ಊಟದ ಸಮಯಕ್ಕೂ ದೇಹತೂಕಕ್ಕೂ ಸಂಬಂಧವಿದೆಯೇ?
ನಿಮ್ಮ ಶರೀರದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಎಲ್ಲ ಬಗೆಯ ಡಯಟ್ ಪದ್ಧತಿಗಳನ್ನು ಬಳಸಿಯೂ ವಿಫಲರಾಗಿದ್ದೀರಾ?
ಊಟ ಮಾಡುವ ರೀತಿಗೂ ತನ್ನದೇ ಆದ ಮಹತ್ವವಿದೆ ಮತ್ತು ಇದು ನಿಮ್ಮ ವೈಫಲ್ಯಕ್ಕೆ ಕಾರಣ ಎಂದು ಹೇಳಿದರೆ ಅಚ್ಚರಿಯಾಗಬಹುದು.
ದಿನದ ಮೊದಲ ಊಟ/ಡಯಟ್/ಬ್ರೇಕ್‌ಫಾಸ್ಟ್ ಅನ್ನು ಬೆಳಿಗ್ಗೆಯೇ ಮಾಡುವುದು ದೇಹದ ತೂಕವನ್ನು ಇಳಿಸಲು ನೆರವಾಗುತ್ತದೆ. ದೇಹತೂಕ ಇಳಿಸುವಲ್ಲಿ ಆರೋಗ್ಯಕರ ಆಹಾರದೊಂದಿಗೆ ಜೀವನಶೈಲಿ ಮತ್ತು ದಿನಚರಿಯೂ ಪ್ರಮುಖ ಪಾತ್ರವನ್ನು ಹೊಂದಿವೆ. ನೀವು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಿದರೆ ತೂಕವನ್ನು ಇಳಿಸಿಕೊಳ್ಳುವುದು ಸುಲಭವಾಗುತ್ತದೆ. ಇಂದಿನ ಗಡಿಬಿಡಿಯ ಜೀವನಶೈಲಿಯಲ್ಲಿ ಆಹಾರದ ಪಾತ್ರವು ಬದಲಾಗಿದೆ ಮತ್ತು ದೈಹಿಕ ಕ್ಷಮತೆಯ ಮಟ್ಟವನ್ನು ಕಾಯ್ದುಕೊಳ್ಳುವುದು ಸವಾಲು ಆಗಿದೆ. ಆರೋಗ್ಯಯುತ ಬದುಕಿಗೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ.ನೀವು ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸಿದ್ದರೆ ಆಹಾರದ ವಿಧದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ. ರಾತ್ರಿ 10 ಗಂಟೆಗೆ ಮಲಗುವುದಿದ್ದರೆ ಸಂಜೆ 6-7 ಗಂಟೆಯೊಳಗೆ ಊಟ ಮುಗಿಸಬೇಕು ಎಂದು ಹಲವರು ನಂಬಿದ್ದಾರೆ. ಅವರ ಅಭಿಪ್ರಾಯದಲ್ಲಿ ಸಂಜೆ ಏಳು ಗಂಟೆಯ ಬಳಿಕ ಊಟ ಮಾಡಿದರೆ ತೂಕ ಹೆಚ್ಚುತ್ತದೆ. ಇದು ನಿಜವೇ? ಇವೆಲ್ಲ ವಿಷಯಗಳು ದೇಹತೂಕದ ಮೇಲೆ ಪರಿಣಾಮಗಳನ್ನು ಹೊಂದಿವೆಯೇ? ಇದಕ್ಕೆ ಕೆಲವು ವೈಜ್ಞಾನಿಕ ಕಾರಣಗಳ ಕುರಿತು ಮಾಹಿತಿಗಳಿಲ್ಲಿವೆ.
