ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬಹುದೇ?

Update: 2020-06-21 13:00 GMT

 ‘ಹಣ್ಣುಗಳ ರಾಜ’ಎಂದೇ ಹೆಸರಾಗಿರುವ ಮಾವಿನ ಹಣ್ಣನ್ನು ಇಷ್ಟಪಡದವರು ಬಹುಶಃ ಯಾರೂ ಇಲ್ಲ. ಮಾವಿನ ಹಣ್ಣು ನೈಸರ್ಗಿಕ ಸಕ್ಕರೆಯನ್ನು ಒಳಗೊಂಡಿರುತ್ತದೆ,ಹೀಗಾಗಿ ಮಧುಮೇಹಿಗಳು ತಿನ್ನಲು ಈ ಹಣ್ಣು ಸೂಕ್ತವೇ ಎಂಬ ಅನುಮಾನ ಹಲವರಲ್ಲಿದೆ.

 ಮಾವಿನ ಹಣ್ಣಿನಲ್ಲಿ ಹಲವಾರು ಅಗತ್ಯ ವಿಟಾಮಿನ್‌ಗಳು,ನಾರು ಮತ್ತು ಖನಿಜಗಳು ಸಮೃದ್ಧವಾಗಿರುವುದರಿಂದ ಯಾವುದೇ ಆಹಾರ ಕ್ರಮದೊಂದಿಗೆ ಹೆಚ್ಚಿನ ಪೋಷಕಾಂಶಗಳನ್ನು ಶರೀರಕ್ಕೆ ಒದಗಿಸುತ್ತದೆ. ಮಾವಿನ ಹಣ್ಣಿನಲ್ಲಿಯ ಶೇ.90ಕ್ಕೂ ಹೆಚ್ಚಿನ ಕ್ಯಾಲರಿಗಳಿಗೆ ಅದರಲ್ಲಿಯ ನೈಸರ್ಗಿಕ ಸಕ್ಕರೆಯು ಮೂಲವಾಗಿದೆ. ಹೀಗಾಗಿ ಅದು ಮಧುಮೇಹಿಗಳಲ್ಲಿ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ತನ್ನ ಕೊಡುಗೆಯನ್ನು ನೀಡಬಹುದು. ಆದರೆ ಈ ಹಣ್ಣಿನಲ್ಲಿರುವ ನಾರು ಮತ್ತು ವಿವಿಧ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ಒಟ್ಟಾರೆ ಪರಿಣಾಮವನ್ನು ಕನಿಷ್ಠಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ.

 ಶರೀರವು ರಕ್ತದಲ್ಲಿ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ನಾರು ನಿಧಾನಗೊಳಿಸುತ್ತದೆ ಮತ್ತು ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚುವ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಮಾವಿನ ಹಣ್ಣಿನ ಮೂಲಕ ಶರೀರವನ್ನು ಸೇರುವ ಕಾರ್ಬೊಹೈಡ್ರೇಟ್‌ಗಳ ನಿರ್ವಹಣೆ ಮತ್ತು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುವುದು ಸುಲಭವಾಗುತ್ತದೆ.

ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಎನ್ನುವುದು ರಕ್ತದಲ್ಲಿಯ ಸಕ್ಕರೆಯ ಮೇಲೆ ಆಹಾರಗಳು ಬೀರುವ ಪರಿಣಾಮಗಳಿಗೆ ಅನುಗುಣವಾಗಿ ಅವುಗಳನ್ನು ವರ್ಗೀಕರಿಸುವ ಸಾಧನವಾಗಿದೆ. ಜಿಐ ಶೂನ್ಯದಿಂದ ನೂರರವರೆಗೆ ಮಾಪನವನ್ನು ಹೊಂದಿದ್ದು,ಶೂನ್ಯವು ಆಹಾರದಿಂದ ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ಯಾವುದೇ ಪರಿಣಾಮವಿಲ್ಲ ಎನ್ನುವುದನ್ನು ಸೂಚಿಸುತ್ತದೆ. ನೂರು ಶುದ್ಧ ಸಕ್ಕರೆಯ ಸೇವನೆಯ ನಿರೀಕ್ಷಿತ ಪರಿಣಾಮಗಳನ್ನು ಪ್ರತಿನಿಧಿಸುತ್ತದೆ.

55ಕ್ಕಿಂತ ಕಡಿಮೆ ಜಿಐ ಹೊಂದಿರುವ ಯಾವುದೇ ಆಹಾರವು ಮಧುಮೇಹಿಗಳಿಗೆ ಉತ್ತಮವಾಗಬಹುದು ಮತ್ತು ಮಾವಿನ ಹಣ್ಣಿನ ಜಿಐ 51 ಆಗಿರುವುದರಿಂದ ತಾಂತ್ರಿಕವಾಗಿ ಅದು ಕಡಿಮೆ ಜಿಐ ಆಹಾರವೆಂದು ವರ್ಗೀಕರಿಸಲ್ಪಟ್ಟಿದೆ.

