ಕ್ಯಾನ್ಸರ್ ಮತ್ತು ಬಿಪಿ ಔಷಧಿಗಳ ಕುರಿತು ಮಿಥ್ಯೆಗಳನ್ನು ಬಯಲಿಗೆಳೆದ ಅಧ್ಯಯನ

Update: 2020-09-05 15:09 GMT

ಜನರಲ್ಲಿ ಹಲವಾರು ತಪ್ಪುಗ್ರಹಿಕೆಗಳಿದ್ದು, ಇವ್ಯಾವುದೂ ನಿಜವಲ್ಲ. ಹೆಚ್ಚಿನವು ಆರೋಗ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿದ್ದು,ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸೇವಿಸುವ ಔಷಧಿಗಳು ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ಇಮ್ಮಡಿಗೊಳಿಸುತ್ತವೆ ಎಂದು ಹಲವರು ಭಾವಿಸಿದ್ದಾರೆ, ಆದರೆ ಇದೊಂದು ಮಿಥ್ಯೆಯಾಗಿದೆ ಅಷ್ಟೇ. ದಶಕಗಳಿಂದಲೂ ಈ ಮಿಥ್ಯೆ ಮುಂದುವರಿದುಕೊಂಡು ಬಂದಿದ್ದು, ಇಂದಿಗೂ ಕೆಲವರು ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸಲು ಅಲೋಪಥಿ ಔಷಧಿಗಳಿಗಿಂತ ಗಿಡಮೂಲಿಕೆಗಳಿಗೇ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮಕ್ಕಳೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು,ಅದನ್ನು ನಿರ್ವಹಿಸಲು ಅವರಿಗೆ ಔಷಧಿಗಳನ್ನು ನೀಡಲಾಗುತ್ತದೆ,ಆದರೆ ಇದು ಸುರಕ್ಷಿತವೇ? ಎಷ್ಟಾದರೂ ಅವರು ಮಕ್ಕಳು ಮತ್ತು ಔಷಧಿಗಳು ದೀರ್ಘಾವಧಿಯಲ್ಲಿ ಅವರ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಲ್ಲವು. ಈ ಬಗ್ಗೆ ಸಂಶೋಧಕರು ಏನು ಹೇಳುತ್ತಿದ್ದಾರೆ ನೋಡೋಣ.

ಕ್ಯಾನ್ಸರ್‌ನಲ್ಲಿ ನೂರಕ್ಕೂ ಅಧಿಕ ವಿಧಗಳಿವೆ. ಆದರೆ ಮೂಳೆ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್, ರಕ್ತ ಕ್ಯಾನ್ಸರ್, ಸ್ತನ ಕ್ಯಾನ್ಸರ್‌ನಂತಹ ಕೆಲವೇ ಪ್ರಮುಖ ವಿಧಗಳ ಬಗ್ಗೆ ನಮಗೆ ಗೊತ್ತು. ಕ್ಯಾನ್ಸರ್ ದೀರ್ಘಕಾಲಿಕ ರೋಗವಾಗಿದ್ದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸುವಂತಾಗಲು ಆರಂಭಿಕ ಹಂತದಲ್ಲಿಯೇ ಅದನ್ನು ಪತ್ತೆ ಹಚ್ಚುವುದು ಅಗತ್ಯವಾಗುತ್ತದೆ. ಕ್ಯಾನ್ಸರ್ ರೋಗವು ಉಂಟಾಗಲು ಹಲವಾರು ಕಾರಣಗಳಿವೆ. ಈ ಪೈಕಿ ಕೆಲವನ್ನು ಗುರುತಿಸಲಾಗಿದೆ, ಇನ್ನಷ್ಟು ಕಾರಣಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಅಧಿಕ ರಕ್ತದೊತ್ತಡದ ಔಷಧಿಗಳು ಶರೀರದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತವೆ ಮತ್ತು ಸಂಭಾವ್ಯ ಕ್ಯಾನ್ಸರ್‌ಗೆ ಕಾರಣವಾಗುವ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಈ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿವೆ. ಇದೇ ಕಾರಣದಿಂದ ಕ್ಯಾನ್ಸರ್ ಅಪಾಯ ಮತ್ತು ಅಧಿಕ ರಕ್ತದೊತ್ತಡ ಔಷಧಿಗಳ ನಡುವೆ ಏನಾದರೂ ನಂಟು ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಬ್ರಿಟನ್ನಿನ ಆಕ್ಸ್‌ಫರ್ಡ್ ವಿವಿಯ ಸಂಶೋಧಕರ ತಂಡವು ಬೃಹತ್ ಅಧ್ಯಯನವೊಂದನ್ನು ಕೈಗೊಂಡಿತ್ತು.

