ಪ್ರತಿದಿನ ಹಸಿ ಮೊಟ್ಟೆಯನ್ನು ತಿನ್ನುವುದರ ಅಡ್ಡಪರಿಣಾಮಗಳು ಗೊತ್ತೇ?

Update: 2020-06-01 13:51 GMT

ಮೊಟ್ಟೆಯು ಜನಪ್ರಿಯ ಬ್ರೇಕ್‌ಫಾಸ್ಟ್ ಆಗಿದೆ. ಹಸಿಮೊಟ್ಟೆಯು ಶೇ.10ರಷ್ಟು ಪ್ರೋಟಿನ್ ಮತ್ತು ಶೇ.90ರಷ್ಟು ನೀರನ್ನು ಒಳಗೊಂಡಿರುತ್ತದೆ. ಪೊಟ್ಯಾಷಿಯಂ, ಮ್ಯಾಗ್ನೀಷಿಯಂ ನಿಯಾಸಿನ್ ಮತ್ತು ಸೋಡಿಯಮ್‌ನಂತಹ ಹಲವಾರು ಪೋಷಕಾಂಶಗಳು ಮೊಟ್ಟೆಯಲ್ಲಿವೆ. ಮೊಟ್ಟೆಯಲ್ಲಿಯ ಹಳದಿ ಭಾಗವು ವಿಟಾಮಿನ್‌ಗಳು, ಕಬ್ಬಿಣ,ಸತುವು ಮತ್ತು ರಂಜಕದಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಮೊಟ್ಟೆಯಲ್ಲಿರುವ ಹಲವಾರು ಪೋಷಕಾಂಶಗಳು ಹೃದಯದ ಆರೋಗ್ಯಕ್ಕೆ ಪೂರಕವಾಗಿರುವ ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ನೀವು ಮೊಟ್ಟೆಗಳನ್ನು ಬೇಯಿಸಿ ತಿನ್ನಿ ಅಥವಾ ಆಮ್ಲೆಟ್ ಮಾಡಿಕೊಂಡು ತಿನ್ನಿ,ಮೊಟ್ಟೆಯನ್ನು ಹಸಿಯಾಗಿ ತಿನ್ನುವುದು ಮಾತ್ರ ಶರೀರದ ಮೇಲೆ ಹಲವಾರು ದುಷ್ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ. ಹಸಿಮೊಟ್ಟೆಯ ಸೇವನೆಯಿಂದ ಹಲವಾರು ವಿಧದ ಅಲರ್ಜಿಗಳು ಮತ್ತು ಸಮಸ್ಯೆಗಳು ಶರೀರದಲ್ಲಿ ಕಾಣಿಸಿಕೊಳ್ಳುತ್ತವೆ. ಕೊಬ್ಬುಮುಕ್ತವಾಗಿದ್ದು,ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿದ್ದರೂ ಹಸಿಮೊಟ್ಟೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇಲ್ಲಿವೆ ಹಸಿ ಮೊಟ್ಟೆಯ ಬಿಳಿಭಾಗವನ್ನು ಸೇವಿಸುವುದರ ಅಡ್ಡಪರಿಣಾಮಗಳು:

