ಪ್ರತಿ ದಿನ ಮಲವಿಸರ್ಜನೆ ಆಗುತ್ತಿಲ್ಲವೇ?: ಇಲ್ಲಿವೆ ಅದಕ್ಕೆ ಮನೆಮದ್ದುಗಳು
ಮಲವಿಸರ್ಜನೆಯಾಗದಿದ್ದರೆ ಅದರ ಕಷ್ಟ ಅನುಭವಿಸಿದವರಿಗೇ ಗೊತ್ತು. ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟಾಯ್ಲೆಟ್‌ಗೆ ಹೋಗಿ ಕೆಲಸವನ್ನು ಪೂರೈಸದಿದ್ದರೆ ಅವರ ದಿನವೇ ಆರಂಭವಾಗುವುದಿಲ್ಲ. ಹಲವಾರು ಸಂದರ್ಭಗಳಲ್ಲಿ ಪ್ರತಿ ದಿನವೂ ಮಲ ವಿಸರ್ಜನೆ ಮಾಡುವುದು ವ್ಯಕ್ತಿಗೆ ಸವಾಲಿನ ಕೆಲಸವಾಗಬಹುದು. ಇದಕ್ಕೆ ಕೆಲವು ಆನುವಂಶಿಕ ಕಾರಣಗಳಿರಬಹುದು,ಕೆಲವು ಕಾರಣಗಳು ನಮ್ಮ ಜೀವನಶೈಲಿಯ ಅಭ್ಯಾಸಗಳಿಗೆ ಸಂಬಂಧಿಸಿರಬಹುದು. ಹಲವು ಪ್ರಕರಣಗಳಲ್ಲಿ ಪ್ರತಿ ದಿನ ಮಲವಿಸರ್ಜನೆಯಾಗದಿದ್ದರೆ ಅದು ಹೊಟ್ಟೆಯುಬ್ಬರ ಮತ್ತು ಅತಿಯಾದ ಹೊಟ್ಟೆನೋವಿಗೆ ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ ವೈದ್ಯರ ಬಳಿಗೆ ತೆರಳುವ ಮುನ್ನ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇವು ಖಂಡಿತವಾಗಿಯೂ ಯಾವುದೇ ಅಡ್ಡಪರಿಣಾಮಗಳನ್ನುಂಟು ಮಾಡುವುದಿಲ್ಲ. ಇಂತಹ ಮನೆಮದ್ದುಗಳಿಗೆ ಮುನ್ನ ಮಲ ವಿಸರ್ಜನೆಯಾಗದಿರುವುದಕ್ಕೆ ಕಾರಣಗಳನ್ನು ತಿಳಿದುಕೊಳ್ಳೋಣ.
ಮಲವಿಸರ್ಜನೆಯಾಗದಿರುವುದಕ್ಕೆ ಅತಿಯಾದ ಮಲಬದ್ಧತೆಯು ಪ್ರಮುಖ ಕಾರಣವಾಗಿದೆ. ಕಡಿಮೆ ನೀರು ಸೇವಿಸುವವರು ಪ್ರತಿದಿನ ಮಲಬದ್ಧತೆಯನ್ನು ಅನುಭವಿಸಬಹುದು ಮತ್ತು ಮಲ ವಿಸರ್ಜನೆಯು ಕಷ್ಟವಾಗಬಹುದು.
