ಭುಜಬಲವನ್ನೇ ಕುಂದಿಸುವ ‘ಫ್ರೋಜನ್ ಶೋಲ್ಡರ್’: ಲಕ್ಷಣಗಳು ಮತ್ತು ಕಾರಣಗಳು
ಕೆಲವೊಮ್ಮೆ ಭುಜದಲ್ಲಿ ನೋವು ಆರಂಭವಾಗಿ ಕೈಯನ್ನು ಮೇಲಕ್ಕೆತ್ತಲೂ ಸಾಧ್ಯವಾಗುವುದಿಲ್ಲ, ಭುಜದ ಚಲನೆಯು ನಿರ್ಬಂಧಿಸಲ್ಪಟ್ಟಿರುತ್ತದೆ. ಈ ಸ್ಥಿತಿಯನ್ನು ‘ಫ್ರೋಜನ್ ಶೋಲ್ಡರ್’ ಎಂದು ಕರೆಯಲಾಗುತ್ತದೆ. ಅಡೆಸಿವ್ ಕ್ಯಾಪ್ಸುಲೈಟಿಸ್ ಎಂದೂ ಕರೆಯಲಾಗುವ ಇದನ್ನು ನಾವು ಘನೀಕೃತ ಅಥವಾ ಮರಗಟ್ಟಿದ ಅಥವಾ ಸೆಟೆದುಕೊಂಡ ಭುಜ ಎಂದು ವ್ಯಾಖ್ಯಾನಿಸಬಹುದು. ಭುಜದ ಕೀಲು ಪೆಡಸುಗೊಳ್ಳುವುದು ಮತ್ತು ನೋವು ಇದರ ಮುಖ್ಯ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ಈ ಸಮಸ್ಯೆಯ ಲಕ್ಷಣಗಳು ಕ್ರಮೇಣ ಆರಂಭಗೊಳ್ಳುತ್ತವೆ,ದಿನಗಳು ಕಳೆದಂತೆ ಸ್ಥಿತಿಯು ಇನ್ನಷ್ಟು ಹದಗೆಡುತ್ತದೆ ಮತ್ತು ಸಾಮಾನ್ಯವಾಗಿ ಒಂದರಿಂದ ಮೂರು ವರ್ಷಗಳಲ್ಲಿ ನಿವಾರಣೆಯಾಗುತ್ತದೆ.
ಭುಜದ ಚಲನೆಯನ್ನು ತಡೆಯುವ ಪಾರ್ಶ್ವವಾಯು ಅಥವಾ ಸ್ತನ ಕಾನ್ಸರ್ ಶಸ್ತ್ರಚಿಕಿತ್ಸೆ ಯಂತಹ ವೈದ್ಯಕೀಯ ಸ್ಥಿತಿಗಳಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಫ್ರೋಜನ್ ಶೋಲ್ಡರ್ ಉಂಟಾಗುವ ಅಪಾಯ ಹೆಚ್ಚಾಗಿರುತ್ತದೆ.
ಫ್ರೋಜನ್ ಶೋಲ್ಡರ್‌ಗೆ ಚಿಕಿತ್ಸೆಯು ವಿವಿಧ ಚಲನೆ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ಕಾರ್ಟಿಕೊಸ್ಟಿರಾಯ್ಡಿಗಳು ಮತ್ತು ನಿಶ್ಚೇಷ್ಟತೆಯನ್ನು ನಿವಾರಿಸುವ ಔಷಧಿಗಳನ್ನು ಇಂಜೆಕ್ಷನ್ ಮೂಲಕ ಕೀಲು ಕೋಶದಲ್ಲಿ ಸೇರಿಸಲಾಗುತ್ತದೆ. ಬೆರಳೆಣಿಕೆಯ ಪ್ರಕರಣಗಳಲ್ಲಿ ಕೀಲು ಕೋಶವು ಮುಕ್ತವಾಗಿ ಚಲಿಸುವಂತಾಗಲು ಅದನ್ನು ಸಡಿಲಗೊಳಿಸಲು ಆರ್ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಸೂಚಿಸಬಹುದು.
