ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಆರೋಗ್ಯಲಾಭಗಳು ಗೊತ್ತೇ?
ಬೇಸಿಗೆಯಲ್ಲಿ ಮಾವಿನ ನಂತರ ಕಲ್ಲಂಗಡಿ ಬಹು ಅಪೇಕ್ಷಿತ ಹಣ್ಣಾಗಿದೆ. ಬಿಸಿಲಿನ ಹೊಡೆತವನ್ನು ತಡೆದುಕೊಂಡು ಶರೀರದಲ್ಲಿ ದ್ರವಾಂಶಕ್ಕೆ ಕೊರತೆಯಾಗದಂತೆ ಸಮೃದ್ಧ ನೀರನ್ನು ಈ ಹಣ್ಣು ಒಳಗೊಂಡಿರುತ್ತದೆ. ಹೆಚ್ಚಿನವರು ಹಣ್ಣಿನ ಕೆಂಪು ತಿರುಳು ಮಾತ್ರ ತಿನ್ನಲು ಯೋಗ್ಯವೆಂದು ಭಾವಿಸಿರುತ್ತಾರೆ. ಸಿಪ್ಪೆಯಲ್ಲಿರುವ ಪೋಷಕಾಂಶಗಳ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ,ಹೀಗಾಗಿ ಅದನ್ನು ತಿಪ್ಪೆಗೆ ಎಸೆಯುತ್ತಾರೆ. ಅಚ್ಚರಿಯ ವಿಷಯವೆಂದರೆ ಕೆಂಪು ತಿರುಳು ಮತ್ತು ಹೊರಭಾಗದ ಹಸಿರು ಸಿಪ್ಪೆಯ ನಡುವಿನ ಬಿಳಿಯ ಭಾಗವು ಹಣ್ಣುಗಳಲ್ಲಿ ಸುಲಭವಾಗಿ ಕಂಡುಬರದ ಕೆಲವು ಪೋಷಕಾಂಶಗಳ ಗಣಿಯಾಗಿದೆ.
ಕಲ್ಲಂಗಡಿಯ ಸಿಪ್ಪೆಯು ಸಿಟ್ರುಲಿನ್ ಅನ್ನು ಒಳಗೊಂಡಿರುತ್ತದೆ. ಅಗತ್ಯ ಅಮಿನೊ ಆ್ಯಸಿಡ್ ಆಗಿರುವ ಇದು ಹೃದಯದ ಕಾರ್ಯಗಳನ್ನು,ರಕ್ತ ಪರಿಚಲನೆ ವ್ಯವಸ್ಥೆ ಮತ್ತು ರೋಗ ನಿರೋಧಕ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುತ್ತದೆ. ಎ ಮತ್ತು ಸಿ ವಿಟಾಮಿನ್‌ಗಳು,ಪೊಟ್ಯಾಷಿಯಂ,ಮ್ಯಾಗ್ನೀಷಿಯಂ,ಸತುವು ಮತ್ತು ಕಾರ್ಬೊಹೈಡ್ರೇಟ್ ಗಳು ಕಲ್ಲಂಗಡಿಯ ಸಿಪ್ಪೆಯಲ್ಲಿರುವ ಇತರ ಪೋಷಕಾಂಶಗಳಾಗಿವೆ. ಇದು ನಾವು ಈವರೆಗೆ ತಿಪ್ಪೆಗೆಸೆಯುತ್ತ ಬಂದಿರುವ ಕಲ್ಲಂಗಡಿ ಸಿಪ್ಪೆಯು ಎಷ್ಟೊಂದು ಪೌಷ್ಟಿಕ ಎನ್ನುವುದನ್ನು ಸೂಚಿಸುತ್ತದೆ. ಇದು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ......
► ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
ನಿಮ್ಮ ಹೃದಯವನ್ನು ಆರೋಗ್ಯಯುತವಾಗಿರಿಸಲು ಕಲ್ಲಂಗಡಿ ಸಿಪ್ಪೆಯು ನೆರವಾಗುತ್ತದೆ. ಅದು ರಕ್ತಸಂಚಾರವನ್ನು ಉತ್ತೇಜಿಸುತ್ತದೆ ಮತ್ತು ಇದು ಹೃದಯಕ್ಕೆ ಪೂರಕವಾಗಿದೆ. ಜೊತೆಗೆ ಸಿಪ್ಪೆಯಲ್ಲಿರುವ ಸಿಟ್ರುಲಿನ್ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಹೃದಯ ವೈಫಲ್ಯ,ಹೃದಯ ರಕ್ತನಾಳಗಳ ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.
► ಮೂತ್ರಪಿಂಡಗಳ ಆರೋಗ್ಯಕ್ಕೆ ಒಳ್ಳೆಯದು
ಕಲ್ಲಂಗಡಿ ಸಿಪ್ಪೆಯಲ್ಲಿರುವ ಪೊಟ್ಯಾಷಿಯಂ ಮೂತ್ರಪಿಂಡಗಳ ಆರೋಗ್ಯಕ್ಕೆ ಒಳ್ಳೆಯದು. ಸಿಪ್ಪೆಯು ಮೂತ್ರವರ್ಧಕ ಮತ್ತು ಜಲೀಕರಣ ಗುಣಗಳನ್ನು ಹೊಂದಿದ್ದು ಇವು ಮೂತ್ರನಾಳ ಸೋಂಕಿನ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ಮೂತ್ರನಾಳ ಸೋಂಕಿನ ಸಮಸ್ಯೆಯಿರುವವರು ನಿಯಮಿತವಾಗಿ ಒಂದು ಗ್ಲಾಸ್ ತಾಜಾ ಕಲ್ಲಂಗಡಿ ರಸವನ್ನು ಸೇವಿಸಬೇಕು.
