ಸೂರ್ಯನಿಂದ ಗರಿಷ್ಠ ‘ವಿಟಾಮಿನ್ ಡಿ’ ಪಡೆದುಕೊಳ್ಳುವುದು ಹೇಗೆ?

Update: 2020-08-10 15:30 GMT

ನಮ್ಮ ಶರೀರದ ಮೂಳೆಗಳನ್ನು ಸದೃಢವಾಗಿಸಲು ವಿಟಾಮಿನ್ ಡಿ ಅಗತ್ಯವಾಗಿದೆ. ಅದು ನಮ್ಮ ಶರೀರವನ್ನು ಬಲಗೊಳಿಸುವ ಜೊತೆಗೆ ರೋಗ ನಿರೋಧಕ ವ್ಯವಸ್ಥೆಯನ್ನು ಆರೋಗ್ಯಯುತವಾಗಿರಿಸುತ್ತದೆ. ಸೂರ್ಯನ ಬಿಸಿಲು ಡಿ ವಿಟಾಮಿನ್‌ನ ಅತ್ಯುತ್ತಮ ಮೂಲವಾಗಿದೆ. ಇದರ ಜೊತೆಗೆ ಹಲವಾರು ಆಹಾರಗಳ ಮೂಲಕವೂ ಸಾಕಷ್ಟು ಡಿ ವಿಟಾಮಿನ್ ಅನ್ನು ಪಡೆಯಬಹುದು. ಆದರೆ ಉಚಿತವಾಗಿ ಸಿಗುವ ಮೂಲದಿಂದ ಅಂದರೆ ಬಿಸಿಲಿನಿಂದ ಗರಿಷ್ಠ ಡಿ ವಿಟಾಮಿನ್‌ನನ್ನೇಕೆ ಪಡೆಯಬಾರದು? ಇದರಿಂದಾಗಿ ವಿಟಾಮಿನ್ ಡಿ ಪೂರಕ ಮಾತ್ರೆಗಳನ್ನು ನುಂಗುವುದು ತಪ್ಪಬಹುದು. ಶರೀರದಲ್ಲಿ ಕ್ಯಾಲ್ಸಿಯಂ ಹೀರುವಿಕೆ,ರೋಗ ನಿರೋಧಕ ಶಕ್ತಿ ಹೆಚ್ಚಿಸುವಿಕೆ,ಮೂಳೆಗಳು ಮತ್ತು ನರಮಂಡಳದ ಸೂಕ್ತ ಕಾರ್ಯ ನಿರ್ವಹಣೆಯಲ್ಲಿ ವಿಟಾಮಿನ್ ಡಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಟಾಮಿನ್ ಡಿ ಕೊರತೆಯು ಬೊಜ್ಜು ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ವಿಟಾಮಿನ್ ಡಿ ಏಕೆ ಅಗತ್ಯ?

ವಿಟಾಮಿನ್ ಡಿ ಶರೀರಕ್ಕೆ ಅಗತ್ಯವಾಗಿರುವ ಎಲ್ಲ ವಿಟಾಮಿನ್‌ಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಶರೀರದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕವನ್ನು ಸಮತೋಲನಗೊಳಿಸಲು ಅದು ಅಗತ್ಯವಾಗಿದೆ. ಅದು ಜೀರ್ಣಾಂಗದಿಂದ ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಶರೀರವು ಆಹಾರದ ಮೂಲಕ ಪೋಷಕಾಂಶಗಳನ್ನು ಹೀರಿಕೊಳ್ಳಲು ವಿಟಾಮಿನ್ ಡಿ ಅಗತ್ಯವಿದೆ. ಶರೀರಕ್ಕೆ ಸೋಂಕಿನ ವಿರುದ್ಧ ರಕ್ಷಣೆ ನೀಡುವಲ್ಲಿಯೂ ಈ ವಿಟಾಮಿನ್ ಪಾತ್ರವನ್ನು ವಹಿಸುತ್ತದೆ, ಜೊತೆಗೆ ಶರೀರದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ನರಮಂಡಳ,ಸ್ನಾಯುಗಳು ಮತ್ತು ನರಗಳ ಕಾರ್ಯ ನಿರ್ವಹಣೆಗೂ ವಿಟಾಮಿನ್ ಡಿ ಅಗತ್ಯವಾಗಿದೆ. ಆದರೆ ಸುಮ್ಮನೆ ಬಿಸಿಲಿನಲ್ಲಿ ತಿರುಗುವುದರಿಂದ ಡಿ ವಿಟಾಮಿನ್‌ನ ಗರಿಷ್ಠ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಾಗದಿರಬಹುದು.

