ಅಧಿಕ ರಕ್ತದೊತ್ತಡ ಕುರಿತು ಮಿಥ್ಯೆಗಳು, ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ

Update: 2020-05-17 17:59 GMT

ಹೈಪರ್‌ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡವು ಇಂದು ಸಾಮಾನ್ಯ ಸಮಸ್ಯೆಯಾಗಿದ್ದು, ವಿಶ್ವಾದ್ಯಂತ ಕೋಟ್ಯಂತರ ಜನರು ಇದರಿಂದ ಬಳಲುತ್ತಿದ್ದಾರೆ. 2017ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯಂತೆ ಭಾರತದಲ್ಲಿ 112 ಮಿಲಿಯ ಪುರುಷರು ಮತ್ತು 95 ಮಿಲಿಯ ಮಹಿಳೆಯರು,ಹೀಗೆ ಒಟ್ಟು 207 ಮಿಲಿಯ ಜನರು ರಕ್ತದೊತ್ತಡದಿಂದ ಬಳಲುತ್ತಿದ್ದರು. ಈಗ ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ. ಅಧಿಕ ರಕ್ತದೊತ್ತಡವನ್ನು ‘ಸದ್ದಿಲ್ಲದ ಕೊಲೆಗಾರ’ಎಂದು ಪರಿಗಣಿಸಲಾಗಿದೆಯಾದರೂ ಅದರ ಕುರಿತು ತಪ್ಪುಗ್ರಹಿಕೆಗಳು ಇನ್ನೂ ಹೆಚ್ಚು ಅಪಾಯಕಾರಿಯಾಗಿವೆ. ಇಂತಹ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳನ್ನು ತಿಳಿಯೋಣ ಬನ್ನಿ....

► ತಲೆನೋವು, ಹೆದರಿಕೆ, ಬೆವರುವಿಕೆ ಮತ್ತು ನಿದ್ರೆಗೆ ತೊಂದರೆ ಇವು ಅಧಿಕ ರಕ್ತದೊತ್ತಡದ ಲಕ್ಷಣಗಳಲ್ಲಿ ಸೇರಿವೆ. ಇಂತಹ ಯಾವುದೇ ಸಮಸ್ಯೆಗಳು ವ್ಯಕ್ತಿಯಲ್ಲಿ ಇಲ್ಲದಿದ್ದರೆ ಆತ ಚೆನ್ನಾಗಿದ್ದಾನೆ ಎಂದು ಅರ್ಥ.

- ತನ್ನಲ್ಲಿ ಅಧಿಕ ರಕ್ತದೊತ್ತಡದ ಯಾವುದೇ ಲಕ್ಷಣಗಳಿಲ್ಲ, ಹೀಗಾಗಿ ತಾನು ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನುವುದು ಜನರಲ್ಲಿ ಅತ್ಯಂತ ಹೆಚ್ಚು ಸಾಮಾನ್ಯವಾಗಿರುವ ತಪ್ಪುಗ್ರಹಿಕೆಯಾಗಿದೆ. ಆದರೆ ಅಧಿಕ ರಕ್ತದೊತ್ತಡವು ಸದ್ದಿಲ್ಲದ ಹಂತಕನಾಗಿರುವುದರಿಂದ ಹೀಗೆ ಭಾವಿಸುವುದು ತಪ್ಪಾಗುತ್ತದೆ. ವಾಸ್ತವದಲ್ಲಿ ಶೇ.90ಕ್ಕೂ ಅಧಿಕ ರಕ್ತದೊತ್ತಡ ಪ್ರಕರಣಗಳಲ್ಲಿ ವ್ಯಕ್ತಿಗಳಲ್ಲಿ ತಲೆನೋವು,ತಲೆ ಸುತ್ತುವಿಕೆ,ಬಳಲಿಕೆ ಅಥವಾ ಉಸಿರುಗಟ್ಟುವಿಕೆಯಂತಹ ಯಾವುದೇ ಲಕ್ಷಣಗಳಿರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

ಅಧಿಕ ಅಪಾಯದ ಗುಂಪಿಗೆ ಸೇರಿರುವ ಜನರು ಪ್ರತಿ 3-6 ತಿಂಗಳಿಗೊಮ್ಮೆ ಮತ್ತು 30 ವರ್ಷ ಪ್ರಾಯಕ್ಕಿಂತ ಮೇಲಿನವರು ಪ್ರತಿ ವರ್ಷ ತಮ್ಮ ರಕ್ತದೊತ್ತಡವನ್ನು ತಪಾಸಣೆ ಮಾಡಿಸಿಕೊಳ್ಳಬೇಕು.