*ಅಲರ್ಜಿ ಪ್ರತಿವರ್ತನೆಗಳನ್ನು ಹೆಚ್ಚಿಸಬಹುದು

ಕೆಲವರು ಹಸಿಮೊಟ್ಟೆಯ ಬಿಳಿಯ ಭಾಗಕ್ಕೆ ಅಲರ್ಜಿ ಹೊಂದಿರುತ್ತಾರೆ. ಆದರೆ ಇದನ್ನು ಗುರುತಿಸುವುದು ಸುಲಭವಲ್ಲ. ಶರೀರದಲ್ಲಿ ದದ್ದುಗಳು ಕಾಣಿಸಿಕೊಳ್ಳುವುದು,ಊತ, ಚರ್ಮ ಕೆಂಪಾಗುವಿಕೆ,ಸೆಳೆತ,ಅತಿಸಾರ,ತುರಿಕೆ,ಕಣ್ಣುಗಳಿಂದ ನೀರು ಹರಿಯುವುದು ಇತ್ಯಾದಿಗಳಿಂದ ಹಸಿಮೊಟ್ಟೆಗಳ ಅಲರ್ಜಿಯನ್ನು ಗುರುತಿಸಬಹುದು. ಹಸಿಮೊಟ್ಟೆಯ ಬಿಳಿಯ ಭಾಗದ ಸೇವನೆಯಿಂದ ಉಸಿರಾಟಕ್ಕೆ ತೊಂದರೆಯಾಗುವ ಜೊತೆಗೆ ರಕ್ತದೊತ್ತಡ ಕುಸಿಯುತ್ತದೆ ಮತ್ತು ಬವಳಿ ಬಂದಂತಹ ಅನುಭವವನ್ನುಂಟು ಮಾಡುತ್ತದೆ.

* ಸ್ನಾಯು ನೋವನ್ನುಂಟು ಮಾಡಬಹುದು

ಬಿಳಿಯ ಭಾಗವನ್ನು ಹಸಿಯಾಗಿ ಸೇವಿಸುವುದರಿಂದ ಶರೀರದಲ್ಲಿ ಬಯೊಟಿನ್ ಕೊರತೆಯುಂಟಾಗುತ್ತದೆ. ಬಯೊಟಿನ್ ಕೊರತೆಯನ್ನು ವಿಟಾಮಿನ್ ಬಿ7 ಮತ್ತು ವಿಟಾಮಿನ್ ಎಚ್ ಕೊರತೆ ಎಂದೂ ಹೇಳಲಾಗುತ್ತದೆ. ಬಿಳಿಯ ಭಾಗದಲ್ಲಿರುವ ಅಲ್ಬುಮಿನ್‌ನ ಅತಿಯಾದ ಸೇವನೆಯು ಶರೀರವು ಬಯೊಟಿನ್ ಅನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳುಂಟಾಗುತ್ತವೆ,ಮಕ್ಕಳ ಚರ್ಮದ ಮೇಲೆ ದದ್ದುಗಳು ಉಂಟಾಗುತ್ತವೆ ಮತ್ತು ವಯಸ್ಕರಲ್ಲಿ ಸೆಬಾರೆಯಿಕ್ ಡರ್ಮಟೈಟಿಸ್ ಕಾಣಿಸಿಕೊಳ್ಳುತ್ತದೆ. ಇದು ಸ್ನಾಯುಗಳ ನೋವು ಮತ್ತು ತಲೆಗೂದಲು ಉದುರುವಿಕೆಗೂ ಕಾರಣವಾಗುತ್ತದೆ.

* ಮೂತ್ರಪಿಂಡಗಳಿಗೆ ಹಾನಿಕಾರಕ

ಮೊಟ್ಟೆಯ ಬಿಳಿಯ ಭಾಗದಲ್ಲಿ ಪ್ರೋಟಿನ್ ಅತಿಯಾದ ಪ್ರಮಾಣದಲ್ಲಿದ್ದು, ಇದರಿಂದಾಗಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಹಾನಿಕಾರಕ ವಾಗಿದೆ. ಮೂತ್ರಪಿಂಡ ರೋಗಿಗಳಲ್ಲಿ ಗ್ಲೋಮೆರುಲರ್ ಫಿಲ್ಟರೇಷನ್ ರೇಟ್ (ಜಿಎಫ್‌ಆರ್) ಕಡಿಮೆಯಿರುತ್ತದೆ. ಜಿಎಫ್‌ಆರ್ ಮೂತ್ರಪಿಂಡಗಳನ್ನು ಶೋಧಿಸುವ ದ್ರವದ ಹರಿವಿನ ದರವಾಗಿದೆ. ಆದರೆ ಹಸಿಮೊಟ್ಟೆಯ ಬಿಳಿಯ ಭಾಗದಲ್ಲಿರುವ ಪ್ರೋಟಿನ್ ಜಿಎಫ್‌ಆರ್‌ನ ಪ್ರಮಾಣವನ್ನು ತಗ್ಗಿಸುತ್ತದೆ.

