ಜೀವನಶೈಲಿ ಚಟಗಳು ಮತ್ತು ಯುವಜನರ ಮೇಲೆ ಅವುಗಳ ಪರಿಣಾಮ
ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ಕಳೆದೊಂದು ದಶಕದಲ್ಲಿ ತೀವ್ರವಾಗಿ ಹೆಚ್ಚಳಗೊಂಡಿವೆ,ವಿಶೇಷವಾಗಿ ಯುವಜನರ ಜಡ ಜೀವನಶೈಲಿಗಳಿಂದಾಗಿ ಅವರನ್ನು ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಇಂದಿನ ಯುವಜನರಲ್ಲಿ ಅನಾರೋಗ್ಯಕಾರಿ ಜಂಕ್ ಫುಡ್‌ಗಳನ್ನು ಸೇವಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದರೊಂದಿಗೆ ಅತಿಯಾದ ಮದ್ಯ ಸೇವನೆ, ಧೂಮ್ರಪಾನದಂತಹ ಚಟಗಳಿಂದ ಆಕರ್ಷಿತರಾಗುವವರಿಗೇನೂ ಕಡಿಮೆಯಿಲ್ಲ. ಮಾದಕ ದ್ರವ್ಯಗಳು ತಮ್ಮ ಕಬಂಧ ಬಾಹುಗಳನ್ನು ಯುವಜನಾಂಗದತ್ತ ಚಾಚಿವೆ. ಇಂತಹ ಚಟಗಳಿಂದಾಗಿ ಹಲವಾರು ಯುವಜನರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು,ಇವು ಮೂತ್ರಪಿಂಡ ವೈಫಲ್ಯಕ್ಕೆ ಕಾರಣಗಳನ್ನು ಹೆಚ್ಚಿಸಿವೆ. ಇದೇ ರೀತಿ ವಿಶ್ವಾದ್ಯಂತ ಯುವಜನರಲ್ಲಿ ಬೊಜ್ಜು ಹೆಚ್ಚುತ್ತಿದ್ದು, ಇದು ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ (ಸಿಕೆಡಿ)ಗೆ ಸಂಭಾವ್ಯ ಅಪಾಯಕಾರಿ ಅಂಶವಾಗಿದೆ. ಸಿಕೆಡಿಯಿಂದ ನರಳುತ್ತಿರುವ ವ್ಯಕ್ತಿಯ ಮೂತ್ರಪಿಂಡಗಳಿಗೆ ರಕ್ತದಲ್ಲಿನ ಹೆಚ್ಚುವರಿ ದ್ರವ ಮತ್ತು ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ. ಹೀಗೆ ಮೂತ್ರಪಿಂಡಗಳ ಸಾಮರ್ಥ್ಯ ಕುಗ್ಗುವಿಕೆಯಿಂದ ದ್ರವಗಳು ಮತ್ತು ತ್ಯಾಜ್ಯಗಳು ರಕ್ತದಲ್ಲಿಯೇ ಶೇಖರಗೊಳ್ಳುತ್ತವೆ ಮತ್ತು ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ. ಒಂದು ಕಾಲದಲ್ಲಿ ವಯಸ್ಸಾದವರ ಸಮಸ್ಯೆಗಳು ಎಂದೇ ಪರಿಗಣಿಸಲಾಗಿದ್ದ ಇಂತಹ ರೋಗಗಳಿಗೆ ಯುವಜನರು ತುತ್ತಾಗುವುದು ಹೆಚ್ಚುತ್ತಿರುವುದರಿಂದ ಪ್ರೌಢಾವಸ್ಥೆಯ ಆರಂಭದ ವರ್ಷಗಳಲ್ಲಿ ನಿರ್ದಿಷ್ಟ ಜೀವನಶೈಲಿ ಬದಲಾವಣೆಗಳು ಅಗತ್ಯ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಆಹಾರಕ್ರಮದಲ್ಲಿ ಪರಿಷ್ಕರಣೆ
ಹೆಚ್ಚಿನ ಯುವಪೀಳಿಗೆ ಆಗಾಗ್ಗೆ ಜಂಕ್ ಫುಡ್,ಕರಿದ ಖಾದ್ಯಗಳು ಮತ್ತು ಪ್ಯಾಕ್ ಮಾಡಲಾದ ಆಹಾರಗಳ ಸೇವನೆ ಚಟವನ್ನು ಮೈಗೂಡಿಸಿಕೊಂಡಿರುವುದರಿಂದ ಅವರು ತಾವೇನು ತಿನ್ನುತ್ತಿದ್ದೇವೆ ಮತ್ತು ಸೇವಿಸುತ್ತಿದ್ದೇವೆ ಎನ್ನುವುದರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ಆದ್ದರಿಂದ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಮತ್ತು ಶರೀರಕ್ಕೆ ಸೂಕ್ತ ಪ್ರಮಾಣದಲ್ಲಿ ವಿಟಾಮಿನ್‌ಗಳು, ಖನಿಜಗಳು, ಪ್ರೋಟಿನ್‌ಗಳು ಮತ್ತು ಕ್ಯಾಲರಿಗಳನ್ನು ಒದಗಿಸುವ ಸಮತೋಲಿತ ಆಹಾರಕ್ರಮವನ್ನು ರೂಢಿಸಿಕೊಳ್ಳಬೇಕು. ಸಿಕೆಡಿಯು ಆರಂಭಿಕ ಹಂತದಲ್ಲಿದ್ದರೆ ವ್ಯಕ್ತಿಯು ತಾನು ತಿನ್ನುತ್ತಿರುವುದರ ಮೇಲೆ ಕೆಲವು ಮಿತಿಗಳು ಮತ್ತು ನಿರ್ಬಂಧಗಳನ್ನು ವಿಧಿಸಿಕೊಳ್ಳಬಹುದು ಮತ್ತು ಸಮತೋಲಿತ ಆಹಾರಕ್ಕೆ ಆದ್ಯತೆ ನೀಡಬೇಕು.
