ನಿಮಗೆ ಗೊತ್ತಿರಲಿ, ನಿಮ್ಮ ಕಾಲುಚೀಲದ ಗುರುತು ನಾಲ್ಕು ಅನಾರೋಗ್ಯಗಳನ್ನು ಸೂಚಿಸುತ್ತಿರಬಹುದು

Update: 2020-08-11 18:43 GMT

ನೀವು ಕಾಲುಚೀಲಗಳನ್ನು ತೆಗೆದ ನಂತರ ಕಾಲುಗಳ ಮೇಲೆ ಅವುಗಳ ಗುರುತುಗಳು ಮೂಡಿರುವುದನ್ನು ಗಮನಿಸಿದ್ದೀರಾ? ಕಾಲುಚೀಲದ ಇಲಾಸ್ಟಿಕ್ ಈ ಗುರುತುಗಳಿಗೆ ಕಾರಣ,ಆದರೆ ನಿಮಗೆ ಗೊತ್ತಿಲ್ಲದ ಬಹಳಷ್ಟನ್ನೂ ಅವು ಹೇಳುತ್ತವೆ. ಕಾಲುಚೀಲಗಳ ಗುರುತು ಮೂಡುವುದು ಸಾಮಾನ್ಯ ಎಂದು ಹೆಚ್ಚಿನವರು ಭಾವಿಸುತ್ತಾರೆ,ಆದರೆ ಅದು ಹಾಗಲ್ಲ. ಪ್ರತಿದಿನ ಕಾಲುಚೀಲಗಳನ್ನು ಧರಿಸುವವರು ಈ ಗುರುತುಗಳನ್ನು ಗಮನಿಸುತ್ತಿರಬೇಕು,ಏಕೆಂದರೆ ಅವು ಆರೋಗ್ಯಸ್ಥಿತಿಯನ್ನು ಸೂಚಿಸುತ್ತವೆ. ಸಾಂದರ್ಭಿಕವಾಗಿ ಕಂಡು ಬರುವ ಗುರುತುಗಳಿಗೆ ಇಲಾಸ್ಟಿಕ್ ಕಾರಣವಾಗಿರಬಹುದು, ಆದರೆ ಈ ಗುರುತುಗಳು ನಿಯಮಿತವಾಗಿ ಕಂಡು ಬರುತ್ತಿದ್ದರೆ ನಿಮ್ಮ ಶರೀರದಲ್ಲಿ ಏನೋ ಆರೋಗ್ಯ ಸಮಸ್ಯೆಯಿದೆ ಎಂದೇ ಅರ್ಥ. ನಿಮ್ಮ ಕಾಲುಚೀಲದ ಗುರುತುಗಳು ಎಚ್ಚರಿಕೆ ನೀಡಬಹುದಾದ ನಾಲ್ಕು ಅನಾರೋಗ್ಯಗಳ ಕುರಿತು ಮಾಹಿತಿಯಿಲ್ಲಿದೆ.....

* ಅಧಿಕ ರಕ್ತದೊತ್ತಡ

ಕಾಲುಚೀಲಗಳನ್ನು ತೆಗೆದ ಬಳಿಕ ಪಾದಗಳಲ್ಲಿ ಊತ ಅಥವಾ ನೋವಿನಂತಹ ಏನಾದರೂ ತೊಂದರೆಯ ಅನುಭವವಾಗುತ್ತದೆಯೇ? ಹಾಗಿದ್ದರೆ ಅಧಿಕ ರಕ್ತದೊತ್ತಡ ಇದಕ್ಕೆ ಕಾರಣವಾಗಿರಬಹುದು. ಸಾಮಾನ್ಯವಾಗಿ ಜನರಿಗೆ ಊತದೊಂದಿಗೆ ಯಾವುದೇ ನೋವು ಅನುಭವವಾಗುವುದಿಲ್ಲ,ಆದರೆ ಅವರು ತೀವ್ರ ಅಹಿತವನ್ನು ಅನುಭವಿಸುತ್ತಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಕಾಲುಗಳ ಕೆಲಭಾಗದಲ್ಲಿ ಹೆಚ್ಚುವರಿ ದ್ರವ ಅಥವಾ ದ್ರವ ಧಾರಣ ಉಂಟಾಗಿರುತ್ತದೆ ಮತ್ತು ಇದು ಉರಿಯೂತವನ್ನುಂಟು ಮಾಡುತ್ತದೆ. ಅಧಿಕ ರಕ್ತದೊತ್ತಡವು ದ್ರವ ಧಾರಣಕ್ಕೆ ಕಾರಣವಾಗುತ್ತದೆ ಮತ್ತು ರಕ್ತ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಶರೀರವು ಕಾಲುಗಳು ಮತ್ತು ಹಿಮ್ಮಡಿಗಳಲ್ಲಿ ದ್ರವವನ್ನು ಸಂಗ್ರಹಿಸುವ ಮೂಲಕ ಹೆಚ್ಚುತ್ತಿರುವ ರಕ್ತದೊತ್ತಡಕ್ಕೆ ಪ್ರತಿಕ್ರಿಯಿಸುತ್ತದೆ.