ನಾರು ನಾವು ಸೇವಿಸಿದ ಆಹಾರವು ಸುಲಭವಾಗಿ ಜೀರ್ಣಗೊಳ್ಳಲು ನೆರವಾಗುತ್ತದೆ. ನಮ್ಮ ಆಹಾರದಲ್ಲಿ ನಾರಿನ ಕೊರತೆಯಿದ್ದರೆ ಅದೂ ಮಲಬದ್ಧತೆಗೆ ಕರಣವಾಗುತ್ತದೆ. ವ್ಯಾಯಾಮದ ಕೊರತೆಯು ಮಲವಿಸರ್ಜನೆಯನ್ನು ಕಷ್ಟವಾಗಿಸುತ್ತದೆ. ಅಗತ್ಯವಿದ್ದಾಗ ಟಾಯ್ಲೆಟ್‌ಗೆ ಹೋಗದೇ ತಡೆದುಕೊಂಡಿದ್ದರೆ ಇದೂ ಮಲ ವಿಸರ್ಜನೆಯನ್ನು ಕಠಿಣವಾಗಿಸುತ್ತದೆ. ಒತ್ತಡವೂ ಇದಕ್ಕೆ ಕಾರಣವಾಗುತ್ತದೆ. ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
* ನೀರು ಕುಡಿಯುವುದರಲ್ಲಿ ಜಿಪುಣತನ ಬೇಡ
ನೀರು ಕುಡಿಯುವುದರಲ್ಲಿ ಜಿಪುಣತನ ಮಾಡುತ್ತಿದ್ದರೆ ದಿನವೂ ಆಹಾರ ಜೀರ್ಣವಾಗುವುದು ಕಷ್ಟವಾಗುತ್ತದೆ. ಹೀಗಾಗಿ ಧಾರಾಳವಾಗಿ ನೀರನ್ನು ಸೇವಿಸಿ. ವಿಶೇಷವಾಗಿ ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ನಮ್ಮ ಶರೀರಕ್ಕೆ ಮಾಮೂಲಿಗಿಂತ ಹೆಚ್ಚು ನೀರಿನ ಅಗತ್ಯವಿರುತ್ತದೆ. ಹಲವರಲ್ಲಿ ಸಣ್ಣ ಪ್ರಮಾಣದ ನಿರ್ಜಲೀಕರಣವೂ ಮಲಬದ್ಧತೆಗೆ ಕಾರಣವಾಗಬಲ್ಲದು. ಇದಕ್ಕೆ ತಕ್ಷಣದ ಪರಿಹಾರ ಬೇಕಿದ್ದರೆ ಪ್ರತಿ ದಿನ ಕನಿಷ್ಠ 2-3 ಲೀ.ನೀರನ್ನು ಕುಡಿಯಬೇಕು. ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಿದರೆ ವಾಯುವಿನಿಂದ ಉಂಟಾದ ಹೊಟ್ಟೆನೋವನ್ನು ಶಮನಿಸಲು ನೆರವಾಗುತ್ತದೆ.
* ವ್ಯಾಯಾಮ ಹೆಚ್ಚು ಮಾಡಿ
ವ್ಯಾಯಾಮ ಮಾಡುವುದು ಫಿಟ್ ಆಗಿರಲು,ಅಂಗಸೌಷ್ಟವ ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪುಗ್ರಹಿಕೆಯಾಗಿದೆ. ಒಳ್ಳೆಯ ಪಚನ ಕ್ರಿಯೆಯೂ ವ್ಯಾಯಾಮದೊಂದಿಗೆ ನಂಟು ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ವ್ಯಾಯಾಮವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ವ್ಯಕ್ತಿ ಯಾವುದೇ ವಯೋಗುಂಪಿಗೆ ಸೇರಿರಲಿ,ಕ್ರಿಯಾಶೀಲವಾಗಿರಬೇಕು ಮತ್ತು ಪ್ರತಿ ದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಬೇಕು. ಸೂಕ್ತ ಆಹಾರಕ್ರಮ,ಕೆಲವು ವ್ಯಾಯಾಮ ಮತ್ತು ಕ್ರಿಯಾಶೀಲ ಜೀವನಶೈಲಿಯನ್ನು ಅನುಸರಿಸುವವರಿಗೆ ಮಲಬದ್ಧತೆ ಎಂದೂ ಕಾಡುವುದಿಲ್ಲ.
* ತ್ವರಿತ ಪರಿಣಾಮಕ್ಕೆ ಒಣದ್ರಾಕ್ಷಿ ತಿನ್ನಿ
ಮಲಬದ್ಧತೆಯನ್ನು ಪರಿಹರಿಸಲು ನೈಸರ್ಗಿಕ ಪರಿಹಾರ ಎಂದು ಪರಿಗಣಿಸಲಾಗಿರುವ ಒಣದ್ರಾಕ್ಷಿ ಮತ್ತು ಅದರ ರಸ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪಾರಾಗಲು ನೆರವಾಗುತ್ತವೆ. ಒಣದ್ರಾಕ್ಷಿಯಲ್ಲಿರುವ ನೈಸರ್ಗಿಕ ವಿರೇಚಕಗಳು ನಿಯಮಿತವಾಗಿ ಮಲ ವಿಸರ್ಜನೆಯಾಗುವಂತೆ ಮಾಡುತ್ತವೆ.
