ಇಂದು ವಿಶ್ವ ಹೆಪಟೈಟಿಸ್ ದಿನ

Update: 2020-07-27 19:30 GMT

ಜಾಗತಿಕವಾಗಿ ವಿಶ್ವದಾದ್ಯಂತ ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷವಾದ ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ, ವರ್ಷವೊಂದರಲ್ಲಿ ಹೆಪಟೈಟಿಸ್ ರೋಗದಿಂದಾಗಿ ಜೀವ ಕಳೆದುಕೊಳ್ಳುತ್ತಿರುವುದು ಬಹಳ ಕಳವಳಕಾರಿ ಬೆಳವಣಿಗೆಯಾಗಿದೆ. ಭಾರತ ದೇಶವೊಂದರಲ್ಲೇ 40 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದಾರೆಂದು ವಿಶ್ವ ಸಂಸ್ಥೆಯ ವರದಿಗಳಿಂದ ತಿಳಿದು ಬಂದಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು, ಆವಿಷ್ಕಾರಗಳು ಮತ್ತು ಕ್ರಾಂತಿಗಳು ನಡೆಯುತ್ತಿದ್ದರೂ ತಡೆಗಟ್ಟಬಹುದಾದ ರೋಗಗಳಲ್ಲಿ ಒಂದಾದ ಈ ಹೆಪಟೈಟಿಸ್ ದಿನೇ ದಿನೇ ಮನುಕುಲದ ಮೇಲೆ ಸವಾರಿ ಮಾಡುತ್ತಿರುವುದೇ ಸೋಜಿಗದ ವಿಚಾರವಾಗಿದೆ. ಏಡ್ಸ್‌ನಷ್ಟೇ ಮಾರಕವಾದ ರೋಗವಾದ ಹೆಪಟೈಟಿಸ್‌ನ್ನು ಸೂಕ್ತವಾದ ವೈದ್ಯಕೀಯ ಮಾರ್ಗದರ್ಶನ ಮತ್ತು ಸಾಕಷ್ಟು ಮುಂಜಾಗರೂಕತೆಗಳಿಂದ ಖಂಡಿತವಾಗಿಯೂ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ವಿಶ್ವದಾದ್ಯಂತ 2 ಮಿಲಿಯನ್ ಮಂದಿ ವರ್ಷವೊಂದರಲ್ಲಿ ಅಜಾಗರೂಕತೆ ಅಸಡ್ಡೆ ಮತ್ತು ರೋಗಪೂರಿತ ಇಂಜೆಕ್ಷನ್‌ಗಳಿಂದಲೇ ಹೆಪಟೈಟಿಸ್ ಬಿ ಮತ್ತು ಸಿ ರೋಗಕ್ಕೆ ತುತ್ತಾಗುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಹಾಗೆಯೇ ಶೇ. 81 ಮಂದಿ ಮಕ್ಕಳಿಗೆ ಲಸಿಕೆ ಮುಖಾಂತರ ಹೆಪಟೈಟಿಸ್ ರೋಗವನ್ನು ತಡೆಗಟ್ಟಲಾಗಿದೆ ಎಂದೂ ತಿಳಿದು ಬಂದಿದೆ.

ಒಟ್ಟಿನಲ್ಲಿ ಹೆಪಟೈಟಿಸ್ ರೋಗವನ್ನು ಖಂಡಿತವಾಗಿಯೂ ತಡೆಗಟ್ಟಬಹುದಾಗಿದ್ದು ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಜನಸಾಮಾನ್ಯರು ವಿಶೇಷ ಕಾಳಜಿ ವಹಿಸುವ ತುರ್ತು ಅನಿವಾರ್ಯತೆ ಇದೆ. ರೋಗಿಗೆ ಅರಿವಿಲ್ಲದೆ ಅವರನ್ನು ಸಾವಿನಂಚಿಗೆ ಕರೆದೊಯ್ಯುವ ವೈರಲ್ ಹೆಪಟೈಟಿಸ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ 2020ರ ಹೆಪಟೈಟಿಸ್ ಜಾಗೃತಿ ದಿನದ ಆಚರಣೆಯ ತಿರುಳು ‘ಮಿಸ್ಸಿಂಗ್ ಮಿಲಿಯನ್ಸ್’ ಎಂದೂ ಹೆಸರಿಸಲಾಗಿದೆ. 2020ನೇ ವರ್ಷದ ವಿಶ್ವ ಹೆಪಟೈಟಿಸ್ ದಿನದ ಆಚರಣೆಯ ಧ್ಯೇಯ ವಾಕ್ಯ ‘‘ಹೆಪಟೈಟಿಸ್ ಮುಕ್ತ ಭವಿಷ್ಯ’’ ಎಂಬುದಾಗಿದೆ.

ವಿಶ್ವ ಸಂಸ್ಥೆ 4 ಜಾಗತಿಕವಾಗಿ ಕಾಡುವ ರೋಗಗಳನ್ನು ಆಯ್ಕೆ ಮಾಡಿ ಆ ರೋಗಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಆ ರೋಗಗಳು ಯಾವುದೆಂದರೆ ಹೆಪಟೈಟಿಸ್, ಏಡ್ಸ್, ಕ್ಷಯ ರೋಗ ಮತ್ತು ಮಲೇರಿಯಾ. ಒಟ್ಟಿನಲ್ಲಿ ಜನರಿಗೆ ಈ ಹೆಪಟೈಟಿಸ್ ರೋಗ ಹೇಗೆ ಬರುತ್ತದೆ, ಹೇಗೆ ಹರಡುತ್ತದೆ, ಹೇಗೆ ತಡೆಗಟ್ಟಬಹುದು, ಯಾವ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಯಾವ ರೀತಿ ಈ ರೋಗ ಬಂದರೂ ಬದುಕಬಹುದು ಎಂಬುದರ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ನಿರಂತರವಾಗಿ ವಿಶ್ವದಾದ್ಯಂತ ವಿಶ್ವ ಆರೋಗ್ಯ ಸಂಸ್ಥೆ ಇತರ ಸಂಘ ಸಂಸ್ಥೆಗಳು ಮತ್ತು ಸರಕಾರಗಳ ಜೊತೆ ಸೇರಿ ಮಾಡುತ್ತಿದೆ. ಜುಲೈ 28ರಂದು ಹೆಪಟೈಟಿಸ್ ವೈರಸ್‌ನ್ನು ಕಂಡು ಹಿಡಿದ ಮತ್ತು ಹೆಪಟೈಟಿಸ್ ರೋಗಕ್ಕೆ ಲಸಿಕೆ ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಬರೂಚ ಸಾಮ್ಯುಯೆಲ್ ಬ್ಲೂಮ್‌ಬರ್ಗ್‌ ಇವರ ಜನ್ಮದಿನವಾಗಿದ್ದು ಅವರ ಸ್ಮರಣಾರ್ಥ ಜುಲೈ 28ನ್ನು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News