* ವೆರಿಕೋಸ್ ವೇನ್

 ಕಾಲಚೀಲ ಧರಿಸುವುದರಿಂದ ಕಾಲುಗಳಲ್ಲಿ ನೀಲಿ ಅಥವಾ ಹಸಿರು ಛಾಯೆಯುಳ್ಳ ಗುರುತುಗಳು ನಿಯಮಿತವಾಗಿ ಕಂಡು ಬರುತ್ತಿದ್ದರೆ ಅವು ವೆರಿಕೋಸ್ ವೇನ್‌ಗಳು ಅಥವಾ ಉಬ್ಬಿರುವ ರಕ್ತನಾಳಗಳ ಲಕ್ಷಣವಾಗಿರಬಹುದು. ಅಭಿಧಮನಿ ದುರ್ಬಲಗೊಂಡು ಮಲಿನ ರಕ್ತವನ್ನು ಹೃದಯಕ್ಕೆ ಮರಳಿ ಸಾಗಿಸಲು ಅಸಮರ್ಥಗೊಂಡಾಗ ಇಂತಹ ಸ್ಥಿತಿ ಕಂಡು ಬರುತ್ತದೆ ಮತ್ತು ರಕ್ತವು ಕೆಳಮುಖವಾಗಿ ಕಾಲುಗಳಿಗೆ ಹರಿಯುತ್ತದೆ. ವೆರಿಕೋಸ್ ವೇನ್ ಸ್ಥಿತಿಯಲ್ಲಿ ನೀವು ನಿಮ್ಮ ರಕ್ತನಾಳಗಳನ್ನು ಸ್ಪಷ್ಟವಾಗಿ ನೋಡಬಹುದು,ಜೊತೆಗೆ ಕಾಲುಗಳಲ್ಲಿ ಊತವೂ ಇರುತ್ತದೆ. ಉರಿಯೂತದೊಡನೆ ಈ ಅಭಿಧಮನಿಗಳು ಕಂಡುಬಂದರೆ ವೆರಿಕೋಸ್ ವೇನ್ಸ್‌ಗೆ ಚಿಕಿತ್ಸೆ ಪಡೆಯಲು ನೀವು ಸಾಧ್ಯವಾದಷ್ಟು ಶೀಘ್ರ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