* ಸಾಲ್ಮೊನೆಲ್ಲಾದಿಂದ ಕಲುಷಿತಗೊಂಡಿರುತ್ತದೆ

ಹಸಿಮೊಟ್ಟೆಯ ಬಿಳಿಯ ಭಾಗವು ಕೋಳಿಗಳ ಕರುಳುಗಳಲ್ಲಿ ಕಂಡು ಬರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಂಡಿರಬಹುದು. ಈ ಬ್ಯಾಕ್ಟೀರಿಯಾಗಳು ಹೊರಭಾಗದ ಕವಚದಲ್ಲಿ ಮತ್ತು ಹಸಿಮೊಟ್ಟೆಯ ಒಳಗೂ ಇರುತ್ತವೆ. ಇವುಗಳನ್ನು ನಿವಾರಿಸಲು ಮೊಟ್ಟೆಯನ್ನು ಹೆಚ್ಚಿನ ಉಷ್ಣತೆಯಲ್ಲಿ ಹೆಚ್ಚು ಕಾಲ ಬೇಯಿಸಬೇಕಾಗುತ್ತದೆ. ಬ್ಯಾಕ್ಟೀರಿಯಾಗಳು ಹಸಿಮೊಟ್ಟೆಯ ಮೇಲ್ಭಾಗದಲ್ಲಿ ಮತ್ತು ಕಡಿಮೆ ಬೆಂದ ಮೊಟ್ಟೆಯಲ್ಲಿಯೂ ಇರುತ್ತವೆ.

*ಮೊಟ್ಟೆಗೆ ಸಂಬಂಧಿಸಿದ ಕೆಲವು ಅಂಶಗಳು

 40,000 ಪುರುಷರು ಮತ್ತು 30,000 ಮಹಿಳೆಯರ ಮೆಲೆ ನಡೆಸಲಾದ ಅಧ್ಯಯನವೊಂದು ದಿನಕ್ಕೆ ಒಂದು ಮೊಟ್ಟೆಯ ಸೇವನೆಯು ಆರೋಗ್ಯಕ್ಕೆ ಲಾಭದಾಯಕ ಎನ್ನುವುದನ್ನು ತೋರಿಸಿದೆ. ಹೆಚ್ಚು ಮೊಟ್ಟೆಗಳ ಸೇವನೆಯು ಎಲ್‌ಡಿಎಲ್ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್‌ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಇದು ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ಇನ್ನೊಂದು ಸಮೀಕ್ಷೆಯು ತೋರಿಸಿದೆ. ಮೊಟ್ಟೆಯ ಸೇವನೆಯು ವ್ಯಕ್ತಿಯ ಆಹಾರಕ್ರಮವನ್ನು ಅವಲಂವಂಬಿಸಿರುತ್ತದೆ. ವ್ಯಕ್ತಿಯು ಪ್ರತಿದಿನ ಆರೋಗ್ಯಕರ ಆಹಾರ ಸೇವಿಸುತ್ತಿದ್ದರೂ ಹೆಚ್ಚು ಮೊಟ್ಟೆಗಳನ್ನು ತಿಂದರೆ ಅದು ಹಾನಿಕಾರಕವಾಗುತ್ತದೆ.

ವ್ಯಕ್ತಿಯೋರ್ವನಲ್ಲಿ ಎಲ್‌ಡಿಎಲ್ ಮಟ್ಟ ಹೆಚ್ಚಾಗಿದ್ದಾಗ ಆತ ಮೊಟ್ಟೆಯನ್ನು ಸೇವಿಸಬಾರದು. ಹೀಗೆ ಮಾಡಿದರೆ ಕೊಲೆಸ್ಟ್ರಾಲ್ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ ಮತ್ತು ಇದು ಅಪಾಯಕಾರಿಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News