ಕ್ಯಾಲ್ಸಿಯಂನ ಅದ್ಭುತ ಆರೋಗ್ಯ ಲಾಭಗಳು

Update: 2020-08-13 18:44 GMT

‘ಕ್ಯಾಲ್ಸಿಯಂ’ ಎಂಬ ಶಬ್ದ ಕೇಳಿದ ತಕ್ಷಣ ಆರೋಗ್ಯಕರವಾದ ಮೂಳೆಗಳು ಮತ್ತು ಹಲ್ಲುಗಳು ನಮ್ಮ ಮನಸ್ಸಿನಲ್ಲಿ ಸುಳಿದಾಡುತ್ತವೆ. ಹಾಲು ಕ್ಯಾಲ್ಸಿಯಮ್‌ನ ಅತ್ಯುತ್ತಮ ಮೂಲಗಳಲ್ಲೊಂದಾಗಿದೆ, ಹೀಗಾಗಿ ಹಿಂದೆಲ್ಲ ತಾಯಂದಿರು ಅಥವಾ ಅಜ್ಜಿಯಂದಿರು ಮಕ್ಕಳಿಗೆ ಹಾಲು ಕುಡಿಸುತ್ತಿದ್ದರು. ಆದರೆ ಈಗಿನ ಮಕ್ಕಳಿಗೆ ಹಾಲು ಕಂಡರೇ ಅಪಥ್ಯ. ವಿವಿಧ ರೀತಿಗಳಲ್ಲಿ ಕ್ಯಾಲ್ಸಿಯಂ ನಮ್ಮ ಶರೀರಕ್ಕೆ ಮಹತ್ವದ್ದಾಗಿದೆ. ಮೂಳೆಗಳು ಮತ್ತು ಹಲ್ಲುಗಳನ್ನು ಆರೋಗ್ಯಯುತವಾಗಿರಿಸುವಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರವನ್ನು ಹೊಂದಿರುವುದರಿಂದ ಯಾವಾಗಲೂ ಸಾಕಷ್ಟು ಹಾಲಿನ ಸೇವನೆಗೆ ಒತ್ತು ನೀಡಲಾಗುತ್ತಿದೆ. ಆದರೆ ಹೆಚ್ಚಿನವರಿಗೆ ಕ್ಯಾಲ್ಸಿಯಮ್‌ನ ಇತರ ಆರೋಗ್ಯಲಾಭಗಳ ಬಗ್ಗೆ ತಿಳಿದಿಲ್ಲ. ಅಂತಹ ಕೆಲವು ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ.....

* ಸ್ನಾಯುಗಳಿಗೆ ಮಹತ್ವದ್ದು

ಕ್ಯಾಲ್ಸಿಯಂ ಸ್ನಾಯುಗಳ ಚಲನೆಗೆ ನೆರವಾಗುತ್ತದೆ. ಸ್ನಾಯು ಸಂಕುಚಿತಗೊಳ್ಳುವಾಗ ಆ್ಯಕ್ಟಿನ್ ಮತ್ತು ಮೈಯೊಸಿನ್ ನಡುವೆ ಅಂತರ್‌ಕ್ರಿಯೆಗೆ ಪೂರಕವಾಗಿ ಕ್ಯಾಲ್ಸಿಯಂ ಕಾರ್ಯ ನಿರ್ವಹಿಸುತ್ತದೆ.

* ನರಗಳ ಕಾರ್ಯನಿರ್ವಹಣೆಗೆ ನೆರವಾಗುತ್ತದೆ

ನರಗಳ ಕಾರ್ಯ ನಿರ್ವಹಣೆಗೆ ಕ್ಯಾಲ್ಸಿಯಂ ಒಳ್ಳೆಯದು. ಜರ್ನಲ್ ನ್ಯೂರೊಟ್ರಾಮಾದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಂತೆ ಕ್ಯಾಲ್ಸಿಯಂ ಅಯಾನುಗಳು ಗಾಯಗಳಿಗೆ ಕೇಂದ್ರ ನರಮಂಡಳ ಅಂಗಾಂಶಗಳ ಸ್ಪಂದನಕ್ಕೆ ಚಾಲನೆ ನೀಡುತ್ತವೆ ಮತ್ತು ಅದನ್ನು ನಿಯಂತ್ರಿಸುತ್ತವೆ. ಸಾಕಷ್ಟು ಕ್ಯಾಲ್ಸಿಯಂ ಸೇವನೆಯು ನ್ಯುರಾನ್ ಅಥವಾ ನರಕೋಶಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.

* ಶರೀರದಲ್ಲಿ ರಕ್ತಸಂಚಾರಕ್ಕೆ ನೆರವಾಗುತ್ತದೆ

ಶರೀರದಾದ್ಯಂತ ರಕ್ತನಾಳಗಳ ಚಲನವಲನಕ್ಕೆ ಬೆಂಬಲವಾಗಿ ಕ್ಯಾಲ್ಸಿಯಂ ಕಾರ್ಯ ನಿರ್ವಹಿಸುತ್ತದೆ. ಹಲವಾರು ವಿಧಗಳಲ್ಲಿ ಶರೀರದ ಕಾರ್ಯಗಳಿಗೆ ನೆರವಾಗುವ ಹಾರ್ಮೋನ್‌ಗಳು ಮತ್ತು ಕಿಣ್ವಗಳ ಸ್ರವಿಸುವಿಕೆಗೂ ಅದು ನೆರವಾಗುತ್ತದೆ.

* ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಕ್ಯಾಲ್ಸಿಯಂ ಹೃದಯದ ಆರೋಗ್ಯವನ್ನು ಹೆಚ್ಚಿಸಲೂ ನೆರವಾಗುತ್ತದೆ. ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದಾದ ವಿವಿಧ ಅಂಶಗಳನ್ನು ನಿಯಂತ್ರಿಸುವಲ್ಲಿ ಅದು ಸಹಾಯಕವಾಗಿದೆ.

ಕ್ಯಾಲ್ಸಿಯಮ್‌ನ ಅತ್ಯುತ್ತಮ ಮೂಲಗಳು

ಡೇರಿ ಉತ್ಪನ್ನಗಳು ಕ್ಯಾಲ್ಸಿಯಮ್‌ನ ಅತ್ಯುತ್ತಮ ಮೂಲಗಳಾಗಿವೆ. ಆದರೆ ನಮ್ಮ ಶರೀರವು ನಾವು ಸೇವಿಸಿದ ಆಹಾರದಿಂದ ಕ್ಯಾಲ್ಸಿಯಂ ಹೀರಿಕೊಳ್ಳಲು ಸಾಕಷ್ಟು ವಿಟಾಮಿನ್ ಡಿ ಸೇವನೆ ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News