ಏನಿದು ಟೈಪ್ 3 ಡಯಾಬಿಟಿಸ್? ಕಾರಣಗಳು ಮತ್ತು ಲಕ್ಷಣಗಳು ಇಲ್ಲಿವೆ

Update: 2020-09-04 18:19 GMT

ಡಯಾಬಿಟಿಸ್ ಅಥವಾ ಮಧುಮೇಹ ರಕ್ತದಲ್ಲಿ ಅನಿಯಂತ್ರಿತ ಸಕ್ಕರೆ ಮಟ್ಟಗಳಿಂದ ಉಂಟಾಗುವ ದೀರ್ಘಕಾಲಿಕ ಕಾಯಿಲೆಯಾಗಿದೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಸೂಕ್ತ ಔಷಧಿಗಳು ಮತ್ತು ಜೀವನಶೈಲಿ ಬದಲಾವಣೆಗಳ ಮೂಲಕ ನಿಯಂತ್ರಿಸಬಹುದು. ಟೈಪ್ 1,ಟೈಪ್2 ಮತ್ತು ಗರ್ಭಾವಸ್ಥೆಯಲ್ಲಿನ ಮಧುಮೇಹ,ಹೀಗೆ ಮುಖ್ಯವಾಗಿ ಮೂರು ವಿಧಗಳ ಮಧುಮೇಹದ ಬಗ್ಗೆ ಹೆಚ್ಚಿನವರಿಗೆ ಗೊತ್ತಿದೆ. ಟೈಪ್ 3 ಮಧುಮೇಹವು ಅತ್ಯಂತ ಅಪರೂಪವಾಗಿದೆ,ಹೀಗಾಗಿ ಇದರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಈ ಕುರಿತು ಮಾಹಿತಿಗಳಿಲ್ಲಿವೆ.

 ಟೈಪ್ 3 ಮಧುಮೇಹವು ಅಲ್ಝೀಮರ್ಸ್ ಕಾಯಿಲೆಯಾಗಿದೆ. ಈವರೆಗೆ ಮಧುಮೇಹ ಮತ್ತು ಅಲ್ಝೀಮರ್ಸ್ ಕಾಯಿಲೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿತ್ತು,ಆದರೆ ಕೆಲವು ಪ್ರಕರಣಗಳಲ್ಲಿ ಅಲ್ಝೀಮರ್ಸ್ ರೋಗವು ಟೈಪ್ 3 ಮಧುಮೇಹವಾಗುತ್ತದೆ. ಅಲ್ಝೀಮರ್ಸ್ ಅನ್ನು ಮಧುಮೇಹ ಸ್ಥಿತಿಯನ್ನಾಗಿ ಪರಿಗಣಿಸಬೇಕು ಎಂದು ಕೆಲವು ಅಧ್ಯಯನಗಳು ಹೇಳಿವೆ.

ಮಿದುಳಿನಲ್ಲಿ ಇನ್ಸುಲಿನ್ ಪ್ರತಿರೋಧವಿದ್ದಾಗ ಅಥವಾ ಅದು ಕಾರ್ಯ ನಿರ್ವಹಿಸದಿದ್ದಾಗ ಅದು ಅಲ್ಝೀಮಸ್ ಕಾಯಿಲೆಗೆ ಕಾರಣವಾಗುತ್ತದೆ ಎಂಬ ಪರಿಕಲ್ಪನೆಯನ್ನು ಟೈಪ್ 3 ಮಧುಮೇಹ ಆಧರಿಸಿದೆ. ಸಾಮಾನ್ಯವಾಗಿ ಟೈಪ್ 2 ಮಧುಮೇಹವನ್ನು ಹೊಂದಿರುವ ವ್ಯಕ್ತಿ ಅಲ್ಝೀಮರ್ಸ್ ಅಥವಾ ಬುದ್ಧಿಮಾಂದ್ಯತೆಯಿಂದಲೂ ನರಳುತ್ತಿದ್ದರೆ ಅಂತಹ ಸ್ಥಿತಿಯನ್ನು ಬಣ್ಣಿಸಲು ಟೈಪ್ 3 ಮಧುಮೇಹ ಶಬ್ದವನ್ನು ಬಳಸಲಾಗುತ್ತದೆ. ಹೀಗಾಗಿ ಇನ್ಸುಲಿನ್ ಪ್ರತಿರೋಧದಿಂದ ಈ ಸ್ಥಿತಿ ಉಂಟಾಗುತ್ತದೆ ಎಂದು ನಂಬಲಾಗಿದೆ. ವೈದ್ಯಕೀಯ ಸಮುದಾಯವು ಇನ್ನೂ ಟೈಪ್ 3 ಮಧುಮೇಹದ ಅಸ್ತಿತ್ವವನ್ನು ಪೂರ್ಣವಾಗಿ ಸ್ವೀಕರಿಸಿಲ್ಲ ಎನ್ನುವುದೂ ಈ ವಿಧದ ಮಧುಮೇಹದ ಬಗ್ಗೆ ಹೆಚ್ಚಿನ ಪ್ರಚಾರವಿಲ್ಲದ್ದಕ್ಕೆ ಒಂದು ಪ್ರಮುಖ ಕಾರಣವಾಗಿದೆ.

