ಕೊರೋನ ವೈರಸ್ ಪಿಡುಗಿನ ನಡುವೆಯೇ ಹೋಟೆಲ್‌ನಲ್ಲಿ ಊಟಕ್ಕೆ ಹೋಗಲು ಯೋಚಿಸಿದ್ದರೆ ಈ ಅಂಶಗಳು ನೆನಪಿರಲಿ

Update: 2020-06-13 18:24 GMT

ಕೆಲವೊಂದು ನಿರ್ಬಂಧಗಳನ್ನು ಹೊರತುಪಡಿಸಿದರೆ ಕೋವಿಡ್-19 ಲಾಕ್‌ಡೌನ್ ಅನ್ನು ಪೂರ್ಣವಾಗಿ ಹಿಂದೆಗೆದುಕೊಳ್ಳಲಾಗಿದೆ, ಆದರೆ ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವುದರಿಂದ ಅದನ್ನು ಯಾವಾಗ ಪುನಃ ಹೇರಬಹುದು ಎನ್ನುವುದು ಯಾರಿಗೂ ಗೊತ್ತಿಲ್ಲ.

 ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಈಗಾಗಲೇ ಮೂರು ಲಕ್ಷವನ್ನು ದಾಟಿದ್ದು,8,500ಕ್ಕೂ ಅಧಿಕ ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಪ್ರತಿದಿನವೂ ದಾಖಲೆಯ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹೀಗಾಗಿ ಈ ಪಿಡುಗು ಸದ್ಯೋಭವಿಷ್ಯದಲ್ಲಿ ಕಡಿಮೆಯಾಗುವುದಿಲ್ಲ ಮತ್ತು ಇನ್ನೂ ಕೆಲವು ತಿಂಗಳುಗಳು ಅಥವಾ ವರ್ಷಗಳ ಕಾಲ ನಾವು ಕೊರೋನ ವೈರಸ್‌ನೊಂದಿಗೇ ಬದುಕುವುದು ಅನಿವಾರ್ಯವಾಗಬಹುದು. ಲಾಕ್‌ಡೌನ್‌ನಿಂದಾಗಿ ನಾವೆಲ್ಲ ತಿಂಗಳುಗಳ ಕಾಲ ಹೊರಗೆ ಆಹಾರ ಸೇವನೆಯಿಂದ ದೂರವಿದ್ದೆವು,ಆದರೆ ಈಗ ಅನ್‌ಲಾಕ್‌ನಿಂದಾಗಿ ಅಂಗಡಿಗಳು,ಹೋಟೆಲ್‌ಗಳು ಇತ್ಯಾದಿಗಳೆಲ್ಲ ಪುನರಾರಂಭ ಗೊಂಡಿವೆ. ಕೊನೆಗೂ ತಮ್ಮ ಇಷ್ಟದ ಹೋಟೆಲ್‌ಗಳಲ್ಲಿ ಇಷ್ಟದ ಆಹಾರವನ್ನು ಸೇವಿಸಬಹುದು ಎಂದು ಹಲವರು ಖುಷಿಯಲ್ಲಿರಬಹುದು. ಆದರೆ ಕೊರೋನ ವೈರಸ್ ಹಾವಳಿ ನಮ್ಮ ಸುತ್ತ ಇನ್ನೂ ಇದೆ ಎನ್ನುವುದನ್ನು ನಾವು ಮರೆಯಬಾರದು. ವೈರಸ್ ಸೋಂಕಿಗೊಳಗಾಗುವುದನ್ನು ತಡೆಯಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳು ಈಗ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿವೆ.

