ಮಾರಣಾಂತಿಕ ರೋಗ ಹೆಪಟೈಟಿಸ್
ಏನಿದು ಹೆಪಟೈಟಿಸ್?
ಹೆಪಟೈಟಿಸ್ ರೋಗ ಹೆಚ್ಚಾಗಿ ಲಿವರ್ (ಯಕೃತ್ತು)ನ್ನು ಕಾಡುವ ಕಾಯಿಲೆಯಾಗಿದ್ದು ಹೆಪಟೈಟಿಸ್ ಎ.ಬಿ.ಸಿ.ಡಿ. ಮತ್ತು ಇ ಎಂಬ ವೈರಸ್‌ನಿಂದ ಹರಡುತ್ತದೆ. ಹೆಪಟೈಟಿಸ್ ರೋಗದಲ್ಲಿ ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಎಂದು ಐದು ವಿಧಗಳಿವೆ. ಜಾಗತಿಕವಾಗಿ ಕೋಟಿಗಟ್ಟಲೆ ಮಂದಿ ಈ ರೋಗದಿಂದ ಬಳಲುತ್ತಿದ್ದು ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳು ಸಾರಿ ಹೇಳುತ್ತದೆ. ಸಾಮಾನ್ಯವಾಗಿ ಹೆಪಟೈಟಿಸ್ ಎ, ಡಿ, ಇ ಹೆಚ್ಚು ತೊಂದರೆ ನೀಡದಿದ್ದರೂ ಹೆಪಟೈಟಿಸ್ ಬಿ ಮತ್ತು ಸಿ ಹೆಚ್ಚು ಮಾರಣಾಂತಿಕವಾಗುವ ಸಾಧ್ಯತೆ ಇರುತ್ತದೆ. ವರ್ಷವೊಂದರಲ್ಲಿ 1.5 ಮಿಲಿಯನ್ ಸಾವಿಗೆ ಕಾರಣವಾಗುವ ಈ ರೋಗಕ್ಕೆ ಹೆಪಟೈಟಿಸ್ ಬಿ ಮತ್ತು ಸಿ ಹೆಚ್ಚಿನ ಕಾಣಿಕೆ ನೀಡುತ್ತದೆ ಎಂದರೂ ತಪ್ಪಲ್ಲ. ಹೆಪಟೈಟಿಸ್ ರೋಗದಲ್ಲಿ ಅಲ್ಪಕಾಲದ ತೀವ್ರವಾದ (Acute) ಮತ್ತು ದೀರ್ಘಕಾಲದ (Chronic) ಎಂಬುದಾಗಿ ಎರಡು ವಿಧಗಳಿದ್ದು, ಅಲ್ಪಕಾಲದ ತೀವ್ರವಾದ ಹೆಪಟೈಟಿಸ್‌ನಿಂದಲೇ ಹೆಚ್ಚಿನ ಸಾವು ನೋವು ಸಂಭವಿಸುತ್ತದೆ. ಹೆಪಟೈಟಿಸ್ ಬಿ ಒಂದರಿಂದಲೇ ವರ್ಷವೊಂದಲ್ಲಿ 7,80,000 ಮಂದಿ ಜೀವ ಕಳೆದುಕೊಳ್ಳುತ್ತಾರೆ ಎಂಬುದು ಆತಂಕಕಾರಿ ವಿಚಾರವಾಗಿದೆ.
