ಮೂತ್ರಪಿಂಡ ಕಲ್ಲುಗಳಿಂದ ಮುಕ್ತಿ ಪಡೆಯಲು ನೈಸರ್ಗಿಕ ಉಪಾಯಗಳು

Update: 2020-06-29 13:55 GMT

ಕಲ್ಲುಗಳು ಮೂತ್ರಪಿಂಡಗಳಲ್ಲಿ ಅತೀವ ನೋವನ್ನುಂಟು ಮಾಡುತ್ತವೆ,ಮೂತ್ರ ಮಾಡುವಾಗಲೂ ನೋವನ್ನು ನೀಡುತ್ತವೆ. ಈ ಕಲ್ಲುಗಳನ್ನು ಕಡೆಗಣಿಸಿದರೆ ಮೂತ್ರಪಿಂಡಗಳಿಗೆ ಇನ್ನಷ್ಟು ಹಾನಿಯನ್ನುಂಟು ಮಾಡುತ್ತವೆ. ಹೀಗಾಗಿ ಮೂತ್ರಪಿಂಡ ಕಲ್ಲುಗಳ ಯಾವುದೇ ಲಕ್ಷಣ ಕಂಡು ಬಂದರೆ ಸಾಧ್ಯವಾದಷ್ಟು ಶೀಘ್ರ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ಕಲ್ಲುಗಳ ಗಾತ್ರವನ್ನು ಅವಲಂಬಿಸಿ ಅವರು ಔಷಧಿಗಳನ್ನು ನೀಡಬಹುದು ಅಥವಾ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಬಹುದು. ಮೂತ್ರಪಿಂಡ ಕಲ್ಲುಗಳನ್ನು ನಿಭಾಯಿಸಲು ನೈಸರ್ಗಿಕ ಪರಿಹಾರಗಳನ್ನೂ ಪ್ರಯತ್ನಿಸಬಹುದು. ಇವು ನೋವನ್ನು ಕಡಿಮೆ ಮಾಡುವುದು ಮಾತ್ರವಲ್ಲ,ಕಲ್ಲುಗಳು ಮೂತ್ರದೊಂದಿಗೆ ಶರೀರದಿಂದ ಹೊರಹೋಗುವಂತೆಯೂ ಮಾಡುತ್ತವೆ ಮತ್ತು ಮೂತ್ರಪಿಂಡಗಳಿಗೆ ಹಾನಿಯುಂಟಾಗುವ ಅಪಾಯವೇನಾ ದರೂ ಇದ್ದರೆ ಅದನ್ನು ಕಡಿಮೆ ಮಾಡುತ್ತವೆ. ಇಲ್ಲಿವೆ ಅಂತಹ ಕೆಲವು ನೈಸರ್ಗಿಕ ಪರಿಹಾರಗಳು.....

ಬಾರ್ಲಿ ನೀರು

ಬಾರ್ಲಿ ನೀರಿನ ಸೇವನೆ ಮೂತ್ರಪಿಂಡ ಕಲ್ಲುಗಳಿಗೆ ಅತ್ಯಂತ ಸಾಮಾನ್ಯವಾದ ನೈಸರ್ಗಿಕ ಪರಿಹಾರವಾಗಿದೆ. ಬಾರ್ಲಿಯಲ್ಲಿ ಸಮೃದ್ಧವಾಗಿರುವ ನಾರು ಮೂತ್ರದಲ್ಲಿ ಕ್ಯಾಲ್ಸಿಯಂ ಹೋಗುವುದನ್ನು ಕಡಿಮೆ ಮಾಡುತ್ತದೆ. ಅಲ್ಲದೆ ವಿಷವಸ್ತುಗಳು ಮತ್ತು ತ್ಯಾಜ್ಯಗಳನ್ನು ಶರೀರದಿಂದ ಹೊರತಳ್ಳುವ ಮೂಲಕ ಮೂತ್ರಪಿಂಡಗಳನ್ನು ಶುದ್ಧೀಕರಿಸುತ್ತದೆ. ಮೂತ್ರವು ಹೆಚ್ಚು ಕ್ಷಾರೀಯವಾದಷ್ಟೂ ಮೂತ್ರಪಿಂಡಗಳುಂಟಾಗುವ ಅಪಾಯವು ಹೆಚ್ಚಾಗಿರುತ್ತದೆ. ಬಾರ್ಲಿಯು ಶರೀರದಲ್ಲಿ ಪಿಎಚ್ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಮೂಲಕ ಮೂತ್ರಪಿಂಡ ಕಲ್ಲುಗಳ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ. ಬಾರ್ಲಿ ನೀರಿನ ನಿಯಮಿತ ಸೇವನೆಯು ಮೂತ್ರಕೋಶದ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಮೂತ್ರಪಿಂಡಗಳ ನಿವಾರಣೆಯನ್ನು ಸುಲಭವಾಗಿಸುತ್ತದೆ.

