ಜೇನಿನ ಈ ಆರೋಗ್ಯಲಾಭಗಳು ನಿಮಗೆ ಗೊತ್ತಿರಲಿ

Update: 2020-08-20 18:24 GMT

ನೈಸರ್ಗಿಕವಾಗಿ ಸಿಹಿರುಚಿಯನ್ನು ಹೊಂದಿರುವ ಜೇನು ಕೆಲವು ಅಚ್ಚರಿದಾಯಕ ಆರೋಗ್ಯಲಾಭಗಳನ್ನು ನೀಡುತ್ತದೆ. ಪುಟ್ಟ ಮಕ್ಕಳಿರುವ ಮನೆಗಳಲ್ಲಂತೂ ಜೇನು ಇರಲೇಬೇಕು. ಜೇನನ್ನು ವಿವಿಧ ಆಹಾರಗಳಿಗೆ ಮತ್ತು ಪಾನೀಯಗಳಿಗೆ ಸೇರಿಸುವ ಮೂಲಕ ಅವುಗಳ ಪೌಷ್ಟಿಕತೆಯನ್ನು ಹೆಚ್ಚಿಸಬಹುದು. ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ನಿಗ್ರಹ ಗುಣಗಳನ್ನು ಹೊಂದಿರುವ ಜೇನು ಜೀರ್ಣಾಂಗ,ಮನಸ್ಸು ಮತ್ತು ಶರೀರದ ಮೇಲೆ ಹಿತಕರವಾದ ಪರಿಣಾಮವನ್ನುಂಟು ಮಾಡುತ್ತದೆ. ಜೇನಿನ ಹಲವಾರು ಉಪಯೋಗಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿಗಳು ಇಲ್ಲಿವೆ.....

ಕೆಮ್ಮನ್ನು ಶಮನಗೊಳಿಸಲು ಜೇನು ನೆರವಾಗುತ್ತದೆ. ಗಂಟಲಿನ ಕಿರಿಕಿರಿಯಿದ್ದರೆ ಅದನ್ನೂ ಶಮನಿಸುತ್ತದೆ. ಒಂದು ಟೇಬಲ್ ಸ್ಪೂನ್ ಜೇನಿಗೆ ಕೆಲವು ಹನಿಗಳಷ್ಟು ಶುಂಠಿರಸವನ್ನು ಬೆರೆಸಿ ಕೆಲವು ದಿನಗಳವರೆಗೆ ರಾತ್ರಿ ಮಲಗುವ ಮುನ್ನ ಸೇವಿಸಿದರೆ ಉತ್ತಮ ಪರಿಣಾಮ ದೊರೆಯುತ್ತದೆ.

ಜೇನಿನ ಬ್ಯಾಕ್ಟೀರಿಯಾ ನಿಗ್ರಹ ಮತ್ತು ಶಿಲೀಂಧ್ರ ನಿರೋಧಕ ಗುಣಗಳು ಗಾಯಗಳು ಮಾಯಲು ನೆರವಾಗುತ್ತವೆ. ವೈದ್ಯಕೀಯ ದರ್ಜೆಯ ಜೇನು ಗಾಯಗಳು,ನಿರ್ದಿಷ್ಟವಾಗಿ ಸುಟ್ಟಗಾಯಗಳು ಬೇಗನೆ ಗುಣವಾಗುವಂತೆ ಮಾಡುತ್ತದೆ. ಜೇನನ್ನು ಗಾಯದ ಮೇಲೆ ನೇರವಾಗಿ ಲೇಪಿಸಬಹುದು. ಆದರೆ ಗಾಯಗಳ ಚಿಕಿತ್ಸೆಗಾಗಿ ಜೇನನ್ನೇ ಅವಲಂಬಿಸಬಾರದು. ಸೂಕ್ತ ಚಿಕಿತ್ಸೆಗಾಗಿ ಮೊದಲು ವೈದ್ಯರನ್ನು ಭೇಟಿಯಾಗಬೇಕು.

ಚರ್ಮದ ಆರೋಗ್ಯವನ್ನು ಹೆಚ್ಚಿಸಲೂ ಜೇನು ನೆರವಾಗುತ್ತದೆ. ಅದು ನೈಸರ್ಗಿಕ ಮಾಯಿಶ್ಚರೈಜರ್ ಅಥವಾ ಆರ್ದ್ರಕವಾಗಿ ಕೆಲಸ ಮಾಡುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡಲೂ ನೆರವಾಗುತ್ತದೆ. ಜೇನನ್ನು ಬಳಸಿ ಮನೆಯಲ್ಲಿಯೇ ಚರ್ಮಕ್ಕಾಗಿ ಮಾಸ್ಕ್ ಮತ್ತು ಸ್ಕ್ರಬ್‌ಗಳನ್ನು ತಯಾರಿಸಬಹುದು.

ನಿದ್ರಾಹೀನತೆಯ ಸಮಸ್ಯೆಯಿರುವವರಿಗೆ ನಿದ್ರೆ ಮಾಡುವುದು ಕಷ್ಟವಾಗುತ್ತದೆ. ಆಹಾರದಲ್ಲಿ ಜೇನು ಸೇರಿಸುವುದರಿಂದ ಅದು ಶರೀರ ಮತ್ತು ಮನಸ್ಸಿನ ಮೇಲೆ ಹಿತಕರ ಪರಿಣಾಮವನ್ನುಂಟು ಮಾಡುತ್ತದೆ ಹಾಗೂ ಒಳ್ಳೆಯ ನಿದ್ರೆಯನ್ನು ಉತ್ತೇಜಿಸುತ್ತದೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲಿಗೆ ಜೇನನ್ನು ಸೇರಿಸಿಕೊಂಡು ಸೇವಿಸಬಹುದು.

ತುಟಿಗಳು ಒಡೆದಿವೆಯೇ? ಹಾಗಿದ್ದರೆ ಜೇನನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಿ. ಅದು ತುಟಿಗಳು ಮೃದುವಾಗಲು ನೆರವಾಗುತ್ತದೆ ಕೆಲವು ಹನಿಗಳಷ್ಟು ಶುದ್ಧ ಜೇನನ್ನು ತುಟಿಗಳ ಮೇಲೆ ಸವರಿಕೊಂಡರೆ ಸಾಕು. ನಿಮ್ಮದೇ ಆದ ಜೇನಿನ ಲಿಪ್ ಸ್ಕ್ರಬ್ ಅನ್ನೂ ನೀವು ತಯಾರಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News