ಸೂರ್ಯನಿಂದ ವಿಟಾಮಿನ್ ಡಿ ಪಡೆದುಕೊಳ್ಳುವುದು ಹೇಗೆ?

ಹೊರಗೆ ಹೋಗಲು ಉತ್ತಮ ಸಮಯ: ಯಾವುದೇ ಸಮಯ ಹೊರಗೆ ಹೋಗುವುದರಿಂದ ಗರಿಷ್ಠ ಬಿಸಿಲಿನ ಲಾಭವನ್ನು ಪಡೆಯಬಹುದು ಎಂದು ನೀವು ಭಾವಿಸಿದ್ದರೆ ಅದು ತಪ್ಪಾಗುತ್ತದೆ. ತಜ್ಞರ ಅಭಿಪ್ರಾಯದಲ್ಲಿ ಬೆಳಗಿನ 10ರಿಂದ ಅಪರಾಹ್ನ 3 ಗಂಟೆಯವರೆಗಿನ ಅವಧಿ ಬಿಸಿಲಿನಿಂದ ಗರಿಷ್ಠ ವಿಟಾಮಿನ್ ಡಿ ಪಡೆದುಕೊಳ್ಳಲು ಅತ್ಯುತ್ತಮವಾಗಿದೆ. ಈ ಸಮಯದಲ್ಲಿ ಅಲ್ಟ್ರಾವಯಲೆಟ್ ಕಿರಣಗಳು ತೀಕ್ಷ್ಣವಾಗಿರುವುದು ಇದಕ್ಕೆ ಕಾರಣ. ಈ ಅವಧಿಯಲ್ಲದೆ ಹೆಚ್ಚು ಸಮಯ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಚರ್ಮದ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದು. ಈ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ಹೊಂದಿರುವವರು ಎಚ್ಚರಿಕೆಯನ್ನು ವಹಿಸಬೇಕು ಮತ್ತು ಬಿಸಿಲಿನ ಮೂಲಕ ವಿಟಾಮಿನ್ ಡಿ ಅನ್ನು ಪಡೆದುಕೊಳ್ಳುವ ಪ್ರಯತ್ನದ ಮುನ್ನ ತಜ್ಞ ವೈದ್ಯರೊಂದಿಗೆ ಸಮಾಲೋಚಿಸಬೇಕು.

ಶರೀರದ ಯಾವ ಭಾಗವನ್ನು ಬಿಸಿಲಿಗೆ ಒಡ್ಡಬೇಕು?: ಚರ್ಮದಲ್ಲಿಯ ಕೊಲೆಸ್ಟ್ರಾಲ್ ನೆರವಿನಿಂದ ಶರೀರದಲ್ಲಿ ವಿಟಾಮಿನ್ ಡಿ ತಯಾರಾಗುತ್ತದೆ. ಆದ್ದರಿಂದ ಗರಿಷ್ಠ ವಿಟಾಮಿನ್ ಡಿ ಪಡೆಯಲು ಚರ್ಮವನ್ನು ಹೆಚ್ಚಾಗಿ ಬಿಸಿಲಿಗೆ ಒಡ್ಡಿಕೊಳ್ಳಬೇಕು. ತೋಳುಗಳು,ಬೆನ್ನು,ಹೊಟ್ಟೆ ಮತ್ತು ಕಾಲುಗಳು ಬಿಸಿಲಿಗೆ ಒಡ್ಡಿಕೊಂಡಿರುವಂತೆ ನೋಡಿಕೊಳ್ಳಿ. ಸೂರ್ಯನ ಬಿಸಿಲಿನಿಂದ ಕಣ್ಣುಗಳಿಗೆ ಹಾನಿಯೂ ಉಂಟಾಗಬಹುದು, ಹೀಗಾಗಿ ಕಣ್ಣು ಗವುಸುಗಳನ್ನು ಅಥವಾ ತಂಪು ಕನ್ನಡಕ ಧರಿಸುವುದನ್ನು ಮರೆಯಬೇಡಿ.