ಸಾಮಾನ್ಯವಾಗಿ ಫ್ರೋಜನ್ ಶೋಲ್ಡರ್ ಒಮ್ಮೆ ಗುಣವಾದ ಬಳಿಕ ಅದೇ ಭುಜದಲ್ಲಿ ಮರುಕಳಿಸುವುದಿಲ್ಲ. ಕೆಲವರಲ್ಲಿ ವಿರುದ್ಧ ಭುಜದಲ್ಲಿ ಈ ನೋವು ಮರುಕಳಿಸಬಹುದು.
ಲಕ್ಷಣಗಳು
ಫ್ರೋಜನ್ ಶೋಲ್ಡರ್ ನಿಧಾನವಾಗಿ ಮತ್ತು ಮೂರು ಹಂತಗಳಲ್ಲಿ ವೃದ್ಧಿಯಾಗುತ್ತದೆ. ಪ್ರತಿ ಹಂತವೂ ಹಲವಾರು ತಿಂಗಳುಗಳ ಕಾಲ ಮುಂದುವರಿಯಬಹುದು.
1) ನಿಷ್ಕ್ರಿಯತೆ: ಈ ಹಂತದಲ್ಲಿ ಭುಜವು ನಿಷ್ಕ್ರಿಯಗೊಳ್ಳಲು ಆರಂಭಗೊಳ್ಳುತ್ತದೆ ಮತ್ತು ಭುಜದ ಚಲನೆಯು ನೋವನ್ನುಂಟು ಮಾಡುತ್ತದೆ. ಭುಜದ ಚಲನವಲನಗಳ ವ್ಯಾಪ್ತಿ ಸೀಮಿತಗೊಳ್ಳುತ್ತದೆ. ನೋವು ಹೆಚ್ಚಾದಂತೆಲ್ಲ ಭುಜದ ಚಲನೆ ಕಡಿಮೆಯಾಗುತ್ತ ಹೋಗುತ್ತದೆ.
2) ಮರಗಟ್ಟುವಿಕೆ: ಈ ಹಂತದಲ್ಲಿ ನೋವು ನಿಧಾನವಾಗಿ ಕಡಿಮೆಯಾಗತೊಡಗಬ ಹುದು,ಆದರೆ ಭುಜದ ಪೆಡಸುತನ ಹಾಗೆಯೇ ಉಳಿದುಕೊಂಡಿರುತ್ತದೆ ಮತ್ತು ಅದನ್ನು ಬಳಸುವುದು ಇನ್ನಷ್ಟು ಕಷ್ಟವಾಗುತ್ತದೆ.
3) ಪುನಃಶ್ಚೇತನ: ಈ ಹಂತದಲ್ಲಿ ಭುಜದ ಚಲನೆಯ ವ್ಯಾಪ್ತಿ ನಿಧಾನವಾಗಿ ಉತ್ತಮಗೊಳ್ಳುತ್ತ ಹೋಗುತ್ತದೆ ಮತ್ತು 5ರಿಂದ 26 ತಿಂಗಳುಗಳಲ್ಲಿ ಪೂರ್ವ ಸ್ಥಿತಿಗೆ ಮರಳುತ್ತದೆ.
ಕೆಲವು ಜನರಲ್ಲಿ ನೋವು ರಾತ್ರಿಯ ವೇಳೆ ತೀವ್ರಗೊಳ್ಳುತ್ತದೆ ಮತ್ತು ಕೆಲವೊಮ್ಮೆ ನಿದ್ರೆಗೂ ವ್ಯತ್ಯಯವನ್ನುಂಟು ಮಾಡುತ್ತದೆ.
ಕಾರಣಗಳು
ಭುಜದ ಕೀಲಿನ ಭಾಗಗಳಾಗಿರುವ ಮೂಳೆಗಳು,ಅಸ್ಥಿರಜ್ಜುಗಳು ಮತ್ತು ಸ್ನಾಯುರಜ್ಜು ಗಳು ಸಂಯೋಜಕ ಅಂಗಾಂಶಗಳ ಕೋಶದಲ್ಲಿ ಒಳಗೊಂಡಿರುತ್ತವೆ. ಈ ಕೋಶವು ದಪ್ಪವಾದಾಗ ಮತ್ತು ಕೀಲಿನ ಸುತ್ತ ಬಿಗಿಗೊಂಡು ಚಲನೆಯನ್ನು ನಿರ್ಬಂಧಿಸಿದಾಗ ಫ್ರೋಜನ್ ಶೋಲ್ಡರ್ ಉಂಟಾಗುತ್ತದೆ.