* ನಿರ್ಜಲೀಕರಣ

  ಕಾಲುಗಳ ಮೇಲೆ ಕಾಲುಚೀಲಗಳ ಗುರುತುಗಳು ಮೂಡಲು ನಿರ್ಜಲೀಕರಣವೂ ಕಾರಣವಾಗುತ್ತದೆ. ಮಾನವ ಶರೀರವು ನೀರಿನಿಂದ ನಿರ್ಮಾಣಗೊಂಡಿರುತ್ತದೆ,ಹೀಗಾಗಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿರುತ್ತದೆ. ನಾವು ಸಾಕಷ್ಟು ನೀರನ್ನು ಕುಡಿಯದಿದ್ದಾಗ ಶರೀರದಲ್ಲಿ ನಿರ್ಜಲೀಕರಣವುಂಟಾಗುತ್ತದೆ ಮತ್ತು ಇದು ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇಂತಹ ಸ್ಥಿತಿಯಲ್ಲಿ ಪಾದಗಳು ಮತ್ತು ಕಣಕಾಲುಗಳ ಅಂಗಾಂಶಗಳ ಸುತ್ತ ದ್ರವವು ತುಂಬಿಕೊಳ್ಳುತ್ತದೆ ಮತ್ತು ಇದು ಗುರುತುಗಳಿಗೆ ಕಾರಣವಾಗುತ್ತದೆ. ನೀವು ಆಗಾಗ್ಗೆ ಕಾಲುಚೀಲಗಳನ್ನು ತೆಗೆದ ಬಳಿಕ ಇಂತಹ ಗುರುತುಗಳನ್ನು ಗಮನಿಸಿದರೆ ನಿಮ್ಮ ಶರೀರವು ನಿರ್ಜಲೀಕರಣಗೊಂಡಿದೆ ಎಂದು ಅರ್ಥ ಮತ್ತು ಶರೀರದಲ್ಲಿ ದ್ರವ ಸಮತೋಲನಕ್ಕಾಗಿ ನೀವು ದ್ರವಗಳ ಸೇವನೆಯನ್ನು ಹೆಚ್ಚಿಸಬೇಕಾಗುತ್ತದೆ.

* ಔಷಧಿಗಳ ಅಡ್ಡಪರಿಣಾಮಗಳು

ಅಧಿಕ ರಕ್ತದೊತ್ತಡಕ್ಕೆ ನೀವು ಔಷಧಿಗಳನ್ನು ಸೇವಿಸುತ್ತಿದ್ದರೆ ಅದರ ಸಂಭಾವ್ಯ ಅಡ್ಡಪರಿಣಾಮವಾಗಿ ನೀವು ಪಾದಗಳಲ್ಲಿ ಊತವನ್ನು ಅನುಭವಿಸುತ್ತಿರಬಹುದು. ಖಿನ್ನತೆ ನಿರೋಧಕಗಳು,ಜನನ ನಿಯಂತ್ರಣ ಮಾತ್ರೆಗಳಂತಹ ಇತರ ಔಷಧಿಗಳೂ ಕೆಳ ಕಾಲುಗಳಲ್ಲಿ ಇಂತಹುದೇ ಪರಿಣಾಮವನ್ನು ಬೀರುತ್ತವೆ. ಹಾರ್ಮೋನ್‌ಗಳಲ್ಲಿ ಏರಿಳಿತಗಳು ಉರಿಯೂತಕ್ಕೆ ಕಾರಣವಾಗಬಲ್ಲದು ಮತ್ತು ಇದು ನೀವು ಕಾಲುಚೀಲ ಧರಿಸಿದಾಗ ಪಾದಗಳು ಊದಿಕೊಳ್ಳಲು ಕಾರಣವಾಗಬಹುದು. ಇಂತಹ ಸ್ಥಿತಿಯಲ್ಲಿ ಕಾಲುಚೀಲಗಳನ್ನು ತೆಗೆದಾಗ ಕಾಲಿನ ಮೇಲೆ ಗುರುತುಗಳು ಕಂಡುಬರುತ್ತವೆ.

ಹೆಚ್ಚು ನೀರಿನ ಸೇವನೆ,ಕಡಿಮೆ ಉಪ್ಪಿನ ಬಳಕೆ,ಆರೋಗ್ಯಕರವಾದ ದೇಹತೂಕ ಕಾಯ್ದುಕೊಳ್ಳುವಿಕೆ,ಗಾಳಿಯಾಡುವ ಬಟ್ಟೆಯಿಂದ ತಯಾರಾದ ಕಾಲುಚೀಲಗಳನ್ನು ಧರಿಸುವುದು,ಒಂದೇ ಜಾಗದಲ್ಲಿ ಸುದೀರ್ಘ ಸಮಯ ಕುಳಿತುಕೊಳ್ಳದಿರುವುದು ಅಥವಾ ನಿಂತುಕೊಳ್ಳದಿರುವುದು,ಆರಾಮದಾಯಕ ಶೂಗಳನ್ನು ಧರಿಸುವುದು ಇವೇ ಮೊದಲಾದ ಮುಂಜಾಗ್ರತೆಗಳನ್ನು ವಹಿಸುವ ಮೂಲಕ ಇಂತಹ ಅನಾರೋಗ್ಯ ಸ್ಥಿತಿಗಳುಂಟಾಗುವುದನ್ನು ತಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News