* ಸೂಕ್ತ ಆಹಾರಕ್ರಮವನ್ನು ಅನುಸರಿಸಿ
ಇರ್ರಿಟೇಬಲ್ ಬೊವೆಲ್ ಸಿಂಡ್ರೋಮ್ (ಐಬಿಎಸ್) ಅಥವಾ ಜೀರ್ಣಸಂಬಂಧಿ ಅಸಮತೋಲನ ಅಥವಾ ಕಿರಿಕಿರಿಯನ್ನುಂಟು ಮಾಡುವ ಕರುಳಿನ ಸಹಲಕ್ಷಣಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೂ ಪರಿಣಾಮವನ್ನು ಬೀರಬಲ್ಲದು. ಹೀಗಾಗಿ ನಿಮ್ಮನ್ನು ಐಬಿಎಸ್ ಕಾಡದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಿ. ಮಲವಿಸರ್ಜನೆಯು ಸುದೀರ್ಘ ಸಮಯದಿಂದ ಕಷ್ಟವಾಗುತ್ತಿದ್ದರೆ ಸ್ಥಿತಿ ತೀರ ಹದಗೆಟ್ಟ ಸಂದರ್ಭಗಳಲ್ಲಿ ಅದು ಐಬಿಎಸ್‌ಗೆ ಕಾರಣವಾಗುತ್ತದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ವಿಶಿಷ್ಟ ಆಹಾರ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಎಫ್‌ಒಡಿಎಂಎಪಿ (ಫಾಡ್‌ಮ್ಯಾಪ್) ಆಹಾರ ಕ್ರಮವು ವ್ಯವಸ್ಥಿತ ರೀತಿಯಲ್ಲಿ ಕರುಳಿನ ಚಲನೆಯನ್ನು ಕ್ರಮಬದ್ಧಗೊಳಿಸಲು ನೆರವಾಗುತ್ತದೆ. ಈ ಫಾಡ್‌ಮ್ಯಾಪ್ ಆಹಾರ ಕ್ರಮವು ಫರ್ಮಂಟೇಬಲ್ ಒಲಿಗೊಸ್ಯಾಚರೈಡ್ಸ್, ಡೈಸ್ಯಾಚರೈಡ್ಸ್, ಮೊನೊಸ್ಯಾಚರೈಡ್ಸ್ ಮತ್ತು ಪಾಲಿಯಲ್‌ಗಳನ್ನು ಒಳಗೊಂಡಿರುತ್ತದೆ. ಈ ಆಹಾರಕ್ರಮವು ಕರುಳು ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುವ ಜಠರದಲ್ಲಿಯ ಸಕ್ಕರೆಯನ್ನು ನಿಯಂತ್ರಿಸುತ್ತದೆ.
*ಒತ್ತಡ ನಿರ್ವಹಣೆ ಅಗತ್ಯ
ಐಬಿಎಸ್ ಜೀರ್ಣಾಂಗದೊಂದಿಗೆ ಗುರುತಿಸಿಕೊಂಡಿರುವ ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡ ಅಥವಾ ಮಿದುಳನ್ನು ಕಾಡುವ ಇತರ ಕಾರಣಗಳು ಐಬಿಎಸ್‌ನ್ನು ಉಂಟು ಮಾಡುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಮಿದುಳಿನಲ್ಲಿ ನಕಾರಾತ್ಮಕ ವಿಚಾರಗಳು ಬಂದಾಗ ಕರುಳುಗಳ ಮೇಲೆ ಪರಿಣಾಮವುಂಟಾಗುತ್ತದೆ. ಇದು ಹೊಟ್ಟೆನೋವು ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. ಆದರೆ ನಿದ್ರಿಸಿದ್ದಾಗ ವ್ಯಕ್ತಿಗೆ ಈ ಲಕ್ಷಣಗಳ ಅನುಭವವವಾಗುವುದಿಲ್ಲ. ಒತ್ತಡವು ಕರುಳುಗಳು ಕೆಲಸ ಮಾಡುವ ವೇಗವನ್ನು ತಗ್ಗಿಸುತ್ತದೆ. ಇದರಿಂದಾಗಿ ತಿಂದ ಆಹಾರವು ಸರಿಯಾಗಿ ಜೀರ್ಣಗೊಳ್ಳುವುದಿಲ್ಲ. ಒತ್ತಡದ ಸಂದರ್ಭದಲ್ಲಿ ನಮ್ಮ ಶರೀರದಲ್ಲಿ ಹಲವಾರು ಹಾರ್ಮೋನ್‌ಗಳು ಸ್ರವಿಸಲ್ಪಡುತ್ತವೆ ಮತ್ತು ಇವು ನೇರವಾಗಿ ಹೊಟ್ಟೆಯಲ್ಲಿ ಪರಿಣಾಮವನ್ನುಂಟು ಮಾಡುತ್ತವೆ. ಇದರಿಂದಾಗಿ ವಾಯು ಮತ್ತು ಉಬ್ಬರದ ಸಮಸ್ಯೆ ಹೆಚ್ಚುತ್ತದೆ.