ಬದನೆ ರಸದ ಅದ್ಭುತ ಆರೋಗ್ಯಲಾಭಗಳು

Update: 2020-08-28 12:45 GMT

ಎಗ್‌ಪ್ಲಾಂಟ್ ಅಥವಾ ಬದನೆ ನಿಮಗೆ ಇಷ್ಟವೇ? ಅಲ್ಲದಿದ್ದರೂ ನೀವು ಅದನ್ನು ಖಂಡಿತ ತಿನ್ನಬೇಕು ಎಂದರೆ ನಿಮಗೆ ಅಚ್ಚರಿಯಾಗಬಹುದು. ಬದನೆಯ ರುಚಿಯಲ್ಲದೆ ಅದು ನೀಡುವ ಆರೋಗ್ಯಲಾಭಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಬದನೆಯು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ ಎನ್ನುವುದು ನಿಮಗೆ ಗೊತ್ತೇ? ಬದನೆ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಬೊಜ್ಜನ್ನು ತಗ್ಗಿಸಲು ಸಹ ನೆರವಾಗುತ್ತದೆ. ನೀವು ದೇಹತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಬದನೆ ನಿಮ್ಮ ಆಹಾರದಲ್ಲಿರಲಿ. ಬದನೆಯಲ್ಲಿರುವ ಖನಿಜಗಳು,ಉತ್ಕರ್ಷಣ ನಿರೋಧಕಗಳು ಮತ್ತು ವಿಟಾಮಿನ್‌ಗಳು ನಮ್ಮ ಶರೀರಕ್ಕೆ ಲಾಭದಾಯಕವಾಗಿವೆ. ನಮ್ಮ ಆರೋಗ್ಯಕ್ಕೆ ಪೂರಕವಾಗಿರುವ ಇಂತಹ ಹಲವಾರು ಪೋಷಕಾಂಶಗಳು ಬದನೆಯಲ್ಲಿವೆ. ಸೋರೆಕಾಯಿ ರಸ, ಹಾಗಲಕಾಯಿ ರಸದ ಬಗ್ಗೆ ನೀವು ಕೇಳಿರಬಹುದಾದರೂ ಬದನೆ ರಸದ ಬಗ್ಗೆ ಕೇಳಿರಲಿಕ್ಕಿಲ್ಲ. ಬದನೆ ರಸವು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ.....

►ಮಧುಮೇಹವನ್ನು ನಿಯಂತ್ರಿಸುತ್ತದೆ

ಬದನೆ ರಸವು ಮಧುಮೇಹಿಗಳಲ್ಲಿ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಅದರಲ್ಲಿ ಗಣನೀಯ ಪ್ರಮಾಣದಲ್ಲಿರುವ ನಾರು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅದು ಸ್ವಲ್ಪ ಪ್ರಮಾಣದಲ್ಲಿ ಕರಗಬಲ್ಲ ಕಾರ್ಬೊಹೈಡ್ರೇಟ್‌ಗಳನ್ನೂ ಒಳಗೊಂಡಿರುತ್ತದೆ. ಈ ಕಾರಣದಿಂದಾಗಿ ಬದನೆಯು ಮಧುಮೇಹಿಗಳಿಗೆ ತುಂಬ ಲಾಭದಾಯಕವಾಗಿದೆ. ಬದನೆ ರಸವನ್ನು ಯಾವುದೇ ರೀತಿಯಲ್ಲಿ ಸೇವಿಸಬಹುದು.

►ಹೃದ್ರೋಗಿಗಳಿಗೆ ಒಳ್ಳೆಯದು

ಬದನೆ ರಸದ ಸೇವನೆಯು ಹೃದ್ರೋಗಿಗಳಿಗೆ ಒಳ್ಳೆಯದು. ಬದನೆಯಲ್ಲಿ ವಿಟಾಮಿನ್ ಬಿ6,ವಿಟಾಮಿನ್ ಸಿ,ಪೊಟ್ಯಾಷಿಯಂ,ನಾರು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಹೇರಳವಾಗಿದ್ದು,ಇವು ಹೃದಯದ ಆರೋಗ್ಯಕ್ಕೆ ಪೂರಕವಾಗಿವೆ. ಬದನೆಯಲ್ಲಿ ಫ್ಲಾವನೈಡ್‌ಗಳೂ ನಿಖರ ಪ್ರಮಾಣದಲ್ಲಿವೆ. ಹೀಗಾಗಿ ಅದು ಪಾರ್ಶ್ವವಾಯು ಮತ್ತು ಹೃದಯಾಘಾತಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆರೋಗ್ಯವಂತ ವ್ಯಕ್ತಿ ಬದನೆ ರಸವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಭವಿಷ್ಯದಲ್ಲಿ ಹೃದಯ ರೋಗಗಳಿಗೆ ಗುರಿಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

►ಬೊಜ್ಜನ್ನು ಕಡಿಮೆ ಮಾಡುತ್ತದೆ

ನಿಮ್ಮ ಶರೀರದಲ್ಲಿಯ ಬೊಜ್ಜನ್ನು ಕರಗಿಸಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಬದನೆಯು ನೆರವಾಗಬಲ್ಲದು. ಪ್ರತಿ ದಿನ ಮಧ್ಯಾಹ್ನದ ಊಟಕ್ಕೆ ಮೊದಲು ಒಂದು ಕಪ್ ಬದನೆ ರಸ ಸೇವಿಸುವುದರೊಂದಿಗೆ ನೀವು ಶರೀರದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಬದನೆಯಲ್ಲಿರುವ ನಾರು ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಮತ್ತು ಮಧ್ಯೆ ಮಧ್ಯೆ ಏನಾದರೂ ತಿನ್ನುತ್ತಿರಬೇಕೆಂಬ ತುಡಿತವುಂಟಾಗುವುದಿಲ್ಲ. ಬದನೆ ರಸದಲ್ಲಿರುವ ಸಾಪೊನಿನ್ ಶರೀರವು ಕೊಬ್ಬನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.

►ಕೊಲೆಸ್ಟ್ರಾಲ್ ತಗ್ಗಿಸಲು ನೆರವಾಗುತ್ತದೆ

ಬದನೆ ರಸದ ಸೇವನೆಯು ರಕ್ತದಲ್ಲಿಯ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಬದನೆ ಗಿಡದ ಎಲೆಗಳ ರಸವನ್ನು ಸೇವಿಸುವ ಮೂಲಕವೂ ರಕ್ತದಲ್ಲಿಯ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು.

►ರಕ್ತದೊತ್ತಡ ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಬದನೆಯು ಅತ್ಯಂತ ಲಾಭದಾಯಕವಾಗಿದೆ. ಬದನೆಯಲ್ಲಿ ಪೊಟ್ಯಾಷಿಯಂ ಸರಿಯಾದ ಪ್ರಮಾಣದಲ್ಲಿರುತ್ತದೆ ಮತ್ತು ಪೊಟ್ಯಾಷಿಯಂ ಸಮೃದ್ಧ ಆಹಾರ ಕ್ರಮವು ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ ಹೀಗಾಗಿ ಬದನೆ ರಸವನ್ನು ಸೇವಿಸುವುದು ಅಧಿಕ ರಕ್ತದೊತ್ತಡ ರೋಗಿಗಳಿಗೆ ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News