ಹೆಪಟೈಟಿಸ್ ಬಿ ಮತ್ತು ಸಿ ರೋಗಕ್ಕೆ ಪರಿಣಾಮಕಾರಿ ಲಸಿಕೆಗಳು ಲಭ್ಯವಿದ್ದು, ಖಂಡಿತವಾಗಿಯೂ ರೋಗವನ್ನು ತಡೆಗಟ್ಟಬಹುದಾಗಿದೆ. ಅದೇ ರೀತಿ ಹೆಪಟೈಟಿಸ್ ಸಿ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯು ಲಭ್ಯವಿರುತ್ತದೆ. ಹೆಪಟೈಟಿಸ್ ಬಿ ರೋಗ ಸಾಮಾನ್ಯವಾಗಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಇವರು ಹೆಚ್ಚಿನ ಜಾಗ್ರತೆ ವಹಿಸುವ ಅವಶ್ಯಕತೆ ಇರುತ್ತದೆ. ಹೆಪಟೈಟಿಸ್ ಎ ಮತ್ತು ಇ ಕಲುಷಿತ ನೀರು ಮತ್ತು ಆಹಾರಗಳಿಂದ ಹೆಚ್ಚಾಗಿ ಹರಡುತ್ತದೆ ಮತ್ತು ಹೆಚ್ಚು ಮಾರಣಾಂತಿಕವಾಗುವ ಸಾಧ್ಯತೆ ಬಹಳ ಕಡಿಮೆಯಾಗಿರುತ್ತದೆ. ಆದರೆ ಹೆಪಟೈಟಿಸ್ ಬಿ, ಸಿ, ಡಿ ಹೆಚ್ಚಾಗಿ ಪದೇ ಪದೇ ಉಪಯೋಗಿಸುವ ಇಂಜೆಕ್ಷನ್‌ಗಳ ಮುಖಾಂತರ, ರಕ್ತಪೂರಣದ ಮುಖಾಂತರ, ಅಸುರಕ್ಷಿತ ದೈಹಿಕ ಸಂಪರ್ಕ, ತಾಯಿಯಿಂದ ಮಗುವಿಗೆ ಮತ್ತು ಅಸುರಕ್ಷಿತ ವೈದ್ಯಕೀಯ ಚಿಕಿತ್ಸೆ, ರೋಗಪೂರಿತ ವೈದ್ಯಕೀಯ ಉಪಕರಣಗಳ ಮುಖಾಂತರ ಹರಡುವ ಸಾಧ್ಯತೆ ಇರುತ್ತದೆ.
ಈ ಎಲ್ಲಾ ವೈರಸ್‌ಗಳು ನಮ್ಮ ದೇಹದ ಯಕೃತ್ತಿನ ಮೇಲೆ ದಾಳಿ ಮಾಡಿ ಅದರ ಕಾರ್ಯಕ್ಷಮತೆಯನ್ನು ಮತ್ತು ಕಾರ್ಯದಕ್ಷತೆಯನ್ನು ಕ್ಷೀಣಿಸುವಂತೆ ಮಾಡುತ್ತದೆ. ಯಕೃತ್ತು ನಮ್ಮ ದೇಹದ ಅತೀ ಮುಖ್ಯ ಅಂಗವಾಗಿದ್ದು ದೇಹದ ಎಲ್ಲಾ ಜೀರ್ಣಾಂಗ ಪ್ರಕ್ರಿಯೆ ಮತ್ತು ರಕ್ಷಣಾ ಪ್ರಕ್ರಿಯೆಯ ನೇತೃತ್ವ ವಹಿಸುತ್ತದೆ. ವೈರಸ್‌ಗಳ ದಾಳಿಗೆ ತುತ್ತಾದ ಯಕೃತ್ತು ತನ್ನ ರಕ್ಷಣಾ ಪ್ರಕ್ರಿಯೆ ಮತ್ತು ಜೀರ್ಣಾಂಗ ಪ್ರಕ್ರಿಯೆಯನ್ನು ಸರಿಯಾಗಿ ನಿಭಾಯಿಸಲಾಗದೆ ದೇಹದ ಆರೋಗ್ಯ ಹದಗೆಟ್ಟು ವ್ಯಕ್ತಿ ಜಾಂಡೀಸ್ (ದೇಹದ ಚರ್ಮ, ಕಣ್ಣಿನ ಮೇಲ್ಪದರ ಹಳದಿ ಬಣ್ಣಕ್ಕೆ ತಿರುಗುವುದು) ವಾಂತಿ, ಭೇದಿ, ಹಸಿವಿಲ್ಲದಿಲ್ಲದಿರುವುದು, ವಿಪರೀತ ಹೊಟ್ಟೆನೋವು, ಜ್ವರ, ಮೈಕೈ ನೋವು, ವಿಪರೀತ ಸುಸ್ತು, ದೇಹದ ತೂಕ ಕಡಿಮೆಯಾಗುವುದು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕದಿದ್ದಲ್ಲಿ ಯಕೃತ್ತಿನ ವೈಫಲ್ಯ ಮತ್ತು ಯಕೃತ್ತಿನ ಕ್ಯಾನ್ಸರ್‌ನಿಂದಾಗಿ ಜೀವ ಹಾನಿ ಕೂಡಾ ಸಂಭವಿಸುತ್ತದೆ.
