ರೋಗ ನಿರೋಧಕ ಶಕ್ತಿ ಹೆಚ್ಚಲು ಮಿತಿಮೀರಿ ಕಷಾಯ, ನಿಂಬೆಹಣ್ಣಿನ ಪಾನೀಯ ಕುಡಿದರೆ ಏನಾಗುತ್ತದೆ?
ಹೊಸದಿಲ್ಲಿ: ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಹೆಚ್ಚಿನವರು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಹೇಳಲಾಗುವ ಪಾನೀಯಗಳು ಅಥವಾ ಇಮ್ಯೂನಿಟಿ ಬೂಸ್ಟರ್ ಪೇಯಗಳನ್ನು ಸೇವಿಸಲು ಉತ್ಸುಕತೆ ತೋರುತ್ತಿದ್ದಾರೆ. ಮನೆಯಲ್ಲಿಯೇ ಲಭ್ಯ ಸಾಂಬಾರ ಪದಾರ್ಥಗಳಿಂದ ತಯಾರಿಸಲಾದ ಕಷಾಯ, ನಿಂಬೆ ಹಣ್ಣಿನ ನೀರು ಅಥವಾ ಅರಿಶಿನ ಹಾಲನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯ. ಹಾಗಾದರೆ ನೀವು ಸಂಜೆಯ ಚಹಾದ ಬದಲು ಕಷಾಯ ಅಥವಾ ತಂಪು ಪಾನೀಯದ ಬದಲು ನಿಂಬೆ ಹಣ್ಣಿನ ನೀರು ಹಾಗೂ ಪ್ರತಿ ದಿನ ರಾತ್ರಿ ಅರಿಶಿನ ಹಾಕಿದ ಹಾಲು ಕುಡಿಯಲು ಬಯಸುತ್ತೀರಾ?.... ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪಾನೀಯಗಳನ್ನು ಪ್ರತಿ ದಿನ ಕುಡಿಯಬೇಕೇ ಬಹಳ ಸಮಯ ಕುಡಿಯಬೇಕೇ ಎಂಬ ಬಗ್ಗೆ ಗೊಂದಲವಂತೂ ಇದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಓದಿ.
ಕಷಾಯ: ಕೊರೊನಾದ ಈಗಿನ ಸಮಯದಲ್ಲಿ ಕಷಾಯ ಕುಡಿದಲ್ಲಿ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ಸುದ್ದಿ ಈಗ ಬಹಳಷ್ಟು ಹರಿದಾಡುತ್ತಿದೆ. ದಾಲ್ಚಿನಿ, ಏಲಕ್ಕಿ, ಲವಂಗ, ಕರಿಮೆಣಸು, ಜೀರಿಗೆ ಮುಂತಾದ ಸಾಂಬಾರ ಪದಾರ್ಥಗಳನ್ನು ನೀರಿನಲ್ಲಿ ಕುದಿಸಿ ಸೇವಿಸಲು ಈಗ ಹೆಚ್ಚಿನವರು ಇಷ್ಟ ಪಡುತ್ತಿದ್ದಾರೆ. ಆದರೆ ಇವುಗಳು ದೇಹದ ಉಷ್ಣತೆಯನ್ನು ಹೆಚ್ಚಿಸುವುದರಿಂದ ಅತಿಯಾಗಿ ಕುಡಿದರೆ ಹೊಟ್ಟೆಯ ಸಮಸ್ಯೆ, ಜೀರ್ಣಾಂಗದ ಸಮಸ್ಯೆ, ಚರ್ಮ ಸುಕ್ಕುಗಟ್ಟುವಿಕೆಗೆ ಕಾರಣವಾಗಬಹುದು ಎಂದು ನ್ಯೂಟ್ರಿಶನಿಸ್ಟ್ ಇಶಿ ಖೋಸ್ಲಾ ಹೇಳುತ್ತಾರೆ. ಪ್ರತಿ ಎರಡು ದಿನಗಳಿಗೊಮ್ಮೆ ಅಥವಾ ವಾರಕ್ಕೆ ಎರಡು ಬಾರಿ ಕುಡಿಯುವುದು ಒಳ್ಳೆಯದು ಎಂದೂ ಆಕೆ ಹೇಳುತ್ತಾರೆ.
ಅರಿಶಿನ ಹಾಲು: ಅರಶಿನದಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಆದರೆ ಅತಿಯಾದ ಅರಿಶಿನ ಹಾಲು ಸೇವನೆಯೂ ಸರಿಯಲ್ಲ. ``ಪ್ರತಿ ದಿನ ಅರಿಶಿನ ಹಾಕಿದ ಹಾಲು ಕುಡಿಯಬೇಕೆಂದಿದ್ದರೆ ಒಂದು ಗ್ಲಾಸ್ ಹಾಲಿಗೆ ಒಂದು ಚಿಟಿಕೆ ಅರಿಶಿನ ಹಾಕಿದರೆ ಸಾಕು,'' ಎಂದು ತಜ್ಞರು ವಿವರಿಸುತ್ತಾರೆ.
ನಿಂಬೆಹಣ್ಣಿನ ನೀರು : ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ದೇಹದ ರೋಗನಿರೋಧಕ ಶಕ್ತಿಗೆ ಇದು ಸಹಕಾರಿ. ಪ್ರತಿ ದಿನ ಎರಡು ನಿಂಬೆಹಣ್ಣುಗಳ ರಸವನ್ನು ಉತ್ತಮ ಆರೋಗ್ಯಕ್ಕಾಗಿ ಸೇವಿಸಬಹುದು ಎಂದು ಹೇಳುವ ನ್ಯೂಟ್ರಿಶನಿಸ್ಟ್ ರುಪಾಲಿ ದತ್ತಾ ಅದೇ ಸಮಯ ನಿಂಬೆ ಹಣ್ಣಿನಲ್ಲಿ ಹೆಚ್ಚು ಪ್ರಮಾಣದ ಸಿಟ್ರಿಕ್ ಆ್ಯಸಿಡ್ ಇರುವುದರಿಂದ ಅದು ದೇಹದ ಆಲ್ಕಲೀನ್ ಅಂಶದ ಮೇಲೆ ಪರಿಣಾಮ ಬೀರಬಹುದು. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯಿರುವವರು ಕೂಡ ಹೆಚ್ಚು ನಿಂಬೆ ಹಣ್ಣಿನ ರಸ ಸೇವಿಸಬಾರದು ಎಂದು ಅವರು ವಿವರಿಸುತ್ತಾರೆ.
ಕೃಪೆ: food.ndtv.com