ ಹಿಂದಿನ ಮಾಹಿತಿಗಳು ಅಡಕವಾಗಿರುತ್ತವೆ.

ಸಣ್ಣ ವಯಸ್ಸಿನಲ್ಲಿ ಮರೆಗುಳಿತನ

ನಮಗೆ ವಯಸ್ಸಾಗುತ್ತ ಹೋದಂತೆ ನಮ್ಮ ಮನೋವೃತ್ತಿ,ಚಿತ್ತೈಕಾಗ್ರತೆ ಇತ್ಯಾದಿಗಳೂ ಬದಲಾಗುತ್ತವೆ. 20 ವರ್ಷದ ಪ್ರಾಯವನ್ನು ತಲುಪುತ್ತಿದ್ದಂತೆ ಮಿದುಳು ಕೋಶಗಳು ಕಡಿಮೆಯಾಗತೊಡಗುತ್ತವೆ ಮತ್ತು ನಮ್ಮ ಶರೀರವು ಮಿದುಳಿಗೆ ಅಗತ್ಯವಿರುವುದಕ್ಕಿಂತ ಕಡಿಮೆ ರಾಸಾಯನಿಕಗಳನ್ನು ಉತ್ಪಾದಿಸಲು ಆರಂಭಿಸುತ್ತದೆ. ನಮ್ಮ ವಯಸ್ಸು ಹೆಚ್ಚುತ್ತಿದ್ದಂತೆ ಇದು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪರಿಣಾಮವನ್ನು ಬೀರುತ್ತದೆ.

 ನಮ್ಮ ಅಲ್ಪಾವಧಿಯ ಮತ್ತು ದೂರ ನೆನಪುಗಳ ಮೇಲೆ ವಯಸ್ಸು ಪರಿಣಾಮವನ್ನುಂಟು ಮಾಡುವುದಿಲ್ಲ,ಆದರೆ ಇತ್ತೀಚಿನ ನೆನಪಿನ ಮೇಲೆ ಪರಿಣಾಮವನ್ನು ಬೀರುತ್ತದೆ. ನೀವು ಇತ್ತೀಚಿಗೆ ಭೇಟಿಯಾಗಿದ್ದ ವ್ಯಕ್ತಿಗಳ ಹೆಸರುಗಳು ಮರೆಯಬಹುದು ಮತ್ತು ಇದೊಂದು ಸಾಮಾನ್ಯ ಬದಲಾವಣೆಯಾಗಿದೆ.

ನಿಮಗೆ ಒಂದು ಶಬ್ಧ ಗೊತ್ತಿದೆ,ಆದರೆ ಅದು ನಿಮ್ಮ ನೆನಪಿಗೆ ಬರುತ್ತಿಲ್ಲ ಎಂದಿಟ್ಟುಕೊಳ್ಳಿ. ಇಂತಹ ಸ್ಥಿತಿಯು ನಿಮ್ಮ ಜ್ಞಾಪಕ ಶಕ್ತಿಯ ಸಮಸ್ಯೆಯಾಗಿದೆ. ನಿಮ್ಮ ಯೌವನದಲ್ಲಿ ಇದು ಸಂಭವಿಸದಿರಬಹುದು,ಆದರೆ ವಯಸ್ಸಾಗುತ್ತ ಹೋದಂತೆ ಆಗಾಗ್ಗೆ ಇಂತಹ ಸಂದರ್ಭ ಎದುರಾಗುತ್ತಲೇ ಇರುತ್ತದೆ. ಇದು ವ್ಯಕ್ತಿಯನ್ನು ಹತಾಶೆಗೀಡು ಮಾಡಬಹುದಾದರೂ ಅಷ್ಟೊಂದು ಹಾನಿಕಾರಕವಲ್ಲ.

ಖಿನ್ನತೆ, ಅನಾರೋಗ್ಯ, ಬುದ್ಧಿಮಾಂದ್ಯತೆ, ಅಲ್ಜೀಮರ್ಸ್ ಕಾಯಿಲೆ, ಡ್ರಗ್‌ಗಳ ಬಳಕೆಯ ಅಡ್ಡಪರಿಣಾಮಗಳು, ಪಾರ್ಶ್ವವಾಯು, ತಲೆಗೆ ಪೆಟ್ಟು, ಮದ್ಯಪಾನ ಇತ್ಯಾದಿಗಳಂತಹ ಇತರ ಹಲವಾರು ಕಾರಣಗಳು ಜ್ಞಾಪಕ ಶಕ್ತಿ ನಷ್ಟವನ್ನುಂಟು ಮಾಡುತ್ತವೆ.

