ಬೆಳಿಗ್ಗೆ ಎದ್ದು ಬೆಡ್ ಟೀ ಕುಡಿಯುತ್ತೀರಾ?: ಮೊದಲು ಅದನ್ನು ಬಿಡಿ!
ಶೇ.95ರಷ್ಟು ಭಾರತೀಯರ ಪಾಲಿಗೆ ಚಹಾ ಅಥವಾ ಕಾಫಿ ಸೇವನೆ ಬೆಳಗಿನ ಕಡ್ಡಾಯ ವಿಧಿಯಾಗಿದೆ. ಹೆಚ್ಚಿನ ಜನರಿಗೆ ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಬೆಡ್ ಟೀ ಬೇಕೇ ಬೇಕು. ಕೆಲವರು ಬೆಡ್ ಟೀ ವ್ಯಕ್ತಿಗಳಲ್ಲ,ಆದರೆ ಅವರು ಬೆಳಗಿನ ಚಹಾ ಅಥವಾ ಕಾಫಿ ವ್ಯಕ್ತಿಗಳಾಗಿರುತ್ತಾರೆ,ಅಂದರೆ ಅವರಿಗೆ ದಿನವನ್ನು ಆರಂಭಿಸಲು ಒಂದು ಕಪ್ ಕೆಫೀನ್ ಸೇವನೆಯಾಗಲೇಬೇಕು. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೇ? ಬಹುಶಃ ಅಲ್ಲ. ಬೆಳಿಗ್ಗೆ ಕಾಫಿ ಅಥವಾ ಚಹಾ ಸೇವಿಸುವುದು ತನ್ನದೇ ಆದ ಹಲವಾರು ಅಡ್ಡ ಪರಿಣಾಮಗಳನ್ನು ಹೊಂದಿರುವುದರಿಂದ ದಿನವನ್ನು ಕಾಫಿ ಅಥವಾ ಚಹಾದಿಂದ ಆರಂಭಿಸುವುದು ಒಳ್ಳೆಯ ಅಭ್ಯಾಸವಲ್ಲ.
ಇದು ನಿಮ್ಮ ರಕ್ತದೊತ್ತಡ,ಹೃದಯ ಬಡಿತ ದರ ಮತ್ತು ಉಸಿರಾಟ ದರ ಇವುಗಳ ಮೇಲೆ ಪರಿಣಾಮ ಬೀರಬಲ್ಲದು. ನಾವು ದಿನವನ್ನು ಕಾಫಿ ಅಥವಾ ಚಹಾದೊಂದಿಗೆ ಏಕೆ ಆರಂಭಿಸಬಾರದು ಎನ್ನುವುದಕ್ಕೆ ಕಾರಣಗಳಿವೆ. ಇವೆರಡೂ ಪೇಯಗಳಲ್ಲಿರುವ ಪ್ರಮುಖ ಪ್ರಚೋದಕ ಕೆಫೀನ್ ನೀವು ಸಂಪೂರ್ಣ ಜಾಗ್ರತಾವಸ್ಥೆಗೆ ಬರಲು ನೆರವಾಗಬಹುದು,ಆದರೆ ದೀರ್ಘಾವಧಿಯಲ್ಲಿ ಅದು ನಿಮ್ಮ ಆರೋಗ್ಯಕ್ಕೆ ಕೆಡುಕನ್ನುಂಟು ಮಾಡುತ್ತದೆ. ಚಹಾ ಅಥವಾ ಕಾಫಿ ಸೇವನೆಯಿಂದ ದಿನವನ್ನು ಆರಂಭಿಸುವುದರ ಕೆಡುಕುಗಳು:
* ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಚಹಾ ಅಥವಾ ಕಾಫಿಯಲ್ಲಿನ ಪ್ರಚೋದಕಗಳು ನಿಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಜೀವಕೋಶಗಳಿಗೆ ಶೂನ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಇದೇ ಕಾರಣದಿಂದ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಚಹಾ ಸೇವಿಸುವುದು ಹಾನಿಕಾರಕವಾಗಿದೆ. ಜೊತೆಗೆ ಬೆಳಿಗ್ಗೆ ಚಹಾ ಸೇವನೆಯೊಂದಿಗೆ ಏಳುವುದು ಶರೀರದಲ್ಲಿಯ ಆಮ್ಲ-ಕ್ಷಾರ ಸಮತೋಲನವನ್ನು ಕೆಡಿಸುವ ಮೂಲಕ ವಾಕರಿಕೆಯನ್ನುಂಟು ಮಾಡಬಲ್ಲದು.
