ಅಯೋಡಿನ್ ಕೊರತೆಯನ್ನು ಸೂಚಿಸುವ ಈ 5 ಲಕ್ಷಣಗಳು ನಿಮಗೆ ಗೊತ್ತಿರಲಿ
ನಿಮ್ಮ ಶರೀರದಲ್ಲಿ ಅಯೋಡಿನ್ ನ ಮಹತ್ವ ನಿಮಗೆ ತಿಳಿದಿದೆಯೇ? ಅದು ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು ಇತರ ವಿಟಾಮಿನ್ ಗಳು ಮತ್ತು ಖನಿಜಗಳಷ್ಟೇ ಮಹತ್ವದ್ದಾಗಿದೆ. ಅಯೋಡಿನ್ ಕೊರತೆಯು ಹೆಚ್ಚು ಸಾಮಾನ್ಯವಲ್ಲದಿದ್ದರೂ ಅದು ಸುದೀರ್ಘಾವಧಿಗೆ ಕಾಡಿದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡಬಹುದು.
ವಯಸ್ಕ ವ್ಯಕ್ತಿಗೆ ದಿನಕ್ಕೆ ಸುಮಾರು 150 ಮಿ.ಗ್ರಾಂ.ನಷ್ಟು ಅಯೋಡಿನ್ ಅತ್ಯಗತ್ಯವಾಗಿದೆ. ಗರ್ಭಿಣಿಯರು ದಿನಕ್ಕೆ 220 ರಿಂದ 290 ಮಿ.ಗ್ರಾಂ ಅಯೋಡಿನ್ ಅನ್ನು ಸೇವಿಸಬೇಕಾಗುತ್ತದೆ. ಥೈರಾಯ್ಡ್ ಗ್ರಂಥಿಯ ಕಾರ್ಯ ನಿರ್ವಹಣೆಗೆ ಅಯೊಡಿನ್ ಮುಖ್ಯವಾಗಿದೆ ಮತ್ತು ಅದರ ಕೊರತೆಯು ಗ್ರಂಥಿಯ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿ ವ್ಯಕ್ತಿಯನ್ನು ಹೈಪೊಥೈರಾಯ್ಡಿಸಮ್‌ಗೆ ಗುರಿಯಾಗುವ ಅಪಾಯವನ್ನುಂಟು ಮಾಡಬಹುದು. ಅಯೊಡೈಸ್ಡ್ ಉಪ್ಪು ಶರೀರಕ್ಕೆ ಅಗತ್ಯವಾದ ಅಯೊಡಿನ್ ಪಡೆಯಲು ಸುಲಭದ ಮೂಲವಾಗಿದೆ. ಆದರೆ ನಮ್ಮಲ್ಲಿ ಅಯೊಡಿನ್ ಕೊರತೆಯಿದೆ ಎನ್ನುವುದನ್ನು ಕಂಡುಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಉತ್ತರವಿಲ್ಲಿದೆ.
ಶರೀರದಲ್ಲಿ ಅಯೊಡಿನ್ ಮಹತ್ವ
ಅಯೊಡಿನ್ ಕೊರತೆಗೆ ಮುನ್ನ ಈ ಕೊರತೆಯು ನಮ್ಮ ಶರೀರಕ್ಕೆ ಏನು ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ಅಯೋಡಿನ್ ಥೈರಾಯ್ಡ್ ಗ್ರಂಥಿಯ ಚಯಾಪಚಯವನ್ನು ನಿಯಂತ್ರಿಸುವ ಪ್ರಮುಖ ಖನಿಜವಾಗಿದೆ. ಥೈರಾಯ್ಡಿ ಗ್ರಂಥಿಯು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಹಲವಾರು ತೊಂದರೆಗಳು ಎದುರಾಗುತ್ತವೆ. ಇತರ ಹಲವಾರು ವಿಟಾಮಿನ್‌ಗಳು ಮತ್ತು ಖನಿಜಗಳಂತೆ ಅಯೋಡಿನ್ ನಮ್ಮ ಶರೀರದಲ್ಲಿ ಉತ್ಪಾದನೆಯಾಗುವುದಿಲ್ಲ. ಹೀಗಾಗಿ ನಾವು ಸೇವಿಸುವ ಆಹಾರವು ನಮ್ಮ ಶರೀರಕ್ಕೆ ಅಯೊಡಿನ್ ಅನ್ನು ಒದಗಿಸುವ ಏಕೈಕ ಮೂಲವಾಗಿದೆ. ಅಮೆರಿಕನ್ ಥೈರಾಯ್ಡ್ ಅಸೋಸಿಯೇಷನ್‌ನ ವರದಿಯಂತೆ ವಿಶ್ವದ ಜನಸಂಖ್ಯೆಯ ಸುಮಾರು ಶೇ.30 ರಷ್ಟು ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಇದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದ್ದು,ನಾವು ನಮಗೆ ಅಗತ್ಯ ಪ್ರಮಾಣದಲ್ಲಿ ಅಯೊಡಿನ್ ಸೇವಿಸುವ ಬಗ್ಗೆ ಕಾಳಜಿ ವಹಿಸಬೇಕಿದೆ. ಅಯೊಡಿನ್ ಕೊರತೆಯನ್ನು ಸೂಚಿಸುವ ಲಕ್ಷಣಗಳ ಕುರಿತು ಮಾಹಿತಿಗಳಿಲ್ಲಿವೆ.....