ಇತ್ತೀಚಿಗೆ ನಡೆಸಲಾದ ಸಂಶೋಧನೆಯಂತೆ ಬೆಳಿಗ್ಗೆ ಬೇಗ ಆಹಾರ ಸೇವಿಸುವುದರಿಂದ ಬೊಜ್ಜುತನಕ್ಕೆ ಮುಖ್ಯ ಕಾರಣವಾಗಿರುವ ತಿನ್ನುಬಾಕತನ ಮತ್ತು ಹಸಿವು ನಿಯಂತ್ರಣದಲ್ಲಿರುತ್ತವೆ. ಬೆಳಿಗ್ಗೆ ಬೇಗ ಆರೋಗ್ಯಯುತ,ಪೋಷಕಾಂಶಗಳಿಂದ ಕೂಡಿದ ಆಹಾರ ಸೇವನೆಯು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಶರೀರಕ್ಕೆ ಅಗತ್ಯ ಪೋಷಕಾಂಶಗಳು ಲಭಿಸಿದಾಗ ತಿನ್ನುಬಾಕತನ ಕಾಡುವುದಿಲ್ಲ ಮತ್ತು ಶರೀರದಲ್ಲಿ ಹೆಚ್ಚು ಕೊಬ್ಬು ಉತ್ಪಾದನೆಯಾಗುವುದಿಲ್ಲ. ದಿನದಲ್ಲಿ ನೀವು ಆಹಾರವನ್ನು ಸೇವಿಸುವಾಗ ಅಲ್ಲಿಯವರೆಗೆ ಒಂದು ರೀತಿಯಲ್ಲಿ ನೀವು ಇಂಟರ್‌ಮಿಟಂಟ್ ಫಾಸ್ಟಿಂಗ್ ಮಾಡಿರುತ್ತೀರಿ. ನೀವು ಆಹಾರ ಸೇವಿಸಿದ ಬಳಿಕ ರಾತ್ರಿಯಿಡೀ ನಿಮ್ಮ ಶರೀರವು ಹೆಚ್ಚಿನ ಕ್ಯಾಲರಿಗಳನ್ನು ಪಡೆಯುವುದಿಲ್ಲ.
ಇಂಟರ್‌ಮಿಟಂಟ್ ಫಾಸ್ಟಿಂಗ್ ತೂಕ ಇಳಿಕೆಗಾಗಿ ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುವ ಆಹಾರ ಕ್ರಮವಾಗಿದೆ. ಈ ವಿಧಾನದಲ್ಲಿ ದಿನದ 24 ಗಂಟೆಗಳ ಅವಧಿಯಲ್ಲಿ 8ರಿಂದ 12 ಗಂಟೆಗಳ ಉಪವಾಸ ಅಗತ್ಯವಾಗಿರುತ್ತದೆ. ನೀವು ಇಂಟರ್‌ಮಿಟಂಟ್ ಫಾಸ್ಟಿಂಗ್ ಮಾಡುತ್ತಿದ್ದರೆ ಆಹಾರವನ್ನು ಜೀರ್ಣಿಸಲು ಶರೀರಕ್ಕೆ ಸಾಕಷ್ಟು ಸಮಯಾವಕಾಶ ದೊರೆಯುತ್ತದೆ ಮತ್ತು ಆಹಾರವು ಸೂಕ್ತವಾಗಿ ಹೀರಿಕೊಳ್ಳಲ್ಪಟ್ಟಾಗ ಶರೀರಕ್ಕೆ ಸಾಕಷ್ಟು ಪೋಷಕಾಂಶಗಳು ಲಭಿಸುತ್ತವೆ. ಇಂಟರ್‌ಮಿಟಂಟ್ ಫಾಸ್ಟಿಂಗ್ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ. ಈ ವಿಧದ ಉಪವಾಸವು ತಿನ್ನುಬಾಕತನ/ಹಸಿವನ್ನು ತಡೆಯುತ್ತದೆ ಎನ್ನುವುದು ಡಯಟ್ ತಜ್ಞರ ಅಭಿಪ್ರಾಯವಾಗಿದೆ.
ದಿನದ ಆಹಾರ/ಊಟ ಸೇವನೆಗಳ ನಡುವೆ ಸುದೀರ್ಘ ವಿರಾಮವಿದ್ದರೆ ಅದು ಸಹ ತೂಕವನ್ನು ಇಳಿಸಲು ನೆರವಾಗುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ಆದರೆ ಇಂಟರ್‌ಮಿಟಂಟ್ ಫಾಸ್ಟಿಂಗ್ ಅನ್ನು ಆರಂಭಿಸುವ ಮುನ್ನ ಆರೋಗ್ಯ ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಅಗತ್ಯ. ಹೃದ್ರೋಗ,ಅಧಿಕ ರಕ್ತದೊತ್ತಡ,ಮಧುಮೇಹ,ಜಠರಗರುಳು ಸಮಸ್ಯೆಗಳಿರುವವರಿಗೆ ಇಂಟರ್‌ಮಿಟಂಟ್ ಫಾಸ್ಟಿಂಗ್ ಸೂಕ್ತವಲ್ಲ. ಇಂತಹ ರೋಗಿಗಳು ತಮ್ಮ ವೈದ್ಯರ ಸಲಹೆ ಪಡೆದುಕೊಂಡೇ ಆಹಾರ ಕ್ರಮವನ್ನು ಬದಲಿಸಬೇಕಾಗುತ್ತದೆ.