ಮಧುಮೇಹಿಗಳಲ್ಲಿ ಅಥವಾ ಶಸ್ತ್ರಚಿಕಿತ್ಸೆ ಅಥವಾ ಮೂಳೆ ಮುರಿತದಿಂದ ಸುದೀರ್ಘ ಅವಧಿಗೆ ಭುಜದ ಚಲನೆಯನ್ನು ಮಾಡದವರಲ್ಲಿ ಫ್ರೋಜನ್ ಶೋಲ್ಡರ್ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದರೂ,ಇಂತಹ ಯಾವುದೇ ಸಮಸ್ಯೆಗಳಿಲ್ಲದ ಕೆಲವರಲ್ಲಿಯೂ ಈ ಸಮಸ್ಯೆ ಏಕೆ ಕಾಣಿಸಿಕೊಳ್ಳುತ್ತದೆ ಎನ್ನುವುದಕ್ಕೆ ಕಾರಣಗಳಿನ್ನೂ ಸರಿಯಾಗಿ ಗೊತ್ತಾಗಿಲ್ಲ.
ಅಪಾಯದ ಅಂಶಗಳು
ಕೆಲವು ಅಂಶಗಳು ಫ್ರೋಜನ್ ಶೋಲ್ಡರ್ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ.
ವಯಸ್ಸು ಮತ್ತು ಲಿಂಗ: 40 ವರ್ಷ ಮತ್ತು ಅದಕ್ಕೂ ಹೆಚ್ಚಿನ ಪ್ರಾಯದವರು, ಅದರಲ್ಲೂ ಮಹಿಳೆಯರು ಫ್ರೋಜನ್ ಶೋಲ್ಡರ್‌ಗೆ ಗುರಿಯಾಗುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತಾರೆ.
ನಿಶ್ಚಲತೆ ಅಥವಾ ತಗ್ಗಿದ ಚಲನೆ: ಸುದೀರ್ಘ ಕಾಲ ಭುಜದ ನಿಶ್ಚಲತೆ ಅಥವಾ ಭುಜದ ಕಡಿಮೆ ಚಲನವಲನ ಅನಿವಾರ್ಯವಾದವರು ಫೋಜನ್ ಶೋಲ್ಡರ್‌ಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.
ರೊಟೇಟರ್ ಕಫ್ ಅಥವಾ ಆವರ್ತಕ ಪಟ್ಟಿಗೆ ಪೆಟ್ಟು,ಕೈ ಅಥವಾ ತೋಳಿನ ಮೂಳೆ ಮುರಿತ,ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವ ಹಂತ,ಸಿಸ್ಟಮಿಕ್ ರೋಗಗಳು ಅಂದರೆ ಒಂದು ಅಂಗದ ಬದಲು ಇಡೀ ಶರೀರವನ್ನು ಕಾಡುವ ರೋಗಗಳು ಇವು ನಿಶ್ಚಲತೆಗೆ ಕಾರಣವಾಗುವ ಅಂಶಗಳಲ್ಲಿ ಸೇರಿವೆ.
ಮಧುಮೇಹ,ಹೈಪೊಥೈರಾಯ್ಡಿಸಂ,ಹೈಪರ್‌ಥೈರಾಯ್ಡಿಸಂ,ಹೃದಯನಾಳೀಯ ರೋಗ,ಕ್ಷಯ,ಪಾರ್ಕಿನ್ಸನ್ಸ್ ಕಾಯಿಲೆ ಇತ್ಯಾದಿ ರೋಗಗಳು ಫ್ರೋಜನ್ ಶೋಲ್ಡರ್‌ನ ಅಪಾಯವನ್ನು ಹೆಚ್ಚಿಸುತ್ತವೆ.