* ಬಳಲಿಕೆ ಮತ್ತು ಖಿನ್ನತೆ
ಹೆಚ್ಚು ಕಡಿಮೆ ಪ್ರತಿಯೊಂದೂ ಆರೋಗ್ಯ ಸಮಸ್ಯೆಯಲ್ಲಿ ಇವೆರಡು ಸಾಮಾನ್ಯ ಲಕ್ಷಣಗಳಾಗಿವೆ. ಇವೆರೆಡರ ಜೊತೆಗೆ ಮುಂದೆ ತಿಳಿಸಲಾಗುವ ಲಕ್ಷಣಗಳೂ ಕಂಡು ಬಂದರೆ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ. ಅಯೊಡಿನ್ ಕಿರು ಪೋಷಕಾಂಶವಾಗಿ ರುವುದರಿಂದ ಶರೀರದ ಪ್ರತಿಯೊಂದು ಅಂಗಾಂಶದಲ್ಲಿಯೂ ಇರುತ್ತದೆ. ಅಯೋಡಿನ್ ಥೈರಾಯ್ಡ್ ಗ್ರಂಥಿಯೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ. ಅಯೊಡಿನ್ ಕೊರತೆಯಾದರೆ ಈ ಗ್ರಂಥಿಯು ಸಾಕಷ್ಟು ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪಾದಿಸುವುದಿಲ್ಲ ಮತ್ತು ಹೈಪೊಥೈರಾಯ್ಡಿಸಂ ಉಂಟಾಗುತ್ತದೆ. ವಿಷಣ್ಣತೆ,ಬಳಲಿಕೆ,ತೂಕ ಹೆಚ್ಚಳ,ಮಲಬದ್ಧತೆ ಇತ್ಯಾದಿಗಳೆಲ್ಲ ಹೈಪೊಥೈರಾಯ್ಡಿಸಮ್‌ನ ಲಕ್ಷಣಗಳಾಗಿವೆ.
* ಗಂಟಲಿನಲ್ಲಿ ಗಂಟು
ಕೆಲವರ ಗಂಟಲಿನಲ್ಲಿ ದೊಡ್ಡ ಗೆಡ್ಡೆಯಂತಹ ಗಂಟು ಬೆಳೆದಿರುವುದನ್ನು ನೀವು ನೋಡಿಬಹುದು. ಇದಕ್ಕೆ ಗಳಗಂಡ ಎಂದು ಕರೆಯಲಾಗುತ್ತದೆ. ಇದು ಬೇರೆ ಏನೂ ಅಲ್ಲ,ಅತಿಯಾಗಿ ಬೆಳೆದ ಥೈರಾಯ್ಡ್ ಗ್ರಂಥಿಯೇ ಆಗಿದೆ. ಅಯೊಡಿನ್ ಕೊರತೆಯು ಥೈರಾಯ್ಡ್ ಗ್ರಂಥಿಯ ಕಾರ್ಯ ನಿರ್ವಹಣೆಗೆ ವ್ಯತ್ಯಯವನ್ನುಂಟು ಮಾಡುತ್ತದೆ ಎನ್ನುವುದು ನಿಮಗೀಗಾಗಲೇ ತಿಳಿದಿದೆ. ಗಳಗಂಡವು ಕುತ್ತಿಗೆಯ ಕೆಳಭಾಗದಲ್ಲಿ ಉಂಟಾಗುತ್ತದೆ ಮತ್ತು ಸುದೀರ್ಘ ಅಯೊಡಿನ್ ಕೊರತೆಯ ಬಳಿಕ ಗೋಚರಿಸತೊಡಗುತ್ತದೆ. ಹೊರಗಿನ ಆಹಾರವನ್ನು ಹೆಚ್ಚಾಗಿ ಸೇವಿಸುವವರು ಐಯೊಡಿನ್ ಕೊರತೆಯ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ,ಏಕೆಂದರೆ ಅಲ್ಲಿ ಸಾಮಾನ್ಯವಾಗಿ ಅಯೊಡೈಸ್ಡ್ ಉಪ್ಪನ್ನು ಬಳಸುವುದಿಲ್ಲ.