* ಫುಡ್ ಡೆಲಿವರಿಯಿಂದ ದೂರವಿರಿ

 ಕೊರೋನ ವೈರಸ್ ಪಿಡುಗಿನಿಂದಾಗಿ ಹೊರಗಡೆ ತಿನ್ನುವುದು ಎಷ್ಟು ಅಸುರಕ್ಷಿತವೋ ಫುಡ್ ಡೆಲಿವರಿಯೂ ಅಷ್ಟೇ ಅಸುರಕ್ಷಿತವಾಗಿದೆ. ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದರೆ ವೈರಸ್ ಸೋಂಕಿನ ವಿರುದ್ಧ ರಕ್ಷಣೆ ದೊರೆಯುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ನೀವು ಆಹಾರವನ್ನು ತರಿಸಿಕೊಳ್ಳುವ ಹೋಟೆಲ್ ಸ್ವಚ್ಛತಾ ಮಾನದಂಡಗಳನ್ನು ಕಾಯ್ದುಕೊಂಡಿದೆಯೇ ಹಾಗೂ ಆಹಾರ ತಯಾರಿ ಮತ್ತು ಫುಡ್ ಡೆಲಿವರಿ ಸಂದರ್ಭದಲ್ಲಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆಯೇ ಎನ್ನುವುದನ್ನು ನೀವು ನೋಡಲು ಅಥವಾ ಪರಿಶೀಲಿಸಲು ಸಾಧ್ಯವಿಲ್ಲ. ಮನೆಬಾಗಿಲಿಗೆ ಆಹಾರವನ್ನು ತಲುಪಿಸುವ ಡೆಲಿವರಿ ಬಾಯ್‌ಗಳಲ್ಲಿ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು,ಇದರಿಂದ ಇತರರೂ ಸೋಂಕಿಗೆ ಗುರಿಯಾಗುವ ಅಪಾಯವೂ ಇನ್ನಷ್ಟು ಹೆಚ್ಚಿದೆ. ಈ ಡೆಲಿವರಿ ಬಾಯ್‌ಗಳು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರಗಳನ್ನು ವಿತರಿಸಲು ಹಲವಾರು ಕಡೆಗೆ ಹೋಗುತ್ತಿರುತ್ತಾರೆ ಮತ್ತು ಸೋಂಕಿನ ಅಪಾಯಕ್ಕೆ ಹೆಚ್ಚಾಗಿ ಒಡ್ಡಿಕೊಂಡಿರುತ್ತಾರೆ. ಹೀಗಾಗಿ ಆನ್‌ಲೈನ್‌ನಲ್ಲಿ ಆಹಾರಕ್ಕೆ ಆರ್ಡರ್ ಮಾಡಲು ಹೋಗಬೇಡಿ.

* ಹೊಸ ರೆಸ್ಟಾರೆಂಟ್‌ಗಳ ಬದಲು ಹಳೆಯ,ವಿಶ್ವಾಸದ ರೆಸ್ಟಾರಂಟ್‌ಗಳಿಗೇ ಅಂಟಿಕೊಳ್ಳಿ

  ಹೊಸ ರೆಸ್ಟಾರಂಟ್‌ಗಳು ನೀಡುವ ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳಿಗೆ ಮರುಳಾಗಬೇಡಿ. ಇವೆಲ್ಲ ಹೊಸ ಗ್ರಾಹಕರನ್ನು ಆಕರ್ಷಿಸಲು ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಮಾರಾಟ ತಂತ್ರಗಳಾಗಿವೆ ಅಷ್ಟೇ. ಕೋವಿಡ್-19 ಅಪಾಯವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿಯೇ ಇರುವುದರಿಂದ ಹೊಸ ರೆಸ್ಟಾರಂಟ್‌ಗಳಿಗೆ ಭೇಟಿ ನೀಡುವ ನಿಮ್ಮ ಪ್ರಯೋಗಶೀಲತೆ ನಿಮಗೆ ತೊಂದರೆಯನ್ನುಂಟು ಮಾಡಬಹುದು. ಹೀಗಾಗಿ ಈ ಕೊರೋನ ವೈರಸ್ ಸಂದರ್ಭದಲ್ಲಿ ನೀವು ಹಿಂದೆ ಭೇಟಿ ನೀಡುತ್ತಿದ್ದ,ನಿಮ್ಮ ವಿಶ್ವಾಸಕ್ಕೆ ಪಾತ್ರವಾಗಿರುವ ಅವೇ ಹಳೆಯ ಹೋಟೆಲ್‌ಗಳೇ ಒಳ್ಳೆಯ ಆಯ್ಕೆಯಾಗುತ್ತವೆ. ಹೋಟೆಲ್‌ಗಳಲ್ಲಿ ಹೆಚ್ಚು ಜನರು ತುಂಬಿಕೊಂಡಿದ್ದರೆ ಸೋಂಕು ಹರಡುವ ಪ್ರಮಾಣವೂ ಅಷ್ಟೇ ಹೆಚ್ಚಾಗಿರುತ್ತದೆ. ಹೀಗಾಗಿ ಅಂತಹ ಹೋಟೆಲ್‌ಗಳತ್ತ ತಪ್ಪಿಯೂ ಹೆಜ್ಜೆ ಹಾಕಬೇಡಿ. ನಿಮ್ಮ ಬ್ಯಾಗಿನಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಸದಾ ಇರಲಿ. ನೀವು ಯಾವುದೇ ಮೇಲ್ಮೈಯನ್ನು ಸ್ಪರ್ಶಿಸಿದರೆ ಸ್ಯಾನಿಟೈಸರ್ ಬಳಸಿ ನಿಮ್ಮ ಕೈಗಳನ್ನು ಸೋಂಕುಮುಕ್ತಗೊಳಿಸಲು ಮರೆಯಬೇಡಿ.