ವಿಳಂಬವಾಗಿ ಊಟ ಮಾಡುವುದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಪುರುಷರನ್ನು ಮುಖ್ಯವಾಗಿಟ್ಟುಕೊಂಡು ನಡೆಸಿದ ವಿಶ್ಲೇಷಣೆಯೊಂದು ತೋರಿಸಿದೆ. ತಡವಾಗಿ ಊಟ ಮಾಡುವುದರಿಂದ ನಾವು ಉಸಿರಾಡಿದಾಗ ‘ರೆಸ್ಪರೇಟರಿ ಕೋಷಂಟ್ ’ ಅಥವಾ ಒಳಗೆ ಸೇರುವ ಆಮ್ಲಜನಕ ಮತ್ತು ಹೊರಹಾಕಲ್ಪಡುವ ಅಂಗಾರಾಮ್ಲ ವಾಯುವಿನ ನಡುವಿನ ಅನುಪಾತವು ಹೆಚ್ಚಾಗುತ್ತದೆ.
ಸಕಾಲದಲ್ಲಿ ಎಲ್ಲ ಆಹಾರಗಳನ್ನು ಸೇವಿಸುವುದರಿಂದ ಶರೀರವು ಉತ್ತಮ ಪೋಷಣೆ ಪಡೆಯುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಬ್ರೇಕ್‌ಫಾಸ್ಟ್ ಅನ್ನು ಬೆಳಿಗ್ಗೆ ಒಂಭತ್ತು ಗಂಟೆಯ ಮೊದಲು ಅಥವಾ ನಿದ್ರೆಯಿಂದ ಎದ್ದ ಒಂದು ಗಂಟೆಯೊಳಗೆ ಸೇವಿಸಬೇಕು. ಬ್ರೇಕ್‌ಫಾಸ್ಟ್‌ನ ನಾಲ್ಕು ಗಂಟೆಗಳ ಬಳಿಕ ಊಟವನ್ನು ಮಾಡಬೇಕು ಮತ್ತು ರಾತ್ರಿಯ ಊಟವನ್ನು ಒಂಭತ್ತು ಗಂಟೆಯ ಮೊದಲು ಮಾಡಬೇಕು.
ಬೆಳಿಗ್ಗೆ ಆರು ಗಂಟೆಯ ಮೊದಲು ಅಥವಾ ಸಂಜೆ ಆರು ಗಂಟೆಯ ಬಳಿಕ ನೀವು ಕ್ಯಾಲರಿಗಳನ್ನು ಸೇವಿಸುವುದು ಹೆಚ್ಚಿನ ವ್ಯತ್ಯಾಸವನ್ನು ಉಂಟು ಮಾಡುವುದಿಲ್ಲ ಎನ್ನುತ್ತಾರೆ ಫಿಟ್ನೆಸ್ ತಜ್ಞರು. ನಿಮ್ಮ ಚಯಾಪಚಯವು ಸರಿಯಾಗಿದ್ದರೆ ಮತ್ತು ನೀವು ನಿಮ್ಮ ಶರೀರಕ್ಕೆ ಅಗತ್ಯವಿರುವಷ್ಟೇ ಕ್ಯಾಲರಿಗಳನ್ನು ಸೇವಿಸಿದ್ದರೆ ಶರೀರದ ತೂಕವೆಂದೂ ಹೆಚ್ಚುವುದಿಲ್ಲ. ಶರೀರದಲ್ಲಿ ಶಕ್ತಿಯನ್ನು ಉತ್ಪಾದಿಸುವುದು ಕ್ಯಾಲರಿಗಳ ಕೆಲಸವಾಗಿದೆ.