ಲಿಂಬೆ ರಸ

ಲಿಂಬೆ ರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಾಮಿನ್ ಸಿ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ಅದು ಮೂತ್ರಪಿಂಡದಲ್ಲಿ ಸಂಗ್ರಹಗೊಂಡಿರುವ ಕ್ಯಾಲ್ಸಿಯಂ ಹರಳುಗಳು ಮತ್ತು ಆಕ್ಸಾಲಿಕ್ ಆಮ್ಲದ ಲವಣಗಳನ್ನು ಮೂತ್ರದಲ್ಲಿ ಕರಗಿಸಲು ನೆರವಾಗುತ್ತದೆ ಮತ್ತು ಕಲ್ಲುಗಳು ದೊಡ್ಡದಾಗುವುದನ್ನು ತಡೆಯುತ್ತದೆ. ಲಿಂಬೆ ರಸವು ನಾವು ಹೆಚ್ಚು ದ್ರವಗಳನ್ನು ಸೇವಿಸುವಂತೆ ಮಾಡುತ್ತದೆ. ಇದು ವಿಷವಸ್ತುಗಳನ್ನು ಶರೀರದಿಂದ ಹೊರಹಾಕಲು ನೆರವಾಗುತ್ತದೆ ಮತ್ತು ಹರಳುಗಳು ಕಲ್ಲುಗಳಾಗಿ ರೂಪುಗೊಳ್ಳಲು ಅವಕಾಶ ನೀಡುವುದಿಲ್ಲ.

ದಾಳಿಂಬೆ ರಸ

 ಪ್ರತಿ ದಿನ ಒಂದು ಗ್ಲಾಸ್ ದಾಳಿಂಬೆ ರಸವನ್ನು ಸೇವಿಸುತ್ತಿದ್ದರೆ ಮೂತ್ರಪಿಂಡಗಳು ಆರೋಗ್ಯಯುತವಾಗಿರುತ್ತವೆ,ಜೊತೆಗೆ ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ಎದುರಿಸುತ್ತಿರುವ ವ್ಯಕ್ತಿಯಲ್ಲಿ ಆ ಅಪಾಯವು ಕಡಿಮೆಯಾಗುತ್ತದೆ. ವ್ಯಕ್ತಿಯು ಈಗಾಗಲೇ ಮೂತ್ರಪಿಂಡ ಕಲ್ಲುಗಳಿಂದ ಬಳಲುತ್ತಿದ್ದರೆ ಔಷಧಿಗಳ ಜೊತೆಗೆ ದಾಳಿಂಬೆ ರಸದ ನಿಯಮಿತ ಸೇವನೆಯು ಈ ಕಲ್ಲುಗಳನ್ನು ತ್ವರಿತವಾಗಿ ಹೊರಗೆ ಹಾಕಲು ನೆರವಾಗುತ್ತದೆ. ದಾಳಿಂಬೆ ರಸದಲ್ಲಿರುವ ಪಾಲಿಫೆನಾಲ್‌ಗಳು ಉತ್ಕರ್ಷಣ ನಿರೋಧಕ ಗಳಾಗಿದ್ದು,ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳ ದಾಳಿಯಿಂದ ಶರೀರವನ್ನು ರಕ್ಷಿಸುತ್ತವೆ. ಅದು ಮೂತ್ರದ ಆಮ್ಲೀಯ ಮಟ್ಟವನ್ನು ತಗ್ಗಿಸುತ್ತದೆ ಮತ್ತು ಕಲ್ಲುಗಳು ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ಈಗಾಗಲೇ ಇರುವ ಮೂತ್ರಪಿಂಡ ಕಲ್ಲುಗಳು ಗಾತ್ರದಲ್ಲಿ ಇನ್ನಷ್ಟು ಬೆಳೆಯುವುದನ್ನು ತಡೆಯುತ್ತದೆ.

