ಇವುಗಳನ್ನು ಸೇವಿಸಿ, ಬಿಸಿಲ ಝಳದಿಂದ ಪಾರಾಗಿ
ದಿನೇ ದಿನೇ ಬೇಸಿಗೆಯು ಪ್ರಖರವಾಗುತ್ತಲೇ ಇದೆ. ಮಳೆ ಸದ್ಯವೇ ಬರುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಬಿಸಿಲು ಇನ್ನಷ್ಟು ಹೆಚ್ಚಾಗಲಿದೆ. ಉಷ್ಣ ಮಾರುತದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಹಲವಾರು ರಾಜ್ಯಗಳಲ್ಲಿ,ವಿಶೇಷವಾಗಿ ಉತ್ತರ ಭಾರತದಲ್ಲಿ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಬಿಸಿಲಿನಲ್ಲಿ ತಿರುಗಾಡುವುದಿರಲಿ,ಅಸಹನೀಯ ಧಗೆಯು ಮನೆಗಳಲ್ಲಿ ಇರುವಾಗಲೇ ನಾವು ವಿಪರೀತ ಬೆವರುವಂತೆ ಮಾಡುತ್ತಿದೆ. ಬಿಸಿಲಿನ ಝಳ ತುಂಬ ಅಪಾಯಕಾರಿ,ಅದು ಶರೀರದ ತಾಪಮಾನವನ್ನು ಹೆಚ್ಚಿಸುತ್ತದೆ ಮತ್ತು ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಶರೀರವನ್ನು ಜಲೀಕರಿಸುವ ಆಹಾರಗಳ ಸೇವನೆ ಬೇಸಿಗೆಯ ಧಗೆಯಿಂದ ಪಾರಾಗಲು ಉತ್ತಮ ಮಾರ್ಗಗಳಲ್ಲೊಂದಾಗಿದೆ. ಕಡಿಮೆ ಕ್ಯಾಲರಿಗಳನ್ನೊಂಡಿರುವ ಆಹಾರಗಳು ನಮ್ಮ ಚಯಾಪಚಯ ವ್ಯವಸ್ಥೆಯು ಶರೀರದಲ್ಲಿ ಹೆಚ್ಚು ಉಷ್ಣತೆಯನ್ನು ಉತ್ಪತ್ತಿ ಮಾಡುವುದನ್ನು ತಡೆಯುವುದರಿಂದ ಇಂತಹ ಆಹಾರಗಳೂ ಬೇಸಿಗೆಯಲ್ಲಿ ಸೂಕ್ತವಾಗಿವೆ. ಬಿರುಬಿಸಿಲಿನ ದುಷ್ಪರಿಣಾಮಗಳಿಂದ ಪಾರಾಗಲು ನೆರವಾಗಬಲ್ಲ ಕೆಲವು ಅತ್ಯುತ್ತಮ ಆಹಾರಗಳಿಲ್ಲಿವೆ......
* ಸೌತೆ
ಸೌತೆಯು ಈ ಭೂಮಿಯ ಮೇಲಿನ ಅತ್ಯಂತ ತಂಪು ಆಹಾರಗಳಲ್ಲೊಂದಾಗಿದೆ. ಸೌತೆಯಲ್ಲಿ ತಿರುಳಿಗಿಂತ ಹೆಚ್ಚು ನೀರೇ ಇರುತ್ತದೆ. ಅಲ್ಲದೆ ಕಡಿಮೆ ಕ್ಯಾಲರಿಗಳನ್ನು ಹೊಂದಿರುವುದರಿಂದ ಇದನ್ನು ಎಷ್ಟು ಬೇಕಾದರೂ ತಿನ್ನಬಹುದು. ಉಷ್ಣ ಮಾರುತದಿಂದಾಗಿ ಉಂಟಾಗುವ ಹಾನಿಗೆ ಶರೀರದಲ್ಲಿ ದ್ರವಗಳ ಮಟ್ಟ ಕಡಿಮೆಯಾಗುವುದು ಕಾರಣವಾಗಿದೆ. ಸೌತೆಯನ್ನು ತಿನ್ನುವುದರಿಂದ ಶರೀರದಲ್ಲಿಯ ನೀರಿನ ಮಟ್ಟವನ್ನು ಮರುಪೂರಣ ಮಾಡಬಹುದು.
