ಹೃದ್ರೋಗದ ಅಪಾಯವನ್ನುಂಟು ಮಾಡುವ ಆರೋಗ್ಯ ಸಮಸ್ಯೆಗಳು

Update: 2020-08-16 18:17 GMT

ಹಲವಾರು ಆರೋಗ್ಯ ಸಮಸ್ಯೆಗಳು, ನಮ್ಮ ದೋಷಪೂರಿತ ಜೀವನಶೈಲಿ, ವಯಸ್ಸು ಮತ್ತು ಕುಟುಂಬದ ಇತಿಹಾಸ ಇವೆಲ್ಲವೂ ಹೃದ್ರೋಗಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ. ವಯಸ್ಸು ಮತ್ತು ಕುಟುಂಬದ ಇತಿಹಾಸದಂತಹ ಕೆಲವು ಅಪಾಯದ ಅಂಶಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ನಿಯಂತ್ರಿಸಬಹುದಾದ ಅಂಶಗಳಲ್ಲಿ ಬದಲಾವಣೆ ತಂದುಕೊಳ್ಳುವ ಮೂಲಕ ನಾವು ಹೃದ್ರೋಗಕ್ಕೆ ಗುರಿಯಾಗುವ ಅಪಾಯವನ್ನು ತಗ್ಗಿಸಿಕೊಳ್ಳಲು ಸಾಧ್ಯವಿದೆ.

ಅಷ್ಟಕ್ಕೂ ಹೃದ್ರೋಗಗಳಿಗೆ ಕಾರಣಗಳೇನು?

ಕೊಲೆಸ್ಟ್ರಾಲ್,ಟ್ರಾನ್ಸ್ ಫ್ಯಾಟ್ ಮತ್ತು ಸ್ಯಾಚ್ಯುರೇಟೆಡ್ ಫ್ಯಾಟ್‌ಗಳನ್ನು ಅತಿಯಾಗಿ ಹೊಂದಿರುವ ಆಹಾರ ಸೇವನೆ ಹಾಗೂ ಅಪಧಮನಿ ಕಾಠಿಣ್ಯದಂತಹ ಇತರ ಸ್ಥಿತಿಗಳು ಹೃದ್ರೋಗಕ್ಕೆ ಆಹ್ವಾನ ನೀಡುತ್ತವೆ. ಅತಿಯಾದ ಉಪ್ಪಿನ ಸೇವನೆ ಮತ್ತು ಮದ್ಯಪಾನ ಸಹ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ ಮತ್ತು ಇದು ಹೃದಯಕ್ಕೆ ಅಪಾಯಕಾರಿಯಾಗಿದೆ. ಪ್ರತಿದಿನ ವ್ಯಾಯಾಮ ಮಾಡದಿರುವುದು ಸಹ ಹೃದ್ರೋಗಕ್ಕೆ ಕಾರಣವಾಗಬಲ್ಲದು. ತಂಬಾಕು ಸೇವನೆಯೂ ಹೃದಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಸಿಗರೇಟ್ ಸೇವನೆಯು ಹೃದಯ ಮತ್ತು ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಅಪಧಮನಿ ಕಾಠಿಣ್ಯ ಮತ್ತು ಹೃದಯಾಘಾತಗಳಂತಹ ಅಪಾಯಗಳನ್ನು ಹೆಚ್ಚಿಸುತ್ತದೆ.

ಅಧಿಕ ರಕ್ತದೊತ್ತಡ

ನಮ್ಮ ಅಪಧಮನಿಗಳು ಮತ್ತು ರಕ್ತನಾಳಗಳಲ್ಲಿಯ ರಕ್ತದ ಒತ್ತಡ ಅತಿ ಹೆಚ್ಚಾದಾಗ ಅದನ್ನು ಅಧಿಕ ರಕ್ತದೊತ್ತಡ ಎನ್ನಲಾಗುತ್ತದೆ. ಇದನ್ನೂ ಸೂಕ್ತವಾಗಿ ನಿಭಾಯಿಸದಿದ್ದರೆ ಹೃದಯ ಹಾಗೂ ಮೂತ್ರಪಿಂಡ ಮತ್ತು ಮಿದುಳಿನಂತಹ ಶರೀರದ ಇತರ ಪ್ರಮುಖ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ.