* ಗಂಟಲಿನಲ್ಲಿ ಉಸಿರುಗಟ್ಟುವಿಕೆ
ಗಂಟಲಿನಲ್ಲಿ ಉಸಿರುಗಟ್ಟಿದಂತಾಗುವುದಕ್ಕೆ ಈ ಗಂಟು ಅಥವಾ ಗಳಗಂಡವು ಕಾರಣವಾಗಿರುತ್ತದೆ. ವಿಶೇಷವಾಗಿ ನಾವು ಮಲಗಿದ ಭಂಗಿಯಲ್ಲಿದ್ದಾಗ ಈ ಗಂಟಿನಿಂದ ಉಸಿರಾಟಕ್ಕೆ ಮತ್ತು ನುಂಗುವ ಪ್ರಕ್ರಿಯೆಗೆ ಅಡ್ಡಿಯುಂಟಾಗುತ್ತದೆ. ಇದು ಉಸಿರುಗಟ್ಟಿದ ಅನುಭವವನ್ನುಂಟು ಮಾಡುತ್ತದೆ. ಇದರೊಂದಿಗೆ ಈಗಾಗಲೇ ವಿವರಿಸಿರುವ ಲಕ್ಷಣಗಳೂ ಇದ್ದರೆ ಅಯೊಡಿನ್ ಕೊರತೆಯಿದೆ ಎನ್ನುವುದು ಖಚಿತವಾಗುತ್ತದೆ.
*ಕೂದಲುದುರುವಿಕೆ ಮತ್ತು ಶುಷ್ಕ ತ್ವಚೆ
ಅಯೊಡಿನ್ ಕೊರತೆಯು ಹೈಪೊಥೈರಾಯ್ಡಿಸಮ್ ಅನ್ನು ಉಂಟು ಮಾಡುತ್ತದೆ. ಒಣಗುತ್ತಿರುವ ಚರ್ಮ,ಕೂದಲುದುರುವಿಕೆ, ಸ್ನಾಯುಗಳು ದುರ್ಬಲಗೊಳ್ಳುವುದು ಮತ್ತು ಚಳಿಗೆ ಹೆಚ್ಚು ಸಂವೇದನಾಶೀಲತೆ ಇವು ಈ ಸ್ಥಿತಿಯನ್ನು ಸೂಚಿಸುವ ಪ್ರಮುಖ ಸಂಕೇತಗಳಾಗಿವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೈಪೊಥೈರಾಯ್ಡಿಸಮ್‌ಗೆ ಗುರಿಯಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ವಯಸ್ಸಾಗುತ್ತ ಹೋದಂತೆ ಹೈಪೊಥೈರಾಯ್ಡಿಸಮ್‌ನ ಅಪಾಯವೂ ಹೆಚ್ಚುತ್ತ ಹೋಗುತ್ತದೆ.
*ಅರಿವು ಕುಂಠಿತಗೊಳ್ಳುವುದು
ಅಯೊಡಿನ್ ಕೊರತೆಯು ಮಿದುಳಿನ ಮೇಲೆಯೂ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾದಾಗ ಯಾವುದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಏಕಾಗ್ರತೆ ಕಡಿಮೆಯಾಗುತ್ತದೆ. ಇದು ವ್ಯಕ್ತಿಯ ಉತ್ಪಾದಕತೆಯ ಮೇಲೂ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಇತರ ಲಕ್ಷಣಗಳೊಂದಿಗೆ ಈ ಲಕ್ಷಣವೂ ಕಂಡುಬಂದರೆ ಐಯೊಡಿನ್ ಕೊರತೆಯ ಬಗ್ಗೆ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗುತ್ತದೆ.