ಎಷ್ಟು ಸಮಯ ಬಿಸಿಲಿನಲ್ಲಿರಬೇಕು?: ಲಘು ಚರ್ಮದ ಬಣ್ಣವನ್ನು ಹೊಂದಿರುವವರು ಸುಮಾರು 15 ನಿಮಿಷಗಳ ಕಾಲ ಬಿಸಿಲಿಗೆ ಒಡ್ಡಿಕೊಂಡರೆ ಸಾಕು,ಆದರೆ ಕಪ್ಪು ಬಣ್ಣದ ಚರ್ಮ ಹೊಂದಿದವರಿಗೆ ಹೆಚ್ಚು ಸಮಯ ಅಗತ್ಯವಾಗುತ್ತದೆ.

ಬಿಸಿಲಿನ ಜೊತೆಗೆ ವಿಟಾಮಿನ್ ಡಿ ಕೊರತೆಯನ್ನು ತುಂಬಿಕೊಳ್ಳಲು ವಿವಿಧ ಆಹಾರಗಳ ಸೇವನೆ ಅಗತ್ಯವಾಗಿದೆ. ಹಾಲು,ಕಿತ್ತಳೆ ಹಣ್ಣಿನ ರಸ,ಅಣಬೆ ಮತ್ತು ಕಾಡ್‌ಲಿವರ್ ಎಣ್ಣೆ ಸಮೃದ್ಧ ವಿಟಾಮಿನ್ ಡಿ ಅನ್ನು ಒಳಗೊಂಡಿರುವ ಕೆಲವು ಆಹಾರಗಳಾಗಿವೆ.

ಅತಿಯಾದ ಬಿಸಿಲು ಹಾನಿಕರವೇ?

ಅತಿಯಾದ ಬಿಸಿಲಿಗೆ ಒಡ್ಡಿಕೊಳ್ಳುವುದು ತೀವ್ರ ಹಾನಿಯನ್ನುಂಟು ಮಾಡಬಹುದು. ಆದರೂ ನಿಯಮಿತವಾಗಿ ಬಿಸಿಲಿಗೆ ಒಡ್ಡಿಕೊಳ್ಳುವುದು ಆರೋಗ್ಯಕರ ಮನಸ್ಸು ಮತ್ತು ಶರೀರಕ್ಕೆ ಅಗತ್ಯವಾಗಿರುವ ಸೂರ್ಯನ ಬೆಳಕಿನಿಂದ ಗರಿಷ್ಠ ಲಾಭವನ್ನು ನೈಸರ್ಗಿಕವಾಗಿ ಪಡೆದುಕೊಳ್ಳಲು ಅತ್ಯಗತ್ಯವಾಗಿದೆ. ಕಿಟಕಿಯ ಬಳಿ ಕುಳಿತುಕೊಂಡು ಬಿಸಿಲಿನ ಲಾಭವನ್ನು ಪಡೆಯಬಹುದು ಎಂದು ಎಣಿಸಿದ್ದರೆ ತಪ್ಪಾಗಬಹುದು,ಏಕೆಂದರೆ ಅಲ್ಟ್ರಾವಯಲೆಟ್ ಕಿರಣಗಳು ಕಿಟಕಿಗಳ ಗಾಜುಗಳನ್ನು ಭೇದಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News