ಅತಿಯಾದ ಸೋಡಿಯಂ ಮತ್ತು ಹೆಚ್ಚುವರಿ ಸಕ್ಕರೆ ಸೇವನೆ ಬೇಡ. ಮದ್ಯಪಾನ ಮತ್ತು ಧೂಮ್ರಪಾನದಿಂದ ದೂರವಿದ್ದಷ್ಟು ಒಳ್ಳೆಯದು. ಮನೆಯಲ್ಲಿಯೇ ತಯಾರಿಸಿದ ಆಹಾರಕ್ಕೆ ಹೆಚ್ಚಿನ ಆದ್ಯತೆಯಿರಲಿ. ದಿನದಲ್ಲಿ ಯಥೇಚ್ಛ ದ್ರವಗಳ ಸೇವನೆ ಒಳ್ಳೆಯದು,ಆದರೆ ಸಿಕೆಡಿ ಈಗಾಗಲೇ ಇದ್ದರೆ ದ್ರವಗಳ ಸೇವನೆಗೆ ಮಿತಿಯಿರಲಿ.
ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡ ಯಾವುದೇ ಗೋಚರಣೀಯ ಲಕ್ಷಣಗಳನ್ನು ಹೊಂದಿಲ್ಲವಾದರೂ ಅದು ಇಂದು ಹೆಚ್ಚಿನ ಯುವಜನರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ದೈಹಿಕ ಚಟುವಟಿಕೆಗಳ ಕೊರತೆ,ಒತ್ತಡ,ಅತಿಯಾದ ಉಪ್ಪಿನ ಸೇವನೆ,ಸ್ಲೀಪ್ ಆಪ್ನಿಯಾ ಅಥವಾ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಇತ್ಯಾದಿ ಕಾರಣಗಳಿಂದ ಉಂಟಾಗುತ್ತದೆ. ಈ ಕಾರಣಗಳು ಲಕ್ಷಣಗಳನ್ನು ಪ್ರಕಟಿಸುತ್ತವೆ ಮತ್ತು ಕ್ರಮೇಣ ಶರೀರದ ವಿವಿಧ ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಇದರೊಂದಿಗೆ ಜಡ ಜೀವನಶೈಲಿ ಸೇರಿಕೊಂಡು ಕ್ರಮೇಣ ಮೂತ್ರಪಿಂಡಗಳು ಮತ್ತು ಹೃದಯಕ್ಕೆ ಹಾನಿಗೆ ಕಾರಣವಾಗುತ್ತದೆ ಮತ್ತು ಇದು ಮಾರಣಾಂತಿಕವೂ ಆಗಬಲ್ಲದು. ಹೀಗಾಗಿ ಅಧಿಕ ರಕ್ತದೊತ್ತಡ ಸಮಸ್ಯೆಯಿರುವವರು ಔಷಧಿಗಳ ಸೇವನೆಯನ್ನು ತಪ್ಪಿಸಬಾರದು.