ಅಧಿಕ ರಕ್ತದೊತ್ತಡದ ಔಷಧಿಗಳಿಗೂ ಕ್ಯಾನ್ಸರ್ ಅಪಾಯಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ಈ ಅಧ್ಯಯನವು ಬಹಿರಂಗಗೊಳಿಸಿದೆ.

ಸಂಶೋಧಕರು ಅಧಿಕ ರಕ್ತದೊತ್ತಡ ಔಷಧಿಗಳನ್ನು ಸೇವಿಸುವ ಸುಮಾರು 260,000 ಜನರನ್ನು ತಮ್ಮ ಅಧ್ಯಯನಕ್ಕೊಳಪಡಿಸಿದ್ದರು. ಅವರು ಸೇವಿಸುವ ಔಷಧಿಗಳಿಗೆ ಅನುಗುಣವಾಗಿ ಅವರನ್ನು ಗುಂಪುಗಳಲ್ಲಿ ವರ್ಗೀಕರಿಸಲಾಗಿತ್ತು. ಅಧ್ಯಯನವು ಪೂರ್ಣಗೊಳ್ಳಲು ಸುಮಾರು ನಾಲ್ಕು ವರ್ಷಗಳನ್ನು ತೆಗೆದುಕೊಂಡಿದ್ದು,ಈ ಅವಧಿಯಲ್ಲಿ ಸಂಶೋಧಕರು ಅವರ ಮೇಲೆ ನಿಕಟ ನಿಗಾಯಿರಿಸಿದ್ದರು. ನಿಯಮಿತವಾಗಿ ಅವರ ಆರೋಗ್ಯದ ತಪಾಸಣೆಯನ್ನು ಮತ್ತು ಔಷಧಿಗಳು ಅವರ ಅಂಗಾಂಗಗಳ ಮೇಲೆ ಏನಾದರೂ ಪರಿಣಾಮವನ್ನುಂಟು ಮಾಡಿವೆಯೇ ಎನ್ನುವುದನ್ನು ತಿಳಿದುಕೊಳ್ಳಲು ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.

ಅಧಿಕ ರಕ್ತದೊತ್ತಡದ ಔಷಧಿಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎನ್ನುವುದಕ್ಕೆ ಯಾವುದೇ ಪ್ರಬಲ ಪುರಾವೆ ಈ ಸಂಶೋಧಕರಿಗೆ ಸಿಕ್ಕಿಲ್ಲ. ವ್ಯಕ್ತಿಯು ಧೂಮ್ರಪಾನ ಅಥವಾ ಮದ್ಯಪಾನ ಮಾಡುತ್ತಿದ್ದರೆ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವಿದೆ.

ಅಧಿಕ ರಕ್ತದೊತ್ತಡದ ಔಷಧಿಗಳು ಸಂಪೂರ್ಣ ಸುರಕ್ಷಿತವಾಗಿವೆ ಮತ್ತು ಅವುಗಳಿಂದ ಮಾನವನ ಆರೋಗ್ಯಕ್ಕೆ ಯಾವುದೇ ಬೆದರಿಕೆಯಿಲ್ಲ. ಅವು ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ ಎನ್ನುವುದನ್ನು ಅಧ್ಯಯನವು ತೋರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News