ಕುಟುಂಬದಲ್ಲಿ ಅಧಿಕ ರಕ್ತದೊತ್ತಡದ ಇತಿಹಾಸ ಇರುವವರು,ಅತಿಯಾದ ದೇಹತೂಕ ಅಥವಾ ಬೊಜ್ಜು ಹೊಂದಿರುವವರು,ಮಧುಮೇಹಿಗಳು ಅಥವಾ ಹೃದ್ರೋಗಿಗಳು, ಕ್ರಿಯಾಶೀಲವಲ್ಲದ/ಜಡವಾದ ಜೀವನಶೈಲಿಯನ್ನು ಹೊಂದಿದವರು, ಒತ್ತಡದಿಂದ ಬಳಲುತ್ತಿರುವವರು ಅಧಿಕ ಅಪಾಯದ ಗುಂಪಿಗೆ ಸೇರುತ್ತಾರೆ.

► ಅಧಿಕ ರಕ್ತದೊತ್ತಡ ವಯಸ್ಸಾದವರನ್ನು ಮಾತ್ರ ಕಾಡುತ್ತದೆ

- ಮೊಟ್ಟಮೊದಲನೆಯದಾಗಿ ಅಧಿಕ ರಕ್ತದೊತ್ತಡದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ, ಹೀಗೆ ಎರಡು ವಿಧಗಳಿವೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಶೇ.5ರಷ್ಟು ರೋಗಿಗಳು ಎರಡನೆಯ ವಿಧದ ರಕ್ತದೊತ್ತಡದಿಂದ ಬಳಲುತ್ತಿರುತ್ತಾರೆ ಮತ್ತು ಇಂತಹ ಪ್ರಕರಣಗಳಲ್ಲಿ ಅಧಿಕ ರಕ್ತದೊತ್ತಡಕ್ಕೆ ಗೊತ್ತಿರುವ ಕಾರಣವಿರುತ್ತದೆ. ಮೂತ್ರಪಿಂಡ ರೋಗ,ಅಡ್ರಿನಲ್ ಗ್ರಂಥಿ ಕಾಯಿಲೆ,ಥೈರಾಯ್ಡ್ ಕಾಯಿಲೆ ಅಥವಾ ಎಂಡೊಕ್ರೈನ್ ರೋಗ ಇತ್ಯಾದಿಗಳು ಇಂತಹ ಕಾರಣಗಳಲ್ಲಿ ಸೇರುತ್ತವೆ. ಇಂತಹ ರೋಗಿಗಳು ಸಾಮಾನ್ಯವಾಗಿ ಎಳೆಯರಾಗಿರುತ್ತಾರೆ,20 ವರ್ಷದ ಕೆಳಗಿನವರು ಅಥವಾ ಹದಿಹರೆಯದವರೂ ಆಗಿರಬಹುದು,ಆದರೆ ಇದು ಅಪರೂಪ.