* ಅತಿಯಾಗಿ ತಿನ್ನುವಿಕೆಗೆ ಕಾರಣವಾಗುತ್ತದೆ ಚಹಾ ಮತ್ತು ಕಾಫಿ ನಿಮ್ಮ ಹಸಿವನ್ನು ಕಡಿಮೆಗೊಳಿಸುತ್ತವೆ. ಅವುಗಳ ಸೇವನೆಯ ಬಳಿಕ ತುಂಬ ಹೊತ್ತಿನವರೆಗೆ ಹಸಿವು ಅನಿಸುವುದಿಲ್ಲ. ಆದರೆ ತುಂಬ ಹೊತ್ತು ಹಸಿದಿರುವುದು ಬೆಳಗಿನ ಸಮಯದಲ್ಲಿ ಭಾರೀ ಕ್ಯಾಲರಿ ಕೊರತೆಗೆ ಕಾರಣವಾಗುತ್ತದೆ ಮತ್ತು ನಂತರ ಅತಿಯಾಗಿ ಆಹಾರ ಸೇವಿಸುವಂತೆ ಮಾಡುತ್ತದೆ.
*ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಬೆಳಗಿನ ಚಹಾ ಅಥವಾ ಕಾಫಿ ಸೇವನೆ ಹಸಿವನ್ನು ತಗ್ಗಿಸುತ್ತದೆ ಅಥವಾ ಅಂತ್ಯಗೊಳಿಸುತ್ತದೆ,ಇದರಿಂದಾಗಿ ಏನನ್ನಾದರೂ ತಿನ್ನಬೇಕು ಎಂದು ಅನಿಸುವುದಿಲ್ಲ. ಇದು ಚಯಾಪಚಯವನ್ನು ಮತ್ತು ಜೀರ್ಣಾಂಗವನ್ನು ನಿಧಾನಗೊಳಿಸುತ್ತದೆ. ಆರೋಗ್ಯಕರ ಬ್ರೆಕ್‌ಫಾಸ್ಟ್ ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸುತ್ತದೆ.
* ಗ್ಯಾಸ್ಟ್ರಿಕ್ ಸಮಸ್ಯೆಗಳು ಚಹಾ ಮತ್ತು ಕಾಫಿ ಎರಡೂ ಕೆಫೀನ್ ಒಳಗೊಂಡಿರುವುದರಿಂದ ಇವುಗಳ ಸೇವನೆಯೊಂದಿಗೆ ದಿನವನ್ನು ಆರಂಭಿಸುವುದು ಗ್ಯಾಸ್ಟ್ರಿಕ್ ತೊಂದರೆಗಳಿಗೆ ಕಾರಣವಾಗುತ್ತದೆ. ಖಾಲಿಹೊಟ್ಟೆಯಲ್ಲಿ ಕೆಫೀನ್ ಸೇವಿಸುವುದು ಗ್ಯಾಸ್ಟ್ರಿಕ್ ಕೋಶಗಳನ್ನು ಉತ್ತೇಜಿಸುವ ಮೂಲಕ ಎದೆಯುರಿ ಮತ್ತು ಆ್ಯಸಿಡಿಟಿಯನ್ನುಂಟು ಮಾಡುತ್ತದೆ.
* ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತದೆ. ಚಹಾದಲ್ಲಿರುವ ಟ್ಯಾನಿನ್ ಶರೀರವು ಕಬ್ಬಿಣವನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಒಂದು ಕಪ್ ಚಹಾ ಅಥವಾ ಕಾಫಿ ಜನರನ್ನು ಚೈತನ್ಯಯುರನ್ನಾಗಿಸುತ್ತದೆ ಎಂದು ಕಂಡುಬಂದರೂ ಅದು ನಮ್ಮ ಶರೀರದಲ್ಲಿಯ ಜೈವಿಕ ಗಡಿಯಾರಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಅಹಿತಕ್ಕೆ ಕಾರಣವಾಗುತ್ತದೆ. ಬೆಡ್ ಟೀ ಅಥವಾ ಬೆಡ್ ಕಾಫಿ ಸೇವನೆಯೊಂದಿಗೆ ಗುರುತಿಸಿಕೊಂಡಿರುವ ಈ ತೊಂದರೆಗಳ ಬಗ್ಗೆ ತಿಳಿದ ನಂತರ ನೀವು ಖಂಡಿತವಾಗಿಯೂ ಈ ಅಭ್ಯಾಸವನ್ನು ನಿಲ್ಲಿಸಬೇಕು. ಹೊಟ್ಟೆ ತುಂಬ ಆಹಾರ ಸೇವಿಸಿದ ಬಳಿಕ ನೀವು ಕೆಫೀನ್‌ಯುಕ್ತ ಪೇಯವನ್ನು ಕುಡಿದರೆ ಹೆಚ್ಚು ತೊಂದರೆಯಾಗುವುದಿಲ್ಲ.