ಹೆಪಟೈಟಿಸ್ ಬಿ ರೋಗದ ಲಕ್ಷಣಗಳು ಏನು?
ಹೆಪಟೈಟಿಸ್ ಬಿ ವೈರಾಣು ಸೋಂಕು ತಗಲಿದ ಬಳಿಕ ಕೆಲವರಲ್ಲಿ ಯಾವ ತೊಂದರೆಯೂ ಕಾಣಿಸುವುದಿಲ್ಲ. ಇನ್ನು ಕೆಲವರಲ್ಲಿ ವಾಂತಿ, ಭೇದಿ, ಹಸಿವಿಲ್ಲದಿರುವುದು, ಹೊಟ್ಟೆನೋವು, ಸುಸ್ತು, ಕಾಮಾಲೆ ಅಥವಾ ಜಾಂಡೀಸ್ (ದೇಹದ ಚರ್ಮ ಮತ್ತು ಕಣ್ಣಿನ ಮೇಲ್ಪದರ ಹಳದಿ ಬಣ್ಣಕ್ಕೆ ತಿರುಗುವುದು) ಜ್ವರ, ಮೈಕೈ ನೋವು, ದೇಹದ ತೂಕ ಕಡಿಮೆಯಾಗುವುದು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇನ್ನು ಕೆಲವರಲ್ಲಿ ಗಾಢ ವರ್ಣದ ಮೂತ್ರ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲಿಕ ತೊಂದರೆ ಇರುವವರಲ್ಲಿ ಹೆಚ್ಚಿನ ತೊಂದರೆ ಕಾಣಸಿಗದು. ಆದರೆ ಯಕೃತ್ತಿನಲ್ಲಿ ನಾರಿನ ಅಂಶ (Fibrosis or Cirrhosis) ಜಾಸ್ತಿಯಾದಾಗ ಯಕೃತ್ತಿನ ಕಾರ್ಯಕ್ಷಮತೆ ಕ್ಷೀಣಿಸಿಕೊಂಡು ಯಕೃತ್ತಿನ ಕೆಲಸಗಳು ಸ್ಥಗಿತಗೊಳ್ಳುತ್ತದೆ. ಯಕೃತ್ತು ಊದಿಕೊಂಡು ದೊಡ್ಡದಾಗಬಹುದು ಇಲ್ಲವೇ ಉದರದಲ್ಲಿ ನೀರು ಶೇಖರಣೆ ಆಗುವ ಸಾಧ್ಯತೆಯೂ ಇದೆ.
ಚಿಕಿತ್ಸೆ ಹೇಗೆ?
ಹೆಪಟೈಟಿಸ್ ಬಿ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆಯನ್ನು ತಗ್ಗಿಸುವ ಹಲವಾರು ಔಷಧಿಗಳು ಲಭ್ಯವಿದೆ. ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿಗಳು ಲಭ್ಯವಿದೆ. ಯಕೃತ್ತು ಮತ್ತಷ್ಟು ಹಾಳಾಗದಂತೆ ತಡೆಯುವ ಔಷಧಿಗಳು ಲಭ್ಯವಿದೆ. ಯಕೃತ್ತಿಗೆ ಮಾರಕವಾಗುವ ಔಷಧಿಗಳು, ಮದ್ಯಪಾನ, ಜಂಕ್ ಆಹಾರಗಳು, ಕರಿದ ತಿಂಡಿಗಳು ಮುಂತಾದವುಗಳನ್ನು ವರ್ಜಿಸಬೇಕು. ಪೌಷ್ಟಿಕ ಆಹಾರ ಸೇವಿಸತಕ್ಕದ್ದು. ದೇಹದ ರಕ್ಷಣಾ ವ್ಯವಸ್ಥೆಗೆ ಪೂರಕವಾದ ಆಹಾರ ಮತ್ತು ಔಷಧಿ ಸೇವಿಸಬೇಕು. ಕೃತ್ ಸಂಪೂರ್ಣವಾಗಿ ಹಾಳಾಗಿ ಸಿರ್ಹೋಸಿಸ್ ರೋಗ ಅಂತಿಮ ಹಂತ ತಲುಪಿದ್ದಲ್ಲಿ ಯಕೃತ್ತಿನ ಕಸಿ ಮಾಡಬೇಕಾದೀತು.