ಆದರೆ ಶೇ.95ರಷ್ಟು ರೋಗಿಗಳಲ್ಲಿ ಅಧಿಕ ರಕ್ತದೊತ್ತಡಕ್ಕೆ ಯಾವುದೇ ಗೊತ್ತಾದ ಕಾರಣವಿರುವುದಿಲ್ಲ ಮತ್ತು ಇದನ್ನು ಪ್ರಾಥಮಿಕ ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ 30 ವರ್ಷ ಮತ್ತು ಹೆಚ್ಚಿನ ಪ್ರಾಯದವರಲ್ಲಿ ಕಂಡು ಬರುತ್ತದೆ. ಆಧುನಿಕ ಜೀವನಶೈಲಿಗಳಿಂದಾಗಿ ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿದವರ ಯುವಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಒತ್ತಡ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಆಹಾರದಲ್ಲಿ ಅಧಿಕ ಉಪ್ಪು ಸೇವನೆ ಇವು ಇದಕ್ಕೆ ಮೂರು ಪ್ರಮುಖ ಕಾರಣಗಳಾಗಿವೆ. ಇದೇ ಕಾರಣದಿಂದ 30 ವರ್ಷ ಪ್ರಾಯದವರೂ ತಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

► ಅಧಿಕ ರಕ್ತದೊತ್ತಡವು ವ್ಯಕ್ತಿಯ ಕುಟುಂಬದ ಇತಿಹಾಸದಲ್ಲಿ ಹಾಸು ಹೊಕ್ಕಿರುವಾಗ ಅದು ಬರದಂತೆ ತಡೆಯಲು ಸಾಧ್ಯವಿಲ್ಲ

- ನಿಮ್ಮ ಕುಟುಂಬದಲ್ಲಿ ಅಧಿಕ ರಕ್ತದೊತ್ತಡದ ಇತಿಹಾಸವಿದ್ದರೆ ನೀವೂ ಅದಕ್ಕೆ ಗುರಿಯಾಗುವ ಅಪಾಯ ಹೆಚ್ಚಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಸ್ಥಿತಿಯನ್ನು ನಿರ್ವಹಿಸಲು ನಿಮ್ಮಿಂದ ಸಾಧ್ಯವಿಲ್ಲ ಎನ್ನುವುದು ಇದರ ಅರ್ಥವಲ್ಲ. ಯಾವುದೇ ಅನಾರೋಗ್ಯವು ವಂಶವಾಹಿ ಮತ್ತು ಪರಿಸರದ ಅಂಶಗಳ ಅಭಿವ್ಯಕ್ತಿಯಾಗಿದೆ. ಹೀಗಾಗಿ ನಿಮ್ಮ ಕುಟುಂಬದ ಇತಿಹಾಸದಲ್ಲಿ ಅಧಿಕ ರಕ್ತದೊತ್ತಡವಿದ್ದರೆ ನೀವು ಅದಕ್ಕೆ ಗುರಿಯಾಗಬಹುದು,ಆದರೆ ಒತ್ತಡ,ಆಹಾರಕ್ರಮ ಮತ್ತು ಜೀವನಶೈಲಿಯಂತಹ ಪರಿಸರ ಅಂಶಗಳನ್ನು ನಿಯಂತ್ರಿಸುವ ಮೂಲಕ ನೀವು ಅದನ್ನು ನಿಭಾಯಿಸಬಹುದಾ ಗಿದೆ. ಅಲ್ಲದೆ ಈ ಅಂಶಗಳನ್ನು ನೀವು ನಿಯಂತ್ರಿಸಲು ಸಾಧ್ಯವಾದರೆ ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುವುದನ್ನು ವಿಳಂಬಿಸಲು ಮತ್ತು ಅದರ ತೊಂದರೆಗಳನ್ನು ತಡೆಯಲೂ ನಿಮಗೆ ಸಾಧ್ಯವಾಗುತ್ತದೆ.

► ವ್ಯಕ್ತಿಯು ಹೆಚ್ಚುವರಿ ಉಪ್ಪು ಸೇವಿಸದಿದ್ದರೆ ಆತನ ಸೋಡಿಯಂ ಸೇವನೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ

