ಯೂರಿಕ್ ಆ್ಯಸಿಡ್ ಮಟ್ಟವನ್ನು ನೈಸರ್ಗಿಕವಾಗಿ ತಗ್ಗಿಸಲು ಸರಳ ಉಪಾಯಗಳು

Update: 2020-08-13 18:47 GMT

ಶರೀರದಲ್ಲಿ ಯೂರಿಕ್ ಆ್ಯಸಿಡ್ ಮಟ್ಟ ತೀರ ಹೆಚ್ಚಾದಾಗ ಅಂತಹ ಸ್ಥಿತಿಯನ್ನು ಹೈಪರ್‌ಯುರಿಸೆಮಿಯಾ ಎಂದು ಕರೆಯಲಾಗುತ್ತದೆ ಮತ್ತು ಇದು ಸಂಧಿವಾತಕ್ಕೆ ಕಾರಣವಾಗುತ್ತದೆ. ಸಂಧಿವಾತವು ರಕ್ತ ಮತ್ತು ಮೂತ್ರವನ್ನು ಅತಿಯಾಗಿ ಆಮ್ಲೀಯಗೊಳಿಸಬಲ್ಲದು. ಹೈಪರ್‌ಯುರಿಸೆಮಿಯಾ ಸ್ಥಿತಿಯಲ್ಲಿ ಸಂದುಗಳಲ್ಲಿ ಯುರೇಟ್ ಹರಳುಗಳು ಸಂಗ್ರಹಗೊಳ್ಳುತ್ತವೆ ಮತ್ತು ಸಂದುಗಳಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ.

ಪ್ಯೂರಿನ್ ಅಧಿಕವಾಗಿರುವ ಆಹಾರ ಸೇವನೆ,ಒತ್ತಡ,ಬೊಜ್ಜು ಅಥವಾ ಅತಿಯಾದ ದೇಹತೂಕ ಮತ್ತು ಆನುವಂಶಿಕತೆ ಇವು ರಕ್ತದಲ್ಲಿ ಯೂರಿಕ್ ಆ್ಯಸಿಡ್ ಪ್ರಮಾಣ ಅಧಿಕಗೊಳ್ಳಲು ಕಾರಣವಾಗುತ್ತವೆ. ಮೂತ್ರಪಿಂಡ ಕಾಯಿಲೆ,ಮಧುಮೇಹ,ಸೋರಿಯಾಸಿಸ್ ಮತ್ತು ಹೈಪೊಥೈರಾಯ್ಡಿಸಂ ಸಮಸ್ಯೆಗಳಿದ್ದರೆ ಯೂರಿಕ್ ಆ್ಯಸಿಡ್ ಮಟ್ಟ ಹೆಚ್ಚಾಗುವ ಅಪಾಯವಿರುತ್ತದೆ.

ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಹೆಚ್ಚಿನ ಯೂರಿಕ್ ಆ್ಯಸಿಡ್ ಮಟ್ಟವು ಮೂಳೆಗಳು,ಸಂದುಗಳು ಮತ್ತು ಅಂಗಾಂಶಗಳಿಗೆ ಶಾಶ್ವತ ಹಾನಿಯನ್ನುಂಟು ಮಾಡಬಲ್ಲದು. ಹೆಚ್ಚಿನ ಯೂರಿಕ್ ಆ್ಯಸಿಡ್ ಮಟ್ಟವು ಅಧಿಕ ರಕ್ತದೊತ್ತಡ,ಫ್ಯಾಟಿ ಲಿವರ್ ಕಾಯಿಲೆ ಮತ್ತು ಟೈಪ್ 2 ಮಧುಮೇಹದೊಂದಿಗೂ ಗುರುತಿಸಿಕೊಂಡಿದೆ.

ಯೂರಿಕ್ ಆ್ಯಸಿಡ್ ಮಟ್ಟವನ್ನು ನೈಸರ್ಗಿಕವಾಗಿ ತಗ್ಗಿಸಲು ಕೆಲವು ಸರಳ ಕ್ರಮಗಳಿಲ್ಲಿವೆ. ಯೂರಿಕ್ ಆ್ಯಸಿಡ್ ಮಟ್ಟವನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ಯೂರಿನ್ ಸಮೃದ್ಧ ಆಹಾರಗಳ ಸೇವನೆಯ ಮೇಲೆ ಮಿತಿ ಹಾಕಿಕೊಳ್ಳುವುದು ಮೊದಲ ಹೆಜ್ಜೆಯಾಗುತ್ತದೆ. ಪ್ಯೂರಿನ್ ಸೇವನೆಯನ್ನು ತಗ್ಗಿಸಲು ಕಾಲಿಫ್ಲವರ್,ಒಣ ಬೀನ್ಸ್,ಹಸಿರು ಬೀನ್ಸ್,ಅಣಬೆ,ಮೀನು ಮತ್ತು ಚಿಪ್ಪುಮೀನು ಇತ್ಯಾದಿಗಳನ್ನು ತಿನ್ನುವುದರಿಂದ ದೂರವಿರಬೇಕು.