ಜ್ಞಾಪಕ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳು ನಮ್ಮ ದೈನಂದಿನ ಚಟುವಟಿಕೆಗಳಿಗೆ ಬಾಧೆಯನ್ನುಂಟು ಮಾಡಿದಾಗ ಅವು ಹೆಚ್ಚು ಸಂಕೀರ್ಣವಾಗುತ್ತವೆ. ನೀವು ಯಾವುದಾದರೂ ವ್ಯಕ್ತಿಯ ಹೆಸರನ್ನು ಮರೆತರೆ ಅದರಿಂದೇನೂ ಹಾನಿಯಾಗುವುದಿಲ್ಲ. ಆದರೆ ನೀವು ಹಿಂದೆ ಹಲವಾರು ಬಾರಿ ಮಾಡಿದ್ದ ಕೆಲಸವೊಂದನ್ನು ಈಗ ಮಾಡುವಾಗ ಸರಿಯಾಗಿ ನೆನಪಾಗದೆ ತೊಡಕುಂಟಾಗುತ್ತಿದ್ದರೆ ಅದು ಸಮಸ್ಯೆಯಾಗುತ್ತದೆ.

ಡಿಮೆನ್ಶಿಯಾ ಅಥವಾ ಬುದ್ಧಿಮಾಂದ್ಯತೆಯು ಜ್ಞಾಪಕ ಶಕ್ತಿಯೊಂದಿಗೆ ಗುರುತಿಸಿಕೊಂಡಿರುವ ಇನ್ನೊಂದು ಕಾಯಿಲೆಯಾಗಿದೆ. ತಿಂಗಳುಗಳು ಅಥವಾ ವರ್ಷಗಳು ಸರಿಯುತ್ತಿದ್ದಂತೆ ಈ ರೋಗವು ಹೆಚ್ಚು ಅಪಾಯಕಾರಿಯಾಗುತ್ತದೆ. ಈ ರೋಗವಿರುವಾಗ ವ್ಯಕ್ತಿಗೆ ಸ್ವತಃ ತನ್ನನ್ನೇ ಗುರುತಿಸುವುದು ಕಷ್ಟವಾಗುತ್ತದೆ,ತನ್ನ ಹೆಸರೇನು ಎನ್ನುವುದೇ ಮರೆತುಹೋಗಬಹುದು. ಇಂತ ಸ್ಥಿತಿ ಎದುರಾದಾಗ ವೈದ್ಯರನ್ನು ಸಂಪರ್ಕಿಸಿದರೆ ಅವರು ಸಮಸ್ಯೆ ಪರಿಹಾರಕ್ಕೆ ಮಾರ್ಗವನ್ನು ಸೂಚಿಸುತ್ತಾರೆ.

 ಅಲ್ಜೀಮರ್ಸ್ ಕಾಯಿಲೆಯು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಮೊದಲು ನಮ್ಮ ಇತ್ತೀಚಿನ ಮನೋವೃತ್ತಿಯನ್ನು ಬದಲಿಸುತ್ತದೆ. ಅಲ್ಜೀಮರ್ಸ್ ರೋಗಿಗಳಿಗೆ ಪ್ರಾರಂಭದಲ್ಲಿ ತಮ್ಮ ಜೀವನದಲ್ಲಿ ನಡೆದಿದ್ದ ಕೆಲವೇ ಘಟನೆಗಳು ನೆನಪಿರುತ್ತವೆ, ನಂತರ ಅವೂ ಕೂಡ ಮರೆಯುತ್ತವೆ. ಕಾಲಕ್ರಮೇಣ ಈ ರೋಗವು ಜ್ಞಾಪಕ ಶಕ್ತಿಯ ಇತರ ಭಾಗಗಳ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ.

ಪ್ರತಿ ದಿನ ಮಾಡುತ್ತಿದ್ದ ಕೆಲಸಗಳನ್ನು ಮರೆಯುವುದು, ಹಿಂದೆ ಹಲವಾರು ಮಾಡಿದ್ದ ಕೆಲಸಗಳು ಜ್ಞಾಪಕವಿಲ್ಲದಿರುವುದು, ಒಂದೇ ವಿಷಯದಲ್ಲಿ ಪದೇ ಪದೇ ಕೆಲವು ಹೇಳಿಕೆಗಳ ಪುನರಾವರ್ತನೆ, ಪ್ರತಿ ದಿನದ ಚಟುವಟಿಕೆಗಳನ್ನು ನೆನಪಿನಲ್ಲಿ ದಾಖಲಿಸಿಕೊಳ್ಳಲು ಕಷ್ಟವಾಗುವುದು,ಹಣವನ್ನು ಸರಿಯಾಗಿ ವೆಚ್ಚ ಮಾಡಲು ಸಾಧ್ಯವಾಗದಿರುವುದು ಇವೆಲ್ಲ ವಯಸ್ಸಾಗುತ್ತ ಹೋದಂತೆ ಕಾಣಿಸಿಕೊಳ್ಳುವ ಜ್ಞಾಪಕಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News