ಅನಿಯಂತ್ರಿತ ಕೊಲೆಸ್ಟ್ರಾಲ್ ಮಟ್ಟ

ಕೊಲೆಸ್ಟ್ರಾಲ್ ಅನ್ನು ಯಕೃತ್ತಿನಲ್ಲಿ ತಯಾರಾಗುವ ಅಥವಾ ಕೆಲವು ಆಹಾರಗಳಲ್ಲಿರುವ ಮೇಣ ಹಾಗೂ ಕೊಬ್ಬಿನಂತಹ ವಸ್ತು ಎಂದು ಬಣ್ಣಿಸಬಹುದು. ಯಕೃತ್ತು ನಮ್ಮ ಶರೀರಕ್ಕೆ ಅಗತ್ಯವಾದಷ್ಟು ಕೊಲೆಸ್ಟ್ರಾಲ್ ಅನ್ನು ತಯಾರಿಸುತ್ತದೆ,ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಆಹಾರದ ಮೂಲಕ ಹೆಚ್ಚು ಕೊಲೆಸ್ಟ್ರಾಲ್ ನಮ್ಮ ಶರೀರವನ್ನು ಸೇರುತ್ತದೆ. ಶರೀರದ ಅಗತ್ಯಕ್ಕಿಂತ ಹೆಚ್ಚಿನ ಕೊಲೆಸ್ಟ್ರಾಲ್ ಸೇವಿಸಿದರೆ ಅದು ಅಪಧಮನಿಗಳ ಭಿತ್ತಿಗಳು ಮತ್ತು ಹೃದಯದಲ್ಲಿ ಶೇಖರಗೊಳ್ಳುತ್ತದೆ. ಇದರಿಂದಾಗಿ ಅಪಧಮನಿಗಳು ಕಿರಿದಾಗುತ್ತವೆ ಮತ್ತು ಹೃದಯ, ಮಿದುಳು, ಮೂತ್ರಪಿಂಡಗಳು ಮತ್ತು ಶರೀರದ ಇತರ ಅಂಗಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗುವುದಿಲ್ಲ.

ಹೃದಯ ರೋಗಗಳ ಕುರಿತು

ಇಸ್ಚೆಮಿಕ್ ಅಥವಾ ರಕ್ತಕೊರತೆಯ ಹೃದಯ ರೋಗವು ಪರಿಧಮನಿ ರೋಗವಾಗಿದ್ದು, ಅಪಧಮನಿಗಳಲ್ಲಿ ಕೊಬ್ಬು ಶೇಖರಗೊಳ್ಳುವುದು ಇದಕ್ಕೂ ಕಾರಣವಾಗಿದೆ. ಅಪಧಮನಿಗಳ ಭಿತ್ತಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವು ಅಪಧಮನಿ ಕಾಠಿಣ್ಯವನ್ನುಂಟು ಮಾಡುತ್ತದೆ. ಅಪಧಮನಿ ಕಾಠಿಣ್ಯದಿಂದಾಗಿ ಹೃದಯದ ಒಂದು ಭಾಗಕ್ಕೆ ರಕ್ತಪೂರೈಕೆ ಕಡಿಮೆಯಾದಾಗ ಅಥವಾ ಸ್ಥಗಿತಗೊಂಡಾಗ ಹೃದಯದ ಸ್ನಾಯುವಿಗೆ ಹಾನಿಯುಂಟಾಗುತ್ತದೆ ಮತ್ತು ಇದು ಮೈಯೊಕಾರ್ಡಿಯಲ್ ಇನ್ಫಾ ರ್ಕ್ಷನ್ (ಹೃದ

ಯದ ಸ್ನಾಯುವಿನ ಊತಕದಿಂದ ಸಾವು ಅಥವಾ ಹೃದಯಾಘಾತ) ಅನ್ನು ಉಂಟು ಮಾಡುತ್ತದೆ. ಎದೆನೋವು,ಉಸಿರಾಟಕ್ಕೆ ತೊಂದರೆ, ವಾಕರಿಕೆ, ದಿಢೀರ್ ತಲೆ ಸುತ್ತುವಿಕೆ ಮತ್ತು ತಣ್ಣನೆಯ ಬೆವರುವಿಕೆ ಇವು ಇದರ ಲಕ್ಷಣಗಳಾಗಿವೆ. ಅರಿತ್ಮಿಯಾ ಅಥವಾ ಕ್ರಮತಪ್ಪಿದ ಹೃದಯ ಬಡಿತ ಮಾರಣಾಂತಿಕವಾಗಬಹುದು. ನಿಧಾನ ಹೃದಯ ಬಡಿತ,ಎದೆನೋವು,ಉಸಿರಾಟಕ್ಕೆ ಕಷ್ಟ,ತಲೆ ಹಗುರವಾಗುವಿಕೆ ಮತ್ತು ತಲೆ ಸುತ್ತುವಿಕೆ ಇದರ ಲಕ್ಷಣಗಳಾಗಿವೆ.

ವೈರಸ್, ಬ್ಯಾಕ್ಟೀರಿಯಾ ಅಥವಾ ಪರಾವಲಂಬಿ ಜೀವಿಗಳು ಹೃದಯವನ್ನು ಪ್ರವೇಶಿಸಿದಾಗ ಹೃದಯ ಸೋಂಕುಗಳು ಉಂಟಾಗುತ್ತವೆ. ಈ ವಿಧದ ಸೋಂಕುಗಳು ಹೃದಯಾವರಣದ ಉರಿಯೂತವಾಗಿವೆ. ಇದನ್ನು ಪೆರಿಕಾರ್ಡಿಟೈಸ್ ಎನ್ನಲಾಗುತ್ತದೆ. ಹೃದಯದ ಸ್ನಾಯುವಿನ ಉರಿಯೂತವನ್ನು ಮೈಯೊಕಾರ್ಡಿಟೈಸ್ ಮತ್ತು ಒಳಭಿತ್ತಿಯ ಹೃದಯ ಕವಾಟದ ಸೋಂಕನ್ನು ಎಂಡೊಕಾರ್ಡಿಟೈಸ್ ಎಂದು ಕರೆಯಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News