ಮಧುಮೇಹ ನಿಯಂತ್ರಣ
ಮಧುಮೇಹವು ಮೂತ್ರಪಿಂಡ ವೈಫಲ್ಯಕ್ಕೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಮಧುಮೇಹ ಆನುವಂಶಿಕವಾಗಿ ಅಥವಾ ಅತಿಯಾದ ಸಕ್ಕರೆ,ಸಂಸ್ಕರಿತ ಆಹಾರಗಳ ಸೇವನೆಯಿಂದ ಬರಬಹುದು. ಹೀಗಾಗಿ ಮೃದುಪಾನೀಯಗಳು,ಚಾಕಲೇಟ್‌ಗಳು,ಇತರ ಸಿಹಿಖಾದ್ಯಗಳು ಮತ್ತು ಟಿನ್‌ನಲ್ಲಿ ಪ್ಯಾಕ್ ಮಾಡಲಾದ ಹಾಲು ಇತ್ಯಾದಿಗಳಿಂದ ದೂರವಿರಬೇಕು ಅಥವಾ ಅವುಗಳನ್ನು ಮಿತಿಯಲ್ಲಿ ಸೇವಿಸಬೇಕು.
ಸಾಕಷ್ಟು ನಿದ್ರೆ ಅಗತ್ಯ
ಶರೀರದ ಹಲವಾರು ಪ್ರಕ್ರಿಯೆಗಳು ನಿಯಮಿತ ನಿದ್ರೆ-ಜಾಗರ ಚಕ್ರಗಳನ್ನು ಆಧರಿಸಿದ ಲಯವನ್ನು ಅನುಸರಿಸುತ್ತವೆ. ನಿದ್ರೆಯ ಕೊರತೆ ಅಥವಾ ನಿದ್ರಾಹೀನತೆ ಮೂತ್ರಪಿಂಡಗಳ ಕಾರ್ಯ ನಿರ್ವಹಣೆ ತ್ವರಿತವಾಗಿ ಕಡಿಮೆಯಾಗುವಂತೆ ಮಾಡುತ್ತದೆ. ಯುವಜನರು ಕೆಲಸದ ಒತ್ತಡ ಮತ್ತು ಓದುವಿಕೆಯಿಂದಾಗಿ ಆಗಾಗ್ಗೆ ನಿದ್ರೆಯ ಕೊರತೆಯನ್ನು ಎದುರಿಸುತ್ತಿರುತ್ತಾರೆ. ಹೀಗಾಗಿ ಸಕಾಲಕ್ಕೆ ನಿದ್ರಿಸಿ ಬೆಳಿಗ್ಗೆ ಬೇಗನೆ ಏಳುವುದು ಮೂತ್ರಪಿಂಡಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಯುವಜನರು ಅಗತ್ಯವಾಗಿ ಮಾಡಿಕೊಳ್ಳಬೇಕಾದ ಜೀವನಶೈಲಿ ಬದಲಾವಣೆಯಾಗಿದೆ.
ನಿಯಮಿತ ವ್ಯಾಯಾಮ
ಸುದೀರ್ಘ ಸಮಯ ಕುಳಿತುಕೊಂಡು ಕೆಲಸ ಮಾಡಬೇಕಾದ ಉದ್ಯೋಗಗಳು ಆಗಾಗ್ಗೆ ಶಾರೀರಿಕ ಚಲನವಲನಗಳನ್ನು ಸೀಮಿತಗೊಳಿಸುವ ಮೂಲಕ ಅಂಗಾಂಗಗಳಲ್ಲಿ ಪೆಡಸುತನ,ಜಡತೆ ಮತ್ತು ತಿನ್ನುಬಾಕತನಕ್ಕೆ ಕಾರಣವಾಗುತ್ತವೆ. ಅನಗತ್ಯ ಮೂತ್ರಪಿಂಡ ತೊಂದರೆಗಳಿಂದ ದೂರವಿರಲು ಯುವಜನರು ವಾರಕ್ಕೆ ಕನಿಷ್ಠ ನಾಲ್ಕು ಸಲವಾದರೂ ಹೊರಾಂಗಣ ಕ್ರೀಡೆ ಅಥವಾ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶರೀರವನ್ನು ಕ್ರಿಯಾಶೀಲವಾಗಿ ಇರಿಸಿಕೊಳ್ಳುವುದು ಅಗತ್ಯವಾಗುತ್ತದೆ. ವ್ಯಾಯಾಮವು ಶರೀರವನ್ನು ಸದೃಢವಾಗಿಸುತ್ತದೆ, ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ದೇಹತೂಕವನ್ನು ಹತೋಟಿಯಲ್ಲಿಡುತ್ತದೆ. ಅದು ರಕ್ತದೊತ್ತಡ ನಿಯಂತ್ರಣಕ್ಕೂ ನೆರವಾಗುತ್ತದೆ ಮತ್ತು ಒತ್ತಡಮುಕ್ತಗೊಳಿಸಿ ಮನಸ್ಸಿಗೆ ನೆಮ್ಮದಿಯನ್ನುಂಟು ಮಾಡುತ್ತದೆ.