ಅಲ್ಝೀಮರ್ಸ್ ಮತ್ತು ಮಧುಮೇಹದ ನಡುವಿನ ನಂಟು

 ಈಗಾಗಲೇ ವಿವರಿಸಿರುವಂತೆ ಇವೆರಡೂ ಪರಸ್ಪರ ನಂಟನ್ನು ಹೊಂದಿವೆ. ಅಲ್ಝೀಮರ್ಸ್ ಬೇರೇನೂ ಅಲ್ಲ,ಅದು ಮಿದುಳಿನಲ್ಲಿಯ ಮಧುಮೇಹವಾಗಿದೆ ಮತ್ತು ಇದು ಗ್ರೇ ಮ್ಯಾಟರ್ ಅಥವಾ ಬೂದು ದ್ರವ್ಯದಲ್ಲಿ ಬದಲಾವಣೆ ತರುವ ಮೂಲಕ ಕ್ರಮೇಣ ಜ್ಞಾಪಕ ಶಕ್ತಿ ಕ್ಷೀಣಿಸುವಂತೆ ಮಾಡುತ್ತದೆ ಎಂದು ಸಂಶೋಧಕರು ಅಭಿಪ್ರಾಯ ಹೊಂದಿದ್ದಾರೆ. ಕೆಲವೇ ಕ್ಲಿನಿಕಲ್ ಸಾಕ್ಷಾಧಾರಗಳು ಈ ಸಿದ್ಧಾಂತವನ್ನು ಬೆಂಬಲಿಸಿವೆ. ಇನ್ಸುಲಿನ್ ಪ್ರತಿರೋಧವು ಅಲ್ಝೀಮರ್ಸ್‌ಗೆ ಕಾರಣವಾಗಿರುವ ಹೆಚ್ಚಿನ ಪ್ರಕರಣಗಳು ಕಂಡು ಬಂದಿಲ್ಲ. ಇದೇ ರೀತಿ ಟೈಪ್ 2 ಮಧುಮೇಹಿಗಳು ತಮ್ಮ ಬದುಕಿನ ನಂತರದ ಹಂತದಲ್ಲಿ ಅಲ್ಝೀಮರ್ಸ್‌ಗೆ ತುತ್ತಾಗಿರುವ ಅತಿ ಕಡಿಮೆ ಪ್ರಕರಣಗಳಿವೆ.

ಮಧುಮೇಹವು ಅಲ್ಝೀಮರ್ಸ್ ಮತ್ತು ಬುದ್ಧಿಮಾಂದ್ಯತೆಗೆ ಕಾರಣವಾಗುವ ಮಿದುಳಿನಲ್ಲಿಯ ರಾಸಾಯನಿಕ ಅಸಮತೋಲನದೊಂದಿಗೆ ನಂಟು ಹೊಂದಿದೆ.ಏಕೆಂದರೆ ರಕ್ತದಲ್ಲಿಯ ಸಕ್ಕರೆ ಮಟ್ಟ ಹೆಚ್ಚಾದಾಗ ಮತ್ತು ಅದನ್ನು ನಿಯಂತ್ರಿಸದಿದ್ದಾಗ ಅದು ಮಿದುಳಿನ ಕೋಶಗಳಿಗೆ ಹಾನಿಯನ್ನುಂಟು ಮಾಡಬಹುದು ಮತ್ತು ಇದು ಬುದ್ಧಿಮಾಂದ್ಯತೆ ಹಾಗೂ ಅಲ್ಝೀಮರ್ಸ್ ಸ್ಥಿತಿಗಳಿಗೆ ಕಾರಣವಾಗುತ್ತದೆ. ಅಲ್ಝೀಮರ್ಸ್ ಅಪಾಯವನ್ನು ಹೆಚ್ಚಿಸುವ ನಾಳೀಯ ಬುದ್ಧಿಮಾಂದ್ಯತೆ ಅಥವಾ ಮಿದುಳಿಗೆ ರಕ್ತಪೂರೈಕೆಯಲ್ಲಿ ಸಮಸ್ಯೆಯಿಂದಾಗಿ ಉಂಟಾಗುವ ಬುದ್ಧಿಮಾಂದ್ಯತೆಗೆ ಮಧುಮೇಹವು ಪ್ರಮುಖ ಅಪಾಯ ಅಂಶವಾಗಿದೆ ಎಂದು ಹೇಳಲಾಗಿದೆ.

