ಕೈಗೆ ಸುಟ್ಟ ಗಾಯವಾಗಿದೆಯೇ? ಪ್ರಥಮ ಚಿಕಿತ್ಸೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ

Update: 2020-06-13 18:22 GMT

 ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಸಣ್ಣಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯ,ಆದರೆ ಕೆಲವೊಮ್ಮೆ ದೊಡ್ಡ ಅವಘಡಗಳೂ ಸಂಭವಿಸಬಹುದು. ತಿಂಡಿಗಳನ್ನು ಕರಿಯುವಾಗ ಬಿಸಿಎಣ್ಣೆ ಕೈಗೆ ಸಿಡಿದು ಸುಟ್ಟ ಗಾಯವಾಗಬಹುದು. ಅಪರೂಪಕ್ಕೆ ಅಡುಗೆ ಸಾಹಸಕ್ಕೆ ಇಳಿಯುವವರಿಗೆ ಇಂತಹ ಸುಟ್ಟಗಾಯಗಳ ಹೆಚ್ಚು ಅನುಭವವಿರುತ್ತದೆ. ಇಲ್ಲಿ ಮುಖ್ಯವಾದದ್ದೆಂದರೆ ಸುಟ್ಟ ಗಾಯಗಳಾದಾಗ ನೀವೇನು ಮಾಡುತ್ತೀರಿ ಎನ್ನುವುದು. ಸುಲಭದ ಪರಿಹಾರವೆಂದರೆ ಚರ್ಮದ ಉರಿಯೂತವನ್ನು ತಡೆಯಲು ಸುಟ್ಟ ಗಾಯವುಂಟಾದ ಕೈಯನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸುವುದು. ಆದರೆ ಕೈಯನ್ನು ಬಹಳ ಹೊತ್ತು ನೀರಿನಲ್ಲಿ ಮುಳುಗಿಸಿದರೆ ಗಾಯವು ತೀವ್ರಗೊಳ್ಳುತ್ತದೆ ಎನ್ನುವುದು ನಿಮಗೆ ಗೊತ್ತೇ? ಸುಟ್ಟ ಗಾಯಗಳಿಗೆ ಪ್ರಥಮ ಚಿಕಿತ್ಸೆ ನೀಡುವಾಗ ಹಲವಾರು ತಪ್ಪುಗಳನ್ನು ನಾವು ಮಾಡುತ್ತೇವೆ. ಈ ಕುರಿತು ಮಾಹಿತಿಗಳಿಲ್ಲಿವೆ.......

* ತುಂಬ ಸಮಯ ಕೈಗಳನ್ನು ನೀರಿನಲ್ಲಿ ಮುಳುಗಿಸುವುದು

ಕೈಗೆ ಸುಟ್ಟಗಾಯವಾದ ತಕ್ಷಣ ನಾವು ನಲ್ಲಿಯ ಬಳಿಗೆ ಧಾವಿಸಿ ಸುರಿಯುತ್ತಿರುವ ನೀರಿನ ಧಾರೆಗೆ ಕೈಯೊಡ್ಡುತ್ತೇವೆ. ಹೀಗೆ ಮಾಡುವುದರಿಂದ ನೋವು ಶಮನಗೊಳ್ಳುತ್ತದೆ ಮತ್ತು ಗುಳ್ಳೆಗಳು ಏಳುವುದನ್ನು ತಡೆಯುತ್ತದೆ. ಕೆಲವರು ಇದಕ್ಕಾಗಿ ಮಂಜುಗಡ್ಡೆಯ ತುಣುಕುಗಳನ್ನು ಸುಟ್ಟ ಚರ್ಮದ ಮೇಲಿರಿಸುತ್ತಾರೆ. ಆದರೆ ಸುಟ್ಟ ಭಾಗದ ಮೇಲೆ ತುಂಬ ಹೊತ್ತು ನೀರು ಸುರಿಯಬಾರದು,ಇದರಿಂದ ಅಂಗಾಂಶಗಳಿಗೆ ಹಾನಿಯುಂಟಾಗುತ್ತದೆ. ಕೈಯನ್ನು ನೀರಿನಲ್ಲಿ ಮುಳುಗಿಸುವುದರಿಂದ ತಕ್ಷಣದ ಶಮನ ದೊರೆಯುತ್ತದೆ ನಿಜ, ಆದರೆ ಅದು ಗಾಯವು ಮಾಯುವ ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಮತ್ತು ಗಾಯದ ಕಲೆಗಳು ಉಳಿದುಕೊಳ್ಳಬಹುದು.