ನೀರು

ಸಾಕಷ್ಟು ನೀರನ್ನು ಕುಡಿಯುತ್ತಿರುವುದು ಶರೀರವನ್ನು,ವಿಶೇಷವಾಗಿ ಮೂತ್ರಪಿಂಡಗಳನ್ನು ಆರೋಗ್ಯಯುತವಾಗಿರಿಸುತ್ತದೆ ಎಂದು ಹೊಸದಾಗಿ ಹೇಳಬೇಕಿಲ್ಲ. ಪ್ರತಿದಿನ ಶರೀರಕ್ಕೆ ಅಗತ್ಯವಿರುವಷ್ಟು ನೀರನ್ನು ಸೇವಿಸುವುದು ಮುಖ್ಯವಾಗುತ್ತದೆ. ಅಲ್ಲದೆ ಹೆಚ್ಚು ನೀರನ್ನು ಸೇವಿಸುವುದು ಮೂತ್ರಪಿಂಡ ಕಲ್ಲುಗಳು ಉಂಟಾಗುವ ಸಾಧ್ಯತೆಯನ್ನು ತಗ್ಗಿಸುತ್ತದೆ ಮತ್ತು ಮೂತ್ರಪಿಂಡಗಳನ್ನು ಆರೋಗ್ಯಯುತವಾಗಿರಿಸುತ್ತದೆ.

ತುಳಸಿ ಕಷಾಯ

ಮೂತ್ರಪಿಂಡ ಕಲ್ಲುಗಳಿಗೆ ತುಳಸಿಯು ಪರಿಪೂರ್ಣ ಮನೆಮದ್ದಾಗಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆ್ಯಸಿಟಿಕ್ ಆಮ್ಲದ ಸಮೃದ್ಧ ಮೂಲವಾಗಿರುವ ಅದು ಮೂತ್ರಪಿಂಡ ಕಲ್ಲುಗಳನ್ನು ವಿಭಜಿಸಲು ನೆರವಾಗುತ್ತದೆ. ಯೂರಿಕ್ ಆ್ಯಸಿಡ್‌ನ ಮಟ್ಟ ಹೆಚ್ಚಾಗಿದ್ದರೆ ಅದನ್ನು ಕಡಿಮೆ ಮಾಡುತ್ತದೆ.ಯೂರಿಕ್ ಆ್ಯಸಿಡ್ ಮಟ್ಟವು ಹೆಚ್ಚಿದಾಗ ಅದನ್ನು ಕಡೆಗಣಿಸಿದರೆ ಅದು ಮೂತ್ರಪಿಂಡ ಕಲ್ಲುಗಳಿಗೆ ಕಾರಣವಾಗಬಹುದು. ಅಲ್ಲದೆ ತುಳಸಿ ಎಲೆಗಳು ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು,ಇವು ಮೂತ್ರಪಿಂಡ ಕಲ್ಲುಗಳ ನಿವಾರಣೆಯಲ್ಲಿ ನೆರವಾಗುತ್ತವೆ.

 ಬೆಳಿಗ್ಗೆ ಒಂದು ಗ್ಲಾಸ್ ತುಳಸಿ ಕಷಾಯವನ್ನು ಅಥವಾ ನೀವು ಚಹಾಪ್ರಿಯರಾಗಿದ್ದರೆ ಚಹಾ ತಯಾರಾಗುವಾಗ ಕೆಲವು ತುಳಸಿ ಎಲೆಗಳನ್ನು ಸೇರಿಸಿಕೊಂಡು ಸೇವಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಜಗಿಯುತ್ತಿದ್ದರೆ ನಿರೋಧಕ ಶಕ್ತಿಯು ಹೆಚ್ಚುತ್ತದೆ ಮತ್ತು ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News