*ಸೀಯಾಳದ ನೀರು
ಯಥೇಚ್ಛ ನೀರನ್ನು ಸೇವಿಸುವುದು ಬಿಸಿಲಿನ ಝಳದಿಂದ ಪಾರಾಗಲು ಮುಖ್ಯವಾಗಿದೆ. ನಮ್ಮ ಶರೀರದಲ್ಲಿ ನೀರಿನ ಮಹತ್ವಕ್ಕೆ ನಾವು ಆದ್ಯತೆಯನ್ನು ನೀಡುವುದಿಲ್ಲ,ಎಷ್ಟೋ ಜನರು ನೀರು ಸೇವಿಸುವುದರಲ್ಲೂ ಜಿಪುಣತನ ಮಾಡುತ್ತಿರುತ್ತಾರೆ. ಹಲವರಿಗೆ ಪದೇ ಪದೇ ಸಾದಾ ನೀರನ್ನೇ ಕುಡಿಯುತ್ತಿರುವುದು ರೇಜಿಗೆಯನ್ನುಂಟು ಮಾಡಬಹುದು. ಇದೇ ಕಾರಣದಿಂದ ನೀರಿಗೆ ಬದಲಾಗಿ ಸೀಯಾಳದ ನೀರು ಬಳಕೆಯಾಗುತ್ತದೆ. ಪ್ರತಿದಿನ ಒಂದು ಗ್ಲಾಸ್ ಸೀಯಾಳದ ನೀರನ್ನು ಕುಡಿಯುತ್ತಿದ್ದರೆ ಶರೀರವು ನಿರ್ಜಲೀಕರಣದ ಅಪಾಯಕ್ಕೆ ಗುರಿಯಾಗುವದಿಲ್ಲ ಮತ್ತು ಉಷ್ಣ ಮಾರುತಗಳ ವಿರುದ್ಧ ರಕ್ಷಣೆಗಾಗಿ ಶರೀರದ ಉಷ್ಣತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
*ಟೊಮೆಟೊ
ಟೊಮೆಟೊ ಹಣ್ಣೂ ಹೌದು,ತರಕಾರಿಯೂ ಹೌದು.ಇದು ಯಥೇಚ್ಛ ನೀರಿನ ಜೊತೆಗೆ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಸಂಯುಕ್ತಗಳನ್ನೂ ಒಳಗೊಂಡಿರುತ್ತದೆ. ಎ,ಸಿ ಮತ್ತು ಕೆ ಇತ್ಯಾದಿ ವಿಟಾಮಿನ್‌ಗಳೂ ಹೇರಳವಾಗಿವೆ. ಹೀಗಾಗಿ ಅದು ಬೇಸಿಗೆಯ ಧಗೆಗೆ ಹೇಳಿ ಮಾಡಿಸಿದ ಆಹಾರವಾಗಿದೆ.
* ಅನಾನಸ್
ಈ ರುಚಿಯಾದ ಹಣ್ಣು ನಮ್ಮ ಆರೋಗ್ಯಕ್ಕೆ ಪೂರಕವಾಗಿದೆ. ಇದು ಹಲವಾರು ಆರೋಗ್ಯಲಾಭಗಳನ್ನು ನೀಡುವ ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುವುದರಿಂದ ಇದರ ಸೇವನೆಯು ಬಿರುಬಿಸಿಲಿನಲ್ಲಿ ನಮ್ಮನ್ನು ತಂಪಾಗಿರಿಸುತ್ತದೆ.
*ಬಡೇಸೋಪು
ಬಡೇಸೋಪು ಅಥವಾ ಸೋಂಪು ಕಾಳು ಒಂದು ಸಂಬಾರ ವಸ್ತು ಎನ್ನುವುದು ನಮಗೆ ಗೊತ್ತು,ಆದರೆ ಬಿಸಿಲಿನ ತಾಪವನ್ನು ನಿವಾರಿಸುವಲ್ಲಿ ಅದು ಅದ್ಭುತವಾಗಿ ಕೆಲಸ ಮಾಡುತ್ತದೆ. ಅದರಲ್ಲಿರುವ ತಂಪು ಮಾಡುವ ಗುಣವು ನಮ್ಮ ಶರೀರದ ಉಷ್ಣತೆಯನ್ನು ತಗ್ಗಿಸುತ್ತದೆ. ಯಾವಾಗಲೂ ಬಿಸಿಲಿಗೆ ಒಡ್ಡಿಕೊಳ್ಳುವವರಿಗೆ ಇದು ಅತ್ಯಂತ ಲಾಭದಾಯಕವಾಗಿದೆ. ಬಡೇಸೋಪನ್ನು ನೀರಿನಲ್ಲಿ ನೆನೆಸಿಟ್ಟು ಪ್ರತಿದಿನ ಅದನ್ನು ಸೇವಿಸಿದರೆ ಪರಿಣಾಮಕಾರಿಯಾಗಿರುತ್ತದೆ.
*ಚೆರ್ರಿ ಹಣ್ಣುಗಳು
ಚೆರ್ರಿ ವರ್ಗಕ್ಕೆ ಸೇರಿದ ಸಿಹಿಯಾದ ಪುಟ್ಟಹಣ್ಣುಗಳು ನೀಡುವ ಹಲವಾರು ಆರೋಗ್ಯಲಾಭಗಳಿಂದಾಗಿ ಅವು ಯಾವುದೇ ಸೂಪರ್‌ಫುಡ್‌ಗೆ ಕಡಿಮೆಯಿಲ್ಲ. ಬೇಸಿಗೆಯಲ್ಲಿ ಈ ಹಣ್ಣುಗಳ ಸೇವನೆಯು ಶರೀರವನ್ನು ತಂಪಾಗಿರಿಸಲು ಅತ್ಯುತ್ತಮ ಮಾರ್ಗಗಳಲ್ಲೊಂದಾಗಿದೆ. ಶರೀರವನ್ನು ಜಲೀಕರಿಸುವ ಈ ಹಣ್ಣುಗಳು ಬಿಸಿಲಿನ ಝಳದಿಂದ ರಕ್ಷಣೆ ನೀಡುತ್ತವೆ.