ಟೈಪ್ 3 ಮಧುಮೇಹದ ಕಾರಣಗಳು

ಅಧಿಕ ರಕ್ತದೊತ್ತಡ,ಬೊಜ್ಜು,ಕುಟುಂಬದಲ್ಲಿ ಟೈಪ್ 2 ಮಧುಮೇಹದ ಇತಿಹಾಸ,ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿಸಿಒಎಸ್) ಮತ್ತು ಖಿನ್ನತೆಯಂತಹ ಇತರ ದೀರ್ಘಕಾಲಿಕ ಅನಾರೋಗ್ಯಗಳು

ಟೈಪ್ 3 ಮಧುಮೇಹದ ಲಕ್ಷಣಗಳು

ಟೈಪ್ 3 ಮಧುಮೇಹದ ಲಕ್ಷಣಗಳು ಅಲ್ಜೀಮರ್ಸ್ ಲಕ್ಷಣಗಳನ್ನೇ ಹೋಲುತ್ತವೆ.

ಜ್ಞಾಪಕ ಶಕ್ತಿ ನಷ್ಟ,ವ್ಯಕ್ತಿತ್ವ ಮತ್ತು ವರ್ತನೆಯಲ್ಲಿ ದಿಢೀರ್ ಬದಲಾವಣೆಗಳು,ಈ ಹಿಂದೆ ಆಸಕ್ತಿಯಿಂದ ಮಾಡುತ್ತಿದ್ದ ಕಾರ್ಯಗಳನ್ನು ಮಾಡುವಲ್ಲಿ ಸಮಸ್ಯೆ,ವಸ್ತುಗಳನ್ನು ಕಳೆದುಕೊಳ್ಳುವುದು,ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅಸಾಮರ್ಥ್ಯ ಇವು ಈ ಲಕ್ಷಣಗಳಾಗಿವೆ.

ಮಧುಮೇಹ ಪರೀಕ್ಷೆಗಳು ಮತ್ತು ನರಶಾಸ್ತ್ರೀಯ ತಪಾಸಣೆಯ ಮೂಲಕ ರೋಗನಿರ್ಣಯವನ್ನು ಮಾಡಬಹುದು. ಇದು ರಕ್ತದಲ್ಲಿಯ ಸಕ್ಕರೆ ಮಟ್ಟ ಮತ್ತು ಮಿದುಳಿನ ಆರೋಗ್ಯಕ್ಕೆ ಸಂಬಂಧಿಸಿರುವುದರಿಂದ ಸಕಾಲಿಕ ರೋಗನಿರ್ಧಾರ ಮತ್ತು ಚಿಕಿತ್ಸೆಗಾಗಿ ಇವೆರಡೂ ಪರೀಕ್ಷೆಗಳನ್ನು ಮಾಡುವುದು ಅತ್ಯಂತ ಮುಖ್ಯವಾಗಿದೆ. ಕೆಲವು ಪ್ರಕರಣಗಳಲ್ಲಿ ಮಿದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎನ್ನುವುದನ್ನು ಕಂಡುಕೊಳ್ಳಲು ವೈದ್ಯರು ಎಂಆರ್‌ಐ ಮತ್ತು ಸಿಟಿ ಸ್ಕಾನ್‌ಗಳನ್ನು ಸೂಚಿಸಬಹುದು. ಟೈಪ್ 2 ಮಧುಮೇಹಿ ಅಲ್ಝೀಮರ್ಸ್‌ನ ಲಕ್ಷಣಗಳನ್ನು ತೋರಿಸುತ್ತಿರುವ ಪ್ರಕರಣಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News