* ಗುಳ್ಳೆಗಳನ್ನು ಒಡೆದುಕೊಳ್ಳುವುದು

   ಕೆಲವು ಪ್ರಕರಣಗಳಲ್ಲಿ ಸುಟ್ಟ ಚರ್ಮದಲ್ಲಿ ಗುಳ್ಳೆಗಳು ಏಳದಂತೆ ಎಷ್ಟೇ ಪ್ರಯತ್ನಿಸಿದರೂ ಅವು ಉಂಟಾಗುತ್ತವೆ. ಹೀಗೆ ಗುಳ್ಳೆಯುಂಟಾದಾಗ ಅದನ್ನು ಒಡೆಯುವ ಅಥವಾ ಮುಟ್ಟುವ ಗೋಜಿಗೆ ಹೋಗಬೇಡಿ. ಈ ಗುಳ್ಳೆಗಳಲ್ಲಿ ಕೀವು ತುಂಬಿದ್ದು,ಅವುಗಳನ್ನು ಒಡೆದಾಗ ಕೀವು ಸುತ್ತಲಿನ ಜಾಗದಲ್ಲಿ ಹರಡುತ್ತದೆ. ಜೊತೆಗೆ ಸಮಸ್ಯೆಯನ್ನು ನೀಗಿಸುವ ಬದಲು ನೋವು ಮತ್ತು ತೊಂದರೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ ಚರ್ಮಕ್ಕೆ ಸೋಂಕು ಉಂಟಾಗುವ ಅಪಾಯವೂ ಹೆಚ್ಚುತ್ತದೆ. ಗುಳ್ಳೆಗಳು ತಾವಾಗಿಯೇ ಗುಣವಾಗಲು ಬಿಡುವುದು ಒಳ್ಳೆಯದು. ಗುಳ್ಳೆಗಳನ್ನು ನೀವು ಮುಟ್ಟದಿದ್ದರೆ ಒಂದೆರಡು ದಿನಗಳಲ್ಲಿ ಅವು ಕುಗ್ಗುತ್ತವೆ. ದೊಡ್ಡ ಗುಳ್ಳೆಗಳಾಗಿದ್ದರೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳುವ ಬದಲು ಸೂಕ್ತ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಿ.

* ಆ್ಯಂಟಿಬಯಾಟಿಕ್‌ಗಳು ಅಥವಾ ಮುಲಾಮುಗಳ ಬಳಕೆ

 ಸುಟ್ಟ ಗಾಯಗಳಾದಾಗ ನಿಮಗೆ ಗೊತ್ತಿಲ್ಲದ ಯಾವುದನ್ನೂ ಮಾಡಲು ಹೋಗಬೇಡಿ. ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದರೆ ಯಾವುದೇ ಚಿಕಿತ್ಸೆ ಅಥವಾ ಮನೆಮದ್ದಿನ ಬಳಕೆಯಿಲ್ಲದೆ ಅದು ತನ್ನಷ್ಟಕ್ಕೆ ಗುಣವಾಗಲು ಬಿಡಿ. ಗಾಯದ ತೀವ್ರತೆ ಮತ್ತು ಊತವನ್ನು ತಗ್ಗಿಸಲು ಹಲವರು ಮುಲಾಮುಗಳು ಮತ್ತು ಆ್ಯಂಟಿಬಯಾಟಿಕ್ ಗಳನ್ನು ಬಳಸುತ್ತಾರೆ. ವಾಸ್ತವದಲ್ಲಿ ಇವು ಯಾವುದೇ ಔಷಧಿಯ ಬಳಕೆಯಿಲ್ಲದೆ ಗಾಯವನ್ನು ಗುಣಪಡಿಸುವ ಚರ್ಮದಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಸುಟ್ಟ ಗಾಯವು ದೊಡ್ಡದಾಗಿದ್ದರೆ ಮಾತ್ರ ಮುಲಾಮನ್ನು ಬಳಸಬಹುದಾದರೂ ಸಾಧ್ಯವಾದಷ್ಟು ಮಟ್ಟಿಗೆ ಅದನ್ನು ತಪ್ಪಿಸುವುದು ಒಳ್ಳೆಯದು.

* ಬಿಸಿಲು ಮತ್ತು ಬಿಸಿಯಿಂದ ಚರ್ಮವನ್ನು ರಕ್ಷಿಸದಿರುವುದು

ನಿಮ್ಮ ಕೈಗೆ ಸುಟ್ಟಗಾಯವಾಗಿದ್ದರೆ ನೀವದನ್ನು ಬಿಸಿ ಮತ್ತು ಸೂರ್ಯನ ಬಿಸಿಲಿನಿಂದ ರಕ್ಷಿಸಬೇಕು. ಏಕೆಂದರೆ ಬಿಸಿಗೆ ಒಡ್ಡಿಕೊಂಡರೆ ನೋವು ಇನ್ನಷ್ಟು ತೀವ್ರಗೊಳ್ಳುತ್ತದೆ ಮತ್ತು ಗಾಯವು ಕೆರಳುತ್ತದೆ. ಹೆಚ್ಚಿನ ಜನರು ಸುಟ್ಟ ಗಾಯಗಳನ್ನು ಮುಚ್ಚಿಕೊಳ್ಳದೆ ಬಿಸಿಲಿನಲ್ಲಿ ತಿರುಗಾಡುತ್ತಾರೆ. ಇದು ತಪ್ಪು.

* ಬೆಣ್ಣೆ ಅಥವಾ ಶಾಯಿ ಲೇಪನ

 ಮನೆಯಲ್ಲಿ ವಯಸ್ಸಾದವರು ಇದ್ದರೆ ಕೈಗೆ ಸುಟ್ಟಗಾಯವಾದಾಗ ಅದರ ಮೇಲೆ ಶಾಯಿ ಚಿಮುಕಿಸುವುದನ್ನು ಅಥವಾ ಬೆಣ್ಣೆಯನ್ನು ಲೇಪಿಸುವುದನ್ನು ನೀವು ನೋಡಿರಬಹುದು. ಆದರೆ ಇವೆರಡು ಕೆಲಸಗಳನ್ನು ಎಂದೂ ಮಾಡಬಾರದು. ಶಾಯಿಯಲ್ಲಿ ರಾಸಾಯನಿಕವಿರಬಹುದು ಮತ್ತು ಅದು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಬೆಣ್ಣೆ, ಟೂಥ್‌ಪೇಸ್ಟ್ ಇತ್ಯಾದಿಗಳನ್ನು ಗಾಯಕ್ಕೆ ಲೇಪಿಸುವುದು ಕೂಡ ಚರ್ಮದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ವೈದ್ಯರ ಸಲಹೆಯ ಮೇರೆಗೆ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News