ಹೆಚ್ಚು ಕೆಲಸದ ಅವಧಿಯು ನಿಮ್ಮನ್ನು ಅಧಿಕ ರಕ್ತದೊತ್ತಡದ ಅಪಾಯಕ್ಕೆ ಗುರಿಯಾಗಿಸಬಹುದು

Update: 2020-06-12 18:26 GMT

ಅಧಿಕ ರಕ್ತದೊತ್ತಡವು ಇಂದಿನ ದಿನಗಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಕೆಲಸದ ಒತ್ತಡ ಅಥವಾ ಕಳಪೆ ಜೀವನಶೈಲಿ ಹೀಗೆ ಕಾರಣ ಯಾವುದೇ ಆಗಿರಲಿ, ಹೆಚ್ಚಿನ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಕೇವಲ ರಕ್ತದೊತ್ತಡಕ್ಕೆ ಸೀಮಿತವಲ್ಲ,ಆದರೆ ಕ್ರಮೇಣ ಹೃದಯದ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದು ಇಲ್ಲಿ ಕಳವಳವನ್ನುಂಟು ಮಾಡುವ ಅಂಶವಾಗಿದೆ. ಅಧಿಕ ರಕ್ತದೊತ್ತಡ ರೋಗಿಗಳು ಸುಲಭವಾಗಿ ಹೃದ್ರೋಗಗಳಿಗೆ ಗುರಿಯಾಗುತ್ತಾರೆ.

ಇಂದಿನ ದಿನಗಳಲ್ಲಿ ವರ್ಕ್ ಫ್ರಂ ಹೋಮ್ ಅಥವಾ ಮನೆಯಿಂದ ಕೆಲಸ ಮಾಡುವುದು ಹೆಚ್ಚುತ್ತಿರುವ ಪ್ರವೃತ್ತಿಯಾಗಿದೆ ಮತ್ತು ಕೊರೋನ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯವೂ ಆಗಿದೆ. ಇದರಿಂದಾಗಿ ಕೆಲಸದ ಅವಧಿಯೂ ಹೆಚ್ಚಾಗಿದ್ದು,ದಿನದ ಹೆಚ್ಚಿನ ಅವಧಿ ಕೆಲಸ ಮಾಡುತ್ತಲೇ ಇರುವಂತಾಗಿದೆ. ಈ ವರ್ಕ್ ಫ್ರಂ ಹೋಮ್ ಸಂಸ್ಕೃತಿಯಲ್ಲಿ ನೀವು ಕಚೇರಿಯಲ್ಲಿ ನಿಮಗೆ ಅಭ್ಯಾಸವಾಗಿರುವಂತೆ ಒಂದೇ ಸಮನೆ 8-9 ಗಂಟೆಗಳಷ್ಟು ಕಾಲ ಕೆಲಸ ಮಾಡುವುದಿಲ್ಲ,ಆದರೆ ಆಗಾಗ್ಗೆ ಬಿಡುವು ಇತ್ಯಾದಿಗಳಿಂದ ನಿಮ್ಮ ಕೆಲಸದ ಅವಧಿ ಕೆಲವೊಮ್ಮೆ 12 ಗಂಟೆಗಳಿಗೂ ವಿಸ್ತರಿಸಬಹುದು. ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಇತ್ತೀಚಿನ ವಿವಿಧ ಅಧ್ಯಯನಗಳು ಹೆಚ್ಚಿನ ಕೆಲಸದ ಅವಧಿಗೂ ಅಧಿಕ ರಕ್ತದೊತ್ತಡಕ್ಕೂ ನಂಟು ಇರುವುದನ್ನು ಸಾಬೀತುಗೊಳಿಸಿವೆ.

ಹೆಚ್ಚಿನ ಅವಧಿಗೆ ಕೆಲಸ ಮಾಡುವುದು ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ,ಮೆಟಾಬಾಲಿಕ್ ಸಿಂಡ್ರೋಮ್ ಅಥವಾ ಚಯಾಪಚಯ ಸಮಸ್ಯೆ ಮತ್ತು ಖಿನ್ನತೆಯೊಂದಿಗೆ ಗುರುತಿಸಿಕೊಂಡಿದೆ. ಇಂತಹ ಪ್ರತಿಕೂಲ ಪರಿಣಾಮಗಳಲ್ಲಿ ಅಧಿಕ ರಕ್ತದೊತ್ತಡವು ಹೆಚ್ಚು ಸಾಮಾನ್ಯವಾಗಿದೆ ಮತ್ತು ಅಪಾಯಕಾರಿಯೂ ಆಗಿದೆ. ಏಕೆಂದರೆ ಸಾವಿಗೆ ಕಾರಣವಾಗಬಹುದಾದ ಅಪಧಮನಿಗಳಲ್ಲಿ ತಡೆ ಮತ್ತು ಆಘಾತಗಳಿಗೆ ಇದು ನೇರವಾಗಿ ಸಂಬಂಧಿಸಿದೆ.

ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವವರು ಹೆಚ್ಚಿನ ಪ್ರಕರಣಗಳಲ್ಲಿ ಮದ್ಯಪಾನ, ಧೂಮಪಾನ ಮತ್ತು ಫಾಸ್ಟ್‌ಫುಡ್ ಸೇವನೆಯ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ ಮತ್ತು ಯಾವುದೇ ವ್ಯಾಯಾಮವನ್ನು ಮಾಡುವುದಿಲ್ಲ. ಕಚೇರಿಗಳಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುವವರು ಅಥವಾ ನಿಯಮಿತ ಕೆಲಸದ ಪಾಳಿಯಿರದ ಮಾರಾಟ ಕ್ಷೇತ್ರದಲ್ಲಿ ದುಡಿಯುವವರು ಸಾಮಾನ್ಯವಾಗಿ ಕಳಪೆ ಜೀವನಶೈಲಿಯನ್ನು ಹೊಂದಿರುತ್ತಾರೆ. ಇದು ಅವರು ಅಧಿಕ ರಕ್ತದೊತ್ತಡಕ್ಕೆ ಸುಲಭವಾಗಿ ಗುರಿಯಾಗುವಂತೆ ಮಾಡುತ್ತದೆ. ಹೀಗಾಗಿ ಇಂತಹವರು ನಿಯಮಿತವಾಗಿ ತಮ್ಮ ರಕ್ತದೊತ್ತಡವನ್ನು ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.

ಸುದೀರ್ಘ ಅವಧಿಗೆ ಡೆಸ್ಕ್ ಜಾಬ್‌ಗಳನ್ನು ಮಾಡುತ್ತಿರುವವರು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಕೆನಡಾದ ಸಂಶೋಧಕರ ತಂಡವೊಂದು ದೃಢಪಡಿಸಿದೆ.

ಧ್ಯಾನ ಮತ್ತು ವ್ಯಾಯಾಮ, ಹೊತ್ತಿಗೆ ಸರಿಯಾಗಿ ಆರೋಗ್ಯಕರ ಆಹಾರ ಸೇವನೆ,ದೇಹತೂಕದ ಮೇಲೆ ಹೆಚ್ಚಿನ ಗಮನ ಮತ್ತು ಒತ್ತಡ ಮುಕ್ತರಾಗಿರುವುದು;ಇಂತಹ ಸರಳ ಕ್ರಮಗಳ ಮೂಲಕ ಅಧಿಕ ರಕ್ತದೊತ್ತಡವನ್ನು ಸುಲಭವಾಗಿ ನಿಭಾಯಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News