► ಉರಿಯೂತವನ್ನು ತಗ್ಗಿಸುತ್ತದೆ
ಕಲ್ಲಂಗಡಿ ಸಿಪ್ಪೆಯಲ್ಲಿರುವ ಲೈಕೊಪಿನ್ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈ ಸಿಪ್ಪೆಯನ್ನು ತಿನ್ನುವುದರಿಂದ ಚರ್ಮದ ಉರಿಯೂತದಿಂದ ಹಿಡಿದು ಸಂಧಿವಾತದ ನೋವಿನವರೆಗಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಉರಿಯೂತವನ್ನು ತಗ್ಗಿಸುವ ಮೂಲಕ ಮುಖದಲ್ಲಿನ ಮೊಡವೆಗಳ ಚಿಕಿತ್ಸೆಗೂ ಸಿಪ್ಪೆಯು ನೆರವಾಗುತ್ತದೆ. ಸಿಪ್ಪೆಯ ಬಿಳಿಭಾಗವನ್ನು ಅವೊಕಾಡೊ ಅಥವಾ ಬಾಳೆಹಣ್ಣಿನೊಂದಿಗೆ ಮಿಶ್ರಗೊಳಿಸಿ ಲೇಪವನ್ನು ಸಿದ್ಧಪಡಿಸಿ,ಅದನ್ನು ಮುಖಕ್ಕೆ ಹಚ್ಚಿಕೊಂಡರೆ ಪರಿಣಾಮಕಾರಿಯಾಗುತ್ತದೆ.
► ತೂಕ ಇಳಿಕೆ ಮತ್ತು ರಕ್ತದೊತ್ತಡ ನಿಯಂತ್ರಣ
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಕಲ್ಲಂಗಡಿ ಸಿಪ್ಪೆಯು ನೆರವಾಗುತ್ತದೆ. ಕಲ್ಲಂಗಡಿ ಮತ್ತು ಅದರ ಸಿಪ್ಪೆಯಲ್ಲಿರುವ ಎಲ್-ಸಿಟ್ರುಲಿನ್ ರಕ್ತನಾಳಗಳನ್ನು ತೆಳುವಾಗಿಸಲು ಮತ್ತು ತನ್ಮೂಲಕ ಅಧಿಕ ರಕ್ತದೊತ್ತಡವನ್ನು ಸಹಜ ಮಟ್ಟಕ್ಕೆ ತಗ್ಗಿಸಲು ನೆರವಾಗುತ್ತದೆ. ಸಿಪ್ಪೆಯಲ್ಲಿರುವ ಸಿಟ್ರುಲಿನ್ ಶರೀರದ ತೂಕವನ್ನು ಇಳಿಸಲು ಸಹ ನೆರವಾಗುತ್ತದೆ. ಸಿಪ್ಪೆಯಲ್ಲಿರುವ ನಾರು ಅಧಿಕ ಸಮಯ ಹೊಟ್ಟೆ ತುಂಬಿರುವಂತೆ ಮಾಡುತ್ತದೆ,ಹೀಗಾಗಿ ಆಗಾಗ್ಗೆ ಏನಾದರೂ ತಿನ್ನಬೇಕೆಂಬ ತುಡಿತವಿರುವುದಿಲ್ಲ.
► ನಿದ್ರೆಯನ್ನು ಉತ್ತಮಗೊಳಿಸುತ್ತದೆ
ಕಲ್ಲಂಗಡಿ ಸಿಪ್ಪೆಯಲ್ಲಿರುವ ಮ್ಯಾಗ್ನೀಷಿಯಂ ನಮ್ಮ ಶರೀರಕ್ಕೆ ಪೂರಕವಾಗಿದ್ದು ಉತ್ತಮ ಪರಿಣಾಮಗಳನ್ನು ನೀಡುತ್ತದೆ. ಹಣ್ಣು ಮತ್ತು ಸಿಪ್ಪೆಯ ಸೇವನೆಯಿಂದ ನಿದ್ರಾಹೀನತೆ ಸಮಸ್ಯೆಗಳು ಬಗೆಹರಿಯುತ್ತವೆ.
► ಕಲ್ಲಂಗಡಿ ಸಿಪ್ಪೆಯನ್ನು ಬಳಸುವುದು ಹೇಗೆ?
ಸಿಪ್ಪೆಯ ಬಿಳಿಯ ಭಾಗವನ್ನು ಅಡಿಗೆಯಲ್ಲಿ ತರಕಾರಿಯಂತೆ ಬಳಸಬಹುದು. ಬಿಳಿಯ ಭಾಗದಿಂದ ಜಾಮ್ ತಯಾರಿಸಬಹುದು. ಇತರ ಯಾವುದೇ ಸಾಮಾನ್ಯ ಉಪ್ಪಿನಕಾಯಿ ಯಂತೆ ಕಲ್ಲಂಗಡಿ ಸಿಪ್ಪೆಯ ಉಪ್ಪಿನಕಾಯಿಯನ್ನು ಮಾಡಬಹುದು. ಸಿಪ್ಪೆಯಿಂದ ಸಾಸ್ ತಯಾರಿಸಬಹುದು.