- ನೀವು ನಿಮ್ಮ ಆಹಾರದಲ್ಲಿ ಹೆಚ್ಚುವರಿ ಉಪ್ಪನ್ನು ಸೇರಿಸಿಕೊಳ್ಳದಿದ್ದರೂ,ನಿಮ್ಮ ದಿನನಿತ್ಯದ ಆಹಾರದಲ್ಲಿ ಉಪ್ಪಿನ ಹಲವಾರು ಬಚ್ಚಿಟ್ಟ ಮೂಲಗಳಿರುತ್ತವೆ ಎನ್ನುವುದು ನಿಮಗೆ ಗೊತ್ತಿರುವುದಿಲ್ಲ. ಸಂಸ್ಕರಿತ ಆಹಾರಗಳು,ತಿನ್ನಲು ಸಿದ್ಧ ಆಹಾರಗಳು, ಸಾಸ್, ಬ್ರೆಡ್,ನೂಡಲ್‌ಗಳು,ಬೇಕರಿ ಉತ್ಪನ್ನಗಳು,ಉಪ್ಪಿನಕಾಯಿ,ಕ್ಯಾನ್‌ನಲ್ಲಿ ಪ್ಯಾಕ್ ಮಾಡಲಾದ ಆಹಾರ,ಚಿಪ್ಸ್ ಮತ್ತು ಚೀಸ್ ಇತ್ಯಾದಿಗಳು ಇಂತಹ ಬಚ್ಚಿಟ್ಟ ಮೂಲಗಳಲ್ಲಿ ಸೇರಿವೆ. ಹೀಗಾಗಿ ಇಂತಹ ಆಹಾರಗಳಿಂದ ದೂರವಿರುವುದು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಭಾಯಿಸಲು ನಿಮಗೆ ನೆರವಾಗುತ್ತದೆೆ. ಅಲ್ಲದೆ ಪ್ಯಾಕೇಜ್ಡ್ ಆಹಾರವನ್ನು ಖರೀದಿಸುವಾಗ ‘ಸೋಡಿಯಂ ಕಂಟೆಂಟ್’ಲೇಬಲ್‌ಗಳನ್ನು ಪರಿಶೀಲಿಸಿ.

► ಅಡಿಗೆಯಲ್ಲಿ ಮಾಮೂಲು ಟೇಬಲ್ ಸಾಲ್ಟ್‌ಗೆ ಬದಲಾಗಿ ಸಮುದ್ರ ಲವಣ ಬಳಸುತ್ತಿದ್ದರೆ ಉಪ್ಪಿನ ಸೇವನೆಯ ಬಗ್ಗೆ ಚಿಂತಿಸಬೇಕಿಲ್ಲ

 - ಕೋಷರ್ ಸಾಲ್ಟ್,ಪಿಂಕ್ ಸಾಲ್ಟ್,ಬ್ಲಾಕ್ ಸಾಲ್ಟ್ ಅಥವಾ ಸಮುದ್ರ ಲವಣಗಳಂತಹ ತಥಾಕಥಿತ ‘ಕಡಿಮೆ ಸೋಡಿಯಂ ಪರ್ಯಾಯಗಳು ’ಮಾಮೂಲು ಟೇಬಲ್ ಸಾಲ್ಟ್‌ಗಿಂತ ಹೆಚ್ಚು ಸುರಕ್ಷಿತ ಎನ್ನಲು ಯಾವುದೇ ಸಾಕ್ಷಾಧಾರಗಳಿಲ್ಲ. ಉಪ್ಪಿನ ಸೇವನೆಯ ಮೇಲೆ ಮಿತಿಯಿರಲಿ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿರುವಂತೆ ಆರೋಗ್ಯವಂತ ವಯಸ್ಕ ವ್ಯಕ್ತಿ ದಿನವೊಂದಕ್ಕೆ ಐದು ಗ್ರಾಂ ಅಂದರೆ ಸುಮಾರು ಒಂದು ಟೀ ಸ್ಪೂನ್‌ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು. ಅಧಿಕ ರಕ್ತದೊತ್ತಡವಿರುವವರು ಪ್ರತಿನಿತ್ಯ ಇದಕ್ಕಿಂತ ಕಡಿಮೆ ಎಂದರೆ 2ರಿಂದ 4 ಗ್ರಾಂ(ಅರ್ಧ ಟೀಸ್ಪೂನ್) ಉಪ್ಪನ್ನು ಸೇವಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News