* ದೇಹತೂವನ್ನು ತಗ್ಗಿಸಿ

ಶರೀರದ ತೂಕ ಅತಿಯಾಗಿದ್ದರೆ ಅದು ಯೂರಿಕ್ ಆ್ಯಸಿಡ್ ಮಟ್ಟವನ್ನು ಹೆಚ್ಚಿಸುತ್ತದೆ. ಕೊಬ್ಬಿನ ಕೋಶಗಳು ಸ್ನಾಯು ಕೋಶಗಳಿಗಿಂತ ಹೆಚ್ಚಿನ ಯೂರಿಕ್ ಆ್ಯಸಿಡ್‌ನ್ನು ತಯಾರಿಸುವುದು ಇದಕ್ಕೆ ಕಾರಣ. ಯೂರಿಕ್ ಆ್ಯಸಿಡ್ ಮಟ್ಟವನ್ನು ತಗ್ಗಿಸಬೇಕೆಂದಿದ್ದರೆ ದೇಹತೂಕವನ್ನು ಇಳಿಸುವುದರತ್ತ ಗಮನ ನೀಡಬೇಕು. ಆರೋಗ್ಯಕರವಾದ ಆಹಾರ,ಒಳ್ಳೆಯ ನಿದ್ರೆಯೊಂದಿಗೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಜೊತೆಗೆ ನಿಯಮಿತ ವ್ಯಾಯಾಮವೂ ಅಗತ್ಯವಾಗಿದೆ.

* ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ನಿಗಾಯಿರಲಿ

ಟೈಪ್ 2 ಮಧುಮೇಹಿಗಳ ರಕ್ತದಲ್ಲಿ ಅತಿಯಾದ ಇನ್ಸುಲಿನ್ ಇರಬಹುದು. ಅತಿಯಾದ ಇನ್ಸುಲಿನ್ ಶರೀರದಲ್ಲಿ ಅತಿಯಾದ ಯೂರಿಕ್ ಆ್ಯಸಿಡ್ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಲ್ಲದು.

* ಸಾಕಷ್ಟು ನೀರು ಸೇವಿಸಿ

 ಸಾಕಷ್ಟು ನೀರು ಕುಡಿಯುವುದರಿಂದ ಶರೀರವು ನಿರ್ಜಲೀಕರಣಕ್ಕೆ ತುತ್ತಾಗುವುದಿಲ್ಲ ಮತ್ತು ಯೂರಿಕ್ ಆ್ಯಸಿಡ್‌ನ್ನು ಶರೀರದಿಂದ ತ್ವರಿತವಾಗಿ ಹೊರಗೆ ಹಾಕಲು ಮೂತ್ರಪಿಂಡಗಳಿಗೆ ನೆರವಾಗುತ್ತದೆ. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ.

* ಸಕ್ಕರೆ ಆಹಾರಗಳಿಂದ ದೂರವಿರಿ

ದೇಹತೂಕ ಮತ್ತು ಯೂರಿಕ್ ಆ್ಯಸಿಡ್ ಮಟ್ಟವನ್ನು ಕಾಯ್ದುಕೊಳ್ಳಲು ಸಕ್ಕರೆ ಒಳಗೊಂಡ ಆಹಾರಗಳು ಮತ್ತು ಪಾನೀಯಗಳಿಂದ ದೂರವೇ ಇರಿ.

* ಮದ್ಯಪಾನ ಬೇಡ

ಮದ್ಯಪಾನ ಮಾಡುವುದರಿಂದ ಶರೀರದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ ಮತ್ತು ಯೂರಿಕ್ ಆ್ಯಸಿಡ್ ಮಟ್ಟವು ಹೆಚ್ಚಾಗುತ್ತದೆ. ವ್ಯಕ್ತಿ ಮದ್ಯವನ್ನು ಸೇವಿಸಿದಾಗ ಮೂತ್ರಪಿಂಡಗಳು ಯೂರಿಕ್ ಆ್ಯಸಿಡ್ ಮತ್ತು ಇತರ ತ್ಯಾಜ್ಯಗಳನ್ನು ಸೋಸುವ ಬದಲು ಮದ್ಯಪಾನದಿಂದ ರಕ್ತದಲ್ಲಿ ಸೇರುವ ಉತ್ಪನ್ನಗಳನ್ನು ಮೊದಲು ಸೋಸುವ ಕಾರ್ಯದಲ್ಲಿ ತೊಡಗುತ್ತವೆ. ಇದು ಯೂರಿಕ್ ಆ್ಯಸಿಡ್ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ಹೀಗಾಗಿ ಮದ್ಯವನ್ನು ವರ್ಜಿಸುವುದು ಒಳ್ಳೆಯದು.

ಅಧಿಕ ಯೂರಿಕ್ ಆ್ಯಸಿಡ್ ಮಟ್ಟವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅದು ಇತರ ಅನಾರೋಗ್ಯಗಳಿಗೆ ಕಾರಣವಾಗುವುದನ್ನು ತಡೆಯಲು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News