ನೀವು ಮಧುಮೇಹಿಯಾಗಿದ್ದರೆ ಮತ್ತು ನಿಮ್ಮ ಆಹಾರಕ್ರಮದಲ್ಲಿ ಮಾವಿನ ಹಣ್ಣನ್ನು ಸೇರಿಸಿಕೊಳ್ಳಲು ಬಯಸಿದ್ದರೆ ಅದು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಗಳನ್ನು ತಗ್ಗಿಸಲು ಹಲವಾರು ಕ್ರಮಗಳನ್ನು ಅನುಸರಿಸಬಹುದಾಗಿದೆ.

ಒಂದೇ ಸಲಕ್ಕೆ ಹೆಚ್ಚು ಪ್ರಮಾಣದಲ್ಲಿ ಮಾವಿನ ಹಣ್ಣು ತಿನ್ನದಿರುವುದು ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ಅದರ ಪರಿಣಾಮಗಳನ್ನು ತಗ್ಗಿಸಲು ಅತ್ಯುತ್ತಮ ಮಾರ್ಗವಾಗಿದೆ.

ಮಾವಿನ ಹಣ್ಣು ಸೇರಿದಂತೆ ಯಾವುದೇ ಆಹಾರದಲ್ಲಿರುವ ಕಾರ್ಬೊಹೈಡ್ರೇಟ್‌ಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು,ಆದರೆ ಇದರ ಅರ್ಥ ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಲೇಬಾರದು ಎಂದಲ್ಲ.

ಯಾವುದೇ ಆಹಾರ ಸೇವನೆಯಿಂದ ನಮ್ಮ ಶರೀರಕ್ಕೆ ಒಂದು ಬಾರಿ ಸುಮಾರು 15 ಗ್ರಾಮ್ ಕಾರ್ಬೊಹೈಡ್ರೇಟ್‌ಗಳು ದೊರೆಯುತ್ತವೆ. ಅರ್ಧ ಕಪ್‌ನಷ್ಟು ಮಾವಿನ ಹೋಳುಗಳು ಸುಮಾರು 12.5 ಗ್ರಾಮ್ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಇದು ಯಾವುದೇ ಆಹಾರವು ಶರೀರಕ್ಕೆ ಒಂದು ಬಾರಿ ಒದಗಿಸುವ ಕಾರ್ಬೊಹೈಡ್ರೇಟ್‌ಗಳ ಪ್ರಮಾಣಕ್ಕಿಂತ ಕಡಿಮೆಯಾಗಿದೆ.

ನೀವು ಮಧುಮೇಹಿಯಾಗಿದ್ದರೆ ಅರ್ಧ ಕಪ್ ಮಾವಿನ ಹಣ್ಣಿನಿಂದ ಆರಂಭಿಸಿ ನಿಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟ ಅದಕ್ಕೆ ಹೇಗೆ ಪ್ರತಿವರ್ತಿಸುತ್ತದೆ ಎನ್ನುವುದನ್ನು ಗಮನಿಸಿ. ಈ ಪ್ರಮಾಣವನ್ನು ಹೆಚ್ಚುಕಡಿಮೆ ಮಾಡುವ ಮೂಲಕ ಎಷ್ಟು ಮಾವಿನ ಹಣ್ಣು ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಸೂಕ್ತ ಎನ್ನುವುದನ್ನು ಕಂಡುಕೊಳ್ಳಬಹುದು.

ಮಾವಿನ ಹಣ್ಣಿನಂತಹ ಹೆಚ್ಚು ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಿದಾಗ ರಕ್ತದಲ್ಲಿ ಸಕ್ಕರೆ ಮಟ್ಟದ ಏರಿಕೆಯನ್ನು ಕನಿಷ್ಠಗೊಳಿಸಲು ನಾರಿನಂತೆ ಪ್ರೋಟಿನ್ ಕೂಡ ನೆರವಾಗುತ್ತದೆ. ಮಾವಿನ ಹಣ್ಣು ನೈಸರ್ಗಿವಾಗಿ ನಾರನ್ನು ಹೊಂದಿರುತ್ತದೆ,ಆದರೆ ಪ್ರೋಟಿನ್ ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ. ಹೀಗಾಗಿ ಮಾವಿನ ಹಣ್ಣಿನ ಜೊತೆಗೆ ಬೇಯಿಸಿದ ಮೊಟ್ಟೆ,ಚೀಸ್ ಅಥವಾ ನಟ್ಸ್‌ನಂತಹ ಯಾವುದೇ ಪ್ರೋಟಿನ್ ಮೂಲವನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚುವ ದರ ಕಡಿಮೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News