* ಓಪನ್ ಬಫೆ ಬೇಡ

ಬಫೆ ಊಟಕ್ಕೆ ಹೋಗುವ ಅನಿವಾರ್ಯತೆಯಿದ್ದಾಗ ಅಲ್ಲಿ ಆಹಾರಗಳನ್ನು ಸಮರ್ಪಕವಾಗಿ ಮುಚ್ಚಿಡಲಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಆಹಾರಗಳನ್ನು ತೆರೆದೇ ಇಟ್ಟಿದ್ದರೆ,ಅಂದರೆ ಓಪನ್ ಬಫೆಯಾಗಿದ್ದರೆ ಯಾವುದೇ ಹಿಂಜರಿಕೆಯಿಲ್ಲದೆ ಅಲ್ಲಿಂದ ಹೊರಟುಬಿಡಿ. ನಿಮ್ಮ ಆರೋಗ್ಯವು ತುಂಬ ಮುಖ್ಯ ಮತ್ತು ಆ ವಿಷಯದಲ್ಲಿ ಓಪನ್ ಬಫೆ ತುಂಬ ಅಪಾಯಕಾರಿಯಾಗುತ್ತದೆ. ಯಾವುದೇ ಸೋಂಕಿತ ವ್ಯಕ್ತಿ ಆಹಾರದ ಬಳಿಗೆ ಬಂದಾಗ ವೈರಸ್ ಆ ಆಹಾರದೊಳಕ್ಕೆ ನುಸುಳಬಹುದು. ಇದೇ ತರ್ಕದೊಂದಿಗೆ ಬೀದಿ ಬದಿಯ ಆಹಾರ,ಖಾದ್ಯಗಳಿಂದಲೂ ನೀವು ದೂರವಿರಬೇಕು.

* ಸಣ್ಣ ಗುಂಪುಗಳಲ್ಲಿ ಹೊರಗಡೆ ಹೋಗಿ

  ನಮ್ಮ ಬದುಕುಗಳು ಪೂರ್ವ ಸ್ಥಿತಿಗೆ ಮರಳಲು ಅನ್‌ಲಾಕ್‌ಗಾಗಿ ನಾವು ಕಾಯುತ್ತಲೇ ಇದ್ದೆವು. ಈಗ ಅನ್‌ಲಾಕ್ ಆಗಿದೆಯೆಂದು ದೊಡ್ಡ ಪ್ರಮಾಣದಲ್ಲಿ ಕುಟುಂಬ ಸಮ್ಮಿಳನವನ್ನು ಹಮ್ಮಿಕೊಂಡಿದ್ದರೆ ಅದನ್ನು ಸದ್ಯಕ್ಕೆ ಮರೆತು ಬಿಡಿ. ಸಹಜ ಸ್ಥಿತಿ ಮರಳುವವರೆಗೆ ಮತ್ತು ಕೊರೋನ ವೈರಸ್ ಬಿಕ್ಕಟ್ಟು ಕೊನೆಗೊಳ್ಳುವವರೆಗೆ ಕಾಯಿರಿ. ಅಲ್ಲಿಯವರೆಗೆ ಸಣ್ಣ ಗುಂಪಾಗಿ,ಹೆಚ್ಚೆಂದರೆ ಇಬ್ಬರು ಮೂವರಾಗಿ ಹೊರಗಡೆ ಈಟಿಂಗ್‌ಗೆ ತೆರಳಿ.

* ಮಾಂಸವನ್ನು ನಿವಾರಿಸಬೇಕಿಲ್ಲ

 ಕೊರೋನ ವೈರಸ್ ಪಿಡುಗು ತಲೆ ಎತ್ತಿದಾಗ ಮಾಂಸ ಸೇವನೆ ಅದಕ್ಕೆ ಕಾರಣ ಎಂಬ ವದಂತಿಗಳು ಹಬ್ಬತೊಡಗಿದ್ದವು. ಮಾಂಸಕ್ಕೂ ಕೊರೋನ ವೈರಸ್‌ಗೂ ಯಾವುದೇ ಸಂಬಂಧವಿಲ್ಲ. ಕೊರೋನ ವೈರಸ್‌ಗೆ ಗುರಿಯಾಗುವ ಅಪಾಯವನ್ನು ಕಡಿಮೆ ಮಾಡುವುದು ಹೇಗೆ ಎನ್ನುವುದು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ನಿಮಗೆ ಗೊತ್ತಿದ್ದರೆ ಸಾಕು,ತಲೆ ಬಿಸಿ ಮಾಡಿಕೊಳ್ಳದೆ ಮಾಂಸ ಮತ್ತುಸಮುದ್ರ ಆಹಾರಗಳನ್ನು ಸೇವಿಸಿ.

                          

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News