ಅನಕ್ಷರತೆ, ಬಡತನ, ಮೂಢನಂಬಿಕೆಗಳ ಆಗರ ಮತ್ತು ಮೂಲಸೌಕರ್ಯ ಗಳ ಕೊರತೆ ಇರುವ ನಮ್ಮ ಭಾರತ ದೇಶದಲ್ಲಿ ಹೆಪಟೈಟಿಸ್‌ನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಪ್ರತಿಯೊಬ್ಬ ವೈದ್ಯರ ಮತ್ತು ಪ್ರಜೆಯ ಸಾಮಾಜಿಕ ಹೊಣೆಗಾರಿಕೆ ಆಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವೈದ್ಯ ಮತ್ತು ನಾಗರಿಕರು ತಮ್ಮ ಹೊಣೆ ಅರಿತು ಜವಾಬ್ದಾರಿಯಿಂದ ವರ್ತಿಸಿದಲ್ಲಿ ಹೆಪಟೈಟಿಸ್ ರೋಗಕ್ಕೆ ಮೂಗುದಾರ ಹಾಕುವುದು ಖಂಡಿತವಾಗಿಯೂ ಸಾಧ್ಯವಾಗಬಹುದು.
ಹೇಗೆ ಹರಡುತ್ತದೆ?
1. ವೈರಾಣು ಸೋಂಕಿತ ರಕ್ತದ ಮತ್ತು ದೇಹದ ದ್ರವ್ಯಗಳಾದ ವೀರ್ಯ, ಯೋನಿದ್ರವಗಳ ಸಂಪರ್ಕದಿಂದ ಹರಡುತ್ತದೆ. ಸೋಂಕು ಇರುವ ವ್ಯಕ್ತಿಗಳ ಜೊತೆ ಅಸುರಕ್ಷಿತ ಸಂಭೋಗದಿಂದ ಹರಡುವ ಸಾಧ್ಯತೆ ಇದೆ.
2. ವೈರಾಣು ಸೋಂಕು ಇರುವ ರಕ್ತಪೂರಣದಿಂದಲೂ ರೋಗ ಹರಡಬಹುದು.
3. ಕಿಡ್ನಿ ರೋಗಗಳ ಡಯಾಲಿಸೀಸ್ ಚಿಕಿತ್ಸೆ ನೀಡುವ ಸಮಯದಲ್ಲಿ ವೈರಾಣು ಸೋಂಕು ತಗಲುವ ಸಾಧ್ಯತೆ ಇದೆ.
4. ವೈರಾಣು ಸೋಂಕಿತ ತಾಯಿಯಿಂದ ಮಗುವಿಗೆ ಹೆರಿಗೆ ಸಮಯದಲ್ಲಿ ಹರಡುವ ಸಾಧ್ಯತೆ ಇದೆ.
5. ಹಚ್ಚೆ ಹಾಕಿಸಿಕೊಳ್ಳುವವರು, ಆಕ್ಯುಪಂಚರ್ ಮಾಡಿಸಿಕೊಂಡಾಗ ಒಂದೇ ಸೂಜಿಯಿಂದ ಮಾದಕ ದ್ರವ್ಯಗಳನ್ನು ಹಲವರು ಸೇವಿಸಿಕೊಂಡಾಗ ಸೋಂಕು ತಗಲುವ ಸಾಧ್ಯತೆ ಇದೆ. ವಿಶ್ವದಾದ್ಯಂತ ಎರಡು ಮಿಲಿಯನ್ ಮಂದಿ ಅಸುರಕ್ಷಿತ ಚುಚ್ಚು ಮದ್ದಿನ ಬಳಕೆಯಿಂದ ಹೆಪಟೈಟಸ್ ಬಿ ಮತ್ತು ಸಿ ರೋಗಕ್ಕೆ ತುತ್ತಾಗುವುದು ಈ ಇಪ್ಪತ್ತೊಂದನೇ ಶತಮಾನದ ದುರಂತ ಎಂದರೂ ತಪ್ಪಾಗದು.
6. ಅಸುರಕ್ಷಿತ ವೈದ್ಯಕೀಯ ಚಿಕಿತ್ಸೆ, ರೋಗಪೂರಿತ ವೈದ್ಯಕೀಯ ಉಪಕರಣಗಳ ಮೂಲಕವೂ ಹೆಪಟೈಟಿಸ್ ಬಿ ವೈರಾಣು ಹರಡುವ ಸಾಧ್ಯತೆ ಇದೆ.